ಸಂತೇಮರಹಳ್ಳಿ ಬಸ್‌ನಿಲ್ದಾಣ:ಎಲ್ಲ ಅವ್ಯವಸ್ಥೆ, ಕೇಳುವವರೇ ಇಲ್ಲ ಪ್ರಯಾಣಿಕರ ವ್ಯಥೆ!

7
ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ

ಸಂತೇಮರಹಳ್ಳಿ ಬಸ್‌ನಿಲ್ದಾಣ:ಎಲ್ಲ ಅವ್ಯವಸ್ಥೆ, ಕೇಳುವವರೇ ಇಲ್ಲ ಪ್ರಯಾಣಿಕರ ವ್ಯಥೆ!

Published:
Updated:
Deccan Herald

ಸಂತೇಮರಹಳ್ಳಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಸರಿಯಾಗಿ ಇಲ್ಲದೆ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂತೇಮರಹಳ್ಳಿ ಹೋಬಳಿ ಕೇಂದ್ರವಾಗಿರುವುದರಿಂದ ದಿನನಿತ್ಯ ನೂರಾರು ಪ್ರಯಾಣಿಕರು ಇಲ್ಲಿಗೆ ಬಂದು ವಿವಿಧ ಸ್ಥಳಗಳಿಗೆ ತೆರಳುತ್ತಾರೆ. ಆದರೆ, ಇಲ್ಲಿನ ಬಸ್‌ ನಿಲ್ದಾಣದಲ್ಲಿ ಉತ್ತಮ ವ್ಯವಸ್ಥೆಯೇ ಇಲ್ಲ.

ವಾಹನಗಳು ನಿಲ್ಲುವ ಸ್ಥಳಗಳು‌ ಹಳ್ಳ-ಕೊಳ್ಳಗಳಿಂದ ಕೂಡಿವೆ. ಮಳೆಗಾಲವಾಗಿರುವುದರಿಂದ ಇಡೀ ಪ್ರದೇಶ ಕೊಚ್ಚೆಮಯವಾಗಿದೆ. 

ಇಲ್ಲಗಳೇ ಎಲ್ಲ: ದೂರದ ಊರುಗಳಿಂದ ಬರುವ ಪ್ರಯಾಣಿಕರು ಬಸ್ ಇಳಿದು ವಿಶ್ರಾಂತಿ ಪಡೆಯಲು ಇಲ್ಲಿ ಸ್ಥಳಾವಕಾಶ ಇಲ್ಲ. ಚಾವಣಿ ನೆರಳಿನ ವ್ಯವಸ್ಥೆ ಇಲ್ಲದ ಕಾರಣ, ಪ್ರಯಾಣಿಕರು ಬಿಸಿಲು ಮಳೆಗೆ ಮೈಯೊಡ್ಡಿಕೊಂಡೇ ಬಸ್‌ಗಳಿಗಾಗಿ ಕಾಯಬೇಕಾಗಿದೆ. ಪ್ರಯಾಣಿಕರಿಗಾಗಿ ಶೌಚಾಲಯಗಳೂ ಇಲ್ಲ. ಕುಡಿಯುವ ನೀರಿಗಾಗಿ ಕ್ಯಾಂಟೀನ್‌ಗಳನ್ನು ಅವಲಂಬಿಸಬೇಕಾಗಿದೆ. 

ದೀಪದ ಬೆಳಕು ಮರೀಚಿಕೆ: ನಿಲ್ದಾಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ. ಹಾಗಾಗಿ ಸಂಜೆಯಾದೊಡನೆ ಮಹಿಳಾ ಪ್ರಯಾಣಿಕರು ಆತಂಕದಲ್ಲೇ ಬಸ್‌ಗೆ ಕಾಯಬೇಕಾಗಿದೆ. ನಿಲ್ದಾಣದಲ್ಲಿ ಹೆಸರಿಗೆ ಹೈಮಾಸ್ಟ್‌ ದೀಪ ಇದೆ. ಆದರೆ, ಅದು ಕೆಟ್ಟುಹೋಗಿ ವರ್ಷಗಳೇ ಉರುಳಿವೆ. ಅದನ್ನು ದುರಸ್ತಿ ಮಾಡಲು ಯಾರೂ ಮನಸ್ಸು ಮಾಡಿಲ್ಲ.

ಹೋಬಳಿ ಕೇಂದ್ರದಲ್ಲಿ ಜನ ದಟ್ಟಣೆ ಹೆಚ್ಚಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸಬೇಕು ಎಂದು ದಶಕದಿಂದಲೂ ಜನರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಕೂಗು ಜನಪ್ರತಿನಿಧಿಗಳಿಗೆ ಇನ್ನೂ ಕೇಳಿಸಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನೂ ಆರಂಭವಾಗದ ಕಾಮಗಾರಿ

ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಶಾಸಕರಾಗಿದ್ದ ಎಸ್. ಜಯಣ್ಣ ಅವರು ತಮ್ಮ ಅನುದಾನದಲ್ಲಿ ₹ 40 ಲಕ್ಷ ವೆಚ್ಚದಲ್ಲಿ ಚಾಮರಾಜನಗರ ರಸ್ತೆಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಎದುರಿಗಿರುವ ಸರ್ಕಾರಿ ಸ್ಥಳದಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಬಸ್‌ ನಿಲ್ದಾಣದ ನಿರ್ಮಾಣದ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಭೂಮಿಪೂಜೆ ನೆರವೇರಿ ವರ್ಷ ಕಳೆಯುತ್ತಾ ಬಂದಿದೆ. ಆದರೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !