ರಂಧ್ರ ಕೊರೆತಕ್ಕೆ ಸಂಶೋಧಕರ ಅಸಮಾಧಾನ

7
ನಂದಿ ವಿಗ್ರಹದ ಸುತ್ತಲೂ ಸ್ಟಿಲ್‌ ತಡೆಬೇಲಿ ಅಳವಡಿಕೆ ಕಾಮಗಾರಿ, ಸ್ಮಾರಕ ಸಂರಕ್ಷಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ

ರಂಧ್ರ ಕೊರೆತಕ್ಕೆ ಸಂಶೋಧಕರ ಅಸಮಾಧಾನ

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಭೋಗನಂದೀಶ್ವರ ದೇವಾಲಯದಲ್ಲಿ ಇತ್ತೀಚೆಗೆ ನಂದಿ ವಿಗ್ರಹದ ಸುತ್ತ ಸ್ಟೀಲ್ ತಡೆಬೇಲಿ ಅಳವಡಿಸಲು ರಂಧ್ರಗಳನ್ನು ಕೊರೆದಿರುವುದಕ್ಕೆ ಐತಿಹಾಸಿಕ ಸ್ಮಾರಕಗಳ ಸಂಶೋಧಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಕ್ರಮವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಭೋಗನಂದೀಶ್ವರ ದೇವಾಲಯದ ಒಳಗಿನ ಆವರಣದಲ್ಲಿ ಮಹಿಳೆಯರು ಎಲೆಯ ಮೇಲೆ ಪೂಜಾ ಸಾಮಗ್ರಿಗಳೊಂದಿಗೆ ಅಕ್ಕಿ, ಬೆಲ್ಲ, ಉಪ್ಪು, ಮೆಣಸು, ಎಳ್ಳು, ಬಾಳೆಹಣ್ಣುಗಳನ್ನು ಇಟ್ಟು ದೇವರಿಗೆ ನೈವೇದ್ಯ ಮಾಡಿ ಹೊಸದಾಗಿ ಖರೀದಿಸಿ ತಂದ ಮಣ್ಣಿನ ಹಣತೆಗಳಲ್ಲಿ ದೀಪ ಹೊತ್ತಿಸಿ ದೇವರಿಗೆ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ.

ಈ ಸಂದರ್ಭದಲ್ಲಿ ದೇವಾಲಯದಲ್ಲಿರುವ ಬೃಹತ್ ನಂದಿ ವಿಗ್ರಹದ ಸುತ್ತಲೂ ಭಕ್ತರು ವಿಪರೀತ ಪ್ರಮಾಣದಲ್ಲಿ ದೀಪಗಳನ್ನು ಹೊತ್ತಿಸಿ, ನೈವೇದ್ಯ ಮಾಡಿದ ಪದಾರ್ಥಗಳನ್ನೆಲ್ಲ ಅಲ್ಲಿಯೇ ಬಿಟ್ಟು ಹೋಗುವುದರಿಂದ ಮೂರ್ತಿಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ನಂದಿ ಸುತ್ತಲೂ ರಂಧ್ರಗಳನ್ನು ಕೊರೆದು ತಾತ್ಕಾಲಿಕ ತುಕ್ಕು ರಹಿತ ಸ್ಟೀಲ್ ತಡೆಬೇಲಿ ಅಳವಡಿಸಿದ್ದೇವೆ ಎನ್ನುತ್ತಾರೆ ಎಎಸ್‌ಐ ಅಧಿಕಾರಿಗಳು.

ಆದರೆ ಸಂರಕ್ಷಿತ ಸ್ಮಾರಕದಲ್ಲಿ ರಂಧ್ರ ಕೊರೆದಿರುವ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸುವ ಬೆಂಗಳೂರಿನ ನಿವಾಸಿ, ಐತಿಹಾಸಿಕ ಸ್ಮಾರಕಗಳ ಸಂಶೋಧಕ ವಿನಯ್‌ಕುಮಾರ್, ‘ಭೋಗನಂದೀಶ್ವರ ದೇವಾಲಯವು ನಮ್ಮ ರಾಜ್ಯದ ಸಂಸ್ಕೃತಿ, ಸಂಪ್ರದಾಯ, ವಾಸ್ತುಶಿಲ್ಪ, ಪರಂಪರೆ ಮತ್ತು ಇತಿಹಾಸ ಪ್ರತಿನಿಧಿಸುವ ಅಮೂಲ್ಯವಾದ ಪುರಾತತ್ವ ಸಂಪತ್ತು. ಅಂತಹ ಕಡೆಗಳೆಲ್ಲ ಸಣ್ಣಪುಟ್ಟ ನೆಪಕ್ಕೆ ರಂಧ್ರ ಕೊರೆದು ಸ್ಮಾರಕಗಳಿಗೆ ಧಕ್ಕೆ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸುತ್ತಾರೆ.

‘ಭೋಗನಂದೀಶ್ವರ ದೇವಾಲಯವನ್ನು ಮೈಸೂರು ಸರ್ಕಾರದಲ್ಲಿ 1905ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮೊದಲ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದ್ದರು. ಅಂತಹ ಸ್ಮಾರಕದಲ್ಲಿ ಹಿಂದೆ ಸಹ ಇಂತಹದ್ದೇ ನೆಪದಲ್ಲಿ ಮುಜರಾಯಿ ಇಲಾಖೆಯವರು ರಂಧ್ರಗಳನ್ನು ಕೊರೆಯಿಸಿದ್ದಾರೆ. ಸಿನಿಮಾವೊಂದರ ಚಿತ್ರೀಕರಣ ಸಂದರ್ಭದಲ್ಲಿ ಕೂಡ ಸ್ಮಾರಕಗಳಿಗೆ ಧಕ್ಕೆಯಾಗಿವೆ. ಹೀಗೆಯೇ ಮುಂದುವರಿದರೆ ಸ್ಮಾರಕಗಳು ಬೇಗ ಹಾಳಾಗುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಎಎಸ್‌ಐ ಬೆಂಗಳೂರು ವೃತ್ತದ ನಿರ್ದೇಶಕಿ ಮೂರ್ತೇಶ್ವರಿ ಅವರನ್ನು ವಿಚಾರಿಸಿದರೆ, ‘ಕಾರ್ತಿಕ ಸಮಯದಲ್ಲಿ ನಂದಿ ಮೂರ್ತಿ

ಬಳಿ ಗಲೀಜು ಮಾಡುವುದು ತಪ್ಪಿಸುವ ಕಾರಣಕ್ಕೆ ತಾತ್ಕಾಲಿಕ ತಡೆಬೇಲಿ ಹಾಕಲಾಗಿದೆ. ದೀಪ ಹಚ್ಚಬೇಡಿ ಎಂದರೆ ಜನಕ್ಕೆ ಕೋಪ ಬರುತ್ತದೆ. ದೀಪ ಹಚ್ಚುವ ಕಡೆಗಳಲ್ಲಿ ಕಟ್ಟಿಗೆ ತಡೆಬೇಲಿ ಹಾಕಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ಎಎಸ್‌ಐ ಸಹಾಯಕ ಸಂರಕ್ಷಣಾ ಅಧಿಕಾರಿ ಆರ್.ಗಿರೀಶ್‌ ಅವರನ್ನು ಪ್ರಶ್ನಿಸಿದರೆ, ‘ಈ ಹಿಂದೆ ನಂದಿ ಮೂರ್ತಿಗೆ ಬಿದರಿನ ತಾತ್ಕಾಲಿಕ ತಡೆಬೇಲಿ ಇತ್ತು. ಭಕ್ತರು ಬೆಳಗುವ ದೀಪಗಳ ಶಾಖದಿಂದ ಅದು ಹಾಳಾಗಿತ್ತು. ಹೀಗಾಗಿ ಸ್ಟೀಲ್ ತಡೆಬೇಲಿ ಅಳವಡಿಸಲು ನಿರ್ಧರಿಸಿ, ಆ ಯೋಜನೆಯ ಪ್ರಸ್ತಾವಕ್ಕೆ ಎಎಸ್‌ಐ ಡೈರೆಕ್ಟರ್ ಜನರಲ್ ಅವರಿಂದ ಅನು ಮತಿ ಪಡೆಯಲಾಗಿದೆ’ ಎನ್ನುತ್ತಾರೆ.

‘ಇಲಾಖೆಯ ನಿಯಮಾವಳಿ ನಾವು ಎಲ್ಲಿಯೂ ಉಲ್ಲಂಘಿಸಿಲ್ಲ. ನಿಯಮಾವಳಿ ಪ್ರಕಾರ ಎರಡು ಇಂಚಿನ ಮೇಲೆ ರಂಧ್ರ ಕೊರೆಯುವಂತಿಲ್ಲ. ನಾವು ಒಂದು ಕಾಲು ಇಂಚು ಅಗಲ, ಒಂದು ಇಂಚು ಆಳದ ಮೂರು ರಂಧ್ರಗಳನ್ನು ಕೊರೆಸಿದ್ದೇವೆ. ಭಕ್ತರನ್ನು ತಡೆಯಲು ಹೋದರೆ ನಮ್ಮ ಮೇಲೆಯೇ ಗಲಾಟೆಗೆ ಬರುತ್ತಾರೆ. ಇದು ಸಂಪ್ರದಾಯಕ್ಕೆ ಸಂಬಂಧಪಟ್ಟ ವಿಚಾರವಾದ್ದರಿಂದ ನಾವು ಸೂಕ್ಷ್ಮವಾಗಿ ನಿಭಾಯಿಸಬೇಕಾಗಿದೆ’ ಎಂದರು.

*
ನಂದಿ ಮೂರ್ತಿಗೆ ತಾತ್ಕಾಲಿಕ ಬೇಲಿ ಅಳವಡಿಸಬೇಕಿದ್ದರೆ ರಂಧ್ರ ಕೊರೆಯದಂತಹ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಅದಕ್ಕೆ ಸಾಕಷ್ಟು ಮಾದರಿಗಳಿವೆ.
-ವಿನಯ್‌ಕುಮಾರ್, ಐತಿಹಾಸಿಕ ಸ್ಮಾರಕಗಳ ಸಂಶೋಧಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !