ಶುಕ್ರವಾರ, ಅಕ್ಟೋಬರ್ 18, 2019
23 °C
ತ್ವರಿತವಾಗಿ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರಂಜನ್‌ಕುಮಾರ್‌

ದಸರಾ ಉತ್ಸವ: ಸಿದ್ಧತೆಗಳ ಪರಿಶೀಲನೆ

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅಕ್ಟೋಬರ್1ರಿಂದ 4ರವರೆಗೆ ಆಯೋಜಿಸಿರುವ ಚಾಮರಾಜನಗರ ದಸರಾ ಮಹೋತ್ಸವದ ಸಿದ್ಧತಾ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ದಸರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಉತ್ಸವಕ್ಕೆ ಸಂಬಂಧಿಸಿದ ಸಿದ್ದತಾ ಕಾರ್ಯಗಳನ್ನು ಅವರು ಪರಿಶೀಲಿಸಿದರು.

ಸ್ವಾಗತ ಮತ್ತು ಮೆರವಣಿಗೆ ಸಮಿತಿ, ಸಾಂಸ್ಕ್ರತಿಕ ಸಮಿತಿ, ಆಹಾರ ಸಮಿತಿ, ವೇದಿಕೆ ನಿರ್ಮಾಣ ಸಮಿತಿ, ಸ್ವಚ್ಚತಾ ಸಮಿತಿ, ಆರೋಗ್ಯ ಸಮಿತಿ, ಮಹಿಳಾ ದಸರಾ, ರೈತ ದಸರಾ, ಮ್ಯಾರಥಾನ್, ಪಾರಂಪರಿಕ ನಡಿಗೆ, ದೀಪಾಲಂಕಾರ ನಿರ್ವಹಣೆ, ಪ್ರಚಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳು ನಡೆಸಿರುವ ಸಿದ್ಧತೆಗಳ ಬಗ್ಗೆ ಪರಾಮರ್ಶೆ ನಡೆಸಿದರು.

ಸಮಿತಿಗಳ ನಿರ್ವಹಣೆಗೆ ನಿಯೋಜಿತವಾಗಿರುವ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು,  ವಿಳಂಬಕ್ಕೆ ಆಸ್ಪದವಿಲ್ಲದಂತೆ ಕಾರ್ಯಕ್ರಮ ಆಯೋಜನೆ ಕೆಲಸಗಳನ್ನು ಕೈಗೊಳ್ಳಬೇಕು ಎಂದರು.

‘ಆಹ್ವಾನ ಪತ್ರಿಕೆ ಮುದ್ರಣ, ಕಲಾವಿದರು, ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ, ವೇದಿಕೆ ನಿರ್ಮಾಣ, ಮೆರವಣಿಗೆ, ಕಾಲೇಜು ವಿಧ್ಯಾರ್ಥಿಗಳ ಸಾಂಸ್ಕ್ರತಿಕ ಕಾರ್ಯಕ್ರಮ ನಿಗದಿ, ನಾಟಕೋತ್ಸವ, ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಂಪೂರ್ಣ ಸಜ್ಜಾಗಬೇಕು ಎಂದು ನಿರ್ದೇಶನ ನೀಡಿದರು.

ರೈತ ದಸರಾ, ಮಹಿಳಾ ದಸರಾ, ಆಹಾರ ಮೇಳ, ವಸ್ತು ಪ್ರದರ್ಶನದಂತಹ ವಿಭಿನ್ನ ಕಾರ್ಯಕ್ರಮಗಳ ವ್ಯವಸ್ಥೆ ಅಚ್ಚುಕಟ್ಟಾಗಿ ನೆರವೇರಿಸಬೇಕು. ಇದ್ದಕ್ಕಾಗಿ ಕೈಗೊಂಡಿರುವ ಪೂರಕ ವ್ಯವಸ್ಥೆಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಈ ಬಾರಿ ದೀಪಾಲಂಕಾರಕ್ಕೆ ವಿಶೇಷ ಗಮನ ಹರಿಸಬೇಕಿದೆ. ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಬೇಕು. ಪ್ರಮುಖ ವೃತ್ತ, ರಸ್ತೆ, ಕಟ್ಟಡಗಳಲ್ಲಿ ಅತ್ಯಂತ ಮನೋಮೋಹಕವಾಗಿ ವಿದ್ಯುತ್ ದೀಪಗಳು ಬೆಳಗಲು ಕೈಗೊಂಡಿರುವ ಕಾರ್ಯಗಳನ್ನು ಬೇಗನೆ ನೆರವೇರಿಸಬೇಕು ಎಂದು ನಿರಂಜನ್ ಕುಮಾರ್ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸಿದ್ಧತೆ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸೋಮಶೇಖರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Post Comments (+)