ಬಿಪಿಎಲ್‌, ವೃದ್ಧಾಪ್ಯ ವೇತನದಲ್ಲಿ ಗೋಲ್‌ಮಾಲ್‌

7
ತನಿಖೆ ನಡೆಸುವಂತೆ ಶಿಕ್ಷಣ ಸಚಿವ ಎನ್‌.ಮಹೇಶ್‌ ಸೂಚನೆ

ಬಿಪಿಎಲ್‌, ವೃದ್ಧಾಪ್ಯ ವೇತನದಲ್ಲಿ ಗೋಲ್‌ಮಾಲ್‌

Published:
Updated:
ಕೊಳ್ಳೇಗಾಲ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ಕೊಳ್ಳೇಗಾಲ: ಬಿಪಿಎಲ್ ಕಾರ್ಡ್, ವೃದ್ಧಾಪ್ಯ ವೇತನ ಮಂಜೂರಾತಿಯಲ್ಲಿ ಬಾರಿ ಗೋಲ್‍ಮಾಲ್ ನಡೆದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್‌ ಅವರಿಗೆ ಶಿಕ್ಷಣ ಸಚಿವ ಎನ್.ಮಹೇಶ್ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆ ಅಧಿಕಾರಿಗಳು ಹಣ ಕೊಟ್ಟವರಿಗೆ ಮಾತ್ರ ಖಾತಾ ಮಾಡಿಕೊಡುತ್ತಿದ್ದಾರೆ. ಬಡವರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆಯೇ ವಿನಃ ಖಾತಾ ಮಾಡಿಕೊಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ನಿಲ್ಲಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಸೂಕ್ತ ದಾಖಲೆಗಳನ್ನು ನೋಡಿ ಖಾತೆ ಮಾಡಿಕೊಡಬೇಕು. ಹಣ ಕೊಟ್ಟರು ಎಂಬ ಕಾರಣಕ್ಕೆ ದಾಖಲೆಗಳು ಇಲ್ಲದಿದ್ದರೂ ಖಾತಾ ವರ್ಗಾವಣೆ ಮಾಡುವುದು ಕಾನೂನುಬಾಹಿರ. ಈ ಬಗ್ಗೆ ನಿಗಾ ವಹಿಸುವಂತೆ ಪೌರಾಯುಕ್ತ ಸುರೇಶ್ ಅವರಿಗೆ ಸೂಚಿಸಿದರು.

ಹಳ್ಳಿಗಳಲ್ಲಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡು ನೈಜ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯ ಒದಗಿಸಬೇಕು ಎಂದರು.

ಮಾಂಬಳ್ಳಿ ಗ್ರಾಮದಲ್ಲಿ ದಲಿತರಿಗೆ ಶವ ಹೂಳು ಜಾಗವಿಲ್ಲ. ಎರಡು ವರ್ಷಗಳು ಕಳೆದರೂ ಸ್ಮಶಾನಕ್ಕೆ ಜಾಗ ನೀಡಿಲ್ಲ. ಇದರಿಂದ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಗ್ರಾಮಸಭೆ ಕರೆದು ಈ ಸಮಸ್ಯೆ ಬಗೆಹರಿಸಬೇಕು. ತಾಲ್ಲೂಕಿನಲ್ಲಿ ಸುಮಾರು 126 ಗ್ರಾಮಗಳಲ್ಲಿ ಸಶ್ಮಾನ ಇಲ್ಲ. ಎಲ್ಲ ಕಡೆಗಳಲ್ಲಿ ಜಾಗ ಒದಗಿಸಬೇಕು ಎಂದು ಉಪವಿಭಾಗಾಧಿಕಾರಿಗೆ ಸೂಚಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್‌ ಪರಿವರ್ತಕಗಳು ಕೆಟ್ಟರೆ ಅದನ್ನು ಬೇಗ ದುರಸ್ತಿ ಮಾಡುತ್ತಿಲ್ಲ. ರೈತರು ಹಾಗೂ ಜನರನ್ನು ಅಲೆದಾಡಿಸಲಾಗುತ್ತಿದೆ. ಇದು ನಿಲ್ಲಬೇಕು ಎಂದು ಹೇಳಿದರು.

ಪ್ರತಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಅಬಕಾರಿ ಇಲಾಖೆಯವರು ಏಕೆ ಕಡಿವಾಣ ಹಾಕಿಲ್ಲ. ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಾ.ಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾ ರಾಜಣ್ಣ, ತಾಲ್ಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ಯಳಂದೂರು, ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲ್ಲೂಕಿನ ಅಧಿಕಾರಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ಸಚಿವರ ಸಭೆಗೆ ಗೈರು ಹಾಜರಾಗಿದ್ದ 8 ಮಂದಿಗೆ ನೋಟಿಸ್ ನೀಡುವಂತೆ ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಸೂಚಿಸಿದರು.

‘ವಿದ್ಯಾರ್ಥಿಗಳಿಗೆ ತೊಂದರೆ; ಸಹಿಸುವುದಿಲ್ಲ’

‘ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು, ನಿರ್ವಾಹಕರು ಶಾಲಾ ಮಕ್ಕಳನ್ನು ಬಸ್ಸಿಗೆ ಹತ್ತಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಮಕ್ಕಳಿಗೆ ತೊಂದರೆ ಕೊಡುವುದನ್ನು ಚಾಲಕರು, ನಿರ್ವಾಹಕರು ನಿಲ್ಲಿಸಬೇಕು. ಬಸ್‌ ಸಂಚಾರ ಇಲ್ಲದಿರುವ ಕಡೆಗಳಲ್ಲಿ ಬಸ್‌ ಸೌಲಭ್ಯ ಒದಗಿಸಬೇಕು. ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಾರಿಗೆ ಬಸ್ ಡಿಪೊ ವ್ಯವಸ್ಥಾಪಕರಿಗೆ ಎನ್‌.ಮಹೇಶ್‌ ಖಾರವಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !