ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಗುಂಡ್ಲುಪೇಟೆ ತಾಲ್ಲೂಕಿನ ಬೆಳೆಗಾರರಿಗೆ ನಷ್ಟ

ಓಣಂ: ಹೂವಿಗೆ ಬೇಡಿಕೆ ಕುಸಿತ, ದರವೂ ಕಡಿತ

Published:
Updated:
Prajavani

ಚಾಮರಾಜನಗರ: ಕೇರಳದ ವಿವಿಧ ಕಡೆಗಳಲ್ಲಿ ಈ ವರ್ಷವೂ ಉಂಟಾದ ಪ್ರವಾಹ, ಗುಂಡ್ಲುಪೇಟೆ ತಾಲ್ಲೂಕಿನ ಹೂವು ಬೆಳೆಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಕೇರಳದ ಪ್ರಮುಖ ಹಬ್ಬವಾದ ಓಣಂನ ಸಂದರ್ಭದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬೆಳೆಯಲಾಗುವ ಹೂವುಗಳು ಅದರಲ್ಲೂ ವಿಶೇಷವಾಗಿ ಚೆಂಡುಹೂವಿಗೆ ಭಾರಿ ಬೇಡಿಕೆ ಇರುತ್ತದೆ. ಹೂವಿನ ರಂಗೋಲಿ (ಪೂಕಳಂ) ಹಬ್ಬ ಓಣಂ ಅನ್ನು ಗುರಿಯಾಗಿಸಿಕೊಂಡು ವಿವಿಧ ಹೂವುಗಳನ್ನು ಬೆಳೆಯುವ ನೂರಾರು ರೈತರು ತಾಲ್ಲೂಕಿನಲ್ಲಿದ್ದಾರೆ.

ಕಳೆದ ವರ್ಷದಂತೆ ಈ ಸಲವೂ ಕೇರಳದ ಮಂದಿಯಿಂದ ಹೂವುಗಳಿಗೆ ಬೇಡಿಕೆ ಇಲ್ಲದೆ ಇರುವುದರಿಂದ ದರ ಕುಸಿದಿದ್ದು, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. 

ಓಣಂ ಸಮಯದಲ್ಲಿ 10ರಿಂದ 15 ದಿನಗಳ ಕಾಲ ಚೆಂಡುಹೂವು ಹಾಗೂ ಇತರ ಹೂವುಗಳಿಗೆ ಉತ್ತಮ ದರ ಇರುತ್ತದೆ. ಕಳೆದ ವರ್ಷ ಕೇರಳದಲ್ಲಿ ಭೀಕರ ಪ್ರವಾಹ ಉಂಟಾಗಿದ್ದರಿಂದ  ಬೆಲೆ ನೆಲಕ್ಕಚ್ಚಿತ್ತು. ಈ ಬಾರಿಯೂ ರಾಜ್ಯದ ಗಡಿಗೆ ಹೊಂದಿಕೊಂಡಂತಿರುವ ವಯನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಹಾಗಾಗಿ, ಬೇಡಿಕೆ ಕಡಿಮೆಯಾಗಿದೆ. ‌ಬೆಲೆಯೂ ಸಿಗುತ್ತಿಲ್ಲ.

ಈ ವರ್ಷ ಸೆಪ್ಟೆಂಬರ್‌ ಓಣಂ ಆರಂಭವಾಗಿದ್ದು, 13ರ ವರೆಗೆ ನಡೆಯಲಿದೆ. 11ರಂದು ತಿರು ಓಣಂ ಆಚರಣೆ ಇದೆ. ಹಬ್ಬ ಮುಗಿಯಲು ಇನ್ನು ನಾಲ್ಕೈದು ದಿನಗಳು ಮಾತ್ರ ಇದ್ದು, ಹೂವುಗಳಿಗೆ ಬೇಡಿಕೆ ಇನ್ನೂ ಬಂದಿಲ್ಲ‌ ಎಂಬುದು ರೈತರ ಅಳಲು.

ಹೊಂಗಹಳ್ಳಿ, ಬರಗಿ, ಚೆನ್ನಮಲ್ಲಿಪುರ, ಬೀಮನಬೀಡು, ಮದ್ದೂರು, ಬೇರಂಬಾಡಿ, ಗೋಪಾಲಪುರ, ಕನ್ನೇಗಾಲ ಭಾಗದಲ್ಲಿ ಚೆಂಡು ಹೂ ಬೆಳೆಯಲಾಗಿದೆ. 800 ಹೆಕ್ಟೇರ್‌ ಜಾಗದಲ್ಲಿ ಚೆಂಡು ಹೂ ಬಿತ್ತನೆ ಮಾಡಲಾಗಿದೆ. 

ಮುಂಗಾರು ಪೂರ್ವ ಹಾಗೂ ಮುಂಗಾರು ಆರಂಭದಲ್ಲಿ ಕಡಿಮೆ ಮಳೆಯಾಗಿದ್ದ‌ರಿಂದ ತಾಲ್ಲೂಕಿನಲ್ಲಿ ಹೂವಿನ ಕೃಷಿಗೆ ತೊಂದರೆಯಾಗಿತ್ತು. ಜುಲೈ ಕೊನೆಗೆ ಹಾಗೂ ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗಿದ್ದರಿಂದ ಉತ್ತಮ ಫಸಲು ಬಂದಿದೆ.

‘ಒಂದು ಎಕರೆ ಜಮೀನಿನಲ್ಲಿ ಚೆಂಡು ಹೂ, ಕಾಶಿಗೊಂಡೆ ಸೇರಿದಂತೆ ಇನ್ನಿತರ ಹೂವು ಬೆಳೆದಿದ್ದೆ. ಪ್ರತಿ ವರ್ಷ ಓಣಂ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ಭಾಗದಲ್ಲಿ 1,500ರಿಂದ 2,500 ಎಕರೆ ಪ್ರದೇಶದಲ್ಲಿ ರೈತರು ಹೂವುಗಳನ್ನು ಬೆಳೆಯುತ್ತಾರೆ. ಕಟಾವು ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಾರಾಟಕ್ಕೆ ಇಡುತ್ತೇವೆ. ಕೇರಳದವರು ಅಥವಾ ವ್ಯಾಪಾರಿಗಳು ಬಂದು ಖರೀದಿಸುತ್ತಾರೆ. ಕಳೆದ ವರ್ಷ ಪ್ರವಾಹ ಉಂಟಾಗಿದ್ದರಿಂದ ಬೇಡಿಕೆ ಇರಲಿಲ್ಲ. ಈ ವರ್ಷವೂ ಅದೇ ಸ್ಥಿತಿ ಇದೆ. ಚೆಂಡು ಹೂವು ಕೆಜಿಗೆ ₹ 6–₹ 7ಕ್ಕೆ ಮಾರಾಟವಾಗುತ್ತಿದೆ. ಮೂರು ವರ್ಷಗಳ ಹಿಂದೆ ₹ 120ರ ವರೆಗೆ ಮಾರಾಟ ಮಾಡಿದ್ದೇವೆ’ ಎಂದು ಕನ್ನೇಗಾಲದ ಬೆಳೆಗಾರ ಚಿಕ್ಕಬಸವಯ್ಯ  ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರವಾಹ ಸ್ಥಿತಿ ಇದ್ದ ಪ್ರದೇಶಗಳಲ್ಲಿ ಕಡಿಮೆ ಬೆಲೆ ಇದೆ. ಉಳಿದ ಕಡೆಗಳಲ್ಲಿ ಉತ್ತಮ ದರ ಸಿಗುತ್ತಿದೆ ಎಂದು ಇನ್ನೂ ಕೆಲವು ರೈತರು ಹೇಳುತ್ತಾರೆ.

‘ಕೆಲವು ಬೆಳೆಗಾರರು ಹೂವುಗಳನ್ನು ಮದ್ಯವರ್ತಿಗಳು ಅಥವಾ ವ್ಯಾಪಾರಿಗಳಿಗೆ ಕೊಟ್ಟರೆ, ಇನ್ನು ಕೆಲವರು ನೇರವಾಗಿ ಕೇರಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಅವರಿಗೆ ಹೆಚ್ಚು ಲಾಭ ಆಗುತ್ತದೆ’ ಎಂದು ರೈತ ರಾಘವೇಂದ್ರ ತಿಳಿಸಿದರು.

ಬೇಡಿಕೆ ಇಲ್ಲ: ‘ಪ್ರತಿ ವರ್ಷ ಓಣಂ ಸಂದರ್ಭದಲ್ಲಿ ಚೆಂಡು ಹೂ, ಸೇವಂತಿಗೆ, ಕಾಡುಮಲ್ಲಿಗೆ, ಗುಲಾಬಿ ಸೇರಿದಂತೆ ವಿವಿಧ ಬ‌ಣ್ಣಗಳ ಹೂವುಗಳಿಗೆ ಬೇಡಿಕೆ ಇರುತ್ತದೆ. ಆದರೆ, ಈ ವರ್ಷ ಕಡಿಮೆಯಾಗಿದೆ. ಚೆಂಡು ಹೂ ಕೆಜಿಗೆ ₹ 15ಕ್ಕೆ ಮಾರಾಟ ವಾಗುತ್ತಿದೆ’ ಎಂದು ವ್ಯಾಪಾರಿ ಗೋಪಾಲ್‌ ‘ಪ‍್ರಜಾವಾಣಿ’ಗೆ ತಿಳಿಸಿದರು. 

**

ಮಳೆ ಕೊರತೆಯಿಂದ ಚೆಂಡು ಹೂವಿನ ಕೃಷಿ ಸೊರಗಿತ್ತು. ತಿಂಗಳಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಫಸಲು ಉತ್ತಮವಾಗಿದೆ
- ಶಿವಲಿಂಗಪ್ಪ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

**

₹ 1.5 ಲಕ್ಷ ಖರ್ಚು ಮಾಡಿದ್ದೆ. ಸಾಲವನ್ನೂ ಮಾಡಿದ್ದೆ. ಆದರೆ, ಈಗ ಬೇಡಿಕೆಯೂ ಇಲ್ಲ, ಬೆಲೆಯೂ ಕಡಿಮೆಯಾಗಿದೆ. ನಷ್ಟವಾಗುತ್ತಿದೆ
- ಚಿಕ್ಕಬಸವಯ್ಯ, ಕನ್ನೇಗಾಲದ ರೈತ

Post Comments (+)