ಸೋಮವಾರ, ನವೆಂಬರ್ 18, 2019
29 °C

ಕಚ್ಚಾ ತೈಲ ಬಿಕ್ಕಟ್ಟು ದೇಶಿ ಆರ್ಥಿಕತೆಗೆ ಇಕ್ಕಟ್ಟು

Published:
Updated:

ಸೌದಿ ಅರೇಬಿಯಾದ ಎರಡು ತೈಲ ಸಂಸ್ಕರಣಾ ಘಟಕಗಳ ಮೇಲೆ ನಡೆದ ಡ್ರೋನ್‌ ದಾಳಿಯು ಕಚ್ಚಾ ತೈಲ ಪೂರೈಕೆ ವ್ಯವಸ್ಥೆಯನ್ನು ವಿಶ್ವದಾದ್ಯಂತ ಅಸ್ತವ್ಯಸ್ತಗೊಳಿಸಿದೆ. ವಿಶ್ವದ ಅತಿದೊಡ್ಡ ತೈಲ ಘಟಕಗಳಲ್ಲಿನ ಕಚ್ಚಾ ತೈಲ ಉತ್ಪಾದನೆಯು ದಿನವೊಂದಕ್ಕೆ 100 ಲಕ್ಷ ಬ್ಯಾರಲ್‌ನಿಂದ 50 ಲಕ್ಷ ಬ್ಯಾರಲ್‌ಗೆ ತಗ್ಗಿದೆ. ಇದರಿಂದಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ದಿಢೀರನೆ ಶೇ 19.5ರಷ್ಟು ಭಾರಿ ಏರಿಕೆ ದಾಖಲಿಸಿದೆ.

1991ರಲ್ಲಿ ನಡೆದ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ತೈಲ ಬೆಲೆಯಲ್ಲಿ ಭಾರಿ ಜಿಗಿತ ಉಂಟಾಗಿತ್ತು. ಆನಂತರದ ಅತಿದೊಡ್ಡ ಏರಿಕೆ ಇದಾಗಿದೆ. ಈ ಬೆಳವಣಿಗೆಯು ಭಾರತದ ಆರ್ಥಿಕತೆ ಮೇಲೆಯೂ ತೀವ್ರ ಸ್ವರೂಪದ ಅಡ್ಡ ಪರಿಣಾಮ ಬೀರುವ ಆತಂಕ ಎದುರಾಗಿದೆ. ದೇಶಿ ಚಿನಿವಾರ ಪೇಟೆ, ಷೇರು ಮತ್ತು ಕರೆನ್ಸಿ ವಿನಿಮಯ ಮಾರು ಕಟ್ಟೆಯಲ್ಲಿ ಈಗಾಗಲೇ ಕಂಪನಗಳು ಕಂಡುಬಂದಿವೆ. ಚಿನ್ನದ ಬೆಲೆ ಏರುಗತಿಯಲ್ಲಿ ಇದೆ. ಡಾಲರ್‌ ಎದುರಿನ ರೂಪಾಯಿ ವಿನಿಮಯ ದರ ಕುಸಿದಿದೆ.

ತೈಲ ಸಂಸ್ಕರಣೆ ಮತ್ತು ಮಾರಾಟ ಸಂಸ್ಥೆಗಳು ಹಾಗೂ ವಿಮಾನಯಾನ ಸಂಸ್ಥೆಗಳ ಷೇರು ಬೆಲೆ ಕುಸಿದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕಚ್ಚಾ ತೈಲದ 15 ದಿನಗಳ ಸರಾಸರಿ ಬೆಲೆ ಮತ್ತು ಡಾಲರ್ ಎದುರು ರೂಪಾಯಿ ವಿನಿಮಯ ದರ ಆಧರಿಸಿ ಪ್ರತಿದಿನದ ಪೆಟ್ರೋಲ್, ಡೀಸೆಲ್ ಬೆಲೆ ನಿರ್ಧರಿಸುತ್ತವೆ. ಹೀಗಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಹೆಚ್ಚಳಗೊಳ್ಳುವ ಆತಂಕ ಎದುರಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯು ಕೇಂದ್ರ ಸರ್ಕಾರದ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಬಹುದು.

ಡಾಲರ್ ಎದುರು ರೂಪಾಯಿ ವಿನಿಮಯ ದರ ಕಡಿಮೆಯಾದಷ್ಟೂ ಆಮದು ಮತ್ತು ರಫ್ತು ನಡುವಣ ಅಂತರವಾದ ಚಾಲ್ತಿ ಖಾತೆ ಕೊರತೆ ಹೆಚ್ಚಲಿದೆ. ಹಣದುಬ್ಬರ ಹೆಚ್ಚಳಗೊಳ್ಳಲಿದೆ. ಇದು, ಬಡ್ಡಿ ದರಗಳ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ, ಸರ್ಕಾರದ ಸಾಮಾಜಿಕ ವೆಚ್ಚಗಳ ಮೇಲೆ ಇವೆಲ್ಲವೂ ಪರಿಣಾಮ ಬೀರಲಿವೆ.

ತೈಲ ಮಾರಾಟ ಸಂಸ್ಥೆಗಳ ಬಳಿ, ತೈಲ ಸಂಗ್ರಹ ಇರುವ ಕಾರಣ ಇಂಧನ ಬೆಲೆ ತಕ್ಷಣಕ್ಕೇ ದುಬಾರಿ ಆಗದಿರಬಹುದು. ಆದರೆ, ಕೊಲ್ಲಿ ಬಿಕ್ಕಟ್ಟು ಉಲ್ಬಣಗೊಂಡರೆ, ತೈಲ ಪೂರೈಕೆ ಇನ್ನಷ್ಟು ಅಸ್ತವ್ಯಸ್ತಗೊಂಡರೆ ಬೆಲೆ ಏರಿಕೆ ಬಹುತೇಕ ಖಚಿತ. ಕಚ್ಚಾ ತೈಲದ ಬೆಲೆಯು ಇತ್ತೀಚಿನ ವರ್ಷಗಳಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಗ್ಗವಾಗಿತ್ತು. ಇದು, ಭಾರತದ ಅರ್ಥ ವ್ಯವಸ್ಥೆಯ ಪಾಲಿಗೆ ಒಳ್ಳೆಯ  ಬೆಳವಣಿಗೆಯಾಗಿತ್ತು. ಇತ್ತೀಚಿನ ತಿಂಗಳಲ್ಲಿ ಆರ್ಥಿಕತೆಯ ಬೆಳವಣಿಗೆ ಕುಸಿದಿದೆ.

ಸ್ಥಳೀಯ ಮತ್ತು ಬಾಹ್ಯ ವಿದ್ಯಮಾನಗಳ ಕಾರಣಕ್ಕೆ ತೆವಳುತ್ತಿರುವ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರ ಸರಣಿಯೋಪಾದಿಯಲ್ಲಿ ಉತ್ತೇಜನಾ ಕೊಡುಗೆಗಳನ್ನು ಘೋಷಿಸುತ್ತಿದೆ. ಈ ಸಂಕ್ರಮಣ ಸಂದರ್ಭದಲ್ಲಿಯೇ ತೈಲಕ್ಕೆ ಸಂಬಂಧಿಸಿದ ಬಿಕ್ಕಟ್ಟು ಉದ್ಭವಿಸಿದೆ. ಭಾರತಕ್ಕೆ ಹೆಚ್ಚು ತೈಲ ಪೂರೈಸುವ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ಭಾರತವು ತನ್ನ ತೈಲ ಬೇಡಿಕೆಯ ಶೇ 83ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತಕ್ಕೆ ಪೂರೈಕೆಯಾಗುವ ತೈಲದ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದಾಗಿ ಸೌದಿ ಅರೇಬಿಯಾ ಭರವಸೆ ನೀಡಿದೆ.

ಪೂರೈಕೆಯಲ್ಲಿ ಸದ್ಯಕ್ಕೆ ಸಮಸ್ಯೆ ಕಂಡು ಬರದಿದ್ದರೂ ಬೆಲೆ ಹೆಚ್ಚಳದ ತೂಗುಗತ್ತಿಯಂತೂ ಇದ್ದೇ ಇದೆ. ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚುತ್ತಾ ಹೋದರೆ, ಭಾರತದ ಪಾಲಿಗೆ ಹೊಸ ಸಂಕಷ್ಟಗಳು ಎದುರಾಗಲಿವೆ. ಕೊಲ್ಲಿ ದೇಶಗಳಲ್ಲಿನ ರಾಜಕೀಯ ಅನಿಶ್ಚಿತತೆ ಮುಂದುವರಿದರೆ ಭಾರತದ ಆರ್ಥಿಕತೆಗಷ್ಟೇ ಅಲ್ಲದೆ, ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಇಂಧನ ದುಬಾರಿಯಾದರೆ ಅದು ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಲಿದೆ. ಈ ಬಿಕ್ಕಟ್ಟನ್ನು ಕೇಂದ್ರ ಸರ್ಕಾರವು ಸಮರ್ಥವಾಗಿ ನಿಭಾಯಿಸುವ ಜಾಣ್ಮೆ ತೋರಬೇಕಾಗಿದೆ. ದೇಶದ ಆರ್ಥಿಕ ಬೆಳವಣಿಗೆಗೆ ವೇಗ ತುಂಬಲು ಹೆಚ್ಚು ಗಮನ ನೀಡಬೇಕಾಗಿದೆ. 

ಪ್ರತಿಕ್ರಿಯಿಸಿ (+)