ಬುಧವಾರ, ಮೇ 12, 2021
27 °C
ಅಪ್ಪ–ಮಗಳಿಗೆ ಫೋಟೊ ನೀಡಲು ಟ್ವಿಟರ್ ನೆರವು ಕೋರಿದ ಫೋಟೊಗ್ರಾಫರ್

ನಾಟ್ರೆ ಡೇಮ್ ಚರ್ಚ್‌ಗೆ ಬೆಂಕಿ ಬೀಳುವ ಒಂದು ತಾಸು ಮೊದಲು ತೆಗೆದ ಫೋಟೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಇಲ್ಲಿನ ಇತಿಹಾಸ ಪ್ರಸಿದ್ಧ 12ನೇ ಶತಮಾನದ ನಾಟ್ರೆ ಡೇಮ್ ಚರ್ಚ್‌ ಬೆಂಕಿ ಅನಾಹುತಕ್ಕೀಡಾಗುವುದಕ್ಕೂ ಒಂದು ಗಂಟೆ ಮೊದಲು ಪ್ರವಾಸಿಗರೊಬ್ಬರು ಸೆರೆಹಿಡಿದಿದ್ದ ಚಿತ್ರವೀಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಅಮೆರಿಕದ ಮಿಚಿಗನ್‌ನ ಬ್ರೂಕ್ ವಿಂಡ್ಸರ್ ಅವರು ಸ್ನೇಹಿತೆ ಜತೆ ಸೋಮವಾರ ಚರ್ಚ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಪ್ಪ ಮತ್ತು ಮಗಳು (ವಿಂಡ್ಸರ್ ಭಾವಿಸಿರುವಂತೆ) ಆಟವಾಡುತ್ತಿರುವ ಛಾಯಾಚಿತ್ರ ಸೆರೆಹಿಡಿದಿದ್ದರು. ಇದನ್ನು ಆ ಅಪ್ಪ, ಮಗಳಿಗೆ ನೀಡಲು ಉದ್ದೇಶಿಸಿರುವುದಾಗಿ ಹೇಳಿರುವ ವಿಂಡ್ಸರ್, ಅವರನ್ನು ಹುಡಕಲು ನೆರವು ನೀಡುವಂತೆ ಕೋರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಾಟ್ರೆ ಡೇಮ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ಬೆಂಕಿ ಅನಾಹುತ​

‘ನಾಟ್ರೆ ಡೇಮ್ ಚರ್ಚ್‌ ಬೆಂಕಿ ಅನಾಹುತಕ್ಕೀಡಾಗುವುದಕ್ಕೂ ಒಂದು ಗಂಟೆ ಮೊದಲು ನಾನು ಈ ಚಿತ್ರವನ್ನು ಸೆರೆಹಿಡಿದೆ. ಆ ತಂದೆಯ ಬಳಿ ಹೋಗಿ ಈ ಫೋಟೊ ನಿಮಗೆ ಬೇಕೇ ಎಂದು ಕೇಳಬೇಕು ಎಂದುಕೊಂಡಿದ್ದೆ. ಈಗ ನಾನದನ್ನು ಅವರಿಗೆ ನೀಡಬಯಸಿದ್ದೇನೆ. ಟ್ವಿಟರ್, ನಿನ್ನಲ್ಲೇನಾದರೂ ಮ್ಯಾಜಿಕ್ ಇದ್ದರೆ ಅವರಿಗೆ ಈ ಫೋಟೊ ಸಿಗುವಂತೆ ಮಾಡು’ ಎಂದು ವಿಂಡ್ಸರ್ ಟ್ವೀಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.

‘ಅವರು ಅಪ್ಪ, ಮಗಳು ಹೌದಾ ಎಂಬುದು ನಿಖರವಾಗಿ ನನಗೆ ತಿಳಿದಿಲ್ಲ. ಮೇಲ್ನೋಟಕ್ಕೆ ಹಾಗೆ ಭಾವಿಸಿದೆ. ಅವರು ಚಿಕ್ಕಪ್ಪ, ಸಹೋದರ, ಸ್ನೇಹಿತ ಆಗಿರಲೂಬಹುದು. ಅವರನ್ನು ಪತ್ತೆಮಾಡುವವರೆಗೂ ಅದು ಗೊತ್ತಾಗದು’ ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಒಂದು ವೇಳೆ ನಾನು ಆ ಸ್ಥಾನದಲ್ಲಿದ್ದಿದ್ದರೆ ಆ ಫೋಟೊ ಬೇಕೆಂದು ಬಯಸುತ್ತಿದ್ದೆ. ಆ ವ್ಯಕ್ತಿಯೂ ಹಾಗೆಯೇ ಭಾವಿಸಬಹುದು ಎಂದುಕೊಂಡಿದ್ದೇನೆ. ಫೋಟೊದಲ್ಲಿರುವ ವ್ಯಕ್ತಿಯನ್ನು ಪತ್ತೆಮಾಡುವ ಆಶಾವಾದ ಹೊಂದಿದ್ದೇನೆ ಎಂದೂ ವಿಂಡ್ಸರ್ ಹೇಳಿದ್ದಾರೆ.

ಸೋಮವಾರ ಸಂಜೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಟ್ರೆ ಡೇಮ್ ಚರ್ಚ್‌ನ ಮೇಲ್ಭಾಗದ ಪಿರಮಿಡ್ ಆಕೃತಿ ಮತ್ತು ಛಾವಣಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಚರ್ಚ್‌ನ 69 ಮೀ. ಎತ್ತರದ ಅವಳಿ ಗೋಪುರಗಳಿಗೆ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು