ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಗೋಲಿಬಾರ್ ಐವರ ಸಾವು

1994
Last Updated 15 ಆಗಸ್ಟ್ 2019, 17:56 IST
ಅಕ್ಷರ ಗಾತ್ರ

ಹುಬ್ಬಳ್ಳಿಯಲ್ಲಿ ಗೋಲಿಬಾರ್ ಐವರ ಸಾವು

ಹುಬ್ಬಳ್ಳಿ, ಆ. 15– ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ವಿವಾದವು ಇಂದು ಹಿಂಸೆಗೆ ತಿರುಗಿ ನಗರದ ಎರಡು ಕಡೆ ನಡೆದ ಪೊಲೀಸ್ ಗೋಲಿಬಾರಿನಲ್ಲಿ 5 ಮಂದಿ ಸತ್ತರು. ಮೈದಾನದಲ್ಲಿ ಧ್ವಜಾರೋಹಣ ಯತ್ನವನ್ನು ವಿಫಲಗೊಳಿಸಿದ್ದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಸಿ. ಬರ್ಮನ್ ಹೇಳಿದ್ದರೆ, ಯತ್ನದಲ್ಲಿ ಸಫಲರಾಗಿರುವುದಾಗಿ ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.

ಪ್ರಕ್ಷುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಗರದಲ್ಲಿ ವಿಧಿಸಲಾಗಿರುವ ಕರ್ಫ್ಯೂವನ್ನು ಮಂಗಳವಾರ ಮಧ್ಯರಾತ್ರಿವರೆಗೆ ವಿಸ್ತರಿಸಲಾಗಿದೆ. 20 ಮಂದಿ ಪೊಲೀಸರೂ ಸೇರಿದಂತೆ 40 ಮಂದಿಗೆ ಗಾಯವಾಗಿದೆ.

ಗೋಲಿಬಾರ್‌ನಲ್ಲಿ ಸತ್ತವರ ಹೆಸರುಗಳು ಈ ರೀತಿ ಇವೆ. ಸಾಯಿನಾಥ ಧೋಂಗಡೆ (20), ಶ್ರೀನಿವಾಸ ಕಟ್ಟಿ (45), ಮಹದೇವ ಧೋಂಗಡೆ (26), ಮಂಜುನಾಥ ಕಾರದ (14) ಮತ್ತು ಪ‍್ರಸನ್ನ (22). ಗಾಯಗೊಂಡವರು: ಲವ್ಲಿ ಟೇಲರ್, ಮಲ್ಲಿಕಾರ್ಜುನ, ಉಮೇಶ ಶೆಟ್ಟಿ, ರಾಕೇಶ್ ಪಾಟೀಲ್, ವಿನೇಶ ಪಾಟೀಲ್, ಲಕ್ಷ್ಮಿ ಮೆಹರವಾಡೆ ಮತ್ತು ಮೇಘರಾಜ್.

ದೆಹಲಿಯಲ್ಲಿ ಬಿಜೆಪಿ ಹೇಳಿಕೆ

ನವದೆಹಲಿ, ಆ. 15– ಕರ್ನಾಟಕದ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಇಂದು ಬೆಳಿಗ್ಗೆ 6.47ರಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ತಮ್ಮ ಕಾರ್ಯಕ್ರಮದಂತೆ ಯಶಸ್ವಿಯಾಗಿ ರಾಷ್ಟ್ರಧ್ವಜ ಹಾರಿಸಿದರು ಎಂದು ಪಕ್ಷದ ಕಾರ್ಯದರ್ಶಿ ಮತ್ತು ಸಂಸತ್‌ ಸದಸ್ಯೆ ಸುಷ್ಮಾ ಸ್ವರಾಜ್ ಇಂದು ಇಲ್ಲಿ ಹೇಳಿದ್ದಾರೆ.

‘ಆಕ್ರಮಿತ ಕಾಶ್ಮೀರ ವಾಪಸು ಮಾಡಲಿ’

ನವದೆಹಲಿ, ಆ. 15 (ಪಿಟಿಐ)– ಕಾಶ್ಮೀರವು ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವುದು ಎಂದು ಘೋಷಿಸಿದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಪಾಕಿಸ್ತಾನವು ಆಕ್ರಮಿಸಿರುವ ಕಾಶ್ಮೀರದ ಭಾಗವನ್ನು ವಾಪಸು ಪಡೆಯುವುದೇ ರಾಷ್ಟ್ರಕ್ಕೆ ಬಾಕಿ ಉಳಿದಿರುವ ಕಾರ್ಯ ಎಂದು ಸ್ಪಷ್ಟಪಡಿಸಿ, ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನೆರವು ನೀಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಕಾಶ್ಮೀರ ವಿವಾದ ಬಗೆಹರಿಯದೆ ಉಪಖಂಡದ ವಿಭಜನೆ ಕಾರ್ಯ ಪೂರ್ತಿಗೊಳ್ಳದು ಎಂಬ ಪಾಕ್ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಹೇಳಿಕೆಯನ್ನು 48ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾವ್ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT