ಪರಿಸರಸ್ನೇಹಿ ಮೂರ್ತಿಗೆ ಮಾತ್ರ ಅವಕಾಶ

7
ಸಾರ್ವಜನಿಕ ಗಣೇಶ ಚತುರ್ಥಿ

ಪರಿಸರಸ್ನೇಹಿ ಮೂರ್ತಿಗೆ ಮಾತ್ರ ಅವಕಾಶ

Published:
Updated:
Deccan Herald

ಬೆಂಗಳೂರು: ಈ ಬಾರಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಬಳಸುವ ಬಗ್ಗೆ ಸಂಘಟಕರಿಂದ ಮುಚ್ಚಳಿಕೆ ಬರೆಸಿಕೊಂಡು ಅನುಮತಿ ನೀಡಲು ಪಾಲಿಕೆ ನಿರ್ಣಯ ಕೈಗೊಂಡಿದೆ.

ಸಾರ್ವಜನಿಕ ಗಣೇಶ ಹಬ್ಬಕ್ಕೆಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ರೂಪಿಸುವ ಹಾಗೂ ಇದಕ್ಕೆ ಸಂಘ ಸಂಸ್ಥೆಗಳಿಂದ ಯಾವುದೇ ಶುಲ್ಕ ಪಡೆಯದಿರುವ ಬಗ್ಗೆಯೂ ಪಾಲಿಕೆ ಸಭೆಯಲ್ಲಿ ಮಂಗಳವಾರ ನಿರ್ಣಯ ಕೈಗೊಳ್ಳಲಾಯಿತು.

‘ಸಾರ್ವಜನಿಕವಾಗಿ ಹಬ್ಬ ಆಚರಿಸಲು ಬಿಬಿಎಂಪಿಯಿಂದ ಅನುಮತಿ ಪಡೆದ ಬಳಿಕ ಪೊಲೀಸ್‌ ಇಲಾಖೆ, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಗಳಿಂದಲೂ ಒಪ್ಪಿಗೆ ಪಡೆಯಬೇಕಿದೆ. ಇದಕ್ಕಾಗಿ ಅಲೆದಾಟ ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸಲಹೆ ನೀಡಿದರು.

‘ಈ ನಾಲ್ಕು ಇಲಾಖೆಗಳ ಅನುಮತಿ ಒಂದೇ ಕಡೆ ಸಿಗುವಂತೆ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಬಹುದು. ಪಾಲಿಕೆಗೆ ಕಟ್ಟಿಸಿಕೊಳ್ಳುವ ಶುಲ್ಕದಿಂದ ನಾವು ವಿನಾಯಿತಿ ನೀಡಬಹುದು. ಆದರೆ, ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕೆ ಬೆಸ್ಕಾಂನವರು ಕಟ್ಟಿಸಿಕೊಳ್ಳುವ ಶುಲ್ಕದಿಂದ ವಿನಾಯಿತಿ ನೀಡುವ ಬಗ್ಗೆ ಆ ಸಂಸ್ಥೆಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಪಾಲಿಕೆ  ಮೈದಾನ ಹೊರತುಪಡಿಸಿ ಉಳಿದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈ ವರ್ಷ ಶುಲ್ಕ ವಿನಾಯಿತಿ ಸಿಗಲಿದೆ. ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಾದರೆ ಸಂಘಟಕರು ನೆಲಬಾಡಿಗೆ ಪಾವತಿಸಬೇಕಾಗುತ್ತದೆ.

 

ಗಣೇಶ ಉತ್ಸವ ಸಮಿತಿ ಪ್ರತಿಭಟನೆ

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಪಾಲಿಕೆ ಅನಗತ್ಯ ನಿಯಮಗಳನ್ನು ವಿಧಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯವರು ಭಾರಿಗಾತ್ರದ ಗಣೇಶ ಮೂರ್ತಿಯನ್ನು ಪಾಲಿಕೆ ಆವರಣಕ್ಕೆ ತಂದು ಮಂಗಳವಾರ ಪ್ರತಿಭಟನೆ ನಡೆಸಿದರು. 

‘ಈ ಹಬ್ಬ ಆಚರಣೆಗೆ ಅಗತ್ಯವಿರುವ ಎಲ್ಲ ರೀತಿಯ ಪರವಾನಗಿಗಳು ಬೆಂಗಳೂರು ಒನ್‌ ಕಚೇರಿಗಳಲ್ಲೇ ಲಭ್ಯವಾಗುವಂತೆ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. ಮೂರ್ತಿ ವಿಸರ್ಜಿಸುವ ಕಲ್ಯಾಣಿಗಳಲ್ಲಿ ಬೆಳಕು, ಕುಡಿಯುವ ನೀರು, ಕ್ರೇನ್‌, ಜೆಸಿಬಿ ಹಾಗೂ ಸಹಾಯಕ ಸಿಬ್ಬಂದಿಯ ವ್ಯವಸ್ಥೆ ಒದಗಿಸಬೇಕು’ ಎಂದು ಸಮಿತಿಯ ಅಧ್ಯಕ್ಷ ಅಶ್ವಥನಾರಾಯಣ ಒತ್ತಾಯಿಸಿದರು.

ಹಗಲುವೇಷಧಾರಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

 

ಯಾರು ಏನೆಂದರು?

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿ ಬಳಕೆಗೆ ಅವಕಾಶ ನೀಡಬಾರದು. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ

– ಡಾ.ರಾಜು, ಬಿಜೆಪಿ ಸದಸ್ಯ

 

ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಬಗ್ಗೆ ಸಂಘಟಕರಿಂದ ಮುಚ್ಚಳಿಕೆ ಪಡೆಯಿರಿ. ಅದನ್ನು ಪಾಲಿಸದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ

– ಮುನಿರತ್ನ, ಶಾಸಕ

 

ಪಿಒಪಿ ತಯಾರಿಸಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ ಸಂಘಟಕರ ಮನವೊಲಿಸಿ. ಸಂಘಟಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದನ್ನು ಒಪ್ಪಲಾಗದು

–ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ

 

ಕಲ್ಯಾಣಿಗಳಲ್ಲಿ ಮೂರ್ತಿಗಳನ್ನು ಮುಳುಗಿಸಿದ ತಕ್ಷಣವೇ ಅವುಗಳನ್ನು ವಿಲೇವಾರಿ ಮಾಡಿ. ವಿರೂಪಗೊಂಡ ಮೂರ್ತಿಗಳು ಭಕ್ತರ ಭಾವನೆಗೆ ಧಕ್ಕೆ ಉಂಟುಮಾಡುತ್ತವೆ

–ಉಮೇಶ್‌ ಶೆಟ್ಟಿ, ಬಿಜೆಪಿ ಸದಸ್ಯ

 

 

 

 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !