ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 28–7–1994

ಗುರುವಾರ
Last Updated 27 ಜುಲೈ 2019, 19:15 IST
ಅಕ್ಷರ ಗಾತ್ರ

ಸರ್‍ಕಾರದ ವರದಿ ವಾಪಸಿಗೆ ಆಗ್ರಹ; ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿ

ನವದೆಹಲಿ, ಜುಲೈ 27 (ಪಿಟಿಐ, ಯುಎನ್ಐ)– ಷೇರು ಹಗರಣದ ತನಿಖೆ ನಡೆಸಿದ ಜೆಪಿಸಿಯ ಶಿಫಾರಸುಗಳ ವಿಷಯದಲ್ಲಿ ಸರಕಾರ ಮಂಡಿಸಿದ ವರದಿಯು ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಉಂಟು ಮಾಡಿತು. ವರದಿಯನ್ನು ವಾಪಸು ತೆಗೆದುಕೊಳ್ಳುವಂತೆ ಆಗ್ರಹಪಡಿಸಿದ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಬೇರೆಲ್ಲಾ ಕಲಾಪಗಳನ್ನು ಸಂಪೂರ್ಣ ಸ್ಥಗಿತಗೊಳಿಸಿದವು.

ಶಿಫಾರಸುಗಳ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ನೀಡುವ ಉದ್ದೇಶದ ಸರಕಾರದ ಈ ವರದಿ ಸಂಸತ್ತಿನ ಘನತೆ–ಗೌರವಗಳಿಗೆ ಮಾಡಿದ ಅವಮಾನ ಹಾಗೂ ಆಕ್ರಮಣ ಎಂದು ಎರಡೂ ಸದನಗಳಲ್ಲಿ ಕೋಪಾದಿಷ್ಟರಾದ ಪ್ರತಿಪಕ್ಷ ಸದಸ್ಯರು ವರ್ಣಿಸಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುವುದಿಲ್ಲ ಎಂದು ದೇಶದ ಜನತೆಗೂ ವಿಶ್ವಕ್ಕೂ ಸಾರಿ ಹೇಳದಂತಾಗಿದೆ ಎಂದು ಟೀಕಿಸಿದರು.

ಅಪಹರಣ ಅಪರಾಧಿಗೆ ಗಲ್ಲು– ಪರಿಶೀಲನೆಯಲ್ಲಿ

ನವದೆಹಲಿ, ಜುಲೈ 27 (ಪಿಟಿಐ)– ಅಪಹರಣದಲ್ಲಿ ತೊಡಗುವ ಅಪರಾಧಿಗಳಿಗೆ ತೀವ್ರ ಶಿಕ್ಷೆ ನೀಡಲು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗೃಹ ಸಚಿವ ಎಸ್.ಬಿ. ಚವಾಣ್ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಶಾಲಾ ಮಕ್ಕಳ ಹಾಗೂ ಉದ್ಯಮಿಗಳ ಅಪಹರಣದ ಬಗ್ಗೆ ರಾಜ್ಯಸಭಾ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿ, ಗಲ್ಲು ಶಿಕ್ಷೆ ವಿಧಿಸುವುದರಿಂದ ಈ ಸಾಮಾಜಿಕ ಪಿಡುಗನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಈ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಬಿಜೆಪಿಯ ಎಂ.ಎಂ. ಜೋಷಿ ಮೊದಲಾದವರು ಒತ್ತಾಯಿಸಿದರು.

ಜಾತಿ, ಜನಸಂಖ್ಯೆ ಆಧರಿಸಿ ಮೀಸಲು; ರೈತ ಸಂಘ ಆಗ್ರಹ

ಬೆಂಗಳೂರು, ಜುಲೈ 27– ಮೀಸಲಾತಿ ಸೌಲಭ್ಯದ ನ್ಯಾಯಯುತ ಹಂಚಿಕೆಗಾಗಿ ‘ಕೆನೆಪದರ’ ಸೂತ್ರ ಕೈಬಿಟ್ಟು, ಪ್ರತಿ ಜಾತಿ, ಸಂಖ್ಯೆಯ ಪ್ರಮಾಣ ಆಧರಿಸಿ ಮೀಸಲಾತಿ ನೀಡಬೇಕು ಎಂದು ರಾಜ್ಯ ರೈತ ಸಂಘ ಇಂದು ಸರ್ಕಾರವನ್ನು ಒತ್ತಾಯಿಸಿದೆ.

ಹಿಂದುಳಿದ ವರ್ಗದವರಿಗೆ ಶೇಕಡಾವಾರು ಮೀಸಲಾತಿಯಲ್ಲಿ ಹೆಚ್ಚಳ ಘೋಷಿಸಿದ ಸರ್ಕಾರದ ಕ್ರಮವನ್ನು ಟೀಕಿಸಿದ ಸಂಘದ ಅಧ್ಯಕ್ಷ ಹಾಗೂ ಶಾಸಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು, ‘ಕೆನೆಪದರ’ ಸೂತ್ರವಿರುವವರೆಗೂ ಮೀಸಲಾತಿ ಪ್ರಮಾಣದಲ್ಲಿ ಎಷ್ಟೇ ಹೆಚ್ಚಳ ಮಾಡಿದರೂ ದಕ್ಕ ಬೇಕಾದವರಿಗೆ ಅದು ಸಿಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT