ಸೋಮವಾರ, ಅಕ್ಟೋಬರ್ 14, 2019
23 °C

ಕನ್ಯೆಯಲ್ಲ, ಅವಿವಾಹಿತೆ!

Published:
Updated:
Prajavani

ಗಂಡಿಗಿಂತಲೂ ಹೆಣ್ಣುಮಗಳ ದೈಹಿಕ ಹಾಗೂ ಮಾನಸಿಕ ಬದಲಾವಣೆ ಹಲವು ಆಯಾಮಗಳಿಂದ ಕೂಡಿರುವಂತಹದ್ದು. ಜೊತೆಗೆ ಗಂಡುಮಕ್ಕಳಿಗೆ ಹೋಲಿಸಿದರೆ ವೇಗವಾಗಿ ಆಗುವಂತಹದ್ದು ಕೂಡ. ಈ ಬದಲಾವಣೆಗಳು ನೈಸರ್ಗಿಕವಾಗಿ ಆದರೂ ಅವುಗಳನ್ನು ಗುಟ್ಟಾಗಿಟ್ಟು, ಜೊತೆಗೊಂದಿಷ್ಟು ಸಾಮಾಜಿಕ ಕಟ್ಟುಗಳನ್ನು ವಿಧಿಸಿ ತಾರತಮ್ಯದಿಂದ ನೋಡುವ ರೀತಿ ನಮ್ಮಲ್ಲಿ ಮಾತ್ರವಲ್ಲ, ಆಫ್ರಿಕಾ ದೇಶಗಳು ಸೇರಿದಂತೆ ಹಲವೆಡೆ ಇನ್ನೂ ಇದೆ.

ಉದಾಹರಣೆಗೆ ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವ ಕುಮಾರಿ ಅಥವಾ ಕನ್ಯೆ ಎಂಬ ಶಬ್ದವನ್ನೇ ತೆಗೆದುಕೊಳ್ಳಿ. ದೈಹಿಕ ಆಗುಹೋಗುಗಳ ಜೊತೆ ಒಂದಿಷ್ಟು ನೈತಿಕತೆಯ ಲೇಪವೂ ಇದೆ. ಕೆದಕುತ್ತ ಹೋದರೆ ಅದರ ಸುತ್ತ ಅಂಟಿಕೊಂಡಿರುವ ಅರ್ಥಗಳೂ ವಿಪರೀತ.

ಅದೇನೇ ಇರಲಿ, ಇತ್ತೀಚೆಗೆ ಬಾಂಗ್ಲಾದೇಶದ ಕೋರ್ಟ್‌ ಈ ಶಬ್ದವನ್ನು ಒಳಗೊಂಡ ವಿವಾಹ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ತೀರ್ಪೊಂದನ್ನು ನೀಡಿತು.

ಆ ದೇಶದ ಮುಸ್ಲಿಂ ವಿವಾಹ ಪ್ರಮಾಣ ಪತ್ರಗಳಿಂದ ಕುಮಾರಿ (ಕನ್ಯೆ) ಪದ ತೆಗೆದುಹಾಕಬೇಕು ಎಂದು ಅಲ್ಲಿಯ ನ್ಯಾಯಾಲಯ ಸೂಚಿಸಿದೆ. ಈ ಪದ ಬಳಕೆ ಅವಮಾನಕರ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಪ್ರತಿಪಾದಿಸಿದ್ದ ಹೋರಾಟಗಾರರು ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ದಕ್ಷಿಣ ಏಷ್ಯಾ ರಾಷ್ಟ್ರಗಳ ಮುಸ್ಲಿಂ ವಿವಾಹ ಕಾಯ್ದೆ ಅನುಸಾರ ವಧು ಪ್ರಮಾಣ ಪತ್ರವನ್ನು ಪಡೆಯಲು ಮೂರು ಅಂಶಗಳಾದ ಕನ್ಯೆ, ವಿಧವೆ ಅಥವಾ ವಿಚ್ಛೇದಿತೆ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿತ್ತು. ಕೋರ್ಟ್ ತನ್ನ ಆದೇಶದಲ್ಲಿ ಕನ್ಯೆ ಪದಕ್ಕೆ ಬದಲಾಗಿ ಅವಿವಾಹಿತೆ ಪದ ಬಳಸಬೇಕು ಎಂದು ಹೇಳಿರುವುದು ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಭವಿಷ್ಯದ ದೊಡ್ಡ ಬದಲಾವಣೆಗೆ ಒಂದು ಪುಟ್ಟ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಖಾಸಗಿತನದ ಹಕ್ಕು

ಏಕೆಂದರೆ ಒಬ್ಬಳು ಹೆಣ್ಣುಮಗಳು ಕನ್ಯೆಯೇ ಅಲ್ಲವೇ ಎಂಬುದನ್ನು ಬಹಿರಂಗಪಡಿಸಲು ಒತ್ತಾಯಿಸುವುದು ಅಥವಾ ಕಾನೂನಿನಲ್ಲೇ ಸೇರಿಸುವುದು ಆಕೆಯ ಖಾಸಗಿತನದ ಹಕ್ಕಿಗೆ ವಿರುದ್ಧವಾದದ್ದು. ಒಬ್ಬ ಪುರುಷನಿಗೆ ಈ ವಿಷಯವನ್ನು ಬಹಿರಂಗಪಡಿಸುವುದು ಕಡ್ಡಾಯ ಎಂಬುದು ಯಾವ ದೇಶಗಳಲ್ಲಿಯೂ ಇಲ್ಲ. ತಾನು ಅವಿವಾಹಿತ ಅಷ್ಟೆ, ಬ್ರಹ್ಮಚಾರಿ ಅಲ್ಲ ಎಂದು ಕೆಲವು ಸೆಲೆಬ್ರಿಟಿಗಳು ಹೇಳಿಕೊಂಡು ಸುದ್ದಿ ಮಾಡಿದ್ದೂ ಇದೆ. ಅದೇನೆ ಇರಲಿ, ಮಹಿಳೆಗೇಕೆ ಈ ರೀತಿಯ ನಿರ್ಬಂಧ ಎಂಬ ಪ್ರಶ್ನೆ ಏಳುವುದು ಸಹಜವೇ. 

ಅಷ್ಟಕ್ಕೂ ಬದಲಾವಣೆಯೆಂಬುದು ನಿಸರ್ಗದ ಮೂಲಭೂತ ಧರ್ಮ. ಋತುಗತಿಗನುಗುಣವಾಗಿ ಭೂಮಿಯ ಮೇಲೆ ಈ ಬದಲಾವಣೆ ನಡೆಯುತ್ತಿರುತ್ತದೆ. ಮನುಷ್ಯನ ಬದುಕಿಗೂ ಇದು ಅನ್ವಯಿಸುತ್ತದೆ. ಆದರೆ ಮಹಿಳೆಯರ ವಿಷಯದಲ್ಲಿ ಮಾತ್ರ ಈ ಬದಲಾವಣೆ ನಿಧಾನಗತಿಯಲ್ಲಾಗುತ್ತಿದೆ ಎಂಬುದಂತೂ ನಿಜ.

ಈ ಕನ್ಯೆ ಅಥವಾ ಅವಿವಾಹಿತೆ ಶಬ್ದಗಳ ಕುರಿತ ಚರ್ಚೆ ಏನೇ ಇರಲಿ, ಆಧುನಿಕತೆ ಎಂಬುದು ಎಲ್ಲಾ ಕ್ಷೇತ್ರಗಳಲ್ಲಿಯೂ ನುಸುಳಿರುವ ಈ ಕಾಲದಲ್ಲಿ ಈ ಪದದ ಹಿಂದಿರುವ ಕೆಲವು ಕ್ರೌರ್ಯಗಳ ಪರಾಕಾಷ್ಠತೆಯನ್ನು ಈಚೆಗೆಳೆದರೆ ಎದೆ ನಡುಗಿಸುವಂತಹದ್ದು. ಆಫ್ರಿಕಾದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಅವಿವಾಹಿತ ಹೆಣ್ಣುಮಕ್ಕಳ ಜನನಾಂಗ ಛೇಧಿಸಿ ಹೊಲಿಗೆ ಹಾಕುವಂತಹ ಕ್ರೌರ್ಯ ಆಚರಣೆಯಲ್ಲಿದೆ. ಭಾರತ, ಪಾಕಿಸ್ತಾನ, ಯೆಮೆನ್‌ ಸೇರಿದಂತೆ ಹಲವು ದೇಶಗಳಲ್ಲಿ ಹಂಚಿ ಹೋಗಿರುವ ದಾವೂದಿ ಬೋಹ್ರಾ ಜನಾಂಗದ ಹೆಣ್ಣುಮಕ್ಕಳಿಗೆ 6–7 ವರ್ಷ ವಯಸ್ಸಿನಲ್ಲೇ ಇಂತಹ ಜನನಾಂಗ ಛೇಧನ (ಎಫ್‌ಜಿಎಂ) ಆಚರಣೆಯಿದೆ. ಖ್ಯಾತ ರೂಪದರ್ಶಿ ವಾರಿಸ್‌ಡೇರಿ ಈ ವಿಚಾರವನ್ನು ಮುಕ್ತವಾಗಿ ಹೇಳಿಕೊಳ್ಳುವವರೆಗೆ ಪ್ರಪಂಚಕ್ಕೆ ಈ ಕುರಿತು ಅರಿವು ಇರಲಿಲ್ಲ. ಇದರ ನಿಷೇಧದ ಬಗ್ಗೆ ವಿಶ್ವಸಂಸ್ಥೆ ಕೂಡ ಕರೆಕೊಟ್ಟಿದೆ.

ಮೂಢನಂಬಿಕೆ

ಮತ್ತೊಂದು ವಿಪರ್ಯಾಸವೆಂದರೆ ಹರೆಯದ ಹುಡುಗಿಯರು ಹೈಟೆಕ್ ಆಸ್ಪತ್ರೆಗಳಲ್ಲಿ ಮದುವೆಗೆ ಮುಂಚೆ ತಮ್ಮ ಜನನಾಂಗಕ್ಕೆ ಹೊಲಿಗೆ ಹಾಕಿಸಿಕೊಳ್ಳುವ ಮೂಲಕ ತಾವು ಕನ್ಯೆಯಾಗಿಯೇ ಮದುವೆಯಾಗಬೇಕೆಂಬ ಆಧುನಿಕ ಮೂಢನಂಬಿಕೆಗೆ ಬಲಿಯಾಗುತ್ತಿರುವುದು. ಇದನ್ನು ಕೇವಲ ಮೂಢನಂಬಿಕೆ ಎನ್ನುವುದಕ್ಕಿಂತ ವಿವಾಹಪೂರ್ವ ಲೈಂಗಿಕ ಚಟುವಟಿಕೆ ಬಗ್ಗೆ ಅನುಮಾನಿಸಿ ಪತಿಯ ಕಡೆಯಿಂದ ನಡೆಯುವ ದೌರ್ಜನ್ಯದಿಂದ ಪಾರಾಗಲು ಇಂತಹ ನೋವಿಗೆ ಹೆಣ್ಣುಮಕ್ಕಳು ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ ಎನ್ನಬಹುದು.

ಕನ್ಯೆ ಎಂಬ ಪದವೇ ತಾರತಮ್ಯದಿಂದ ಕೂಡಿದ್ದು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವುದು ಇದೇನು ಮೊದಲ ಬಾರಿಯಲ್ಲ. ಆದರೆ ಇದರ ಹೊರತಾಗಿಯೂ ನೇಪಾಳದಲ್ಲಿ ಋತುಮತಿಯಾಗದ ಕನ್ಯೆ ಅಥವಾ ಕುಮಾರಿಯನ್ನು ಜೀವಂತ ದೇವತೆಯಾಗಿ ಪೂಜಿಸಲಾಗುತ್ತಿದೆ.

ಇನ್ನು ಭಾರತದಲ್ಲಿ ವಿವಾಹದ ವಿಷಯ ಬಂದರೆ ಕನ್ಯಾದಾನ ಎಂಬ ಶಬ್ದ ಹೆಚ್ಚು ಪ್ರಚಲಿತದಲ್ಲಿತ್ತು. ಎಂಟು ವರ್ಷದೊಳಗಿನ ಹುಡುಗಿಯನ್ನು ಅಂದರೆ ಋತುಮತಿಯಾಗದ ಹುಡುಗಿಯನ್ನು ಕನ್ಯೆ ಎಂದು ಕರೆಯಲಾಗುತ್ತಿತ್ತು. ಜೊತೆಗೆ ಆಗ 7–8ರ ವಯಸ್ಸಿನಲ್ಲೇ ಹುಡುಗಿಗೆ ಮದುವೆ ಮಾಡುವ ಪದ್ಧತಿಯೂ ಇತ್ತು. ಕನ್ಯೆ ಪದ ಪ್ರಯೋಗದ ಬಗ್ಗೆ ಅಸಮಾಧಾನ ಇರುವಾಗ ಹೆಣ್ಣುಮಕ್ಕಳ ದಾನ ಕೊಡುವ ಕುರಿತೂ ಆಕ್ಷೇಪಣೆಗಳು ಸಾಕಷ್ಟಿವೆ. ಈ ಶಬ್ದ ಪ್ರಯೋಗ ಹಾಗೂ ಇದಕ್ಕೆ ಅಂಟಿಕೊಂಡಿರುವ ಕೆಲವು ಪೂರ್ವಾಗ್ರಹಪೀಡಿತ ಭಾವನೆಗಳಲ್ಲಿ ನಾವು ಭಾರತೀಯರು ಕೂಡ ಸಾಕಷ್ಟು ಸುಧಾರಣೆಗಳನ್ನು ತರಬೇಕಾದ ಜರೂರಿದೆ.

Post Comments (+)