ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದ ಹಿಂದೆ | ಭಾನುವಾರ 30–7–1995

Last Updated 29 ಜುಲೈ 2020, 21:51 IST
ಅಕ್ಷರ ಗಾತ್ರ

ಕೃಷಿಗೆ ಕೈಗಾರಿಕೆಯ ಸ್ಥಾನಮಾನ ಖಾಸಗಿ ಬಂಡವಾಳಕ್ಕೆ ಉತ್ತೇಜನ

ಬೆಂಗಳೂರು, ಜುಲೈ 29– ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡಿಕೆ, ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ, ಸಾಲ ಸೌಲಭ್ಯದ ಬೇಡಿಕೆ ಈಡೇರಿಸಲು ಕೃಷಿ ಹಣಕಾಸು ನಿಗಮ ಸ್ಥಾಪನೆ, ಸಾಲ–ಬಡ್ಡಿ ಮನ್ನಾ ನಿಷೇಧ. ಇವು ರಾಜ್ಯ ಯೋಜನಾ ಮಂಡಳಿ ರೂಪಿಸಿರುವ ಕರಡು ಕೃಷಿ ನೀತಿಯ ಪ್ರಮುಖ ಅಂಶಗಳು.

ಹೊಸ ನೀತಿಯಲ್ಲಿ ತೋಟಗಾರಿಕೆ, ಪುಷ್ಪ ಕೃಷಿ, ಹೈನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ವರ್ಷಕ್ಕೆ 1 ಸಾವಿರ ಕೋಟಿಯಂತೆ ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ರೂಪಾಯಿಯನ್ನು ಕೃಷಿ ವಲಯಕ್ಕೆ ಬಂಡವಾಳವಾಗಿ ತೊಡಗಿಸುವ ಮೂಲಕ ಕೃಷಿ ಬೆಳವಣಿಗೆ ಪ್ರಮಾಣವನ್ನು ಶೇಕಡ 4.5ರಷ್ಟಕ್ಕೆ ಹೆಚ್ಚಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಕೈಗಾರಿಕಾ ಉತ್ತೇಜನ ಮತ್ತು ಅಗತ್ಯ ಸಂರಕ್ಷಣೆಗಳಂಥ ಪ್ರಧಾನ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವುದು ಕೃಷಿ
ವಾಣಿಜ್ಯೀಕರಣಕ್ಕೆ ಅವಶ್ಯಕವಾಗಿದೆ.
ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡುವ ಪರಿವರ್ತನೆಯ ದಿಸೆಯಲ್ಲಿ ಸಾಲ ಸೌಲಭ್ಯ, ಬೆಲೆ ನಿಗದಿ, ಬಂಡವಾಳ ಹೂಡಿಕೆಗೆ ಮೂಲ ಸೌಲಭ್ಯಗಳು, ರಫ್ತು, ಸಂಶೋಧನೆಗೆ ಕೈಗಾರಿಕೆಗಳಿಗೆ ನೀಡುವಂತೆ ಉತ್ತೇಜನ, ರಕ್ಷಣೆಗೆ ಶಿಫಾರಸು ಮಾಡಲಾಗಿದೆ.

ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟ ಗ್ರಾಮೀಣ ವಿಮಾ ಯೋಜನೆ ಜಾರಿ

ನವದೆಹಲಿ, ಜುಲೈ 29 (ಯುಎನ್‌ಐ)– ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ, ಗ್ರಾಮೀಣ ಬಡಜನರಿಗೆ ಸಾಮೂಹಿಕ ವಿಮೆ ಯೋಜನೆ ಸೇರಿದಂತೆ ಒಟ್ಟು 3,951 ಕೋಟಿ ರೂ.ಗಳ ಹಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ಪ್ರಧಾನಿ ಪಿ.ವಿ.ನರಸಿಂಹ ರಾವ್‌ ಅವರು ಇಂದು ಪ್ರಕಟಿಸಿದರು.

ಅಸಂಘಟಿತ ಹಾಗೂ ದುರ್ಬಲ ವರ್ಗಗಳ ಬಡವರನ್ನು ಉದ್ದೇಶಿಸಿ ರೂಪಿಸಲಾಗಿರುವ ಈ ಕಾರ್ಯಕ್ರಮಗಳನ್ನು ಸ್ವಾತಂತ್ರ್ಯ ದಿನಾಚರಣೆಯಂದು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು. ರೇಡಿಯೊ ಮತ್ತು ದೂರದರ್ಶನದಲ್ಲಿ ಇಂದು ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು ಹೊಸ ಯೋಜನೆಗಳನ್ನು ಪ್ರಕಟಿಸಿದರು.

ಮಧ್ಯಾಹ್ನದ ಊಟದ ಯೋಜನೆ ಅನ್ವಯ, ದೇಶದ ಐದು ಲಕ್ಷಕ್ಕೂ ಹೆಚ್ಚಿನ ಶಾಲೆಗಳ ಒಂದರಿಂದ ಐದನೇ ತರಗತಿಯ ಸುಮಾರು 11 ಕೋಟಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಕಾರ್ಯಕ್ರಮವನ್ನು ಈ ವರ್ಷದಿಂದಲೇ ಜಾರಿಗೊಳಿಸುವುದಾಗಿ ಪ್ರಧಾನಿಯವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT