ಅಂಗವಿಕಲ ಮತದಾರರ ಮನೆ ಬಾಗಿಲಿಗೆ ಬರಲಿದೆ ಓಲಾ

ಗುರುವಾರ , ಏಪ್ರಿಲ್ 25, 2019
21 °C
ಮತದಾನಕ್ಕೆ ನೆರವಾಗಲು ಚುನಾವಣಾ ಆಯೋಗ ಕ್ರಮ

ಅಂಗವಿಕಲ ಮತದಾರರ ಮನೆ ಬಾಗಿಲಿಗೆ ಬರಲಿದೆ ಓಲಾ

Published:
Updated:

ಬೆಂಗಳೂರು: ಅಂಗವಿಕಲ ಮತದಾರರನ್ನು ಮತಗಟ್ಟೆಗೆ ಕರೆದೊಯ್ಯಲು ಅವರ ಮನೆ ಬಾಗಿಗಲಿಗೇ ಓಲಾ ಕ್ಯಾಬ್‌ ಬರಲಿದೆ. ಮತ ಚಲಾಯಿಸಿದ ಬಳಿಕ ಅವರನ್ನು ಮನೆವರೆಗೂ ಬಿಟ್ಟುಬರಲಾಗುತ್ತದೆ. ಮತದಾನದ ವೇಳೆ ಅಂಗವಿಕಲಸ್ನೇಹಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವ್ಯವಸ್ಥೆ ಕಲ್ಪಿಸಿದೆ.

ಚುನಾವಣಾ ಸಿದ್ಧತೆಗಳ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಅಂಗವಿಕಲ ಮತದಾರರಿಗೆ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿ ನೆರವಾಗಲು ಓಲಾ ಕ್ಯಾಬ್‌ ಸಂಸ್ಥೆ ಮುಂದೆ ಬಂದಿದೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸಂಪೂರ್ಣ ವೆಚ್ಚವನ್ನು ಭರಿಸುವುದಕ್ಕೂ ಆಯೋಗವು ಸಿದ್ಧವಿದೆ’ ಎಂದರು.

‘ಈಗಾಗಲೇ ಗುರುತಿಸಿರುವ ಅಂಗವಿಕಲ ಮತದಾರರಿಗೆ ಕೂಪನ್‌ಗಳನ್ನು ಒದಗಿಸಲಾಗುತ್ತದೆ. ಅವರು ಮತದಾನದ ದಿನ ತಮಗೆ ಅನುಕೂಲವಾಗುವ ಸಮಯದಲ್ಲಿ ಓಲಾ ಕ್ಯಾಬ್‌ಗೆ ಕರೆ ಮಾಡಬಹುದು. ಚಾಲಕನಿಗೆ ಕೂಪನ್‌ ತೋರಿಸಿದರೆ ಅವರನ್ನು ಮತಗಟ್ಟೆಗೆ ಕರೆದೊಯ್ಯುತ್ತಾರೆ. ಮತ ಚಲಾಯಿಸಿದ ಬಳಿಕ ಮನೆವರೆಗೆ ಬಿಡುತ್ತಾರೆ. ಇದಕ್ಕಾಗಿ ಮತದಾರರು ಯಾವುದೇ ವೆಚ್ಚವನ್ನು ಭರಿಸಬೇಕಿಲ್ಲ’ ಎಂದರು. 

‘ಮತಗಟ್ಟೆಗಳನ್ನು ಸ್ಥಾಪಿಸಿರುವ ನಗರದ 1,651 ಸ್ಥಳಗಳಲ್ಲೂ ಅಂಗವಿಕಲರನ್ನು ಮತಗಟ್ಟೆಗೆ ಕರೆದೊಯ್ಯಲು ಗಾಲಿಕುರ್ಚಿ ಹಾಗೂ ರ‍್ಯಾಂಪ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು. 

ಮತದಾರರ ಮನೆಗೆ ಮಾರ್ಗದರ್ಶಿ ಪತ್ರ: ‘ಯಾವ ರೀತಿ ಮತ ಚಲಾಯಿಸಬೇಕು ಮತಗಟ್ಟೆಯೊಳಗೆ ಏನೆಲ್ಲ ವಸ್ತುಗಳನ್ನು ಒಯ್ಯುವಂತಿಲ್ಲ, ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯುವ ಬಗೆ ಹೇಗೆ, ಚುನಾವಣಾ ಅಕ್ರಮಗಳ ಸಂಬಂಧ ದೂರು ನೀಡುವುದು ಹೇಗೆ ಎಂಬಿತ್ಯಾದಿ ವಿವರಗಳನ್ನು ಒಳಗೊಂಡ ಪತ್ರವನ್ನು ಮತದಾರರ ಮನೆ ಮನೆಗೆ ತಲುಪಿಸುತ್ತೇವೆ’ ಎಂದು ತಿಳಿಸಿದರು.

ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯಲ್ಲಿರುವ (ಎಪಿಕ್‌ ಕಾರ್ಡ್‌) ವಿವರಗಳನ್ನು ಒಳಗೊಂಡ  ಚೀಟಿಯನ್ನು ಏಪ್ರಿಲ್‌ 11ರ ಒಳಗೆ ಪ್ರತಿಯೊಬ್ಬ ಮತದಾರರ ಮನೆಗೂ ತಲುಪಿಸುತ್ತೇವೆ. ಹೊಸತಾಗಿ ಹೆಸರು ಸೇರ್ಪಡೆ ಮಾಡಿದವರಿಗೂ ಭಾವಚಿತ್ರವಿರುವ ಚೀಟಿಯನ್ನೇ ನೀಡಲಾಗುತ್ತದೆ.  ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು ಎಂಬ ವಿವರವೂ ಅದರಲ್ಲಿ ಇರಲಿದೆ. 8500 ಬೂತ್‌ ಮಟ್ಟದ ಅಧಿಕಾರಿಗಳನ್ನು ಈ ಸಲುವಾಗಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುವಿಧಾ ಆ್ಯಪ್‌ ಮೂಲಕ ಒಟ್ಟು 835 ಅರ್ಜಿಗಳು ಬಂದಿದ್ದು, 787 ವಿಲೇ ಆಗಿವೆ. 33 ಅರ್ಜಿಗಳನ್ನು ತಿರಸ್ಕರಿಸಿದ್ದು, 15 ವಿಲೇವಾರಿಗೆ ಬಾಕಿ ಇವೆ ಎಂದರು.

‘ಚುನಾವಣಾ ಅಕ್ರಮ ಸಂಬಂಧ ಒಟ್ಟು 66 ದೂರುಗಳು ಬಂದಿದ್ದು, ಇವುಗಳಲ್ಲಿ 42 ದೂರುಗಳು ಸತ್ಯಾಂಶದಿಂದ ಕೂಡಿದ್ದವು. ಈ ಸಂಬಂಧ ಕ್ರಮ ಕೈಗೊಂಡಿದ್ದೇವೆ’ ಎಂದರು.

ಇವಿಎಂ ಕೊರತೆ: ವಿದ್ಯುನ್ಮಾನ ಮತಯಂತ್ರದ (ಇವಿಎಂ) ಒಂದು ಬ್ಯಾಲೆಟ್‌ ಯೂನಿಟ್‌ನ‌ಲ್ಲಿ ನೋಟಾ ಸೇರಿದಂತೆ  16 ಅಭ್ಯರ್ಥಿಗಳ ಹೆಸರನ್ನು ಮುದ್ರಿಸಲು ಮಾತ್ರ ಅವಕಾಶವಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ಬ್ಯಾಲೆಟ್‌ ಯೂನಿಟ್‌ಗಳ ಕೊರತೆ ಎದುರಾಗಿದೆ.

