ಬೆಳ್ಳಂದೂರಿನ ಅಂದ ಕೆಡಿಸಿದ್ದ ಕೇಬಲ್‌ ಕಟ್‌

ಶುಕ್ರವಾರ, ಏಪ್ರಿಲ್ 19, 2019
27 °C
ಬಿಬಿಎಂಪಿ, ಬೆಸ್ಕಾಂ, ಪೊಲೀಸರ ತಂಡದಿಂದ ಕಾರ್ಯಾಚರಣೆ

ಬೆಳ್ಳಂದೂರಿನ ಅಂದ ಕೆಡಿಸಿದ್ದ ಕೇಬಲ್‌ ಕಟ್‌

Published:
Updated:
Prajavani

ಬೆಂಗಳೂರು: ಬೆಳ್ಳಂದೂರಿನಲ್ಲಿನ ವಿದ್ಯುತ್‌ ಕಂಬಗಳಿಂದ–ಕಂಬಕ್ಕೆ, ಮರಗಳಿಂದ–ಮರಕ್ಕೆ ತೋರಣ ಕಟ್ಟಿದಂತೆ ನೇತಾಡುತ್ತಿದ್ದ ಅನಧಿಕೃತ ಆಫ್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು(ಒಎಫ್‌ಸಿ) ತೆರವುಗೊಳಿಸುವ ಕಾರ್ಯಾಚರಣೆ ಗುರುವಾರ ಶುರುವಾಗಿದೆ.

ಪಾಲಿಕೆ ಸಿಬ್ಬಂದಿ ಬೆಳ್ಳಂದೂರು, ಕಸವನಹಳ್ಳಿ, ಸರ್ಜಾಪುರ, ಹರಳೂರು ರಸ್ತೆ ಬದಿಯ ಕಂಬಗಳಿಗೆ ಕಟ್ಟಿ, ಎಳೆದಿದ್ದ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಿದರು. ಸುಮಾರು 20 ಕಿ.ಮೀ. ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಜೋತುಬಿದ್ದು, ನಗರದ ಸೌಂದರ್ಯವನ್ನು ಹಾಳು ಮಾಡಿ, ಪಾದಚಾರಿಗಳಿಗೆ ಅಡಚಣೆ ಉಂಟುಮಾಡುತ್ತಿದ್ದ ಕೇಬಲ್‌ಗಳನ್ನು ಕಿತ್ತು ಹಾಕಿ, ಟ್ರ್ಯಾಕ್ಟರ್‌ ತುಂಬಾ ತುಂಬಿಕೊಂಡು ಹೋದರು.

ಅನಧಿಕೃತ ಕೇಬಲ್‌ಗಳಿಂದ ಜನರಿಗೆ ಆಗುತ್ತಿದ್ದ ತೊಂದರೆಗಳ ಬಗ್ಗೆ ಬೆಳ್ಳಂದೂರು ಅಭಿವೃದ್ಧಿ ವೇದಿಕೆ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ, ಸಮಸ್ಯೆಯನ್ನು ಬಿಬಿಎಂಪಿ ಮತ್ತು ಬೆಸ್ಕಾಂ ಗಮನಕ್ಕೆ ತಂದಿದ್ದರು. ಬೆಸ್ಕಾಂ ಕಾರ್ಯಾನಿರ್ವಾಹಕ ನಿರ್ದೇಶಕಿ ಸಿ.ಶಿಖಾ ಅವರು ಸಹ ವಿದ್ಯುತ್‌ ಕಂಬಗಳ ಮೇಲೆ ಎಳೆದಿದ್ದ ಕೇಬಲ್‌ ತೆರವಿಗೆ ಸೂಚನೆ ನೀಡಿದ್ದರಿಂದ ಸಿಬ್ಬಂದಿ ಕಾರ್ಯಪ್ರವೃತ್ತರಾದರು.

‘ವೈಟ್‌ಫೀಲ್ಡ್‌, ಮಹದೇವಪುರ, ಕೆ.ಆರ್‌.ಪುರ, ಎಚ್.ಎ.ಎಲ್‌. ಪ್ರದೇಶಗಳಲ್ಲೂ ಕೇಬಲ್‌ಗಳ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಲಿದೆ’ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

‘ಪಾದಚಾರಿಗಳಿಗೆ ತೊಂದರೆ ಮಾಡದಂತೆ ಟೆಲಿಕಾಂ ಕಂಪನಿಗಳು ಕೇಬಲ್‌ ಜೋಡಣೆಯ ಸೌಕರ್ಯಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಬೇಕು. ರಸ್ತೆಗಳನ್ನು ಅವೈಜ್ಞಾನಿಕವಾಗಿ ಅಗೆದು ಕೇಬಲ್‌ಗಳನ್ನು ಹಾಕಬಾರದು’ ಎಂದು ಬೆಳ್ಳಂದೂರು ಅಭಿವೃದ್ಧಿ ವೇದಿಕೆ ಮನವಿ ಮಾಡಿದೆ. ತಮ್ಮ ದೂರಿಗೆ ಸ್ಪಂದಿಸಿದ ಪೊಲೀಸ್‌ ಇಲಾಖೆ, ಪಾಲಿಕೆ ಮತ್ತು ಬೆಸ್ಕಾಂಗೆ ಧನ್ಯವಾದ ಹೇಳಿದೆ.
*

ಅನಧಿಕೃತ ಕೇಬಲ್‌ಗಳ ಬಗ್ಗೆ ದೂರುಗಳು ಬಂದಿದ್ದವು. ಅವುಗಳ ತೆರವಿಗೆ ಆಯಾ ಪ್ರದೇಶಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಸಿ.ಶಿಖಾ, ಕಾರ್ಯನಿರ್ವಾಹಕ ನಿರ್ದೇಶಕಿ, ಬೆಸ್ಕಾಂ

*
ಐಪಿಸಿ ಸೆಕ್ಷನ್‌ 336 (ಸಾರ್ವಜನಿಕರ ಸುರಕ್ಷತೆಗೆ ಕುತ್ತು) ಅಡಿ ದೂರು ದಾಖಲಿಸಿಕೊಂಡಿದ್ದೇವೆ. ಸಮಸ್ಯೆ ಬಗೆಹರಿಯುವ ವರೆಗೂ ಕೇಬಲ್‌ ತೆರವು ಕಾರ್ಯಾಚರಣೆ ನಡೆಯುತ್ತದೆ.
ಅಬ್ದುಲ್‌ ಅಹದ್‌, ಡಿ.ಸಿ.ಪಿ., ವೈಟ್‌ಫೀಲ್ಡ್‌ ವಿಭಾಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !