‘ದ್ಯಾಮ’ನಿಗೂ ಚಂದ್ರಯಾನ!

ಶುಕ್ರವಾರ, ಏಪ್ರಿಲ್ 19, 2019
22 °C

‘ದ್ಯಾಮ’ನಿಗೂ ಚಂದ್ರಯಾನ!

Published:
Updated:
Prajavani

ಆರ್ಮ್‌ಸ್ಟ್ರಾಂಗ್ ಮತ್ತಿತರ ಗಗನಯಾತ್ರಿಗಳು ಚಂದ್ರನ ಮೇಲೆ ಬಿಟ್ಟುಬಂದಿದ್ದ ಕಕ್ಕ, ಸುಸೂ ಇತ್ಯಾದಿ ಗಲೀಜು ತುಂಬಿದ್ದ 98 ಚೀಲಗಳನ್ನು ತರುವುದು ಮುಂದಿನ ಚಂದ್ರಯಾನದ ಗುರಿ ಎಂದು ನಾಸಾ ಘೋಷಿಸಿದ್ದು ಕೇಳಿ ಮೋದಣ್ಣ, ‘ಶಾ’ಣ್ಯಾ ಪಕ್ಕೆ ಹಿಡಿದು ಪಕಪಕನೆ ನಕ್ಕರು. ಟ್ರಂಪಣ್ಣನಿಗೆ ಫೋನು ಹಚ್ಚಿದರು. ‘ಅಲ್ಲೋ ಮಾರಾಯ... ಅದೆಲ್ಲ ಮಾಡಕ್ಕಂತನೇ ನಮ್ಮ ಸ್ವಚ್ಛ ಭಾರತದಾಗ ಬ್ಯಾರೆ ಸ್ಪೆಶಲ್ ಮಂದೀನೆ ಐತಿ. ಅವರಾಗ ಒಬ್ರನ್ನ ಕಳಸ್ತೀವೇಳಪಾ’.

‘ಆದ್ರ ಅಲ್ಲಿಗೆ ಕಳಿಸೂದು ಗಗನಯಾತ್ರಿಗಳು, ಅಂದ್ರ ವಿಜ್ಞಾನಿಗಳನ್ನ...’ ಟ್ರಂಪಣ್ಣನ ಮಾತು ಅರ್ಧಕ್ಕೆ ತುಂಡರಿಸಿದ ಮೋದಣ್ಣ ಹೇಳಿದರು- ‘ವೇದಕಾಲದಿಂದ ಎಲ್ಲಾಕಡಿಗಿ ಪುಷ್ಪಕ ವಿಮಾನದಾಗ ಅಡ್ಡಾಡಿ ಆ ಮಂದೀನೇ ಮಾಡ್ಕೋತ ಬಂದಾರ. ನಿಮ್ಮ ಬಿಳಿಮಂದಿಗಿ ಎದಕ್ಕ ಕಳಿಸ್ತೀರಪಾ... ನಾವು ಕಳಿಸ್ತೇವೇಳು’.

ಟ್ರಂಪಣ್ಣ ‘ಹ್ಞೂಂ’ಗುಟ್ಟಿದ. ದ್ಯಾಮನಿಗೆ ಸ್ಪೀಕಿಂಗ್ ಇಂಗ್ಲಿಷ್ ಕ್ರ್ಯಾಶ್ ಕೋರ್ಸ್ ಮಾಡಿಸಿ, ವಿಮಾನ ಹತ್ತಿಸಿದರು. ನಾಸಾಕ್ಕೆ ಬಂದಿಳಿದ ದ್ಯಾಮನನ್ನು ಕಂಡ ವಿಜ್ಞಾನಿಗಳು ಗಾಬರಿಗೊಂಡು ಟ್ರಂಪಣ್ಣನಿಗೆ ವಿಷಯ ಅರುಹಿದರು... ಅಂವ ಮೋದಣ್ಣನಿಗೆ ಫೋನಾಯಿಸಿದ. ‘ಚಂದ್ರನ ಮ್ಯಾಗೆ ವೆದರ್ ಭಾಳ ಖರಾಬ್ ಇರತೈತಿ, ಅದಕ್ಕ ಗಗನಯಾತ್ರಿಗಳು ಎಲ್ಡಮೂರು ವರ್ಸ ಟ್ರೇನಿಂಗ್ ತಗಬೇಕಾಗ್ತದ, ನಾಸಾದವ್ರು ಹೇಳ್ಯಾರ ದ್ಯಾಮ ಆಗಂಗಿಲ್ಲ...’ ಮೋದಣ್ಣ ನಡುವೆಯೇ ಬಾಯಿಹಾಕಿದರು, ‘ಹೇ... ಅಂವಾ ಮತ್ತು ಅಂವನ ಮಂದಿ ಬರಿಮೈಯಾಗ 30-40 ಅಡಿ ಮಲದ ಗುಂಡ್ಯಾಗ ಇಳಿದು ಕಸಪಸ ತೆಗೆದು ಸ್ವಚ್ಛ ಮಾಡತಾರ... ಅಷ್ಟ್ ವಿಷದ ಗಾಳಿನೇ ಕುಡೀತಾರಂತ.. ಇನ್ ಚಂದ್ರನ ಖರಾಬ್ ವೆದರ್ ಯಾವ ಲೆಕ್ಕ’ ಫೋನಿಟ್ಟ ಮೋದಣ್ಣ, ‘ಶಾ’ಣ್ಯಾ ಚುನಾವಣಾ ಪ್ರಣಾಳಿಕೆಯಲ್ಲಿ ಹೊಸ ಅಂಶ ಸೇರಿಸಿದರು. ‘ಮೋದಣ್ಣನ ಆಧಿಪತ್ಯದಲ್ಲಿ ‘ದ್ಯಾಮ’ನಂಥವರಿಗೆ ಚಂದ್ರಯಾನಕ್ಕೆ ಅವಕಾಶ’.

ದ್ಯಾಮ ಮರಳಿದಾಗ ಪಾದ ತೊಳೆಯಲು ಬೆಳ್ಳಿಹರಿವಾಣ, ಒರೆಸಲು ಬಿಳಿಟವೆಲ್ಲು ಇತ್ಯಾದಿಗಳಿಗೆ ಆರ್ಡರ್ ಸಲ್ಲಿಸಿ, ‘ದ್ಯಾಮ’ನೆಂಬ ಹೆಸರು ಉಚ್ಚರಿಸಿದ್ದಕ್ಕೆ ಮೋದಣ್ಣ, ‘ಶಾ’ಣ್ಯಾರು ಬಾಯಿ ತೊಳೆದುಕೊಂಡು ಕೃತಾರ್ಥರಾದರು!

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !