25 ವರ್ಷದ ಹಿಂದೆ | ಬುಧವಾರ 16/8/1995

ಭಯೋತ್ಪಾದನೆಗೆ ಬೆಂಬಲ ನಿಲ್ಲಿಸಿದರೆ ಪಾಕಿಸ್ತಾನ ಜತೆ ಸಂಧಾನ: ಪ್ರಧಾನಿ ಸ್ಪಷ್ಟನೆ
ನವದೆಹಲಿ, ಆ. 15 (ಯುಎನ್‌ಐ, ಪಿಟಿಐ)– ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನೀಡುತ್ತಿರುವ ಪ್ರಚೋದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ಈ ವಿಷಯವನ್ನು ಅಂತರರಾಷ್ಟ್ರೀಯ ವಿವಾದವನ್ನಾಗಿ ಮಾಡುವುದನ್ನು ಪಾಕಿಸ್ತಾನ ಕೈಬಿಟ್ಟಿದ್ದೇ ಆದಲ್ಲಿ ಅದರೊಂದಿಗೆ ಇತ್ಯರ್ಥವಾಗದೆ ಉಳಿದಿರುವ ಎಲ್ಲ ವಿಷಯಗಳನ್ನು ಪರಿಹರಿಸಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ಇಲ್ಲಿ ಘೋಷಿಸಿದರು.
ದೇಶದ 49ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಐತಿಹಾಸಿಕ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ‘ಯಾವುದೇ ಪೂರ್ವ ಷರತ್ತುಗಳಿಲ್ಲದೆ ಮಾತುಕತೆಗೆ ನಾವು ತಯಾರಾಗಿದ್ದೇವೆ. ಭಾರತದಲ್ಲಿ ಗಲಭೆ ಹುಟ್ಟುಹಾಕಲು ನಡೆಸುತ್ತಿರುವ ಯತ್ನಗಳನ್ನು ಕೈಬಿಡಲು ಅವರಿಗೆ (ಪಾಕಿಸ್ತಾನೀಯರಿಗೆ) ಇದು ಸಕಾಲ’ ಎಂದು ಹೇಳಿದರು.
43 ಎಲ್‌ಟಿಟಿಇ ಉಗ್ರಗಾಮಿಗಳು ಜೈಲಿನಿಂದ ಪರಾರಿ
ವೆಲ್ಲೂರು, ಆ. 15 (ಪಿಟಿಐ, ಯುಎನ್‌ಐ)– ವೆಲ್ಲೂರಿನ ವಿಶೇಷ ಜೈಲು ಶಿಬಿರದಿಂದ ಕಳೆದ ರಾತ್ರಿ 43 ಮಂದಿ ಎಲ್‌ಟಿಟಿಇ ಉಗ್ರಗಾಮಿಗಳು ಸುರಂಗ ಕೊರೆದು ತಪ್ಪಿಸಿಕೊಂಡರು.
ತಪ್ಪಿಸಿಕೊಂಡವರಲ್ಲಿ 4 ಮಂದಿ ಮಹಿಳೆಯರು. ಇದರಲ್ಲಿ 10 ಜನರ ಒಂದು ಗುಂಪು 140 ಕಿ.ಮೀ ದೂರದ ಮದ್ರಾಸಿನ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಅವರನ್ನು ಪೊಲೀಸರು ಸುತ್ತುವರಿದರು. ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಮೂವರು ಸಯನೈಡ್ ಗುಳಿಗೆ ನುಂಗಿದ್ದು ಇಬ್ಬರು ಸ್ಥಳದಲ್ಲೇ ಸತ್ತರು. ಇನ್ನೊಬ್ಬರ ಸ್ಥಿತಿ ತೀವ್ರವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.