‘ಬೆಂಗಳೂರು ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಿಗೆ ಬೇರೆ ಜಿಲ್ಲೆಗಳಿಂದ ಬ್ಯಾಲೆಟ್‌ ಯೂನಿಟ್‌ಗಳನ್ನು ತರಿಸಲಾಗುತ್ತಿದೆ. ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಇನ್ನೂ 1 ಸಾವಿರ ಬ್ಯಾಲೆಟ್‌ ಯೂನಿಟ್‌ಗಳ ಅಗತ್ಯ ಇದೆ. ಇವುಗಳನ್ನು ಬೇರೆ ರಾಜ್ಯಗಳಿಂದ ತರಿಸಿಕೊಳ್ಳಬೇಕಾಗುತ್ತದೆ. ಈ ಸಲುವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. 

ಚುನಾವಣೆ ಸಲುವಾಗಿ ಆರಂಭಿಸಿರುವ ಜಿಲ್ಲಾ ಸಂಪರ್ಕ ಕೇಂದ್ರದ ಸಹಾಯವಾಣಿಗೆ (1950) ಇದುವರೆಗೆ 24,277 ಕರೆಗಳು ಬಂದಿವೆ. ಈ ದೂರುಗಳನ್ನು ವಿಲೇ ಮಾಡಿದ್ದೇವೆ ಎಂದರು.

ಮತ ಎಣಿಕೆ ಕೇಂದ್ರ ಬದಲು: ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಮಲ್ಯ ಆಸ್ಪತ್ರೆ ಬಳಿಯ ಸೇಂಟ್‌ ಜೋಸೆಫ್ಸ್‌ ಕಾಲೇಜಿನಲ್ಲಿ, ಬೆಂಗಳೂರು ಕೇಂದ್ರ ಕ್ಷೇತ್ರದ ಮತ ಎಣಿಕೆ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಮತ ಎಣಿಕೆ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ನಡೆಯಲಿದೆ ಎಂದರು.

ಕ್ರಿಮಿನಲ್‌ ಹಿನ್ನೆಲೆ– ಜಾಹೀರಾತು ನೀಡದಿದ್ದರೆ ಕ್ರಮ

‘ಅಭ್ಯರ್ಥಿ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದರೆ, ಚುನಾವಣೆಗೆ ಮುನ್ನ ಪತ್ರಿಕೆಗಳಲ್ಲಿ ಕನಿಷ್ಠ 3 ಬಾರಿ ಈ ಬಗ್ಗೆ ಜಾಹೀರಾತು ನೀಡಬೇಕು ಎಂಬ ಹೊಸ ನಿಯಮವನ್ನು ಈ ಬಾರಿ ಜಾರಿಗೊಳಿಸಲಾಗಿದೆ. ಅಂತಹವರು ಏಪ್ರಿಲ್‌ 18ಕ್ಕೆ ಮುನ್ನ ಮೂರು ಬಾರಿ ಜಾಹೀರಾತು ನೀಡದಿದ್ದರೆ ನಾವು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುತ್ತೇವೆ. ಒಂದು ವೇಳೆ ಈ ನಿಯಮ ಪಾಲಿಸದ ಅಭ್ಯರ್ಥಿಗಳು ಗೆಲುವು ಸಾಧಿಸಿದರೂ ಆಯೋಗವು ಅದನ್ನು ಅಸಿಂಧುಗೊಳಿಸಬಹುದು’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಭೀತಿ ಹುಟ್ಟಿಸುವವರ ವಿರುದ್ಧ ಕ್ರಮ

ಚುನಾವಣೆ ಸಂದರ್ಭದಲ್ಲಿ ಬೀತಿ ಹುಟ್ಟಿಸುವವರ ವಿರುದ್ಧ ಪೊಲೀಸ್‌ ಇಲಾಖೆ ಕ್ರಮಕೈಗೊಳ್ಳಲಿದೆ. ಈಗಾಗಲೇ ಚುನಾವಣಾ ಅಕ್ರಮಗಳಲ್ಲಿ ಗುರುತಿಸಿಕೊಂಡ 668 ಮಂದಿಯನ್ನು ಗುರುತಿಸಿದ್ದೇವೆ. 637 ಮಂದಿಯಿಂದ ₹ 1 ಲಕ್ಷದಿಂದ ₹ 5ಲಕ್ಷದವರೆಗಿನ ಬಾಂಡ್‌ಸಹಿತ ಮುಚ್ಚಳಿಕೆ ಬರೆಸಿಕೊಂಡಿದ್ದೇವೆ. ಶಸ್ತ್ರವನ್ನು ಮರಳಿಸಬೇಕಾದವರಲ್ಲಿ ಶೇ 99.9ರಷ್ಟು ಮಂದಿ ಈಗಾಗಲೇ ಒಪ್ಪಿಸಿದ್ದಾರೆ. 5 ಮಂದಿಯ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮಕೈಗೊಂಡಿದ್ದೇವೆ’ ಎಂದು ನಗರ ಪೊಲೀಸ್‌ ಕಮೀಷನರ್‌ ಸುನಿಲ್‌ ಕುಮಾರ್‌ ತಿಳಿಸಿದರು.

ಡಿಜಿಟಲ್‌ ಪಾವತಿ ಮೇಲೆ ನಿಗಾ

ಪೇಟಿಎಂ, ಫೋನ್‌ ಪೇ ಮೊದಲಾದ ಮೊಬೈಲ್‌ ವ್ಯಾಲೆಟ್‌ಗಳ ಮೂಲಕ ನಡೆಯುವ ಡಿಜಿಟಲ್‌ ಪಾವತಿ ಮೇಲೆ ಹಾಗೂ ಟೋಕನ್‌ ಮೂಲಕ ದಿನಬಳಕೆ ಸಾಮಗ್ರಿ ವಿತರಿಸುವುದರ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಪ್ರತಿಯೊಬ್ಬರ ಬ್ಯಾಂಕ್‌ ವಹಿವಾಟುಗಳ ಮೇಲೂ ನಿಗಾ ವಹಿಸಲಾಗಿದೆ. ಯಾರಾದರೂ ಬ್ಯಾಂಕ್ ಖಾತೆಯಿಂದ  ₹ 1 ಲಕ್ಷಕ್ಕಿಂತ ಹೆಚ್ಚು ನಗದನ್ನು ಹಿಂಪಡೆದರೆ ನಮಗೆ ಮಾಹಿತಿ ಬರುತ್ತದೆ. ₹ 10 ಲಕ್ಷಕ್ಕಿಂತ ಹೆಚ್ಚು ನಗದನ್ನು ಪಡೆದರೆ ಆದಾಯ ತೆರಿಗೆ ಇಲಾಖೆಗೂ ಮಾಹಿತಿ ರವಾನೆಯಾಗುತ್ತದೆ ಎಂದು ಅವರು ತಿಳಿಸಿದರು. 

***

‘ನಗರದಲ್ಲಿ 1,600 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ಮೈಕ್ರೊ ಅಬ್ಸರ್ವರ್‌ಗಳನ್ನು ನೇಮಿಸಲಾಗುತ್ತದೆ. ಇಲ್ಲದಿದ್ದರೆ ವೆಬ್‌ಕಾಸ್ಟಿಂಗ್‌ ಅಥವಾ ವಿಡಿಯೊಗ್ರಫಿ ಸೌಲಭ್ಯ ಒದಗಿಸಲಾಗಿರುತ್ತದೆ. ಈ ಬಾರಿ 1,204 ಮತಗಟ್ಟೆಗಳಿಗೆ ಕೇಂದ್ರ ಸರ್ಕಾರಿ ನೌಕರರನ್ನು ಮೈಕ್ರೊ ಅಬ್ಸರ್ವರ್‌ಗಳನ್ನಾಗಿ ನೇಮಿಸಲಾಗಿದೆ. 400 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಚುನಾವಣಾಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !