ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 13–1–1994

Last Updated 12 ಜನವರಿ 2019, 20:03 IST
ಅಕ್ಷರ ಗಾತ್ರ

ರಾಜ್ಯ ನಾಯಕತ್ವ: 17ರೊಳಗೆ ಸಮಸ್ಯೆ ಇತ್ಯರ್ಥ ಅಸಂಭವ

ನವದೆಹಲಿ,ಜ. 12–ಕರ್ನಾಟಕದ ಬಿಕ್ಕಟ್ಟಿಗೆ ಪರಿಹಾರ ಹುಡುಕುತ್ತಿರುವ ಕಾಂಗೈ ವರಿಷ್ಠ ಮಂಡಳಿ 17ರೊಳಗೆ ಪರಿಹಾರ ನೀಡುವುದು ಅಸಂಭ ಎನ್ನುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರನ್ನು ಮುಂದುವರೆಸಬೇಕೆ ಅಥವಾ ಬೇರೆ ನಾಯಕನನ್ನು ಆಯ್ಕೆ ಮಾಡಬೇಕೆ ಎನ್ನುವ ಬಗ್ಗೆ ಸಾಕಷ್ಟು ಕಸರತ್ತು ಮಾಡುತ್ತಿರುವುದು ಕಂಡು ಬರುತ್ತಿದೆ.

ಈ ಮಧ್ಯೆ ಮೊಯಿಲಿ ಅವರನ್ನೇ ಮುಂದುವರಿಸಬೇಕೆಂಬ ನಿಷ್ಠಾವಂತರ ಸತತ ಪ್ರಯತ್ನ ಮತ್ತು ನಾಯಕತ್ವ ಬದಲಾಗಬೇಕೆಂದು ಪಣ ತೊಟ್ಟಿರುವ ಭಿನ್ನಮತೀಯರ ಬದಲಾಗದ ನಿಲುವು, ಬಿಕ್ಕಟ್ಟನ್ನು ವರಿಷ್ಠ ಮಂಡಲಿಯು ಸುಲಭವಾಗಿ ಬಿಡಿಸಲಾಗದ ಕಗ್ಗಂಟು ಮಾಡಿವೆ.

ಇಂದು ಉಭಯ ಬಣಗಳೂ ತಮಗೆ ಅನುಕೂಲಕರವಾದ ವಾದಗಳನ್ನು ಮುಂದಿಡುತ್ತಿದ್ದು ಬಿಕ್ಕಟ್ಟಿನ ಬಗ್ಗೆ ವರಿಷ್ಠರ ನಿಲುವೇನೆಂಬುದು ಸಹಾ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಒಟ್ಟಾರೆ ಇಂದಿನ ಸ್ಥಿತಿ ಪೂರ್ಣ ಗೊಂದಲಮಯ.

ಮೊಯಿಲಿ ಅವರನ್ನು ಬದಲಾಯಿಸಿ ಹೊಸ ನಾಯಕನ ಆಯ್ಕೆಗಾಗಿ ಪ್ರಧಾನಿ ಹಾಗೂ ಕಾಂಗೈ ಅಧ್ಯಕ್ಷರಾದ ಪಿ.ವಿ. ನರಸಿಂಹರಾವ್ ಅವರು ಈಗ ಪ್ರಕ್ರಿಯೆ ಆರಂಭಿಸಿದ್ದಾರೆಂದು ಇಂದು ಚುರುಕಾಗಿ ಚಟುವಟಿಕೆ ಆರಂಭಿಸಿದ ಭಿನ್ನಮತೀಯರು ಈಗ ಪೂರ್ಣ ವಿಶ್ವಾಸ ಹೊಂದಿದ್ದಾರೆ.

**

ಪಟ್ಟಣದ ಬಡವರಿಗೆ ಉಚಿತ ನಿವೇಶನ

ಬೆಂಗಳೂರು, ಜ. 12– ಆಶ್ರಯ ಯೋಜನೆಗಾಗಿ ಪುರಸಭೆ ಪ್ರದೇಶದಲ್ಲಿ ಸರ್ಕಾರಿ ಭೂಮಿ ನೀಡಲು ಅವಕಾಶ, ಪಟ್ಟಣ ಪ್ರದೇಶದಲ್ಲಿ ಉಚಿತವಾಗಿ ನಿವೇಶನ ಹಂಚಿಕೆ ಹಾಗೂ ಆಶ್ರಯ ಮತ್ತು ಅಂಬೇಡ್ಕರ್ ಜನ್ಮ ಶತಾಬ್ದಿ ಗೃಹ ನಿರ್ಮಾಣ ಯೋಜನೆ ಒಳಗೊಂಡಂತೆ ಮಾರ್ಚ್ ಅಂತ್ಯದೊಳಗೆ 1.25 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಇಂದು ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಸಭೆ ತೀರ್ಮಾನಿಸಿತು.

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು, ಆಶ್ರಯ ಯೋಜನೆಗಾಗಿ ಪುರಸಭೆ ಪ್ರದೇಶದಲ್ಲಿ ಸರ್ಕಾರಿ ಭೂಮಿ ನೀಡುವ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಇನ್ನು ಮುಂದೆ ಈ ಯೋಜನೆಗೆ ಭೂಮಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಯೋಜನೆಯಲ್ಲಿ ಪಟ್ಟಣದ ಪ್ರದೇಶದಲ್ಲಿ ಪಡೆಯುವ ನಿವೇಶನದ ಬೆಲೆಯ ಅರ್ಧ ಭಾಗವನ್ನು ಫಲಾನುಭವಿಗಳು ಭರಿಸಬೇಕಾಗಿದ್ದರಿಂದ ಯೋಜನೆ ನಿರೀಕ್ಷಿತ ಯಶಸ್ಸು ಸಾಧಿಸದಿರುವುದನ್ನು ಗಮನಿಸಿ ಗ್ರಾಮಾಂತರ ಪ್ರದೇಶದಂತೆ ಪಟ್ಟಣ ವ್ಯಾಪ್ತಿಯಲ್ಲಿ ಹಂಚುವ 20X30 ಅಳತೆಯ ನಿವೇಶನಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಲಾಯಿತು ಎಂದು ವಿವರಿಸಿದರು.

**

ಸಮಸ್ತ ಮತದಾರರಿಗೂ ಗುರುತಿನ ಚೀಟಿ ನವೆಂಬರ್ ವೇಳೆಗೆ

ಬೆಂಗಳೂರು, ಜ. 12– ಜಗತ್ತಿನಲ್ಲೇ ಅತ್ಯಧಿಕ ಮತದಾರರಿರುವ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆ ತರಲಿರುವ ಮತದಾರರ ಗುರುತಿನ ಚೀಟಿಗಳು ಈ ವರ್ಷದ ನವೆಂಬರ್ ವೇಳೆಗೆ ದೇಶಾದ್ಯಂತ ವಿತರಣೆಯಾಗಲಿದ್ದು ಇವನ್ನು ಸಿದ್ಧಪಡಿಸುವ ಐತಿಹಾಸಿಕ ಪ್ರಕ್ರಿಯೆ ಇದೀಗ ಆರಂಭಗೊಂಡಿದೆ.

ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಒಟ್ಟು 56 ಕೋಟಿಗೂ ಹೆಚ್ಚು ಅರ್ಹ ಮತದಾರರು ತಮ್ಮ ಭಾವಚಿತ್ರಗಳಿರುವ ಗುರುತಿನ ಚೀಟಿ ಪಡೆಯಲಿದ್ದಾರೆ.

1995ರ ಜನವರಿ 1ರ ಒಳಗಾಗಿ ಇವು ಸಿದ್ಧವಾಗದಿದ್ದರೆ ಯಾವುದೇ ಚುನಾವಣೆ ನಡೆಸುವುದಿಲ್ಲ ಎಂದು ರಾಷ್ಟ್ರದ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಈಗಾಗಲೇ ಘೋಷಿಸಿದ್ದಾರೆ.

ಬಹುಶಃ ವಿಶ್ವದ ಚುನಾವಣಾ ವ್ಯವಸ್ಥೆಯಲ್ಲೇ ಅತ್ಯಂತ ವ್ಯಾಪಕವಾದ ‘ಆಂದೋಲನಕ್ಕಾಗಿ’ ಚುನಾವಣಾ ಆಯೋಗ ಮತ್ತು ಆಡಳಿತ ಯಂತ್ರ ಸಜ್ಜಾಗುತ್ತಿದೆ. ಇದಕ್ಕಾಗಿ ಸುಮಾರು 1500–2000 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಸಮನಾಗಿ ಭರಿಸಲಿವೆ.

ಕರ್ನಾಟಕದಲ್ಲಿ ಒಟ್ಟು 2.9 ಇಲ್ಲವೇ 3 ಕೋಟಿ ಮತದಾರರ ಚೀಟಿಗಳು ತಯಾರಾಗಲಿದ್ದು ಇಡೀ ಪ್ರಕ್ರಿಯೆ ವಿಕೇಂದ್ರೀಕೃತವಾಗಿದೆ. ಕೆಲಸ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಈವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಎ.ಭರತ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT