ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗಣ್ಣು ಅರಳಿಸುವ ರಹಸ್ಯ

Last Updated 22 ಅಕ್ಟೋಬರ್ 2018, 19:17 IST
ಅಕ್ಷರ ಗಾತ್ರ

ಒಳಗಣ್ಣು ಅರಳಿಸುವ ರಹಸ್ಯ

ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
ಅರಸಿ ವರಿಸುವರಾರು ಬೀದಿ ಬತ್ತಲಿಯ ? ||
ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ |
ಸುರಸತೆಯ ಕುತುಕದಿಂ – ಮಂಕುತಿಮ್ಮ || 46 ||

ಪದ-ಅರ್ಥ: ಜೀವರಹಸ್ಯವರೆಪರದೆಯೊಳಡಗಿ=ಜೀವರಹಸ್ಯ+ಅರೆಪರದೆಯೊಳು+ಅಡಗಿ, ಅರಳಿಪುದದಡಗಿರ್ದೊಡಾಗ=ಅರಳಿಪುದು+ಅದು+ಅಡಗಿರ್ದೊಡೆ+ಆಗ, ನಮ್ಮೆದೆಗಣ್ಣ=ನಮ್ಮ+ಎದೆಗಣ್ಣ

ವಾಚ್ಯಾರ್ಥ: ಜೀವರಹಸ್ಯ ಅರೆಪರದೆಯೊಳಗೇ ಅಡಗಿರಲಿ. ಎಲ್ಲವೂ ಸ್ಪಷ್ಟವಾಗಿದ್ದಾಗ, ಅದನ್ನು ಅರ್ಥೈಸಿಕೊಳ್ಳಲು ಯಾರು ಪ್ರಯತ್ನಿಸುತ್ತಾರೆ? ಆ ರಹಸ್ಯ ಅಡಗಿದ್ದಾಗಲೇ ಕುತೂಹಲದಿಂದ ನಮ್ಮ ಎದೆಗಣ್ಣನ್ನು ಅರಳಿಸುತ್ತದೆ.

ವಿವರಣೆ: ಜೀವರಹಸ್ಯವೆನ್ನುವುದು ನಮಗೆ ಸ್ಪಷ್ಟವಾಗಿ ತಿಳಿಯದ ವಿಷಯ. ಅದು ಒಂದು ಅರೆಪರದೆಯ ಹಿಂದೆ ಅಡಗಿಕೊಂಡಂತಿದೆ ಎಂದು ಭಾವಿಸೋಣ. ಈ ಅಸ್ಪಷ್ಟವಾದದ್ದರಿಂದ ನಮಗೆ ಏನು ಪ್ರಯೋಜನ? ತುಂಬ ಪ್ರಯೋಜನವಿದೆ ಎನ್ನುತ್ತದೆ ಈ ಕಗ್ಗ. ವಸ್ತು ಮರೆಯಾಗಿದ್ದಾಗಲೇ ಅದರ ಬಗ್ಗೆ ಕುತೂಹಲ ಮತ್ತು ಕುತೂಹಲವನ್ನು ತಣಿಸಲು ಪ್ರಯತ್ನ. ನೀವು ಮನೆಗೆ ಹೋಗುವಾಗ ಪೆಟ್ಟಿಗೆಯಲ್ಲಿ ಒಂದು ಉಡುಗೊರೆಯನ್ನು ಮಗುವಿಗಾಗಿ ತೆಗೆದುಕೊಂಡು ಹೋಗಿ. ಪೆಟ್ಟಿಗೆಯಲ್ಲಿ ಏನಿದೆ ಎಂಬುದು ಮಗುವಿಗೆ ತಿಳಿದಿಲ್ಲ. ಆದರೆ ಉಡುಗೊರೆ ಎಂಬುದು ಗೊತ್ತು. ನೀವು ತೋರಿಸುವವರೆಗೂ ಮಗು ಉತ್ಸಾಹದಿಂದ ಕುಣಿದಾಡುತ್ತ ಆ ವಸ್ತುವನ್ನು ಪಡೆಯಲು ಪ್ರಯತ್ನಿಸುತ್ತದೆ. ಪೆಟ್ಟಿಗೆಯೊಳಗಿನ ವಸ್ತು ದೊರೆತ ಮೇಲೆ ಸ್ವಲ್ಪ ಹೊತ್ತು ಮಾತ್ರ ಸಂಭ್ರಮ.

ಹಾಗೆ ಮರೆಯಾಗಿ ತೆಗೆದುಕೊಂಡು ಹೋಗದೆ ಅದನ್ನು ತೆರೆದೇ ಇಟ್ಟರೆ ಆ ಕುತೂಹಲ, ಉತ್ಸಾಹ ಇರಲಾರದು. ಅಂದರೆ ಮರೆಯಾಗಿದ್ದಷ್ಟು ಕುತೂಹಲ ಹೆಚ್ಚು. ಅದಕ್ಕೇ ಇಂಗ್ಲೀಷಿನಲ್ಲಿ ಒಂದು ಮಾತಿದೆ– curiosity is expression through suppression. ಒಬ್ಬ ಯುವತಿ ತಲೆಯಿಂದ ಕಾಲಿನವರೆಗೂ ಮುಸುಕು ಹಾಕಿಕೊಂಡು ಕುಳಿತಿದ್ದರೆ ಯಾವ ಆಸಕ್ತಿಯೂ ಇರುವುದಿಲ್ಲ. ಅಂತೆಯೇ ಎಲ್ಲವನ್ನೂ ತೆರೆದು ನಿಂತರೆ ಜಿಗುಪ್ಸೆಯಾಗುತ್ತದೆ. ಹೀಗಾಗಿಯೇ ಏನನ್ನೂ ಮರೆಮಾಚದ ಬೀದಿ ಬತ್ತಲಿಯನ್ನು ಯಾರಾದರೂ ಹುಡುಕಾಡಿ ವರಿಸುತ್ತಾರೆಯೇ? ಅಲ್ಲಿ ಯಾವ ಕುತೂಹಲವೂ ಇಲ್ಲ.

ಹಾಗೆಯೇ ಜೀವರಹಸ್ಯ ಕೂಡ ಅರೆಪರದೆಯ ಹಿಂದೆ ಅಡಗಿದ್ದಾಗ ಅದನ್ನು ತಿಳಿಯುವ ಕುತೂಹಲ ಹೆಚ್ಚಾಗುತ್ತದೆ. ಈ ರಹಸ್ಯ ತನ್ನನ್ನು ಸಂಪೂರ್ಣವಾಗಿ ತೆರೆದುಕೊಂಡಿದ್ದರೆ ಅದನ್ನು ತಿಳಿಯಲು ಪ್ರಯತ್ನವನ್ನೇ ಮಾಡಬೇಕಾಗಿಲ್ಲ. ಅದು ಹಾಗೆ ಅಡಗಿಕೊಂಡಾಗಲೇ ತನ್ನ ಸುರಸವಾದ ಕುತೂಹಲದಿಂದ ನಮ್ಮ ಎದೆಗಣ್ಣನ್ನು ತೆರೆಸುತ್ತದೆ. ಜೀವರಹಸ್ಯವನ್ನು ಅರಿಯುವ ಕುತೂಹಲಭರಿತವಾದ ಪ್ರಯತ್ನವೇ ಅಧ್ಯಾತ್ಮಿಕ ಸಾಧನೆಯ ದಾರಿ. ಇದೊಂದು ಅದ್ಭುತವಾದ ಕಗ್ಗ. ರಹಸ್ಯ ಎಂದು ಮುಖ ತಿರುಗಿಸದೇ ಅದನ್ನು ಕುತೂಹಲದಿಂದ ಪರೀಕ್ಷಿಸಿ ಒಳಗಣ್ಣನ್ನು ತೆರೆದುಕೊಳ್ಳಬೇಕು ಎಂದು ಪ್ರಚೋದಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT