ಬುಧವಾರ, ನವೆಂಬರ್ 20, 2019
25 °C
ನಿಗದಿತ ಸಮಯಕ್ಕೆ ತಲುಪದ ಹಾಜರಾತಿ ದಾಖಲೆ, ಸರ್ಕಾರದಿಂದ ಬಂದ ಹಣ ವಾಪಸ್‌

ಬಿಆರ್‌ಟಿ: 23 ಬೆಂಕಿ ವಾಚರ್‌ಗಳಿಗೆ ಬಾರದ ವೇತನ

Published:
Updated:
Prajavani

ಹನೂರು: ಸಮೀಪದ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್‌ಟಿ) ಕೊಳ್ಳೇಗಾಲ ವಲಯದಲ್ಲಿ ಕಳೆದ ಬೇಸಿಗೆಯಲ್ಲಿ ಬೆಂಕಿ ಕಾವಲುಗಾರರನ್ನಾಗಿ ತಾತ್ಕಾಲಿಕವಾಗಿ ನೇಮಕಮಾಡಲಾಗಿದ್ದ 23 ಜನರಿಗೆ ಅರಣ್ಯ ಇಲಾಖೆ ಮೂರು ತಿಂಗಳ ವೇತನವನ್ನೇ ನೀಡಿಲ್ಲ.

ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸುವ ಸಲುವಾಗಿ, ಬೇಸಿಗೆ ಸಂದರ್ಭದಲ್ಲಿ ಪ್ರತಿ ವಲಯಕ್ಕೂ ನಾಲ್ಕು ತಿಂಗಳ ಅವಧಿಗೆ ಬೆಂಕಿ ಕಾವಲುಗಾರರನ್ನು ನೇಮಿಸಿಕೊಳ್ಳಲಾಗುತ್ತದೆ. ಇದಕ್ಕೆ ಸ್ಥಳೀಯರನ್ನೇ ಆಯ್ಕೆ ಮಾಡಲಾಗುತ್ತಿದೆ. ಸಂಭವನೀಯ ಕಾಳ್ಗಿಚ್ಚಿನ ಮೇಲೆ ನಿಗಾ ಇಡುವುದು ಇವರ ಜವಾಬ್ದಾರಿ. 

ಈ ವರ್ಷ ಕೊಳ್ಳೇಗಾಲ ವಲಯದಲ್ಲಿ ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಸ್ಥಳೀಯ 23 ಮಂದಿ ಗಿರಿಜನರನ್ನು ಬೆಂಕಿ ಕಾವಲುಗಾರರನ್ನು ನೇಮಿಸಿಕೊಳ್ಳಲಾಗಿತ್ತು. ನಾಲ್ಕು ತಿಂಗಳ ವೇತನ ಪೈಕಿ ಒಂದು ತಿಂಗಳ ವೇತನವನ್ನು ಮಾತ್ರ ನೀಡಲಾಗಿದೆ. ಉಳಿದ ಮೂರು ತಿಂಗಳ ವೇತನಕ್ಕಾಗಿ ಗಿರಿಜನರು ದಿನನಿತ್ಯ ಕಚೇರಿಗೆ ಅಲೆಯುವಂತಾಗಿದೆ.

‘ಪ್ರತಿ ವರ್ಷದಂತೆ ಈ ವರ್ಷವೂ ನಮ್ಮನ್ನು ಕರೆದು ಬೇಸಿಗೆ ಮುಗಿಯುವವರೆಗೆ ಬೆಂಕಿ ವಾಚರ್ ಆಗಿ ಕೆಲಸ ಮಾಡಿ ಪ್ರತಿ ತಿಂಗಳಿಗೆ ₹ 9,900 ವೇತನ ನೀಡುತ್ತೇವೆ ಎಂದು ಅರಣ್ಯಾಧಿಕಾರಿಗಳು ಹೇಳಿದರು. ಇದಕ್ಕೆ ಒಪ್ಪಿ ಸೇಬಿನಕೋಬೆ ಗ್ರಾಮದ 6 ಜನರು ಸೇರಿದೆವು. ಒಂದು ತಿಂಗಳ ವೇತನ ಸರಿಯಾದ ಸಮಯಕ್ಕೆ ನೀಡಿದರು. ಎರಡನೇ ತಿಂಗಳು ಮುಗಿಯುತ್ತಿದ್ದಂತೆ ಮುಂದಿನ ತಿಂಗಳು, ಎರಡೂ ತಿಂಗಳ ವೇತನ ನೀಡುತ್ತೇವೆ ಎಂದರು. ನಾಲ್ಕು ತಿಂಗಳ ಕಳೆದರೂ ನಮಗೆ ಬಾಕಿ ವೇತನ ನೀಡಿಲ್ಲ’ ಎಂದು ಸಿದ್ದ ಅವರು ಅಳಲು ತೋಡಿಕೊಂಡರು.

‘ಈಗ ಸಂಬಳ ಕೇಳಿದರೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೂಡಲೇ ಕೊಡಿಸಿಕೊಡುವುದಾಗಿ ಹೇಳುತ್ತಿದ್ದಾರೆ. ಹಿರಿಯ ಅರಣ್ಯಾಧಿಕಾರಿಗಳು ಮಧ್ಯಪ್ರವೇಶಿಸಿ ಬಾಕಿ ಉಳಿದಿರುವ ವೇತನ ನೀಡಬೇಕು. ಇಲ್ಲದಿದ್ದರೆ ನಮ್ಮ ಗಿರಿಜನರು ಯಾರೂ ಮುಂದಿನ ಬೇಸಿಗೆ ಸಮಯದಲ್ಲಿ ಬೆಂಕಿ ಕಾವಲುಗಾರರಾಗಿ ಕಾರ್ಯನಿರ್ವಹಿಸಲು ಮುಂದೆ ಬರುವುದಿಲ್ಲ’ ಎಂದು ನಂಜೇಗೌಡ ಹೇಳಿದರು.

ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ: ಸಿಸಿಎಫ್‌

ಬಿಆರ್‌ಟಿ ಮುಖ್ಯ ಅರಣ್ಯಸಂರಕ್ಷಾಣಾಧಿಕಾರಿ (ಸಿಸಿಎಫ್‌) ಡಾ.ಪಿ.ಶಂಕರ್ ಅವರು, ‘ಎಲ್ಲ ವಲಯಗಳಲ್ಲೂ ನೇಮಿಸಿಕೊಂಡಿದ್ದ ಬೆಂಕಿ ಕಾವಲುಗಾರರಿಗೆ ಈಗಾಗಲೇ ವೇತನ ಮಂಜೂರು ಮಾಡಲಾಗಿದೆ. ಕೊಳ್ಳೇಗಾಲ ವಲಯದಲ್ಲಿ ಮಾತ್ರ ಸಿಬ್ಬಂದಿಯ ಹಾಜರಾತಿ ಹಾಗೂ ಅವರ ದಾಖಲಾತಿಯನ್ನು ಖಜಾನೆಗೆ ನಿಗದಿತ ಸಮಯದೊಳಗೆ ತಲುಪಿಸದ ಕಾರಣ ಸರ್ಕಾರದಿಂದ ಬಂದಿದ್ದ ಹಣ ವಾಪಸಾಗಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬೆಂಕಿ ಕಾವಲುಗಾರರ ಬಾಕಿ ವೇತನಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕಳೆದ ಸಾಲಿನಲ್ಲಿ ಬಂದಿದ್ದ ಹಣ ವಾಪಸಾದ್ದರಿಂದ ಈ ಸಾಲಿನ ಯೋಜನೆಯಡಿ ಹಣ ಮಂಜೂರಾಗಲಿದೆ. 23 ಮಂದಿಗೆ ಕೂಡಲೇ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)