ಶುಕ್ರವಾರ, ಜನವರಿ 21, 2022
30 °C

‘ಜಂಗಲ್‌ ಜಾಕಿ’ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಂಗಲ್‌ ಜಾಕಿ’ ಸಾವು

ಮೈಸೂರು: ‘ಹಳ್ಳಿ ಹೈದ ಪ್ಯಾಟೆಗ್‌ ಬಂದ’ ರಿಯಾಲಿಟಿ ಷೋ ಮೂಲಕ ಪ್ರಸಿದಿ್ಧಯಾಗಿ ‘ಜಂಗಲ್‌ ಜಾಕಿ’ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದ ರಾಜೇಶ್‌ (22) ಭಾನುವಾರ ಇಲ್ಲಿ ಮನೆ ಮಹಡಿಯಿಂದ ಬಿದ್ದು ಭಾನುವಾರ ಮೃತಪಟ್ಟರು.ಶ್ರೀರಾಂಪುರದ ಪರಸಯ್ಯನ ಹುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಜೇಶ್‌ ಮಧ್ಯಾಹ್ನ 1 ಗಂಟೆಗೆ ಮನೆಯ ಮೂರನೇ ಮಹಡಿಗೆ ತೆರಳಿದಾಗ ತಲೆ ಸುತ್ತಿ ಕೆಳಕ್ಕೆ ಬಿದ್ದರು. ಪರಿಣಾಮ, ಕಾಂಪೌಂಡ್‌ನ ಕಬ್ಬಿಣದ ಸರಳುಗಳು ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಚುಚ್ಚಿದ್ದರಿಂದ ಗಂಭೀರ ಸ್ವರೂಪದ ಗಾಯಗಳಾದವು. ತೀವ್ರ ರಕ್ತಸ್ರಾವವಾಗಿ ನರಳಾಡುತ್ತಿದ್ದ ಅವ ರನ್ನು ನೆರೆಹೊರೆಯವರು ಕುವೆಂಪು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಚಿಕಿತ್ಸೆ ಫಲಕಾರಿ ಯಾಗದೆ ಮಧ್ಯಾಹ್ನ 2.10ರ ಸುಮಾರಿಗೆ ಕೊನೆಯುಸಿರೆಳೆದರು.

ರಾಜೇಶ್‌ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂದೆ ಜನಸಾಗರ ನೆರೆಯಿತು. ಶವಪರೀಕ್ಷೆ ಬಳಿಕ ಎಚ್‌.ಡಿ. ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಗೆ ಶವ ಕೊಂಡೊಯ್ಯಲಾಯಿತು.ತಾಯಿಯ ಆಕ್ರಂದನ: ಮಗನನ್ನು ಕಳೆದುಕೊಂಡ ತಾಯಿ ಲಕ್ಷ್ಮಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ‘ಭಾನುವಾರ ಬೆಳಿಗೆ್ಗ ಸ್ನೇಹಿತನ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತಾಯಿಯೊಂದಿಗೆ ರಾಜೇಶ್ ತೆರಳಿದ್ದರು. ಆಗ ರಾಜೇಶ್‌ ವಿಚಿತ್ರವಾಗಿ ನಡೆದುಕೊಂಡು ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದನಂತೆ. ಇದರಿಂದ ವಿಚಲಿತರಾದ ತಾಯಿ ದೇವಸ್ಥಾನಕ್ಕೆ ಹೋಗದೆ ಮನೆಗೆ ವಾಪಸಾದರು. ಮಧ್ಯಾಹ್ನ ಮನೆಯ ಮೂರನೇ ಮಹಡಿಗೆ ಹೋದ ರಾಜೇಶ್, ಚಾಮುಂಡೇಶ್ವರಿ ಭಾವಚಿತ್ರವನ್ನು ಕೈನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದ. ಮಹಡಿ ಮೇಲೆ ತಾಯಿ ಸಹ ಇದ್ದರು. ಸ್ವಲ್ಪ ಹೊತ್ತಿನಲ್ಲೇ ಮಹಡಿ ಮೇಲಿಂದ ಬಿದ್ದ’ ಎಂದು ನೆರೆಮನೆಯ ರವಿ ತಿಳಿಸಿದರು.ಎಚ್‌.ಡಿ. ಕೋಟೆ ತಾಲ್ಲೂಕು ಬಳ್ಳೆ ಹಾಡಿಯ ಕೃಷ್ಣ–ಲಕ್ಷ್ಮಿ ಮಗನಾದ ರಾಜೇಶ್, 2010ನೇ ಸಾಲಿನಲ್ಲಿ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾದ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಷೋ ವಿಜೇತನಾದ ಬಳಿಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ರಿಯಾಲಿಟಿ ಷೋ ಜೊತೆಗಾರ್ತಿ ಐಶ್ವರ್ಯ ಜೊತೆ ರಾಜೇಶ್‌ ‘ಜಂಗಲ್‌ ಜಾಕಿ’ ಚಿತ್ರದಲ್ಲಿ ನಟಿಸಿದ್ದರು. ಚಿತ್ರ ತೆರೆ ಕಾಣುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದ ರಾಜೇಶ್‌ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಹಾಗಾಗಿ 2012ರ ಜುಲೈ 11ರಂದು ಅವರನ್ನು ಕೆ.ಆರ್‌. ಆಸ್ಪತ್ರೆಯ ಮಾನಸಿಕ ರೋಗಿಗಳ ಚಿಕಿತ್ಸಾ ವಿಭಾಗಕ್ಕೆ ದಾಖಲು ಮಾಡಲಾಗಿತ್ತು. ಇದರಿಂದ ಮನ ನೊಂದ ಪತ್ನಿ ಕಾವ್ಯಾ  ಪತಿಯ ಮನೆಯನ್ನು ತೊರೆದಿದ್ದರು.ಕೆಲ ದಿನಗಳ ನಂತರ ಗುಣಮುಖರಾದ ರಾಜೇಶ್‌, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ‘ಲವ್‌ ಈಸ್‌ ಪಾಯಿಸನ್‌’ ಮತ್ತು ‘ರಾಜೇಶ್‌ ಲವ್ಸ್‌ ಪ್ರಿಯಾ’ ಚಿತ್ರಗಳಿಗೆ ಸಹಿ ಹಾಕಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.