ಮಧ್ಯಂತರ ಆದೇಶ ಮಾರ್ಪಾಡು: ಹಣಕಾಸು ವ್ಯವಹಾರ ನಡೆಸಲು ಅನುಮತಿ

7
ಹಣಕಾಸು ವ್ಯವಹಾರ ನಡೆಸಲು ಒಪ್ಪಿಗೆ

ಮಧ್ಯಂತರ ಆದೇಶ ಮಾರ್ಪಾಡು: ಹಣಕಾಸು ವ್ಯವಹಾರ ನಡೆಸಲು ಅನುಮತಿ

Published:
Updated:
Deccan Herald

ಬೆಂಗಳೂರು: ‘ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಯಾವುದೇ ನಿರ್ಧಾರ ಕೈಗೊಳ್ಳಬಾರದು’ ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಮಾರ್ಪಾಡು ಮಾಡಿದೆ.

‘ಆಡಳಿತಾಧಿಕಾರಿಯು ಸಂಘದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬಹುದು’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಆದೇಶಿಸಿದೆ.

ಆಡಳಿತಾಧಿಕಾರಿ ಪರ ವಾದ ಮಂಡಿಸಿದ ಹಿರಿಯ ವಕೀಲ ನಂಜುಂಡ ರೆಡ್ಡಿ, ‘ಸಂಘದ ಅಧೀನದಲ್ಲಿ 30ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ತಿಂಗಳ 29ರಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಿಂದಾಗಿ ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವೇತನ ಪಾವತಿಸಲು ಆಗಿಲ್ಲ. ಪ್ರತಿದಿನದ ಖರ್ಚು ವೆಚ್ಚಗಳಿಗೂ ಹಣ ಬಿಡುಗಡೆ ಮಾಡಲಾಗುತ್ತಿಲ್ಲ. ಆದ್ದರಿಂದ ಮಧ್ಯಂತರ ಆದೇಶ ತೆರವುಗೊಳಿಸಬೇಕು’ ಎಂದು ಕೋರಿದರು.

ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರು, ‘ಮಧ್ಯಂತರ ಆದೇಶ ತೆರವುಗೊಳಿಸಿದರೆ, ಆಡಳಿತಾಧಿಕಾರಿಯು ಸಂಘದ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ ಮಧ್ಯಂತರ ಆದೇಶ ಮಾರ್ಪಾಡು ಮಾಡಿತು. ‘ಸಂಘದ ಆಡಳಿತಕ್ಕೆ ಸಂಬಂಧಿಸಿದಂತೆ ವಿಷಯಗಳಲ್ಲಿ ಆಡಳಿತಾಧಿಕಾರಿ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ. ಆಡಳಿತಾಧಿಕಾರಿ ಕೈಗೊಳ್ಳುವ ನಿರ್ಧಾರ ಹಾಗೂ ಕ್ರಮಗಳ ಕುರಿತಂತೆ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಿ’ ಎಂದು ಸೂಚಿಸಿತು.

ನಿವೃತ್ತ ಐಎಎಸ್ ಅಧಿಕಾರಿ ಎಚ್.ಎಸ್. ಅಶೋಕಾನಂದ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ ಮತ್ತು ಅದರ ಹಾಲಿ ನಿರ್ದೇಶಕ ಶಿವಲಿಂಗಯ್ಯ ಸಲ್ಲಿಸಿರುವ ಅರ್ಜಿ ಇದಾಗಿದೆ.

ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಲಾಗಿದೆ.

**

‘7 ವರ್ಷದಿಂದ ಆಯ–ವ್ಯಯ ವರದಿ ಸಲ್ಲಿಸಿಲ್ಲ’

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅವರು, ‘ಸಂಘವು ಏಳು ವರ್ಷಗಳಿಂದ ಸಾಮಾನ್ಯ ಸಭೆ ನಡೆಸಿಲ್ಲ. ವಾರ್ಷಿಕ ಆಯ–ವ್ಯಯ ಮಂಡಿಸಿಲ್ಲ’ ಎಂದು ಆಕ್ಷೇಪಿಸಿದರು.

‘ಸಂಘದ ಈ ಕ್ರಮ ಸೊಸೈಟಿ ಕಾಯ್ದೆ–1964ರ ಕಲಂ 27 ಎ ಅನುಸಾರ ಕಾನೂನು ಬಾಹಿರ. ಇಂತಹ ಸಂದರ್ಭಗಳಲ್ಲಿ ನೋಟಿಸ್ ನೀಡದೆಯೇ ಆಡಳಿತಾಧಿಕಾರಿ ನೇಮಿಸಬಹುದು. ಆದಾಗ್ಯೂ ಸಂಘ–ಸಂಸ್ಥೆಗಳ ಡೆಪ್ಯೂಟಿ ರಿಜಿಸ್ಟ್ರಾರ್ ಅವರು ಸಂಘಕ್ಕೆ ನೋಟಿಸ್‌ ನೀಡಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

**

ಮಧ್ಯಂತರ ಅರ್ಜಿ ಅಂಗೀಕಾರ

‘ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿರುವ ಅರ್ಜಿಯಲ್ಲಿ ನಮಗೂ ವಾದ ಮಂಡಿಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿ ಸಂಘದ ಮಾಜಿ ನಿರ್ದೇಶಕ ಎಸ್.ಟಿ. ರಾಜಶೇಖರ್, ಕೃಷ್ಣಪ್ಪ ಸೇರಿದಂತೆ ಆರು ಜನ ಆಜೀವ ಸದಸ್ಯರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಮಧ್ಯಂತರ ಅರ್ಜಿದಾರರ ಪರ ವಕೀಲ ಕೆ.ಎನ್. ಪುಟ್ಟೇಗೌಡ ವಾದ ಮಂಡಿಸಿ, ‘ಸಂಘದಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ನಾವೂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಆದ್ದರಿಂದ ಪ್ರಕರಣದಲ್ಲಿ ನಮಗೂ ವಾದ ಮಂಡಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಈ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿದೆ.

**

ಸರ್ಕಾರ ಹಾಗೂ ಅರ್ಜಿದಾರರ ನಡುವಿನ ತಕರಾರಿನಲ್ಲಿ ಮೂರನೇ ವ್ಯಕ್ತಿ ತೊಂದರೆ ಅನುಭವಿಸುವಂತಾಗಬಾರದು
- ಬಿ.ವಿ.ನಾಗರತ್ನ, ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !