ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 6–7–1994

Last Updated 5 ಜುಲೈ 2019, 19:45 IST
ಅಕ್ಷರ ಗಾತ್ರ

ಕೃಷಿ ಉತ್ಪನ್ನ ಅಡವಿಟ್ಟು ಸಾಲ: ನಾಳೆಯಿಂದ ಜಾರಿ

ಬೆಂಗಳೂರು, ಜುಲೈ 5– ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಸಮಿತಿಗಳಲ್ಲಿ ಅಡವಿಟ್ಟುಕೊಂಡು ಮುಂಗಡ ಸಾಲ ಒದಗಿಸುವ ಯೋಜನೆಯು ಈ ತಿಂಗಳ ಏಳರಿಂದ ಜಾರಿಗೆ ಬರಲಿದೆ.

ಸುಗ್ಗಿಯಾದ ತಕ್ಷಣ ಆರ್ಥಿಕ ಮುಗ್ಗಟ್ಟಿನಿಂದಾಗಿ ಎಲ್ಲ ರೈತರೂ ಉತ್ಪನ್ನಗಳನ್ನು ಮಾರಲು ಮಾರುಕಟ್ಟೆಗಳಿಗೆ ಧಾವಿಸುವುದರಿಂದ ಬೆಲೆ ಕುಸಿದು ರೈತರು ಹೊಂದುತ್ತಿರುವ ನಷ್ಟ ತಪ್ಪಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಿರುವುದಾಗಿ ಕೃಷಿ ಮಾರುಕಟ್ಟೆ ರಾಜ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ದಾವೂದ್ ಆಸ್ತಿ ಮುಟ್ಟುಗೋಲಿಗೆ ಕ್ರಮ

ನವದೆಹಲಿ, ಜುಲೈ 5 (ಪಿಟಿಐ)– ಭೂಗತ ದೊರೆ ದಾವೂದ್ ಇಬ್ರಾಹಿಂನ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ತನಿಖಾ ದಳ ಕ್ರಮ ಕೈಗೊಂಡಿದೆ.

ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮೊಹಮ್ಮದ್ ದೋಸಾನ ‘ಬೇನಾಮಿ’ ಹೆಸರಿನಲ್ಲಿರುವ ಆರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಅನುಮತಿಗೆ ಮನವಿ ಮಾಡಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಬ್ಯಾಪ್ಟಿ ರಸ್ತೆಯಲ್ಲಿರುವ ಕಾರ್ಯಾಗಾರ, ಮೌಲಾನಾ ಶೌಕತ್‌ ಅಲಿ ರಸ್ತೆಯಲ್ಲಿರುವ ಅಂಗಡಿ, ನಾಗಪಾದದಲ್ಲಿರುವ ಹೋಟೆಲ್‌ಗಳು ಹಾಗೂ ಅತಿಥಿ ಗೃಹಗಳು ಮತ್ತು ರತ್ನಗಿರಿ, ಬೆಂಗಳೂರು, ಕೇರಳದಲ್ಲಿ ಹಲವಾರು ಆಸ್ತಿಗಳನ್ನು ಬೇನಾಮಿ ಹೆಸರಿನಲ್ಲಿ ದಾವೂದ್‌ ಹೊಂದಿದ್ದಾನೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲಪ್ಪರೆಡ್ಡಿ ವರದಿ: ಶೀಘ್ರ ನಿರ್ಧಾರ

ಮೈಸೂರು, ಜುಲೈ 5– ಕೊಡಗಿನ ಅರಣ್ಯ ನಾಶದ ಬಗ್ಗೆ ಜೀವ ಪರಿಸರ ಮತ್ತು ಅರಣ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ಎ.ಎನ್. ಎಲ್ಲಪ್ಪ ರೆಡ್ಡಿ ಅವರು ಸಲ್ಲಿಸಿರುವ ಸವಿವರ ವರದಿಯ ಬಗ್ಗೆ ಕರ್ನಾಟಕ ಸರ್ಕಾರ ಇನ್ನು ಮೂರ್ನಾಲ್ಕು ದಿನಗಳಲ್ಲಿ ತನ್ನ ನಿರ್ಧಾರವನ್ನು ಕೈಗೊಳ್ಳಲಿದೆ.

ಎಲ್ಲಪ್ಪ ರೆಡ್ಡಿ ಅವರೇ ಇಂದಿಲ್ಲಿ ಈ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಸಮಾರಂಭವೊಂದರಲ್ಲಿ ಭಾಗವಹಿಸಲು ಬಂದಿದ್ದ ರೆಡ್ಡಿ ಅವರನ್ನು ವರದಿಗಾರರು ಪ್ರಶ್ನಿಸಿದಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘ಸರ್ಕಾರ ನನ್ನ ವರದಿಯನ್ನು ಲಘುವಾಗಿ ಕಂಡಿಲ್ಲ. ಅವಜ್ಞೆಯನ್ನೂ ತೋರಿಸಿಲ್ಲ. ನಿಜಕ್ಕೂ ನನ್ನ ವರದಿಯ ಬಗ್ಗೆ ತೀವ್ರ ಆಸಕ್ತಿಯನ್ನೇ ತೋರಿಸಿದೆ. ಆದರೆ ಸಮಗ್ರ ವರದಿಯ ಬಗ್ಗೆ ಒಂದು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾದರೆ ಅದರ ಸಾಧಕ ಬಾಧಕಗಳನ್ನೆಲ್ಲ ಪರಿಶೀಲಿಸಬೇಕು. ವಿವಿಧ ಇಲಾಖೆಗಳ ಜೊತೆ ಪರ್ಯಾಲೋಚಿಸಬೇಕು. ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕು. ಈಗಾಗಲೇ ಮೂರ್ನಾಲ್ಕು ಸಭೆಗಳನ್ನು ನಡೆಸಿದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮಾಲೋಚನೆಯನ್ನೂ ನಡೆಸಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT