ಕಾವೇರಿ ಉಕ್ಕಿ ಹರಿದರೂ ಕೆರೆಗಳಿಗೆ ಇಲ್ಲ ನೀರು

7
ಜಲಾಶಯಗಳು ಭರ್ತಿಯಾಗಿದ್ದರೂ ರೈತರಿಗೆ ಅನುಕೂಲವಿಲ್ಲ–ರೈತರ ಆಕ್ರೋಶ

ಕಾವೇರಿ ಉಕ್ಕಿ ಹರಿದರೂ ಕೆರೆಗಳಿಗೆ ಇಲ್ಲ ನೀರು

Published:
Updated:
Deccan Herald

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಹರಿದು ಹೋಗುವ ಕಾವೇರಿ ನದಿ ಉಕ್ಕಿ ಹರಿದರೂ, ಇಲ್ಲಿನ ಕೆರೆಗಳಿಗೆ ಇನ್ನೂ ನೀರು ಬಂದಿಲ್ಲ. ಅವು ಬರಡಾಗಿಯೇ ಇವೆ. 

ಕಳೆದ ಕೆಲವು ವಾರಗಳಿಂದೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ, ಹಳ್ಳ ಕೊಳ್ಳಗಳು ಉಕ್ಕಿ ಹರಿದು ಕೊಳ್ಳೇಗಾಲದ ನದಿ ಅಂಚಿನಲ್ಲಿರುವ ಹಂಪಾಪುರ, ಮುಳ್ಳೂರು, ದಾಸನಪುರ, ಸತ್ತೇಗಾಲ, ಧನಗೆರೆ, ಸರಗೂರು ಸೇರಿದಂತೆ ಸುಮಾರು 15 ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಆದರೆ, ತಾಲ್ಲೂಕಿನಲ್ಲಿರುವ ಪ್ರಮುಖ ಕೆರೆಗಳಾದ ಚಿಕ್ಕರಂಗನಾಥ ಕೆರೆ, ದೊಡ್ಡ ರಂಗನಾಥ ಕೆರೆ, ಕೊಂಗಳ ಕೆರೆ, ಪಾಪನ ಕೆರೆ, ಸೇರಿದಂತೆ 22 ಕೆರೆಗಳಲ್ಲಿ ನೀರು ಕಾಣಿಸುತ್ತಿಲ್ಲ.

‘ಕಬಿನಿ, ಕೆಆರ್‌ಎಸ್‌ ಜಲಾಶಯಗಳಿಂದ ಹೊರ ಬಿಡಲಾಗುತ್ತಿರುವ ಸಾವಿರಾರು ಕ್ಯುಸೆಕ್‌ ನೀರು ಸಮುದ್ರ ಸೇರುತ್ತಿದೆ. ಅದನ್ನು ತಡೆ ಹಿಡಿದು ಕೆರೆಗಳಿಗೆ ತುಂಬಿಸುವ ಕೆಲಸ ಮಾಡಿದ್ದರೆ ನಾಲ್ಕು ಬೆಳೆಗಳಿಗೆ ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಇಲ್ಲಿನ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಕೊಳ್ಳೇಗಾಲದ ಪ್ರಮುಖ ಕೆರೆಗಳೆಲ್ಲ ಬರಡಾಗಿವೆ. ಹೀಗಿರುವಾಗ ಸರ್ಕಾರ ಜಲಪಾತೋತ್ಸವ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ರೈತ ಮುಖಂಡ ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು. 

ಜಲಾಶಯ ತುಂಬಿದರೂ ನೀರಿಲ್ಲ: ತಾಲ್ಲೂಕಿನಲ್ಲಿ ಗುಂಡಾಲ್ ಜಲಾಶಯ ಇದ್ದರೂ ಸಹ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸಿಗದ ಪರಿಸ್ಥಿತಿ ಇದೆ.

‘ಮಳೆಯಿಂದಾಗಿ ಜಲಾಶಯ ತುಂಬಿದೆ. ಆದರೆ, ಅಕ್ಕಪಕ್ಕದ ಕೆರೆಕಟ್ಟೆಗಳಿಗೆ ನೀರನ್ನು ಬಿಟ್ಟಿಲ್ಲ. ನೀರು ಬಿಟ್ಟರೆ ಸುಮಾರು 4,000 ಎಕರೆಗಳಷ್ಟು ವ್ಯಾಪ್ತಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಅನುಕೂಲವಾಗುತ್ತದೆ. ಕಬಿನಿ, ಕೆಆರ್‌ಎಸ್ ಜಲಾಶಯಗಳಲ್ಲಿ ನೀರಿದ್ದರೂ ರೈತರಿಗೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತ ಮಹದೇವ ಅಳಲು ತೋಡಿಕೊಂಡರು.

‘ರಾಜ್ಯದ ರೈತರ ಕೆರೆಕಟ್ಟೆಗಳಿಗೆ ನೀರಿಲ್ಲದಿದ್ದರೂ, ತಮಿಳು‌ನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದು ನಿಜಕ್ಕೂ ದುರಂತ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕೆರೆ ಕಟ್ಟೆ ತುಂಬಿದರೆ ಕೃಷಿಗೆ ಅನುಕೂಲವಾಗುತ್ತದೆ. ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ರೈತರು ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತದೆ. ರೈತರ ಬಗ್ಗೆ ಯಾವ ಜನಪ್ರತಿನಿಧಿಗಳೂ ಕಿಂಚಿತ್ತು ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ರೈತ ಜಗದೀಶ್‌ ಬೇಸರ ವ್ಯಕ್ತಪಡಿಸಿದರು. 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !