ಕಪ್ಪುಚುಕ್ಕೆ ಬಾರದಂತೆ ವರದಿ ಮಾಡಿ; ಸುಚೇಂದ್ರ

7
ಮಾಧ್ಯಮ ಪ್ರತಿನಿಧಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಕಾನೂನುಗಳ ಕುರಿತ ಕಾರ್ಯಾಗಾರ

ಕಪ್ಪುಚುಕ್ಕೆ ಬಾರದಂತೆ ವರದಿ ಮಾಡಿ; ಸುಚೇಂದ್ರ

Published:
Updated:
Deccan Herald

ವಿಜಯಪುರ: ‘ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ಆತುರಕ್ಕೆ ಬಿದ್ದು ವರದಿ ಮಾಡದೆ, ಆ ಮಗುವಿನ ಭವಿಷ್ಯಕ್ಕೆ ಕಪ್ಪುಚುಕ್ಕೆ ಬಾರದಂತೆ ವಿವೇಚನೆಯಿಂದ, ವ್ಯವಧಾನದಿಂದ, ವಸ್ತು ಸ್ಥಿತಿಯನ್ನು ಅರಿತು ವರದಿ ಮಾಡಿ’ ಎಂದು ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವರ್ಲ್ಡ್‌ ವಿಜನ್ ವತಿಯಿಂದ ಮಂಗಳವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಕಾನೂನುಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿದ ಅವರು ಮಾತನಾಡಿದರು.

‘ದೌರ್ಜನ್ಯಕ್ಕೊಳಗಾದ ಮಗು ಅಥವಾ ಬಾಲಾಪರಾಧದಲ್ಲಿ ತೊಡಗಿರುವ ಮಗುವಿನ ಗುರುತನ್ನು ಕಾನೂನು ಚೌಕಟ್ಟು ಮೀರಿ ಬಹಿರಂಗಗೊಳಿಸುವುದರಿಂದ, ಕಾನೂನು ದೃಷ್ಟಿಯಲ್ಲಿ ಮಾಧ್ಯಮ ಪ್ರತಿನಿಧಿ ತಪ್ಪಾಗಿ ಕಾಣಿಸುವುದು ಒಂದಾದರೇ; ಇನ್ನೊಂದೆಡೆ ಆ ಮಗುವಿನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂಬ ಆತಂಕ ವ್ಯಕ್ತಪಡಿಸಿದರು.

‘ಮಾಧ್ಯಮಗಳು ಸಮಾಜದ ಕನ್ನಡಿಯಂತಿರಬೇಕು. ಸಮಾಜದ ಓರೆಕೋರೆಗಳನ್ನು ತಿದ್ದಬೇಕು. ಆದರೆ ಅವುಗಳನ್ನೇ ವೈಭವೀಕರಿಸಬಾರದು. ಮುಖ್ಯವಾಗಿ ಅತ್ಯಾಚಾರದಂಥ ಪ್ರಕರಣಗಳಲ್ಲಿ, ಮಗು ಮಾತ್ರವಲ್ಲದೇ ಆ ಇಡೀ ಕುಟುಂಬವೇ ಬಲಿಯಾಗಿರುತ್ತದೆ. ಕುಟುಂಬದ ಪರವಾಗಿ ಆತ್ಮಸ್ಥೈರ್ಯ ತುಂಬಿ, ನೈತಿಕತೆ ಆಧಾರದಲ್ಲಿ ವರದಿ ಮಾಡಬೇಕು’ ಎಂದು ಸಲಹೆ ನೀಡಿದರು.

ವಕೀಲ ಪ್ರಕಾಶ ಉಡುಪಿಕರ ಮಾತನಾಡಿ ‘ಮಕ್ಕಳ ಮೇಲಾಗುವ ಯಾವುದೇ ದೌರ್ಜನ್ಯ ಮಗುವಿನ ಮಾನಸಿಕ, ದೈಹಿಕ, ಕೌಟುಂಬಿಕ, ಸಾಮಾಜಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕುರಿತು ಮಗುವಿನ ಹಕ್ಕಿನ ರಕ್ಷಣೆ ಉದ್ದೇಶದಿಂದ ಕಾನೂನಿನಲ್ಲಿ ಮುಖ್ಯವಾಗಿ ಮಾಧ್ಯಮಗಳಲ್ಲಿ ಬಿತ್ತರಿಸುವಂತಿಲ್ಲ.

ಒಂದು ವೇಳೆ ಈ ನಿಯಮವನ್ನು ಮೀರಿ ವರದಿ ಪ್ರಕಟಿಸಿದರೆ, ಸಂಬಂಧಿಸಿದವರ ಮೇಲೆ ನಿರ್ದಿಷ್ಟ ಅವಧಿಯ ಸೆರೆವಾಸ, ಹೆಚ್ಚು ಮೊತ್ತದ ದಂಡ ವಿಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಆದ್ದರಿಂದ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ನಿಮ್ಮ ವೃತ್ತಿ ಬದುಕಿನ ಹಿತದೃಷ್ಟಿಯಿಂದ ಕಾನೂನು ಚೌಕಟ್ಟಿನೊಳಗೆ ವರದಿ ಮಾಡಿ’ ಎಂದು ಮಾಧ್ಯಮದವರಿಗೆ ಸಲಹೆ ನೀಡಿದರು.

ಅಕ್ಕಮಹಾದೇವಿ ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ‘ಭಾರತೀಯ ಪತ್ರಿಕಾ ಮಂಡಳಿಯ ನೀತಿ ಸಂಹಿತೆಯಂತೆ ಮಾಧ್ಯಮದವರು ಕಾರ್ಯ ನಿರ್ವಹಿಸಬೇಕು. ವಾಸ್ತವ ಪರಿಸ್ಥಿತಿಯಲ್ಲಿ ಮಾಧ್ಯಮ ರಂಗ ಉದ್ಯಮವಾಗಿ ಬೆಳೆದಿರುವಾಗ ನೀತಿ ಸಂಹಿತೆ ಅನುಸಾರ ವೃತ್ತಿ ನಿರ್ವಹಿಸುವುದು ಕಷ್ಟವಾದರೂ; ಸಾಮಾಜಿಕರಣ ಪ್ರಕ್ರಿಯೆಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುವುದರಿಂದ ಸಾಧ್ಯವಿರುವಷ್ಟು ಕಾನೂನು ಚೌಕಟ್ಟು ಮೀರದಂತೆ ಕರ್ತವ್ಯ ನಿರ್ವಹಿಸಬೇಕು’ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷ ವೈ.ಮರಿಸ್ವಾಮಿ, ಸದಸ್ಯೆ ಡಾ.ವನಿತಾ ತೊರವಿ ಮಾತನಾಡಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಶ್ರೀಧರ ಕುಲಕರ್ಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್‌ ನದಾಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ, ಡಿವೈಎಸ್‌ಪಿ ಅಶೋಕ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮಸಳಿ ಉಪಸ್ಥಿತರಿದ್ದರು.

ಗುರುರಾಜ ನಿರೂಪಿಸಿದರು. ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ ಸ್ವಾಗತಿಸಿದರು. ರಂಜಿತಾ ಕುಲಕರ್ಣಿ ಹಾಗೂ ರಕ್ಷಿತಾ ಕುಲಕರ್ಣಿ ಪ್ರಾರ್ಥನೆ, ನಾಡಗೀತೆ ಹಾಡಿದರು. ಮೌನೇಶ ಪೋತದಾರ ವಂದಿಸಿದರು. ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ ಕುರಿತ ಸಂದಿಗ್ಧ ಚಲನಚಿತ್ರ ಪ್ರದರ್ಶನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !