ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ವ್ಯಕ್ತಿತ್ವದ ಶೌಕತ್ ಅಲಿ

Last Updated 16 ಜೂನ್ 2018, 9:08 IST
ಅಕ್ಷರ ಗಾತ್ರ

ನಾನು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಒಬ್ಬರು ಅಪರೂಪದ ಎಸಿಪಿ ಇದ್ದರು. ಅವರ ಮೂಲ ಹೈದರಾಬಾದ್. ರಾಜ್ಯಗಳ ವಿಂಗಡಣೆಯಾದಾಗ ಅವರಿದ್ದ ಹೈದರಾಬಾದ್‌ನ ಭಾಗ ಕರ್ನಾಟಕಕ್ಕೆ ಸೇರಿಕೊಂಡಿತು.ಹಾಗಾಗಿ ಅವರು ಬೆಂಗಳೂರಿಗೆ ವರ್ಗಾವಣೆಯಾಗಿ ಬಂದರು. ಉರ್ದು ಮಿಶ್ರಿತ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ಅವರದ್ದು ವಿಭಿನ್ನ ವ್ಯಕ್ತಿತ್ವ. ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದರು. ಅವರೇ ಶೌಕತ್ ಅಲಿ.

ಅವರ ಮುಖದಲ್ಲೇ ಹಿರಿತನವಿತ್ತು. ತಪ್ಪು ದಿನಾಂಕ ಕೊಟ್ಟು ತಡವಾಗಿ ಕೆಲಸಕ್ಕೆ ಸೇರಿಕೊಂಡಿದ್ದರೋ ಏನೋ, ಸಾಕಷ್ಟು ವಯಸ್ಸೂ ಆದವರಂತೆ ಕಾಣುತ್ತಿದ್ದರು. ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಅವರದ್ದು ಎತ್ತಿದ ಕೈ. ಮೊದಲ ನೋಟದಲ್ಲೇ ನನಗೆ ಎಲ್ಲರಿಗಿಂತ ಸಂಪೂರ್ಣ ಭಿನ್ನವಾಗಿ ಕಂಡ ಅವರ ಜೊತೆ ಕೆಲಸ ಮಾಡುವ ಭಾಗ್ಯ ನನ್ನದಾಯಿತು. ಅವರ ವ್ಯಕ್ತಿತ್ವದ ಪರಿಚಯ ಆಳವಾಗಿ ಆದದ್ದೇ ಆಗ.

1980ರ ದಶಕದಲ್ಲಿ ಕ್ಷುಲ್ಲಕ ಕಾರಣಗಳಿಗೆ ಪದೇಪದೇ ಕೋಮುಗಲಭೆಗಳಾಗುತ್ತಿದ್ದವು. ಆಗ ಇದ್ದ ಪೊಲೀಸರ ಹಾಗೂ ಠಾಣೆಗಳ ಸಂಖ್ಯೆ ತುಂಬಾ ಕಡಿಮೆ. ಹಾಗಾಗಿ ಕೋಮುಗಲಭೆ ಎಲ್ಲ ಪೊಲೀಸರ ಪಾಲಿಗೆ ಶಾಪವೇ ಹೌದಾಗಿತ್ತು. ಅಂಥ ಗಲಭೆಗಳನ್ನು ಶೌಕತ್ ಅಲಿ ನಿಯಂತ್ರಿಸುತ್ತಿದ್ದ ರೀತಿ ಅವರ್ಣನೀಯ. ಅಷ್ಟು ವಯಸ್ಸಾಗಿದ್ದರೂ ಪರಿಸ್ಥಿತಿ ಪ್ರಕೋಪಕ್ಕೆ ಹೋಗದಂತೆ ತಡೆಯಬಲ್ಲ ಚಾಣಾಕ್ಷತೆ ಅವರಿಗಿತ್ತು. ಅದಕ್ಕೆ ಮುಖ್ಯ ಕಾರಣ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದ ನಮ್ಮಂಥವರನ್ನು ಮಕ್ಕಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಬಗೆ.
ಮಧುಮೇಹ, ರಕ್ತದೊತ್ತಡದಂಥ ವಯೋಸಹಜ ಸಮಸ್ಯೆಗಳು ಅವರಿಗಿದ್ದವು. ಅವರಿಗೆ ಇಷ್ಟವಾದ, ಆದರೆ ಆ ಸಂದರ್ಭದಲ್ಲಿ ಅವರು ತಿನ್ನಬಾರದ ಖಾದ್ಯವನ್ನು ಮನೆಯಿಂದ ಮಾಡಿಸಿಕೊಂಡು ದೊಡ್ಡ ಟಿಫನ್ ಕ್ಯಾರಿಯರ್‌ನಲ್ಲಿ ತರುತ್ತಿದ್ದರು. ಕೋಮುಗಲಭೆ ಎಂದರೆ ತೊಟ್ಟು ನೀರು ಸಿಗುವುದೂ ಕಷ್ಟ. ಅಂಥ ಸ್ಥಳಗಳಿಗೆ ಅದು ಹೇಗೋ ಅವರ ಮನೆಯಿಂದ ‘ಹೈದರಾಬಾದಿ ಬಿರಿಯಾನಿ’ ಬರುತ್ತಿದ್ದುದು ನಮಗೆಲ್ಲಾ ಕೌತುಕದ ಸಂಗತಿ. ಹಾಗೆ ಬಂದ ಊಟವನ್ನು ಎಲ್ಲರಿಗೂ ತುಂಬು ಹೃದಯದಿಂದ ಬಡಿಸುತ್ತಿದ್ದರು. ಮಕ್ಕಳ ಕುರಿತು ತಂದೆಗೆ ಹೇಗೆ ಕಕ್ಕುಲತೆ ಇರುತ್ತದೋ, ನಮ್ಮಂಥವರ ಬಗೆಗೂ ಅವರಿಗೆ ಅಂಥದೇ ಕಕ್ಕುಲತೆ ಇದ್ದದ್ದು ಅಚ್ಚರಿ.
 
ತಾವು ಮಾತ್ರ ತಿನ್ನುತ್ತಿರಲಿಲ್ಲ; ತಿನ್ನುವ ಹಾಗೆ ಇರಲಿಲ್ಲ. ಸೂಕ್ಷ್ಮ ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಗಳು ನಮ್ಮ ಮೇಲೆ ಎರಗುವ ಸಾಧ್ಯತೆ ಹೆಚ್ಚು. ಅದನ್ನು ತಪ್ಪಿಸಲೋ ಎಂಬಂತೆ ಶೌಕತ್ ಅಲಿ ತಡೆಗೋಡೆಯಂತೆ ನಿಲ್ಲುತ್ತಿದ್ದರು. ಅವರು ಇದ್ದಾರೆಂಬುದೇ ನಮಗೆಲ್ಲಾ ದೊಡ್ಡ ಧೈರ್ಯ.

ಅವರು ಫ್ರೇಜರ್‌ಟೌನ್ ಠಾಣೆಯಲ್ಲಿ ಎಸಿಪಿ ಆಗಿದ್ದರು. ಗೋಕಾಕ್ ಚಳವಳಿ ಪರಾಕಾಷ್ಠೆಯಲ್ಲಿತ್ತು. ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ನಲ್ಲಿ ಕನ್ನಡ ಪ್ರಾರ್ಥನೆಯ ನಂತರ ತಮಿಳು ಪ್ರಾರ್ಥನೆ ನಡೆಯಬೇಕು ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತುಕತೆ ಜೋರಾದದ್ದೇ ಗಲಭೆ ಶುರುವಾಗುವ ಸಾಧ್ಯತೆ ಕಂಡಿತು. ಆಗ ಅಲ್ಲಿದ್ದವರಲ್ಲಿ ನಾನೂ ಒಬ್ಬ. ಶೌಕತ್ ಅಲಿ ನಮ್ಮನ್ನು ಲೀಡ್ ಮಾಡಿದರು. ಜನ ಕೈಮಿಲಾಯಿಸಲು ಪ್ರಾರಂಭಿಸಿದ ಕ್ಷಣವೇ ಜೋರು ಮಳೆ. ನಮ್ಮತ್ತ ಕಲ್ಲಿನ ಸುರಿಮಳೆ. ಅದಕ್ಕೆ ಅಂಜದೆ ನಾವೆಲ್ಲಾ ನೆನೆಯುತ್ತಲೇ ಕೆಲಸ ಮಾಡಿದೆವು. ಶೌಕತ್ ಅಲಿ ಅವರೂ ನಮ್ಮ ಸಮಕ್ಕೂ ನಿಂತರು. ಸ್ವಲ್ಪ ಹೊತ್ತಿನಲ್ಲೇ ಗಲಾಟೆ ತಣ್ಣಗಾಯಿತು. ಅದು ಗಲಭೆಗೆ ತಿರುಗಲಿಲ್ಲವಲ್ಲ ಎಂಬ ಸಮಾಧಾನ ನಮಗೆ. ನಮ್ಮ ತಂಡದಲ್ಲೇ ಒಬ್ಬರು ಸರ್ಕಲ್ ಇನ್ಸ್‌ಪೆಕ್ಟರ್ ಇದ್ದರು. ಮಳೆ ಶುರುವಾದ ತಕ್ಷಣ ಅವರು ಓಡಿಹೋಗಿ ಪೊಲೀಸ್ ವಾಹನದೊಳಗೆ ಸೇರಿಕೊಂಡಿದ್ದರು.

ಪರಿಶೀಲನೆಗೆಂದು ಆ ಸ್ಥಳಕ್ಕೆ ಡಿಸಿಪಿ ಬಿ.ಎನ್.ನಾಗರಾಜ್ ಬಂದರು. ಮಳೆಯಲ್ಲಿ ಒದ್ದೆಮುದ್ದೆಯಾಗಿದ್ದ ನಮ್ಮನ್ನೆಲ್ಲಾ ಕಂಡು ಭೇಷ್ ಅಂದರು. ನಾವು ನಿಂತಿದ್ದ ರಸ್ತೆ ಹಾಗೂ ಇಕ್ಕೆಲಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಪ್ಪಲಿಗಳೇ ಒಂದು ಲಾರಿ ಲೋಡ್‌ನಷ್ಟಿದ್ದವು. ಅಂದರೆ, ಅಷ್ಟೊಂದು ಜನ ಆಗ ಜೀವ ಉಳಿಸಿಕೊಂಡರೆ ಎಂಬಂತೆ ನೂಕುನುಗ್ಗಲಿನಿಂದ ತಪ್ಪಿಸಿಕೊಂಡು ಹೋಗಿದ್ದರು. ಮಳೆಯಲ್ಲಿ ಒದ್ದೆಯಾಗಿ, ಕಲ್ಲೇಟು ತಿಂದು ಗಲಭೆ ಹತ್ತಿಕ್ಕಿದ್ದ ನಮ್ಮನ್ನೆಲ್ಲಾ ಅಭಿನಂದಿಸಿ, ಶೌಕತ್ ಅಲಿ ಅವರ ಕೈಕುಲುಕಿ ಡಿಸಿಪಿ ಹೊಗಳುತ್ತಿದ್ದರು. ಅಷ್ಟರಲ್ಲಿ ಜೀಪಿನೊಳಗೆ ಕೂತಿದ್ದ ಆ ಸರ್ಕಲ್ ಇನ್ಸ್‌ಪೆಕ್ಟರ್ ಇಳಿದು ಓಡೋಡಿ ಬಂದರು. ನಮಗೆಲ್ಲಾ ಒಳಗೊಳಗೇ ನಗು. ಯಾರೂ ಏನೂ ಮಾತಾಡಬೇಡಿ ಎಂದು ಮೊದಲೇ ಶೌಕತ್ ಅಲಿ ನಮಗೆಲ್ಲಾ ಎಚ್ಚರಿಕೆ ನೀಡಿದ್ದರು. ಡಿಸಿಪಿ ನಾಗರಾಜ್ ತಮ್ಮ ಆಪ್ತರು ಎಂದು ಮೊದಲಿನಿಂದಲೂ ಆ ಸರ್ಕಲ್ ಇನ್ಸ್‌ಪೆಕ್ಟರ್ ಹೇಳಿಕೊಂಡು ಓಡಾಡುತ್ತಿದ್ದರಿಂದ ನಮಗೆಲ್ಲಾ ಮುಂದೇನಾಗಬಹುದು ಎಂಬ ಕುತೂಹಲ.

 ‘ಸರ್, ಎಲ್ಲಾ ಕಂಟ್ರೋಲ್ ಆಗ್ಹೋಯ್ತು...’ ಎಂದು ತಾವೇ ಗಲಭೆ ನಿಯಂತ್ರಿಸಿದ ಠೀವಿಯಲ್ಲಿ ಪೋಸ್ ಕೊಡುತ್ತಾ ಸರ್ಕಲ್ ಇನ್ಸ್‌ಪೆಕ್ಟರ್ ನಿಂತರು. ‘ರೀ... ಸ್ಟಂಟ್ ಹೊಡೀಬೇಡ್ರಿ... ನಿಮ್ಮ ಮೇಲೆ ಒಂದು ಹನಿ ಮಳೆಯೂ ಬಿದ್ದಿಲ್ಲ. ಏನು ಕಡಿದು ಕಟ್ಟೆ ಹಾಕಿದ್ದೀರಿ ಅಂತ ಗೊತ್ತಾಗ್ತಿದೆ. ಮುಖ ತೋರಿಸಬೇಡಿ, ಹೋಗಿ’ ಎಂದು ಡಿಸಿಪಿ ರೇಗಿದರು. ಆಗ ಶೌಕತ್ ಅಲಿ ಹೇಳಿದರು: ‘ನಾವು ಮಾಡುವ ಕರ್ಮಕ್ಕೆ ಪ್ರತಿಫಲವೂ ಬೇಗ ಸಿಗುತ್ತದೆ, ನೋಡಿ’!
*
ಗುಂಡೂರಾವ್ ಆಗ ಮುಖ್ಯಮಂತ್ರಿ. ಸಾಹಿತಿ, ಕಲಾವಿದರು ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ಕಾಲ. ಕಬ್ಬನ್ ಪಾರ್ಕ್ ಬಳಿ ಮೆರವಣಿಗೆ ಬಂತು. ಡಾ.ರಾಜ್‌ಕುಮಾರ್ ಅದರ ನೇತೃತ್ವ ವಹಿಸಿದ್ದರಿಂದ ದೊಡ್ಡ ಜನಸ್ತೋಮ ಸೇರಿತ್ತು. ಗೋಪಾಲಗೌಡ ಸರ್ಕಲ್‌ನಲ್ಲಿ ವೇದಿಕೆ ಮೇಲೆ ಮೊದಲು ಚಳವಳಿಯ ಮುಖಂಡರೆಲ್ಲಾ ಭಾಷಣ ಮಾಡುವುದು, ಆಮೇಲೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದು ಎಂದು ನಿಗದಿಯಾಗಿತ್ತು. ವೇದಿಕೆ ಮೇಲೆ ರಾಜ್‌ಕುಮಾರ್ ಕೂಡ ಇದ್ದರು.

ಜಿ.ನಾರಾಯಣಕುಮಾರ್ ಭಾಷಣ ಶುರುಮಾಡಿದರು. ಅಷ್ಟರಲ್ಲಿ ಮುಖ್ಯಮಂತ್ರಿ ಕಚೇರಿಯಿಂದ, ‘ರಾಜ್‌ಕುಮಾರ್ ಜೊತೆಗೆ ಹತ್ತು ಜನರನ್ನು ಈಗಲೇ ಕರೆತನ್ನಿ’ ಎಂಬ ಸಂದೇಶ ಬಂತು. ಹಠಾತ್ತಾಗಿ ರಾಜ್‌ಕುಮಾರ್ ಅವರನ್ನು ಭಾಷಣದ ಮಧ್ಯೆ ಎಬ್ಬಿಸಿಕೊಂಡು ಹೋಗುವುದು ಅಪಾಯಕ್ಕೆ ಇಂಬುನೀಡುತ್ತದೆಂಬುದು ಶೌಕತ್ ಅಲಿ ಅವರಿಗೆ ಗೊತ್ತಿತ್ತು. ಆ ಮೆರವಣಿಗೆ ನಿಯಂತ್ರಿಸಲು ಸಜ್ಜಾಗಿದ್ದ ನಮಗೆಲ್ಲಾ ಅವರು ಮೊದಲೇ ಈ ಬಗ್ಗೆ ಸೂಚನೆಯನ್ನೂ ನೀಡಿದ್ದರು. ಮೆಲ್ಲಗೆ ಹೋಗಿ ರಾಜ್‌ಕುಮಾರ್ ಕಿವಿಯಲ್ಲಿ ಮುಖ್ಯಮಂತ್ರಿ ಹೇಳಿ ಕಳುಹಿಸಿರುವ ವಿಷಯವನ್ನು ಪ್ರಸ್ತಾಪಿಸಿ, ಮೈಕ್‌ನಲ್ಲಿ ಅನೌನ್ಸ್ ಮಾಡಿ ವೇದಿಕೆ ಇಳಿಯಲು ಸಜ್ಜಾಗಿರೆಂದು ನಾನೇ ಹೇಳಬೇಕಿತ್ತು. ಆ ಕೆಲಸವನ್ನು ಶೌಕತ್ ಅಲಿ ನನಗೆ ವಹಿಸಿದ್ದರು. ಒಂದು ಬದಿಯಿಂದ ನಾನು ವೇದಿಕೆ ಹತ್ತುವಷ್ಟರಲ್ಲಿ, ಇನ್ನೊಂದು ಕಡೆಯಿಂದ ಬೇರೆ ಯಾರೋ ಪೊಲೀಸರು ಬಂದು ರಾಜ್‌ಕುಮಾರ್ ಅವರನ್ನು ಎಬ್ಬಿಸಿಬಿಟ್ಟರು. ಕೆಲವೇ ನಿಮಿಷಗಳಲ್ಲಿ ರಾಜ್‌ಕುಮಾರ್ ಹಾಗೂ ಕೆಲವರು ಹತ್ತಿರದಲ್ಲಿದ್ದ ಮೆಟಡೋರ್‌ನಲ್ಲಿದ್ದರು. ಕಾವಲಿಗಾಗಿ ನಾನೂ ಆ ಮೆಟಡೋರ್ ಹತ್ತಿದೆ.

ಯಾರೋ ಕಿಡಿಗೇಡಿಗಳು ರಾಜ್‌ಕುಮಾರ್ ಅವರನ್ನು ದಸ್ತಗಿರಿ ಮಾಡಲಾಗಿದೆ ಎಂದು ವದಂತಿ ಹಬ್ಬಿಸಿದರು. ಮೆಟಡೋರ್ ಸುತ್ತುವರಿದ ಜನ ಅನಾಮತ್ತಾಗಿ ಅದನ್ನು ನೆಲದಿಂದ ಮೇಲಕ್ಕೆತ್ತಿದರು. ಹೊರಗೆ ಗಲಭೆ ಶುರುವಾಯಿತು. ರಾಜ್‌ಕುಮಾರ್ ಹಾಗೂ ಅವರೊಟ್ಟಿಗೆ ಇದ್ದ ಸಾಹಿತಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದೆವು. ಆಮೇಲೂ ಗಲಭೆ ತಣ್ಣಗಾಗಲಿಲ್ಲ.

ಬಹುತೇಕ ಪೊಲೀಸ್ ಅಧಿಕಾರಿಗಳೆಲ್ಲ ಹೈಕೋರ್ಟ್ ಕಟ್ಟಡದ ಸುರಕ್ಷಿತ ಸ್ಥಳಗಳಿಗೆ ಓಡಿದರು. ಇನ್ನು ಕೆಲವರು ದೊಡ್ಡ ಮರಗಳ ಹಿಂದೆ ಅವಿತುಕೊಂಡರು. ಆದರೆ, ಶೌಕತ್ ಅಲಿ ಗಲಭೆಕೋರರಿಗೆ ಎದೆಗೊಟ್ಟೇ ನಡೆದರು. ಒಂದು ದಪ್ಪ ಕಲ್ಲು ಅವರ ಕಾಲಿಗೆ ಬಂದು ಬಿತ್ತು.ಆಗಲೂ ಜಗ್ಗದೆ ಯಾವುದೋ ಉರ್ದು ಗಾದೆ ಹೇಳಿಕೊಂಡು ಕುಂಟುತ್ತಲೇ ಮುನ್ನುಗ್ಗಿದರು. ಬಿ.ಟಿ.ಚೌಹಾಣ್, ನಾನು, ಶಿವಾರೆಡ್ಡಿ, ಹಾಲ್ತೊರೆ ರಂಗರಾಜನ್ ಪ್ರಕಾಶ್, ಸಿ.ಎಂ.ನಾಯ್ಡು ಅವರ ಸುತ್ತ ವ್ಯೆಹ ರಚಿಸಿ ಮತ್ತೆ ಎಡವಟ್ಟು ಆಗದಂತೆ ಕಾಪಾಡಿದೆವು. ‘ಅಲ್ಲಿ ನೋಡಿ... ಹುಲಿಗಳೆಲ್ಲಾ ಬೋನಿನಲ್ಲಿ ಬಚ್ಚಿಟ್ಟುಕೊಂಡಿವೆ’ ಎಂದು ಹೆದರಿ ಓಡಿದ ಅಧಿಕಾರಿಗಳನ್ನು ವ್ಯಂಗ್ಯ ಮಾಡಿದರು.

ಇನ್ನೊಮ್ಮೆ ಟ್ಯಾನರಿ ರಸ್ತೆಯಲ್ಲಿ ಎತ್ತಿನಗಾಡಿಗೆ ಆಟೋರಿಕ್ಷಾದವನು ತಾಗಿಸಿದ ಕಾರಣಕ್ಕೆ ಕೋಮುಗಲಭೆ ಶುರುವಾಯಿತು. ಮೂರ್ನಾಲ್ಕು ದಿನ ಅಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ. ನಾವಲ್ಲದೆ ರಿಸರ್ವ್ ಪೊಲೀಸರು ಕೂಡ ಅಲ್ಲಿದ್ದರು. ಗಲಭೆ ನಡೆದಾಕ್ಷಣ ಕಾಲಿಗೆ ಬೂಟು ಕಟ್ಟಿಕೊಂಡು ಹೊರಟರೆ, ಪರಿಸ್ಥಿತಿ ಶಾಂತವಾದ ನಂತರವಷ್ಟೆ ಅವರು ಬೂಟು ಬಿಚ್ಚುವುದು ಸಾಧ್ಯ. ರಿಸರ್ವ್ ಪೊಲೀಸರದ್ದು ಹೈರಾಣಾಗಿಸುವ ಕೆಲಸ. ಟ್ಯಾನರಿ ರಸ್ತೆಯಲ್ಲಿ ಗಲಭೆ ಶುರುವಾಗಿ ಮೂರನೇ ದಿನವಾಗಿತ್ತು. ಆಗಿನ್ನೂ ಪರಿಸ್ಥಿತಿ ತಿಳಿಯಾಗುತ್ತಿತ್ತು.

ಖಡಕ್ ಎಂದೇ ಹೆಸರಾಗಿದ್ದ ಕಮಿಷನರ್ ನಿಜಾಮುದ್ದೀನ್ ಅಲ್ಲಿಗೆ ಬಂದರು. ಅವರನ್ನು ಗಲಭೆ ನಡೆದ ಜಾಗಕ್ಕೆ ಕೊಂಡೊಯ್ದವನು ನಾನೇ. ನನ್ನ ಹಿಂದೆ ಶೌಕತ್ ಅಲಿ ಇದ್ದರು. ಎದುರಲ್ಲಿ ರಿಸರ್ವ್ ಪೊಲೀಸ್ ವ್ಯಾನ್ ನಿಂತಿತ್ತು. ಅದರಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು. ಅದನ್ನು ಕಂಡವರೇ ಶೌಕತ್ ಅಲಿ ನನ್ನ ಬೆನ್ನು ತಿವಿಯತೊಡಗಿದರು. ಆದರೆ, ನಾನು ಇಸ್ಪೀಟಾಟ ನಿಲ್ಲಿಸುವ ಸ್ಥಿತಿಯಲ್ಲಿ ಇರಲಿಲ್ಲ.ಕಮಿಷನರ್ ಅದನ್ನು ನೋಡಿದ್ದೇ ಕೆಂಡಾಮಂಡಲವಾದರು.

‘ವಾಟ್ ಸಾರ್ಟ್ ಆಫ್ ಎಸಿಪಿ ಆರ್ ಯೂ?’ (ನೀನ್ಯಾವ ಎಸಿಪಿ)- ಶೌಕತ್ ಅಲಿಯವರಿಗೆ ಕಮಿಷನರ್ ಹಾಕಿದ ಮೊದಲ ಪ್ರಶ್ನೆ.
‘ಸರ್... ಎಸಿಪಿ, ಫ್ರೇಜರ್‌ಟೌನ್...’ -ತುಸುವೂ ಬೇಸರವಿಲ್ಲದೆ ಶೌಕತ್ ಅಲಿ ಉತ್ತರಿಸಿದರು. ಆಮೇಲಿನ ಅವರಿಬ್ಬರ ಸಂಭಾಷಣೆಯೇ ಮಜವಾದದ್ದು. ಕೇಳಿ...

ಕಮಿಷನರ್: ‘ಫನ್ನಿ ಫೆಲೋ’
ಶೌಕತ್ ಅಲಿ: ‘ಎಸ್, ಸರ್’
ಕಮಿಷನರ್: ‘ವ್ಯಾನಲ್ಲಿ ಕೂತು ಇಸ್ಪೀಟಾ ಆಡೋದು?’
ಶೌಕತ್ ಅಲಿ: ‘ಸರ್, ವ್ಯಾನಲ್ಲಿ ಫುಟ್‌ಬಾಲ್ ಆಡೋಕೆ ಆಗೋಲ್ಲ. ಅದಕ್ಕೇ ಇಸ್ಪೀಟ್ ಆಡ್ತಾ ಇದಾರೆ...’
ಅವರು ಹೀಗೆ ಚಟಾಕಿ ಹಾರಿಸಿದ್ದೇ ಕಮಿಷನರ್ ಮುಖದ ಕೋಪ ಓಡಿಹೋಯಿತು. ಅಲ್ಲಿದ್ದವರೆಲ್ಲರೂ ಗೊಳ್ಳೆಂದು ನಕ್ಕಿದ್ದೇ ನಕ್ಕಿದ್ದು.

ಸಿಒಡಿಯಲ್ಲಿ ಎಸ್ಪಿ ಆಗಿ ಕೆಲಸ ನಿರ್ವಹಿಸಿದ ಮೇಲೆ ಶೌಕತ್ ಅಲಿ ನಿವೃತ್ತರಾದದ್ದು. ನಿವೃತ್ತಿಯ ನಂತರ ಅವರು ಸಂಬಂಧಿಕರನ್ನು ನೋಡಲೆಂದು ಅಮೆರಿಕಕ್ಕೆ ಹೊರಟರು. ವೀಸಾ ಪಡೆಯಲು ಚೆನ್ನೈಗೆ ಹೋದರು. ಅಲ್ಲಿ ಪ್ರಶ್ನೆಯ ಮೇಲೆ ಪ್ರಶ್ನೆ. ಹಾಗೆ ಎದುರಾದ ಪ್ರಶ್ನೆಗಳಲ್ಲಿ ‘ಸಿಒಡಿ ಎಂದರೇನು’ ಎಂಬುದೂ ಒಂದು. ಆ ಕ್ಷಣದಲ್ಲಿ ಶೌಕತ್ ಅಲಿಯವರಿಗೆ ಸಿಒಡಿ ಎಂದರೇನು ಎಂಬುದು ಮರೆತುಹೋಯಿತಂತೆ. ಅಲ್ಲಿಗೆ ವೀಸಾ ಕಥೆ ಗೋವಿಂದಾ ಎಂದು ನಾನಂದುಕೊಂಡೆ. ಆದರೆ, ಹಾಗೆ ಆಗಿರಲಿಲ್ಲ. ಶೌಕತ್ ಅಲಿ ಆ ಪ್ರಶ್ನೆಗೆ ಉತ್ತರಿಸಿದರು. ‘ಕೋರ್ ಆಫ್ ಡಿಟೆಕ್ಟಿವ್’ ಎಂಬುದರ ಬದಲಿಗೆ ಅವರು ‘ಸಿಡಿ ಮೀನ್ಸ್ ಚೀಫ್ ಆಫ್ ಡಿಟೆಕ್ಟಿವ್’ ಎಂದಿದ್ದರು. ಅಲ್ಲಿದ್ದವರು ಅದೇ ಉತ್ತರ ಸರಿ ಎಂದುಕೊಂಡು ಅವರಿಗೆ ಹತ್ತು ವರ್ಷಕ್ಕೆ ವೀಸಾ ನೀಡಿದ್ದರು. ಈ ಘಟನೆಯನ್ನು ಅನೇಕ ಸಲ ಶೌಕತ್ ಅಲಿ ಚಿತ್ರವತ್ತಾಗಿ ಬಣ್ಣಿಸಿದ್ದಾರೆ. ಅಂಥ ಅಧಿಕಾರಿಗಳೇ ವಿರಳ ಎನ್ನುವ ಕಾಲವಿದು.

ಮುಂದಿನ ವಾರ: ಸಮಾಜಸೇವೆಯ ಸೋಗಿನವರ ರಕ್ಷಣೆಯ ಖಯಾಲಿ

ಶಿವರಾಂ ಅವರ ಮೊಬೈಲ್ ನಂಬರ್ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT