ನಮ್ಮ ನಡುವಿನ ‘ನಾರಿ ಶಕ್ತಿ’ ನೋಮಿತೊ

ಸೋಮವಾರ, ಏಪ್ರಿಲ್ 22, 2019
33 °C

ನಮ್ಮ ನಡುವಿನ ‘ನಾರಿ ಶಕ್ತಿ’ ನೋಮಿತೊ

Published:
Updated:

ನೋಮಿತೊ ಕಾಮ್ದಾರ್ ಹೆಸರಿನ ಅರ್ಥವೇ ವಿಶಿಷ್ಟವಾದುದು. ಗುಜರಾತಿ ಭಾಷೆಯಲ್ಲಿ ನೋಮಿತೊ ಎಂದರೆ ಕನ್ನಡದಲ್ಲಿ ನಮಿತಾ ಎಂದು. ಕಾಮ್ದಾರ್ ಎಂದರೆ ಹಿಡಿದ ಕೆಲಸವನ್ನು ಛಲ ಬಿಡದೆ ಮಾಡುವ ವ್ಯಕ್ತಿಯೆಂದು ಹೇಳುವುದುಂಟು. ನೋಮಿತೊ ಅವರ ವಿಚಾರದಲ್ಲಿ ಅವರ ನಾಮಧೇಯಕ್ಕೂ ಮತ್ತು ಅವರ ವ್ಯಕ್ತಿತ್ವಕ್ಕೂ ಅವಿನಾಭಾವ ಸಂಬಂಧವಿದೆ. 2018ನೇ ಸಾಲಿನ ನಾರಿಶಕ್ತಿ ಪುರಸ್ಕಾರ್ ನೋಮಿತೊ ಅವರಿಗೆ ದೊರೆತದ್ದು ಸ್ತ್ರೀಕುಲವೇ ಹೆಮ್ಮೆಪಡುವ ವಿಚಾರ.

ಬ್ಯಾಂಕನ್‌ಲ್ಲಿ ಅಧಿಕಾರಿಯಾಗಿದ್ದ ನೋಮಿತೊ ಅವರ ತಂದೆ ಆಗಾಗ ಭಾರತದ ಅನೇಕ ಊರುಗಳಿಗೆ ವರ್ಗಾವಣೆಯಾಗಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ನೋಮಿತೊ ಅವರು ತಮ್ಮ ವಿದ್ಯಾಭ್ಯಾಸವನ್ನು ಚೆನ್ನೈ, ಮೈಸೂರು, ಬೆಂಗಳೂರು ಹೀಗೇ ದೇಶದ ಅನೇಕ ಸ್ಥಳಗಳಲ್ಲಿ ಮಾಡುವಂತಾಯಿತು. ವಿದ್ಯಾರ್ಥಿ ದೆಸೆಯಿಂದಲೇ ಸಾಹಸ ಕ್ರೀಡೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ನೋಮಿತೊ ಬಹಳಷ್ಟು ಸಾಹಸಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ದೇಶ ವಿದೇಶಗಳಲ್ಲಿ ಸಾಧನೆಯನ್ನು ಮೆರೆದವರು. ಇದರ ಮಧ್ಯೆ ಕನ್ನಡಿಗರಾದ ಡಾ.ಎಸ್.ಎಲ್.ಎನ್ ಸ್ವಾಮಿ ಎಂಬುವವರ ಪರಿಚಯವಾಗಿ ನೋಮಿತೊ ಅವರು ಸ್ವಾಮಿಯವರನ್ನೇ ವಿವಾಹವಾದರು.

