ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದು ಬದುಕಿನ ಸಂಸ್ಕೃತಿ?

Last Updated 8 ಅಕ್ಟೋಬರ್ 2019, 20:14 IST
ಅಕ್ಷರ ಗಾತ್ರ

ಹಾಸನ ತಾಲ್ಲೂಕಿಗೆ ಸೇರಿದ ಆಲೂರು ಬಳಿ ಇದೆ ನಮ್ಮೂರು. ಈ ತಾಲ್ಲೂಕು, ಹೇಮಾವತಿ ನದಿಯ ಅಂಚು. ಇಲ್ಲಿ ಈಗ ಮಾನವನಿಗೂ ಆನೆ ಹಿಂಡಿಗೂ ಸಮರ. ಅವು, ಕಾಫಿ ತೋಟಕ್ಕೆ ಬರದಿರಲಿ ಎಂದು ಬೈನೆ, ಬಿದಿರು, ಹಲಸಿನ ಫಲಗಳ ಕತ್ತು ಕುಯ್ಯಲಾಗುತ್ತಿದೆ. ಭತ್ತದ ಬೆಳೆ ಕೈಬಿಡಲಾಗಿದೆ. ಇಡೀ ಮಲೆನಾಡು ಈಗ ಗಜಪಥ ಕತ್ತರಿಸಿ, ಅಡವಿ, ಸಸ್ಯಕುಲ ಸಂಹರಿಸಿ ಬೇಗುದಿಗೆ ಜಾರಿದೆ. ಈ ಸೀಮೆಗಳೀಗ ಗುಡ್ಡಸಮೇತ ಕುಸಿಯುತ್ತಿವೆ. ಕಾರಣ ಎಲ್ಲರಿಗೂ ತಿಳಿದದ್ದೆ. ಇದಕ್ಕೆ ಪೂರಕವಾಗಿ ಸೋಮವಾರಪೇಟೆಯ ನೆಂಟರೊಬ್ಬರು ಕೆಲವು ವಿಚಾರಗಳನ್ನು ಹೇಳಿದರು.

ಕಾಡಮಾವು, ಹವಳಿಗೆ ಇಂತಹವಕ್ಕೂ ಪರ್ಮಿಟ್ ಬೇಡ ಎಂದಿತು ಅರಣ್ಯ ಇಲಾಖೆ. ಈ ಹವಳಿಗೆಯು ಮಿದುಮರ. ಆಕಾಶಕ್ಕೆ ಎಗರಿದಂತೆ ನೇರ ಹೋಗಿ ಛತ್ರಿಯಂತೆ ಬಿಚ್ಚಿಕೊಳ್ಳುವ ಗುಣ. ಅಷ್ಟೇ ಹತ್ತಾರು ಅಡಿ ಆಳ ಹಾಗೂ ಸುತ್ತಳತೆಯಲ್ಲಿ ಊರಿ ನಿಲ್ಲುವ ಬಲ. ತೋಟಕ್ಕೆ, ಅಡವಿಗೆ, ಗುಡ್ಡಗಳ ಒದೆಗೆ ಹೇಳಿ ಮಾಡಿಸಿದ ಪ್ರಾಕೃತಿಕ ಬಲ. ಬೇಸಿಗೆಯಲ್ಲಿ ಎಲೆ ಚಿಗುರಿ, ಮಳೆಗಾಲದಲ್ಲಿ ಎಲೆ ಉದುರುವ ಕಾಫಿ, ಮೆಣಸು ಬೆಳೆಗೆ ಗೆಳೆಯ. ಈ ರೀತಿಯ ಸಾಂಪ್ರದಾಯಿಕ ಅರಣ್ಯ ಕುಲ ಮಲೆನಾಡಿಗಿತ್ತು ಎಂದು ಅವರದೇ ಭಾಷೆಯಲ್ಲಿ ವಿವರಿಸಿದರು.

ಅವಕ್ಕೆ ಬೆಂಬಲವಾಗಿ ಗಿಡಗಂಟಿಗಳು, ಬೋಳು ಗುಡ್ಡದ ಶೋಲಾ ಕಾಡುಗಳು ಇದ್ದವು. ಸಸ್ಯ, ಪ್ರಾಣಿಪಕ್ಷಿ, ಮಾನವ ಕುಲ ಜೀವಕೊಂಡಿಗಳಾಗಿದ್ದವು. ಇದು ಅರಣ್ಯ ಸತ್ಯ. ಅಡವಿ ಜ್ಞಾನವಿಲ್ಲದ ಐಎಫ್ಎಸ್ ಅಧಿಕಾರಿಗಳು ಹೇಳಿದಂತೆ, ಅರಿವಿಲ್ಲದ ಮಂತ್ರಿಗಳು ಕೇಳಿದರು. ಗುತ್ತಿಗೆದಾರರ ಗಂಟಿಗೆ ಮನಸೋತರು. ಎಂಥೆಂಥಾ ಮರಗಳು! ಬುರುಬುರನೆ ನೀರು ಹೀರಿ, ಬಿಸಿಲು ಹೀರಿ ಬೆಳೆದ ಭಾರಿ ಮರಗಳು ಉರುಳಿದವು. ಈ ಅಡವಿ ಸಂಕುಲದ ಕಣ್ಣೀರು, ನರಮನುಷ್ಯರು ಕಣ್ಣೀರು ಸುರಿಸುವಂತೆ ಮಾಡಿದೆ.

ಪ್ರಕೃತಿ ಮಾತೆಯ ಗರಗಸದಂತಹ ಹಲ್ಲು, ಮಾನವನ ಯಃಕಶ್ಚಿತ್ ಮಚ್ಚು, ಕೊಡಲಿ, ಗರಗಸಕ್ಕಿಂತ ಗಟ್ಟಿ. ಆಕೆ ಕಟಕಟನೆ ಹಲ್ಲು ಮಸೆಯುತ್ತಿದ್ದಾಳೆ. ಬೆಂಗಳೂರಿನ ಅರಣ್ಯ ಭವನದಲ್ಲಿ 225 ಐಎಫ್ಎಸ್ ಅಧಿಕಾರಿಗಳಿಗೆ ಜಾಗವಿಲ್ಲದೆ, ಇಲಿ ಬೋನಿನಂಥ ಚೇಂಬರುಗಳು. ಬಿಸಿಲೇರುವವರೆಗೆ ಬಂಗಲೆಯಲ್ಲಿ ಮಲಗಿ, ಸರ್ಕಾರಿ ಕಾರುಗಳಲ್ಲಿ ಬಂದಾಕ್ಷಣ ಕೆಳಹಂತದ ನೌಕರರು ಓಡಿ ಬಂದು ಲಿಫ್ಟ್ ಗುಂಡಿ ಒತ್ತಿ ರೊಯ್ಯನೆ ಮೇಲಕ್ಕೆ ಕಳುಹಿಸುತ್ತಾರೆ. ಇವರೆಲ್ಲರೂ ತುಂಡು ತುಂಡು ಮಹಾರಾಜರು. ಲಕ್ಷಾಂತರ ಸಂಬಳ, ಐಷಾರಾಮಿ ಜೀವನ. ಕಾಡು ಎಂದರೆ ಅವರ ಚರ್ಮಕ್ಕೆ ಅಲರ್ಜಿ. ಕೆಳಹಂತದ ವಾಚರ್, ಗಾರ್ಡ್, ಫಾರೆಸ್ಟರ್, ರೇಂಜರುಗಳದು ಮಿತಿ ಸಂಖ್ಯೆ. ಆನೆ ಓಡಿಸುತ್ತಾರೋ, ಒತ್ತುವರಿ ನೋಡುತ್ತಾರೋ, ಬೆಂಕಿ ಆರಿಸುತ್ತಾರೋ, ಸ್ಥಳೀಯರೊಡನೆ ಗುದ್ದಾಡುತ್ತಾರೋ...

ಮೇಲಧಿಕಾರಿಗಳಿಗೆ ಹಾಗೂ ಸಚಿವಾಲಯಕ್ಕೆ ಕಿವಿ ಮಂದ. ಅಂದೊಮ್ಮೆ ಅಡವಿ ಸಂಪತ್ತಿದ್ದಾಗ ರಾಜ್ಯಕ್ಕೊಬ್ಬರೇ ಚೀಫ್ ಕನ್ಸರ್ವೇಟರ್ ಇದ್ದರು. ಈಗ ತುಕಡಾ ತುಕಡಾ ವಿಭಾಗಕ್ಕೊಬ್ಬ ಐಎಫ್ಎಸ್ ಅಧಿಕಾರಿ. ಆಯಕಟ್ಟಿನ ಇಲಾಖೆಗಳನ್ನು ಹುಡುಕಿ ಹೋಗುವ ಡೆಪ್ಯುಟೇಷನ್ ಸಹಾ ಉಂಟು. ಇಲಾಖಾ ಸಂಪತ್ತು ನುಂಗಲು ಇಷ್ಟೊಂದು ಜನ ಬೇಕೇ? ಬೇಡ ಎನ್ನಲು ರಾಜಕೀಯ ಮುತ್ಸದ್ದಿತನ ಬೇಕು. ಅದೆಲ್ಲಿದೆ ಹೇಳಿ?!

ಅಲ್ಲಿ ಅಮೆಜಾನ್ ಹೊತ್ತಿ ಉರಿಯಿತು. ಅಮೆರಿಕದ ಕಂಪನಿಗಳು ಅಡವಿ ಸವರಿ ಸೋಯಾಬೀನ್ ಊರುತ್ತಿವೆ. ಇಲ್ಲಿ ರಾಜಕಾರಣವು ಸಹ್ಯಾದ್ರಿ, ಹಿಮಾದ್ರಿ, ಸುಂದರಬನ್ ಉಳಿಸಲು ಮುಂದಾಗುತ್ತಿಲ್ಲ. ಸಂರಕ್ಷಿತ ಪ್ರದೇಶ ಮಾಡಲು ಗುತ್ತಿಗೆದಾರರ ಚೀಲದಾಸೆ ಅಡ್ಡ ಬರುತ್ತಿದೆ. ಕಸ್ತೂರಿ ರಂಗನ್, ಗಾಡ್ಗೀಳ್ ವರದಿಗಳು ನನೆಗುದಿಗೆ ಬಿದ್ದಿವೆ. ವಿಶ್ವಸಂಸ್ಥೆ ಮೊನ್ನೆ ತಾನೇ ಟ್ರಂಪ್– ಮೋದಿ ಜೋಡಿಯನ್ನು ಬರಮಾಡಿಕೊಂಡಿತ್ತು. ಯಥಾರೀತಿ ಹಲವು ದೇಶಗಳ ಧುರೀಣರು ಭಾಷಣ ಕುಟ್ಟುತ್ತಿದ್ದರು. ‘ನಮ್ಮ ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲ ನಾಶ ಮಾಡಿಬಿಟ್ಟಿರಿ, ಭೂಮಿಯನ್ನು ಹೊಲಸು ಮಾಡಲು ನಿಮಗೆಷ್ಟು ಧೈರ್ಯ’ ಎಂದು ವಿಶ್ವದ ಬೆಳೆಯುವ ಹಸುಳೆಗಳ ಪರವಾಗಿ ಗ್ರೆಟಾ ಎಂಬ ಹದಿನಾರು ವರ್ಷದ ಬಾಲನಾಯಕಿ ಕಣ್ಣುಬಿಟ್ಟು ಹೆದರಿಸಿದಳು. ಯಾವುದಕ್ಕೂ ನಾಚದ ಟ್ರಂಪ್ ಗೇಲಿ ಮಾಡಿದ್ದುಂಟು.

ಅಂದು ‘ನೊಂದ ನೋವನ್ನು ನೋಯದವರೆತ್ತ ಬಲ್ಲರೇ ತಾಯಿ!’ ಎಂದು ಕದಳಿವನಕ್ಕೆ ಅಕ್ಕ ತೆರಳಿದಳು. ಈ ಅರಿವಿಲ್ಲದ ರಾಜಕಾರಣ ತಮಟೆ ಬಾರಿಸುತ್ತಿದೆ. ಮತದಾರ, ಹುಲಿವೇಷ ಹಾಕಿ ನರ್ತಿಸುತ್ತಿದ್ದಾನೆ. ಹಾಗಾದರೆ ಪರಿಹಾರವಿಲ್ಲವೇ? ಯಾಕಿಲ್ಲ? ಗಿಡ ನೆಟ್ಟು, ಬೀಜದುಂಡೆ ಎಸೆದು ಬೆಳೆಸುವ ಅಡವಿ ನಮ್ಮದಲ್ಲ. ವಿಷ ನಾಲಿಗೆಯ ಗರಗಸದ ಕೈ ಬೆರಳುಳ್ಳ ಮಾನವ ದೂರ ಸರಿದು ನಿಂತರೆ ಸಾಕು; ಅಡವಿ ದೇವತೆ ಪುನಃ ತನ್ನ ತಾನು ಸೃಷ್ಟಿಸಿಕೊಳ್ಳುತ್ತಾಳೆ, ಪೊರೆಯುತ್ತಾಳೆ. ಈ ಅರಿವಿನ ವಿದ್ಯೆ ಬೇಕು. ‘ಸಂಸ್ಕೃತಿಯು ಸಾಕ್ಷರತೆಗಿಂತ ಉತ್ತಮ’ ಎನ್ನುತ್ತದೆ ಗಾಂಧಿ ತತ್ವ. ಇದೇ ಪರಿಸರ ಹಾಗೂ ಮನುಷ್ಯನ ಸಂಸ್ಕೃತಿ ಸಂಕಥನದ ದಾರಿ. ಇಲ್ಲದಿರೆ ಭವಿಷ್ಯ ಏನೋ ಎಂತೋ! ಈ ಭೂಮಿ, ಆ ಆಕಾಶ ನಿರ್ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT