ಫಲಾನುಭವಿ ಸತ್ತರೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ!

ಗುರುವಾರ , ಮಾರ್ಚ್ 21, 2019
30 °C
ಬಡವರು ಎಲ್ಲಿಗೆ ಹೋಗಬೇಕು, ಹೇಗೆ ಬದುಕಬೇಕು * ಬಡವರು ಎಲ್ಲಿಗೆ ಹೋಗಬೇಕು, ಹೇಗೆ ಬದುಕಬೇಕು

ಫಲಾನುಭವಿ ಸತ್ತರೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ!

Published:
Updated:
Prajavani

ಕಲಬುರ್ಗಿ: ಅದು 2014–15ನೇ ಇಸವಿ. ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಸೇರಿದ್ದೇ ತಡ ಖುಷಿಪಟ್ಟಿದ್ದರು. ಇನ್ನೇನು ತಮ್ಮ ಎರಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ನೀರು ಕಾರಂಜಿಯಂತೆ ಚಿಮ್ಮಲಿದೆ ಎಂದು ಸಂಭ್ರಮಿಸಿದ್ದರು. ಅಂತೆಯೇ 2016ರಲ್ಲಿ ಬಾವಿಯನ್ನು ಕೊರೆಯಲಾಯಿತು. ಎರಡೂವರೆ ಇಂಚು ನೀರೂ ಲಭ್ಯವಾಯಿತು. ಆದರೆ, ವರ್ಷದ ಬಳಿಕ ಪಂಪ್ ಅಳವಡಿಸಿದರು. ಅದಾದ ಆರು ತಿಂಗಳಿಗೆ ವಿದ್ಯುತ್ ಕಂಬಗಳನ್ನು ಅಳವಡಿಸಿ, ಸದ್ಯ ವಿದ್ಯುತ್ ತಂತಿಯನ್ನು ಎಳೆದಿದ್ದಾರೆ. ಆದರೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಬೆಳೆ ತೆಗೆಯಲು ಕಾಯುತ್ತಿದ್ದ ಫಲಾನುಭವಿ ವರ್ಷದ ಹಿಂದೆ ಮೃತಪಟ್ಟರು.

ಇದು ಚಿಂಚೋಳಿ ತಾಲ್ಲೂಕು ಕುಂಚಾವರಂನ ಮೃತ ಆಶಪ್ಪ ತಲಾರಿ ಅವರ ಕಥೆ. 

‘ತಂದೆ ಮೃತಪಟ್ಟ ನಂತರ ಜಮೀನನ್ನು ತಾಯಿ ಹೆಸರಿಗೆ ವರ್ಗಾವಣೆ ಮಾಡಿಸಿದ್ದೇನೆ. ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಫಸಲು ತೆಗೆಯಬಹುದು ಎಂಬ ಆಸೆಯಿಂದ ಕಾಯುತ್ತಿದ್ದೇನೆ. ಈಗಲೇ ಐದು ವರ್ಷಗಳೇ ಗತಿಸಿವೆ. ಕೊಳವೆಬಾವಿಯಲ್ಲಿನ ನೀರು ಬತ್ತುವ ಆತಂಕವಿದೆ. ವಿದ್ಯುತ್ ಸಂಪರ್ಕ ಕೊಡಲು ಇನ್ನೆಷ್ಟು ದಿನ ಸತಾಯಿಸುತ್ತಾರೋ ಗೊತ್ತಿಲ್ಲ’ ಎಂದು ಆಶಪ್ಪ ಅವರ ಪುತ್ರ ಬಿಚ್ಚಪ್ಪ ಅಸಹಾಯಕರಾಗಿ ಹೇಳುತ್ತಾರೆ.

ಇದನ್ನೂ ಓದಿ: ಹಳಿ ತಪ್ಪಿರುವ ಗಂಗಾ ಕಲ್ಯಾಣ: ನೀರಿಗಿಂತ ಹಣದ ಹರಿವೇ ಹೆಚ್ಚು

ಚಿಂಚೋಳಿ ತಾಲ್ಲೂಕು ಪೋಲಕಪಳ್ಳಿ ಗ್ರಾಮದಲ್ಲಿರುವ ಬಹುತೇಕ ಜಮೀನು ಕಪ್ಪು ಕಲ್ಲಿನಿಂದ ಕೂಡಿದೆ. ಇಲ್ಲಿ ಕನಿಷ್ಠ 600 ಅಡಿ ಕೊರೆದರೂ ಕಪ್ಪುಪುಡಿ ಹಾರುತ್ತದೆಯೇ ಹೊರತು, ಹನಿ ನೀರು ಬರುವುದಿಲ್ಲ. ಆದರೆ, ಗಂಗಾ ಕಲ್ಯಾಣ ಯೋಜನೆಯಡಿ ಇಲ್ಲೂ ಕೂಡ ಕೆಲವು ಫಲಾನುಭವಿಗಳ ಜಮೀನಿನಲ್ಲಿ ಬಾವಿ ಕೊರೆಯಲಾಗಿದೆ. 200 ಅಡಿ ಕೊರೆದು, 350 ಅಡಿಯ ಲೆಕ್ಕ ತೋರಿಸಲಾಗಿದೆ. ಆದರೆ, ನೀರು ಮಾತ್ರ ಸಿಕ್ಕಿಲ್ಲ. ರೈತರ ಗೋಳು ತಪ್ಪಿಲ್ಲ.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆ: ಅಧಿಕಾರಿಗಳದ್ದೇ ಅಟಾಟೋಪ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕ್ಷೇತ್ರದ ಕೆಲವು ಫಲಾನುಭವಿಗಳದು ವಿಚಿತ್ರ ಕತೆ.

‘ಹಿಂದಿನ ಶಾಸಕರು ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ನಮ್ಮ ಹೆಸರು ಇತ್ತು. ಆಗ 8–10 ಕೊಳವೆಬಾವಿ ಕೊರೆದರು. ಆ ನಂತರ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಬಾವಿ ಕೊರೆಯುವುದನ್ನು ‘ಕೈ’ಬಿಟ್ಟರು. ಈಗ ಹೊಸ ಸರ್ಕಾರ ಬಂದಿದೆ. ಶಾಸಕರು ಬದಲಾಗಿದ್ದಾರೆ, ಹಾಗೆಯೇ ಪಟ್ಟಿಯೂ ಬದಲಾಗಿದೆ. ನಮ್ಮ ಹೆಸರುಗಳನ್ನು ಕೈ ಬಿಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ನೀರಿಗಾಗಿ ಎದುರು ನೋಡುತ್ತಿರುವ ನಾವುಗಳು ಪ್ರತಿ ನಿತ್ಯ ಕಚೇರಿಗೆ ಅಲೆಯುವಂತಾಗಿದೆ. ಬಡವರಿಗೆ ಅನುಕೂಲ ಕಲ್ಪಿಸಲು ಆಯ್ಕೆಯಾಗಿರುವ ಶಾಸಕರೇ ತೊಂದರೆ ಮಾಡಿದರೆ ಹೇಗೆ, ಬಡವರು ಎಲ್ಲಿಗೆ ಹೋಗಬೇಕು, ಹೇಗೆ ಬದುಕಬೇಕು’ ಎಂದು ಫಲಾನುಭವಿಗಳು ಪ್ರಶ್ನಿಸುತ್ತಾರೆ.

ಇದು ಕೇವಲ ಸ್ಯಾಂಪಲ್ ಮಾತ್ರ. ರಾಜ್ಯದ ಬಹುತೇಕ ಎಲ್ಲ ತಾಲ್ಲೂಕುಗಳ ಹಣೆಬರಹವೂ ಇದೇ  ಆಗಿದೆ. ಮೊದಲಿಗೆ ಫಲಾನುಭವಿ ಪಟ್ಟಿಗೆ ಅರ್ಹರ ಹೆಸರು ಸೇರಿಸುವುದೇ ದೊಡ್ಡ ಸಾಹಸ, ಸೇರಿಸಿದ ಬಳಿಕ ಕೊಳವೆಬಾವಿಯನ್ನು ಅದೇ ವರ್ಷ ಕೊರೆಸಲು ಇನ್ನಿಲ್ಲದ ಹರಸಾಹಸ ಪಡಬೇಕು. ಅದೃಷ್ಟ ನೆಟ್ಟಗಿದ್ದು ನೀರು ಬಿದ್ದರೆ ಮುಂದಿನ ಹಂತಕ್ಕೆ ಜಿಗಿದು, ಉಪಕರಣಗಳನ್ನು ತರಿಸಿಕೊಳ್ಳಲು ಇನ್ನಷ್ಟು ಕಸರತ್ತು ನಡೆಸಬೇಕು. ಇದಾದ ಬಳಿಕ ಎಲ್ಲವೂ ಸರಿಯಾಗಿ ವಿದ್ಯುತ್ ಸಂಪರ್ಕ ಪಡೆಯಲು ಸಂಬಂಧಿಸಿದ ಎಸ್ಕಾಂಗಳ ಸ್ಥಳೀಯ ಕಚೇರಿಗಳಿಗೆ  ಎಡತಾಕಬೇಕು.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆ ಬಗ್ಗೆ ಜನ ಏಂತಾರೆ

ಈ ಎಲ್ಲ ಹಂತಗಳಲ್ಲೂ ಶಾಸಕರ ಕಚೇರಿಯಿಂದ ಸಮಾಜಕಲ್ಯಾಣ ಇಲಾಖೆ ಕಚೇರಿ, ಸಂಬಂಧಿಸಿದ ನಿಗಮಗಳು ಮತ್ತು ಎಸ್ಕಾಂ ಕಚೇರಿಗಳಲ್ಲೂ ಮಧ್ಯವರ್ತಿಗಳ ನೆರವಿಲ್ಲದೆ, ಏನೇನೂ ಪ್ರಯೋಜನ ಆಗುವುದಿಲ್ಲ. ಸಾಲ ಸೋಲ ಮಾಡಿ, ಮಧ್ಯವರ್ತಿಗೆ ಹಣ ಕೊಟ್ಟರೂ ನಸೀಬು ನೆಟ್ಟಗಿದ್ದು ನೀರು ಬಿದ್ದು ವಿದ್ಯುತ್ ಸಂಪರ್ಕ ಸಿಕ್ಕರೆ ಬಚಾವ್. ಇಲ್ಲದಿದ್ದರೆ ಲಂಚಕ್ಕೆ, ಓಡಾಟಕ್ಕೆ ಅಂತೆಲ್ಲಾ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಆಗದೆ ಸಾಲದ ಸುಳಿಯಲ್ಲಿ ಆಕಾಂಕ್ಷಿ ಸಿಲುಕುವುದು ನಿಶ್ಚಿತ. ಗಂಗಾಕಲ್ಯಾಣ ಯೋಜನೆಯ ಈ ಕರ್ಮಕಾಂಡ ಕೆಳಗಿಂದ ಮೇಲಿನತನಕ ಎಲ್ಲರಿಗೂ ಗೊತ್ತು. ಆದರೆ ಉತ್ತರಿಸಬೇಕಿರುವವರ, ಕ್ರಮ ಕೈಗೊಳ್ಳಬೇಕಾದವರು, ಅಮಾಯಕರಿಗೆ ನೆರವಾಗಬೇಕಾದವರು ಮಾತ್ರ ಎಂದಿನಂತೆ ದಿವ್ಯ ನಿರ್ಲಕ್ಷ್ಯಕ್ಕೆ ಮೊರೆ ಹೋಗಿದ್ದಾರೆ. ವೈಯಕ್ತಿಕ ಕಲ್ಯಾಣದತ್ತ ಮುಖ ಮಾಡಿದ್ದಾರೆ. ಬಡವನ ಗೋಳು ಅರಣ್ಯರೋದನದಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !