ಬುಧವಾರ, ನವೆಂಬರ್ 13, 2019
23 °C
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೂಚನೆ * ನಿಮ್ಹಾನ್ಸ್‌ 24ನೇ ಘಟಿಕೋತ್ಸವ

‘2022ಕ್ಕೆ ಪ್ರತಿಯೊಬ್ಬ ಮಾನಸಿಕ ಅಸ್ವಸ್ಥನಿಗೂ ಚಿಕಿತ್ಸೆ’

Published:
Updated:
Prajavani

ಬೆಂಗಳೂರು: ‘ಆರೋಗ್ಯಯುತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಪೂರಕವಾಗಿ ಮಾನಸಿಕ ಅಸ್ವಸ್ಥರ ಪ್ರಮಾಣವನ್ನೂ ಇಳಿಕೆ ಮಾಡಬೇಕು. ಈ ನಿಟ್ಟಿನಲ್ಲಿ 2022ರ ವೇಳೆಗೆ ದೇಶದ ಪ್ರತಿಯೊಬ್ಬ ಮಾನಸಿಕ ಅಸ್ವಸ್ಥನಿಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗಳು ದೊರೆಯುವಂತಾಗಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ವೈದ್ಯರಿಗೆ ಸೂಚಿಸಿದರು. 

ನಿಮ್ಹಾನ್ಸ್‌ನಲ್ಲಿ ಸೋಮವಾರ ನಡೆದ 24ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ 176 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಿದರು. ಅಷ್ಟೇ ಅಲ್ಲ, ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ 14 ಮಂದಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. 

‘ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಮಾನಸಿಕ ಅಸ್ವಸ್ಥತೆ ನಿವಾರಣೆಗೆ ಚಿಕಿತ್ಸೆಯ ಸಮಸ್ಯೆ ಕಾರಣವಾಗಿದೆ. ಹಾಗಾಗಿ ರೋಗಿಗಳು ಹಾಗೂ ವೈದ್ಯರ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ಆಗ ಮಾನಸಿಕ ಅಸ್ವಸ್ಥತೆ ಹೊಂದಿದವರಿಗೆ ಅಗತ್ಯ ಚಿಕಿತ್ಸೆ ದೊರೆಯಲಿದೆ. ಸಂಸ್ಥೆಯಲ್ಲಿ ನೀಡಲಾಗುತ್ತಿರುವ ಗುಣಮಟ್ಟದ ಸೇವೆ ಎಲ್ಲೆಡೆ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು. 

‘ಮಾನಸಿಕ ಆರೊಗ್ಯದಲ್ಲಿ ವೈದ್ಯರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾನಸಿಕ ಆಸ್ಪತ್ರೆಗಳನ್ನು ಶೈಕ್ಷಣಿಕ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಇದಕ್ಕೆ ಮಾರ್ಗದರ್ಶಕನಾಗಿ ನಿಮ್ಹಾನ್ಸ್ ಕಾರ್ಯನಿರ್ವಹಿಸಬೇಕು. ಕೇಂದ್ರಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಲಾಗುತ್ತದೆ’ ಎಂದು ತಿಳಿಸಿದರು. 

ಕೇಂದ್ರ ಸ್ಥಾಪನೆಗೆ ಜಾಗ ನೀಡಿ: ನಿಮ್ಹಾನ್ಸ್‌ನ ಸ್ನಾತಕೋತ್ತರ ತರಬೇತಿ ಸಂಸ್ಥೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗಾಗಲೇ 30 ಎಕರೆ ಪ್ರದೇಶ ನೀಡಿದೆ.  10 ಎಕರೆ ಹೆಚ್ಚುವರಿ ಭೂಮಿಯನ್ನು ಹಸ್ತಾಂತರ ಮಾಡಬೇಕು ಎಂಬ ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್‌. ಗಂಗಾಧರ್ ಅವರ ಮನವಿಯ ಬಗ್ಗೆ ಪ್ರಸ್ತಾಪಿಸಿದ ಡಾ. ಹರ್ಷವರ್ಧನ್, ‘ರಾಜ್ಯ ಸರ್ಕಾರ ಅಗತ್ಯ ಭೂಮಿಯನ್ನು ನೀಡಲು ಕ್ರಮ ಕೈಗೊಳ್ಳಬೇಕು. 10 ಎಕರೆ ಜತೆಗೆ ಇನ್ನೂ 50 ಎಕರೆ ಪ್ರದೇಶವನ್ನು ಒದಗಿಸಲಿ. ಕೇಂದ್ರಕ್ಕೆ ಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

ಇದೇ ವೇಳೆ ‘ಯೋಗ ಫಾರ್ ಡಿಪ್ರೆಶನ್’ ಕೃತಿಯನ್ನು  ಬಿಡುಗಡೆ ಮಾಡಲಾಯಿತು. 

ಪ್ರತಿಕ್ರಿಯಿಸಿ (+)