ಸ್ವಾಮಿಯವರು ಎವರೆಸ್ಟ್ ಪರ್ವತಾರೋಹಿ ತೇನಸಿಂಗ್ ಅವರ ಒಡನಾಟದಲ್ಲಿದ್ದವರು. ತೇನಸಿಂಗ್ ಅವರ ಪ್ರಭಾವಕ್ಕೆ ಒಳಗಾಗಿ ಯಾವುದೋ ಒಂದು ಸಂದರ್ಭದಲ್ಲಿ ತೇನಸಿಂಗ್ ಅವರು ನೀಡಿದ ಸಲಹೆಯ ಮೇರೆಗೆ ತನ್ನ ಸಾಹಸಿ ಕಾರ್ಯ ಚಟುವಟಿಗೆಳನ್ನು ಕರ್ನಾಟಕದ ಪಶ್ಚಿಮಘಟ್ಟದಲ್ಲಿ ತೊಡಗಿಸಿಕೊಂಡವರು. ಅದರ ಸಲುವಾಗಿ ಶಿವಮೊಗ್ಗೆ ಜಿಲ್ಲೆಯ ತಾಳಗುಪ್ಪ ಸಮೀಪದ ಹೊನ್ನೆಮರಡುವಿನಲ್ಲಿ ದಿ ಅಡ್ವೆಂಚರ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಲಿಂಗನಮಕ್ಕಿ ಜಲಾಶಯದ ಶರಾವತಿ ನದಿಯ ಹಿನ್ನೀರಿನಲ್ಲಿ ಸಾಹಸ ಕ್ರೀಡೆಗಳಾದ ತೆಪ್ಪಯಾನ, ನೀರಿನ ಮೌಲ್ಯವನ್ನು ತಿಳಿಸುವ ಸಲುವಾಗಿ ಹಿನ್ನೀರಿನ ಹಬ್ಬ, ವ್ಯಕ್ತಿತ್ವ ವಿಕಸನದ ಕಾರ್ಯಾಗಾರಗಳು, ಪ್ರಕೃತಿಗೆ ಮಾರಕವಾಗದಂತೆ ಪ್ರಕೃತಿಯ ಮಡಿಲಿನಲ್ಲಿ ಮನುಷ್ಯ ಕಟ್ಟಿಕೊಳ್ಳಬಹುದಾದ ಸರಳ ಬದುಕಿನ ಬಗೆಗಿನ ಪರಿಚಯ ಇವೇ ಮೊದಲಾದ ಕೊಡುಗೆಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ.

ಸ್ವಾಮಿಯವರ ಈ ಸಾಹಸಗಾಥೆಗೆ ಜೊತೆಯಾಗಿ ನಿಂತವರು ಅವರ ಪತ್ನಿ ನೋಮಿತೊ ಕಾಮ್ದಾರ್. ಸಂಸ್ಥೆಯಿಂದ ಆಯೋಜಿಸುವ ಸಾಹಸ ಕ್ರೀಡೆಗಳಲ್ಲಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿದವರಿಗೆ ಮುಂದಿನ ಪೀಳಿಗೆಗೆ ತಿಳಿವಳಿಕೆ ಹೇಳಲು ಮತ್ತು ಇಂದಿನ ಪೀಳಿಗೆ ತಿದ್ದಿಕೊಳ್ಳಲು ಬಹಳಷ್ಟು ವಿಷಯಗಳು ತಿಳಿಯುತ್ತಾ ಹೋಗುತ್ತವೆ.

ಹೊನ್ನೆಮರಡುವಿನ ಪ್ರಕೃತಿ ಮಡಿಲಲ್ಲಿ ಬದುಕುತ್ತಿರುವ ನೋಮಿತೊ ಎಂಬ ನಾರಿಶಕ್ತಿಗೆ ನೂರಾರು ರೂಪ. ದಿ ಅಡ್ವೆಂಚರ್ ಸಂಸ್ಥೆಯ ಮುಖ್ಯಸ್ಥೆಯಾದ ಇವರು ನಶಿಸುತ್ತಿರುವ ವನ್ಯಸಂಪತ್ತನ್ನು ಉಳಿಸಲು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುತ್ತಾ ಅರಣ್ಯ ಸಂಪತ್ತನ್ನು ಉಳಿಸಲು ಹೋರಾಡುತ್ತಿರುವ ಧೀರ ಮಹಿಳೆ. ಸಂಸ್ಥೆ ಆಯೋಜಿಸುವ ಶಿಬಿರಗಳ ಆಯೋಜಕಿ, ಶಿಬಿರಕ್ಕೆ ಬರುವವರ ನಡವಳಿಕೆಯನ್ನು ಗಮನಿಸುತ್ತಾ ಅವರ ಸರಿ ತಪ್ಪುಗಳನ್ನು ತಿದ್ದುವ ಶಿಕ್ಷಕಿ, ಶಿಬಿರಾರ್ಥಿಗಳ ನಾಡಿ ಮಿಡಿತವನ್ನು ಅರಿತು ಎಲ್ಲರ ಜೊತೆಯಲ್ಲೂ ಮನಬಿಚ್ಚಿ ಮಾತಾಡುವ ಸಹೋದರಿ. ಶಿಬಿರದಲ್ಲಿ ಎಲ್ಲರನ್ನೂ ಸಮಾನವಾಗಿ ಸಲಹುವ ತಾಯಿ. ಪ್ರಕೃತಿಯ ಮಡಿಲಲ್ಲಿ ಸರಳವಾಗಿ ಬದುಕುತ್ತಿರುವ ಮಾದರಿ ಮಹಿಳೆ.


ನೋಮಿತೊ ಕಾಮ್ದಾರ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !