ಸೋಮವಾರ, ನವೆಂಬರ್ 18, 2019
27 °C
ಗುರುವಾರ

ಗುರುವಾರ, 22–9–1994

Published:
Updated:

ರಾಜ್ಯಗಳಿಗೆ ಆಯೋಗದ ಆದೇಶ, ‘ಪಕ್ಷಪಾತಿ’ ಚುನಾವಣಾ ಅಧಿಕಾರಿಗಳ ಬದಲಾವಣೆ

ನವದೆಹಲಿ, ಸೆ. 21: ಪಕ್ಷಪಾತದಿಂದ ವರ್ತಿಸುವ ಅನುಮಾನ ಇರುವ ಚುನಾವಣಾ ಆಧಿಕಾರಿಗಳನ್ನು ಬದಲಾಯಿಸಿ ಅವರ ಸ್ಥಾನಕ್ಕೆ ಕರ್ತವ್ಯನಿಷ್ಠ ನಿಷ್ಪಕ್ಷಪಾತ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸದ್ಯದಲ್ಲಿ ಮತದಾನ ನಡೆಯಲಿರುವ ರಾಜ್ಯಗಳಿಗೆ ಚುನಾವಣಾ ಆಯೋಗ ಆದೇಶಿಸಿದೆ.

ಹಿಂದಿನ ಸಾರ್ವತ್ರಿಕ ಮತ್ತು ಮರು ಚುನಾವಣೆಯಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯನ್ವಯ ಶಿಸ್ತು ಕ್ರಮಕ್ಕೆ ಗುರಿಯಾದ ಅಧಿಕಾರಿಗಳನ್ನು ಇನ್ನು ಮುಂದೆ ಯಾವುದೇ ರೀತಿಯ ಚುನಾವಣಾ ಸಂಬಂಧಿ ಕೆಲಸ ಕಾರ್ಯಗಳಿಗೆ ನಿಯೋಜಿಸಬಾರದು ಎಂದು ಅದು ಹತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ಚುನಾವಣಾ ಆಧಿಕಾರಿಗಳಿಗೆ ಇಂದು ಸೂಚನೆ ನೀಡಿದೆ.

ಉಟ್ಟ ಬಟ್ಟೆಯಲ್ಲಿ ವೀರಪ್ಪನ್ ತಂಡ ಪರಾರಿ: ಬಿದರಿ

ಮೈಸೂರು, ಸೆ. 21–  ಮೂರು ಕೊಡಲಿ, ಮೂರು ರೇಡಿಯೋ, ಎರಡು ಗೋಣೀಚೀಲದಲ್ಲಿ ತುಂಬಿಟ್ಟ ಜಿಂಕೆಯ ಮಾಂಸ, ಆಹಾರ ಪದಾರ್ಥಗಳು, ಬಟ್ಟೆ ಬರೆ, ಮೂರು 303 ಬಂದೂಕುಗಳು, 3 ಎಸ್.ಎಲ್.ಆರ್., ಒಂದು ಎಸ್.ಪಿ.ಬಿಲ್. ಬಂದೂಕ, ಮೂರು ಚೀಲ ಗನ್ ಪೌಡರ್ ಇತ್ಯಾದಿ ವಸ್ತ್ರಗಳು.

ಮೊನ್ನೆ ತಮಿಳ್ನಾಡಿನ ದಿಂಬ ಅರಣ್ಯ ಪ್ರದೇಶದಲ್ಲಿ (ಪೆರಿಯಾರ್ ಜಿಲ್ಲೆ)ಮೂವರು ವಿಶೇಷ ಕಾರ್ಯಾಚರಣೆ ಪಡೆಯವರನ್ನು ಬಲಿ ತೆಗೆದುಕೊಂಡ ನರಹಂತಕ ವೀರಪ್ಪನ್ ತನ್ನ ತಾಣದಿಂದ ಓಡುವಾಗ ಬಿಟ್ಟು ಹೋದ ವಸ್ತುಗಳು ಇವು.

ಇಂದಿಲ್ಲಿ ವರದಿಗಾರರಿಗೆ ಅಂದಿನ ವಿದ್ಯಮಾನಗಳನ್ನು ವಿವರಿಸಿದ ವಿಶೇಷ ಕಾರ್ಯಾಚರಣೆ ದಳದ ಮುಖ್ಯಸ್ಥ ಡಿ.ಐ.ಜಿ. ಶಂಕರ ಬಿದರಿ ಅವರು, ‘ವೀರಪ್ಪನ್ ತಂಡ ಉಟ್ಟ ಬಟ್ಟೆಯನ್ನು ಮಾತ್ರ ಉಳಿಸಿಕೊಂಡು ಪರಾರಿಯಾಗಿದೆ. ಬೇರೇನೂ ಆ ತಂಡದ ಬಳಿ ಉಳಿದಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)