ಉಗ್ರನ ಹೆಸರನ್ನು ಯಾರು ಹೇಳ್ಬೇಡಿ: ಜಸಿಂದಾ ಅರ್ಡೆನ್‌

ಶುಕ್ರವಾರ, ಏಪ್ರಿಲ್ 26, 2019
28 °C

ಉಗ್ರನ ಹೆಸರನ್ನು ಯಾರು ಹೇಳ್ಬೇಡಿ: ಜಸಿಂದಾ ಅರ್ಡೆನ್‌

Published:
Updated:
Prajavani

ಕ್ರೈಸ್ಟ್‌ಚರ್ಚ್: ಇಲ್ಲಿನ ಮಸೀದಿಗಳಲ್ಲಿ ಕಳೆದ ಶುಕ್ರವಾರ ಪ್ರಾರ್ಥನೆಗೆ ಸೇರಿದ್ದ ಜನಸಮೂಹದ ಮೇಲೆ ಬಂದೂಕುಧಾರಿ ನಡೆಸಿದ ಗುಂಡಿನ ದಾಳಿ ಕುರಿತಂತೆ ನ್ಯೂಜಿಲೆಂಡ್‌ ಪ್ರಧಾನಿ ಜಸಿಂದಾ ಅರ್ಡೆನ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ಹೆಸರನ್ನು ಹೇಳದಂತೆ ಮನವಿ ಮಾಡಿದ್ದಾರೆ.

ದಾಳಿಯ ಬಳಿಕ ನಡೆದ ಮೊದಲ ಸಂಸತ್‌ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಶಾಂತಿ, ಕರುಣೆ, ಅಲ್ಲಾನ ಆಶೀರ್ವಾದಗಳು ನಿಮ್ಮೊಂದಿಗೆ ಇರಲಿ. ದುಷ್ಕರ್ಮಿಗೆ ಆತ ಬಯಸುವ ಪ್ರಚಾರ ನೀಡಬಾರದು. ಕಾನೂನಿನ ಪ್ರಕಾರ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಆತ ಕುಖ್ಯಾತಿ ಬಯಸಿರಬಹುದು, ಆದರೆ ನ್ಯೂಜಿಲೆಂಡ್‌ ಜನರು ಏನನ್ನೂ ನೀಡುವುದಿಲ್ಲ. ಇದೇ ಕಾರಣಕ್ಕೆ ನಾನು ಎಂದಿಗೂ ಆತನ ಹೆಸರನ್ನು ಉಲ್ಲೇಖಿಸುವುದಿಲ್ಲ. ಆತ ಕ್ರಿಮಿನಲ್‌. ಆತ ಒಬ್ಬ ತೀವ್ರವಾದಿ. ಇದೇ ಕಾರಣದಿಂದ ಆತನ ಬಗ್ಗೆ ಮಾತನಾಡುವಾಗ ಆತನ ಹೆಸರನ್ನು ಹೇಳುವುದಿಲ್ಲ’ ಎಂದು ಪುನರುಚ್ಚರಿಸಿದರು.

ಕುಟುಂಬಸ್ಥರ ಆಕ್ರೋಶ: ಗುಂಡಿನ ದಾಳಿ ನಡೆದು ನಾಲ್ಕು ದಿನ ಬಳಿಕವೂ ಮೃತದೇಹಗಳನ್ನುಹಸ್ತಾಂತರಿಸಲು ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಮೃತದೇಹಗಳ ಗುರುತು ಪತ್ತೆಹಚ್ಚಲು ವಿಧಿವಿಜ್ಞಾನ ಪರೀಕ್ಷೆಯ ಮೊರೆಹೋಗಲಾಗಿದೆ. ಆದರೆ ಫಲಿತಾಂಶ ಹೊರಬರಲು ಸಾಕಷ್ಟು ವಿಳಂಬವಾಗುತ್ತಿರುವ ಕಾರಣ, ಮೃತದೇಹ ಹಸ್ತಾಂತರಿಸಿಲ್ಲ. ಮೃತರ ಹೊರದೇಶಗಳ ಸಂಬಂಧಿಕರಿಗೆ ವೀಸಾ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ’ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

‘ಸಾವನ್ನಪ್ಪಿರುವ 50 ಮಂದಿ ಪೈಕಿ 12 ಮಂದಿಯ ಗುರುತು ಪತ್ತೆಹಚ್ಚಲಾಗಿದೆ. ನಾವು ಎಲ್ಲ ಕೆಲಸಗಳನ್ನು ಆದಷ್ಟು ಬೇಗ ನಿಭಾಯಿಸುತ್ತಿದ್ದೇವೆ’ ಎಂದು ಪೊಲೀಸ್‌ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬೆಳವಣಿಗೆ ನಡುವೆಯೇ, ಮಂಗಳವಾರ ಆರು ಮಂದಿಯ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. 

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !