ಶುಕ್ರವಾರ, ನವೆಂಬರ್ 22, 2019
24 °C

ದೂಧ್‌ಸಾಗರ ಬಳಿ ರೈಲು ನಿಲುಗಡೆ, ಪ್ರವಾಸಿಗರಿಗೆ ಹಬ್ಬವೋ ಹಬ್ಬ

Published:
Updated:
Prajavani

ಇನ್ಮೇಲೆ ರೈಲಿನಲ್ಲೇ ಕುಳಿತು ದೂಧ್‌ಸಾಗರ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು. ಅಷ್ಟೇ ಅಲ್ಲ, ರೈಲಿನಿಂದ ಇಳಿದು, ಕ್ಷಣಕಾಲ ನಿಂತು ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯನ್ನು ನೋಡುತ್ತಾ, ಫೋಟೊ ಕ್ಲಿಕ್ಕಿಸಬಹುದು!

ಹೌದು, ಕೆಲವು ಪ್ರವಾಸಿಗರು ಮಾಡಿದ ದುಸ್ಸಾಹಸ ಮತ್ತು ಅದರಿಂದಾದ ಸಾವು–ನೋವಿನಿಂದಾಗಿ ‘ಪ್ರಕೃತಿಯ ಕೊರಳಿನ ಮುತ್ತಿನಹಾರ’ದಂತಿರುವ ಈ ಜಲಪಾತ ವೀಕ್ಷಣೆಗೆ ಅವಕಾಶವಿರಲಿಲ್ಲ. ಹೀಗಾಗಿ, 2015ರಿಂದ ದೂಧ್‌ಸಾಗರ ರೈಲು ನಿಲ್ದಾಣ ವ್ಯಾಪ್ತಿಯ ಹಳಿಯ ಮೇಲೆ ಸಾರ್ವಜನಿಕರ ಸಂಚಾರವನ್ನು 2015ರಿಂದ ನಿಷೇಧಿಸಲಾಗಿತ್ತು.

ಆದರೆ, ಬೆಳಗಾವಿಯವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಾಳಜಿಯ ಫಲವಾಗಿ, ಆ ನಿಷೇಧವನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಈಗ ಎಂದಿನಂತೆ ಜಲಪಾತದ ಬಳಿಯೇ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸೇತುವೆ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಜನರು ನಿಗದಿತ ಸ್ಥಳದಲ್ಲಿ ನಿಂತು ಫಾಲ್ಸ್‌ ನೋಡಬಹುದು. ಅಪಾಯಕಾರಿ ಸ್ಥಳಗಳಿಗೆ ಹೋಗದಂತೆ ಬೇಲಿ ಹಾಕಲಾಗಿದೆ. ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ.‌ ಇದರೊಂದಿಗೆ, ವಿಶ್ವ ಪ್ರಸಿದ್ಧವಾದ ಈ ತಾಣವೀಗ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ರೈಲು ಸಂಚರಿಸುವ ದಿನಗಳು

ವಾಸ್ಕೋ–ಡ–ಗಾಮ ಹಾಗೂ ಬೆಳಗಾವಿ ನಡುವೆ ಪ್ರತಿ ಶುಕ್ರವಾರ, ಶನಿವಾರ ಸಂಚರಿಸುವ (ವಾರಕ್ಕೆ ಎರಡು ದಿನ) ಪ್ಯಾಸೆಂಜರ್‌ ರೈಲು ದೂಧ್‌ಸಾಗರ ಜಲಪಾತದ ಬಳಿ 10 ನಿಮಿಷ ನಿಲ್ಲುತ್ತದೆ. ವಾರಕ್ಕೆ ಎರಡು ದಿನ ಬೆಳಿಗ್ಗೆ 6.20ಕ್ಕೆ ಬೆಳಗಾವಿಯಿಂದ ಹೊರಡುತ್ತದೆ. ಮಧ್ಯಾಹ್ನ 3.55ಕ್ಕೆ ವಾಸ್ಕೊದಿಂದ ಹೊರಡುತ್ತದೆ. ಪ್ರಯಾಣ ಟಿಕೆಟ್‌ ದರ ₹ 30. ಈ ರೈಲಿನಲ್ಲಿ ಹೋದರೆ ಮಾತ್ರ ಕೆಲಹೊತ್ತು ನಿಂತು ಫಾಲ್ಸ್‌ ವೀಕ್ಷಿಸಲು ಸಾಧ್ಯವಿದೆ. ಉಳಿದಂತೆ ವಾಸ್ಕೊ –ನಿಜಾಮುದ್ದೀನ್‌ ರೈಲು ಇದೆ (ನಿತ್ಯವೂ ಮಧ್ಯಾಹ್ನ 3.10ಕ್ಕೆ ವಾಸ್ಕೋದಿಂದ ಹೊರಡುತ್ತದೆ). ಇದು ಫಾಲ್ಸ್‌ ಬಳಿ ನಿಲ್ಲಿಸುವುದಿಲ್ಲ. ರೈಲು ಚಲಿಸುವಾಗ ಫಾಲ್ಸ್‌ ನೋಡಬಹುದಷ್ಟೇ.

‘ರಮಣೀಯವಾದ ದೂಧ್‌ಸಾಗರ ನೋಡಲು ಬಯಸುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಪ್ರಾಯೋಗಿಕವಾಗಿ 3 ತಿಂಗಳವರೆಗೆ ಈ ರೈಲು ಓಡಿಸಲಾಗುವುದು. ಪ್ರವಾಸಿಗರ ಸಂಖ್ಯೆ ಮತ್ತು ಪ್ರತಿಕ್ರಿಯೆ ಆಧರಿಸಿ ಈ ರೈಲು ಸಂಚಾರವನ್ನು ಮುಂದುವರಿಸುವ ಕುರಿತು ತೀರ್ಮಾನಿಸಲಾಗುವುದು’ ಎನ್ನುತ್ತಾರೆ ಸಚಿವ ಸುರೇಶ ಅಂಗಡಿ.

ಪ್ರತಿಕ್ರಿಯಿಸಿ (+)