ಮಂಗಳವಾರ, ನವೆಂಬರ್ 12, 2019
28 °C

ಸಮೃದ್ಧಿಯ ಹಬ್ಬ ಓಣಂ

Published:
Updated:
Prajavani

ಐಶ್ವರ್ಯ, ಸಮೃದ್ದಿಯ ಹಬ್ಬವಾದ ಓಣಂ ಕೇರಳಿಗರಿಗೆ ವಿಶೇಷವಾದುದು. ಯಾವುದೇ ರಾಜ್ಯ, ದೇಶದಲ್ಲಿ ಇರಲಿ ಮಲಯಾಳಿಗಳು ಓಣಂ ಹಬ್ಬವನ್ನು ಆಚರಿಸುತ್ತಾರೆ. ಎಲ್ಲ ಜಾತಿ–ಧರ್ಮದವರು ಈ ಹಬ್ಬವನ್ನು ಆಚರಿಸುವುದರಿಂದ ಇದು ಸಾಮರಸ್ಯದ ನಾಡಹಬ್ಬ.
ಸಿಂಹಮಾಸದ ಹಸ್ತ (ಅತ್ತಂ) ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಆಚರಣೆಯಲ್ಲಿರುತ್ತದೆ. ಅತ್ತಂ ಪತ್ತಿನ್ ಪೊನ್ನೋಣಂ - ಅಂದರೆ ಹತ್ತನೇ ದಿನ ಶ್ರಾವಣ ನಕ್ಷತ್ರದಂದು ತಿರುವೋಣಂ.

ಮಹಾದಾನಿ ಮಹಾಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಸಿಂಹಮಾಸದ ಶ್ರಾವಣ ನಕ್ಷತ್ರದಂದು ಭೂಲೋಕಕ್ಕೆ ಬರುತ್ತಾನೆಂಬುದು ಕೇರಳೀಯರ ಅಚಲ ನಂಬಿಕೆ. ಹಾಗಾಗಿ ಅತ್ತಂನಿಂದ ಮನೆಯಲ್ಲಿ ಹೂವಿನ ರಂಗೋಲಿ ಹಾಕಿ ಮಹಾಬಲಿಯ ಆಗಮನಕ್ಕಾಗಿ ಮಲಯಾಳಿಗಳು ಕಾಯುತ್ತಿರುತ್ತಾರೆ.

ಈ ವರ್ಷ ಸೆಪ್ಟೆಂಬರ್ 10 ಓಣಂ ಮೊದಲನೇ ದಿನ (ಉತ್ರಾಡಂ), ಸೆಪ್ಟೆಂಬರ್ 11 ಎರಡನೇ ಓಣಂ (ತಿರುವೋಣಂ), ಸೆಪ್ಟೆಂಬರ್ 12 ಮೂರನೇ ಓಣಂ (ಅವಿಟ್ಟಂ) ಮತ್ತು ಸೆಪ್ಟೆಂಬರ್ 13 ನಾಲ್ಕನೇ ಓಣಂ (ಚದಯಂ) ಆಚರಿಸಲಾಗುತ್ತಿದೆ.

ಆಷಾಢದ ಮಳೆಯಬ್ಬರ ಮುಗಿದು ವ್ಯಾಪಾರ ಆರಂಭವಾಗುವ ಕಾಲವಾಗಿದೆ ಶ್ರಾವಣ. ಈ ಶ್ರಾವಣದಿಂದಲೇ ಓಣಂ ಎಂಬ ಪದ ಹುಟ್ಟಿತು ಎಂದು ಹೇಳಲಾಗುತ್ತದೆ.

ಐತಿಹ್ಯ
ಕೇರಳವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದ. ಅವನಲ್ಲಿಗೆ ವಾಮನರೂಪದಲ್ಲಿ ಬಂದ ಮಹಾವಿಷ್ಣು ಮೂರು ಪಾದದಷ್ಟು ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಎರಡು ಪಾದಗಳಲ್ಲಿ ಅವನು ಭೂಮಿ ಆಕಾಶವನ್ನು ಅಳೆದು ‘ಮೂರನೇ ಪಾದವನ್ನು ಎಲ್ಲಿಡಲಿ’ ಎಂದು ಕೇಳುತ್ತಾನೆ. ಆಗ ‘ನನ್ನ ತಲೆಯ ಮೇಲೆ ಪಾದವನ್ನು ಇಡು’ ಎನ್ನುತ್ತಾನೆ, ಮಹಾಬಲಿ. ಆಗ ವಾಮನನು ಮಹಾಬಲಿಯನ್ನು ಪಾತಾಳಕ್ಕೆ ತಳ್ಳುತ್ತಾನೆ. ಮಹಾಬಲಿಯ ದಾನಗುಣವನ್ನು ಮೆಚ್ಚಿದ ವಿಷ್ಣು, ಪ್ರತಿವರ್ಷ ತನ್ನ ನಾಡಿನ ಜನರನ್ನು ನೋಡಲು ಬರುವಂಥ ವರವನ್ನು ಅವನಿಗೆ ನೀಡುತ್ತಾನೆ. ತಿರುವೋಣಂನಂದು ಮಹಾಬಲಿಯು ಕೇರಳನಾಡನ್ನು ನೋಡಲು ಬರುತ್ತಾನೆ ಎಂಬುದು ನಂಬಿಕೆ. ಮಹಾಬಲಿಯ ಸ್ವಾಗತಕ್ಕಾಗಿ ಮನೆಯಂಗಳದಲ್ಲಿ ಹೂವಿನ ರಂಗೋಲಿಯನ್ನು ಬಿಡಿಸಿ ಹಬ್ಬದ ಆಚರಣೆಯನ್ನು ಶುರು ಮಾಡಲಾಗುತ್ತದೆ.

ಪೂಕ್ಕಳಂ ಮತ್ತು ಓಣಂ ಸದ್ಯ

ಓಣಂ ಹಬ್ಬದ ವಿಶೇಷ ಅಂದರೆ ಪೂಕ್ಕಳಂ ಮತ್ತು ಓಣಂ ಸದ್ಯ. ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ಬಗೆಬಗೆಯ ಹೂವುಗಳಿಂದ ಮಾಡಿದ ಪೂಕ್ಕಳಂ (ರಂಗೋಲಿ) ಸ್ವಾಗತವನ್ನು ಕೋರುವ ಸಂಕೇತ. ಓಣಂ ಹಬ್ಬದಾಚರಣೆ ತುಂಬೆ ಹೂವಿನಿಂದ ಶುರುವಾಗುತ್ತದೆ.

ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ ದೇವರ ಕೋಣೆಗೆ ಕಿಂಡಿಯಲ್ಲಿ ನೀರು ತಂದು ಅದರ ಮೇಲೆ ಎಲೆಯಲ್ಲಿ ತುಂಬೆಹೂವನ್ನಿಟ್ಟು ಪ್ರಾರ್ಥಿಸಲಾಗುತ್ತದೆ. ಪೂಕ್ಕಳಂನಲ್ಲಿಯೂ ತುಂಬೆಹೂ ಇರಲೇ ಬೇಕು. ‘ಮನೆಯಲ್ಲಿರುವ ವಸ್ತುಗಳನ್ನು ಮಾರಿಯಾದರೂ ಓಣಂ ಆಚರಿಸಬೇಕು’ ಎಂಬ ನಾಣ್ನುಡಿ ಇದೆ. ಹಾಗಾಗಿ ಎಷ್ಟೇ ಕಷ್ಟವಿದ್ದರೂ ಕೇರಳಿಗರು ಓಣಂ ಹಬ್ಬವನ್ನು ಆಚರಿಸುತ್ತಾರೆ. ತಿರುವೋಣಂ ಹಬ್ಬದ ತಯಾರಿಗಾಗಿ ಉತ್ರಾಡಂ ದಿನ ಖರೀದಿಯ ಭರಾಟೆ ಇರುತ್ತದೆ. ಈ ಕೊನೆ ಗಳಿಗೆಯಲ್ಲಿ ವಸ್ತುಗಳನ್ನು ಖರೀದಿಸುವುದಕ್ಕಾಗಿ ಓಡಾಡುವುದನ್ನು ಉತ್ರಾಡಪಾಚ್ಚಿಲ್ ಎನ್ನುತ್ತಾರೆ.

ಓಣಂ ಸದ್ಯಕ್ಕೆ ಹೆಚ್ಚಿನ ಮಹತ್ವವಿದೆ. ಅನೇಕ ಬಗೆಯ ಭಕ್ಷ್ಯಗಳನ್ನು ಬಾಳೆಲೆಯಲ್ಲಿ ಬಡಿಸಿ ಕುಟುಂಬದ ಸದಸ್ಯರೆಲ್ಲರೂ ಜತೆಯಾಗಿ ಉಣ್ಣುತ್ತಾರೆ. ಹಬ್ಬಕ್ಕೆ ಹೊಸ ಉಡುಗೆ (ಓಣಕ್ಕೋಡಿ) ತೊಟ್ಟು ಸಂಭ್ರಮಿಸುವ ಮಲಯಾಳಿಗಳಿಗೆ ಓಣಂ ಕೈ ನೀಟ್ಟಂ ವಿಶೇಷವಾದುದು. ಮನೆಯ ಹಿರಿಯರು ಕಿರಿಯರಿಗೆ ನೀಡುವ ಹಣವೇ ಕೈ ನೀಟ್ಟಂ.

ಹಬ್ಬದ ದಿನ ಮನೋರಂಜನೆಗಾಗಿ ಉಯ್ಯಾಲೆ, ಓಣಂ ತಲ್ಲ್ (ಪರಸ್ಪರ ಹೊಡೆದಾಡುವ ಆಟ), ಕಂಬ್ ವೆಲಿ (ಹಗ್ಗ ಎಳೆಯುವ ಆಟ)ಗಳನ್ನು ಆಡಲಾಗುತ್ತದೆ. ತಿರುವಾದಿರಕ್ಕಳಿ, ಕಥಕ್ಕಳಿ, ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕುಟುಂಬ, ನೆರೆಹೊರೆಯವರಲ್ಲೆರೂ ಜತೆಯಾಗಿ ಬೆರೆಯುತ್ತಾರೆ. ಹಬ್ಬದ ವೇಳೆ ಬರುವ ಪುಲಿಕ್ಕಳಿ (ಹುಲಿವೇಷ), ಮಹಾಬಲಿಯ ವೇಷದ ಮೆರವಣಿಗೆ, ದೋಣಿ ಸ್ಪರ್ಧೆಗಳು ವಿಶೇಷ ಆಕರ್ಷಣೆಯಾಗಿರುತ್ತವೆ. 

ಪ್ರತಿಕ್ರಿಯಿಸಿ (+)