ಮಂಗಳವಾರ, ಆಗಸ್ಟ್ 3, 2021
21 °C
ಅಲಂಕಾರದಲ್ಲಿ ಕಂಗೊಳಿಸಿದ ದೇವಾಲಯ; ದಾಹ ತಣಿಸಲು ಭಕ್ತರಿಗೆ ಮಜ್ಜಿಗೆ ಪಾನಕ ವಿತರಣೆ

ಕೋನಕುಂಟ್ಲು; ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಕೋನಕುಂಟ್ಲು ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.

ಇತಿಹಾಸ ಪ್ರಸಿದ್ಧ ಕೋನಕುಂಟ್ಲು ಲಕ್ಷ್ಮೀವೆಂಕಟರಮಣಸ್ವಾಮಿ ಚೈತ್ರಮಾಸದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯುತ್ತದೆ. ಚಿಂತಾಮಣಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಾಲಯದ ಒಳಗೆ ಹಾಗೂ ಹೊರಗೆ ವಿಶೇಷ ಅಲಂಕಾರ ಮಾಡಲಾಗಿತು. ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಒಳಗಡೆ ಸ್ವಾಮಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಯಿತು. ಮಧ್ಯಾಹ್ನ ಲಕ್ಷ್ಮೀವೆಂಕಟರಮಣಸ್ವಾಮಿಯ ಉತ್ಸವಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಮಂಗಳವಾದ್ಯಗಳೊಂದಿಗೆ ಕರೆತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಅರ್ಚಕರು ರಥದಲ್ಲಿ ಮತ್ತೊಮ್ಮೆ ಅಲಂಕರಿಸಿ ವಿಶೇಷಪೂಜೆಗಳನ್ನು ನೆರವೇರಿಸಿದರು. ನಂತರ ದೇವಾಲಯದ ಟ್ರಸ್ಟ್ ಸದಸ್ಯರು ಮಧ್ಯಾಹ್ನ 1ಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಭಕ್ತರು ಧವನ, ಬಾಳೆಹಣ್ಣನ್ನು ತೇರಿಗೆ ಅರ್ಪಿಸಿದರು. ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು. ಭಕ್ತರಿಗೆ ಬಿಸಿಲಿನ ಬೇಗೆಯನ್ನು ತಣಿಸಲು ಪಾನಕ, ಮಜ್ಜಿಗೆ ಕೋಸುಂಬರಿ ವಿತರಿಸಲಾಯಿತು.

ಭಕ್ತರು ರಾಮಕೋಟಿ ಭಜನೆ ಮಾಡಿದರು. ಸಾರ್ವತ್ರಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾಮಕೋಟಿ ಸಮಿತಿಯಿಂದ ರಥೋತ್ಸವದ ಅಂಗವಾಗಿ 5 ದಿನಗಳ ಕಾಲ ರಾಮಕೋಟಿ ಅನ್ನಸಂತರ್ಪಣೆ ನಡೆಸಲಾಗುತ್ತಿದೆ ಎಂದು ದೇವಾಲಯ ಸಮಿತಿ ಮುಖಂಡರು ತಿಳಿಸಿದರು. ಬಟ್ಲಹಳ್ಳಿ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಕೈಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು