ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 24–8–1994

Last Updated 23 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಟಾಡಾ ರದ್ದಿಗೆ ಮಾನವ ಹಕ್ಕು ಆಯೋಗ ಆಗ್ರಹ

ನವದೆಹಲಿ, ಆ. 23 (ಪಿಟಿಐ)– ಭಯೋತ್ಪಾದನೆ ಮತ್ತು ಬುಡಮೇಲು ಚಟುವಟಿಕೆ (ತಡೆ) ಕಾಯ್ದೆ(ಟಾಡಾ)ಯನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಕೇಳಲು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಇಂದು ಇಲ್ಲಿ ನಿರ್ಧರಿಸಿತು.

ಕಾಯ್ದೆಯ ಕ್ರಮಬದ್ಧತೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಅದು ತೀರ್ಮಾನಿಸಿತು. ಈ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಈ ಹಿಂದಿನ ನಿರ್ಧಾರವನ್ನು ಪುನರ್‌ವಿಮರ್ಶಿಸುವಂತೆ ಕೇಳುವ ಅರ್ಜಿಯನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಹೇಳಿದರು. ‘ಈಗ ಅದರ ಕರಡು ಪ್ರತಿಯನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಈ ಸಂಬಂಧ ಅಂತಿಮ ವಾದ ಮಾಡಲಿರುವ ಪ್ರಖ್ಯಾತ ನ್ಯಾಯವಾದಿ ಎಫ್.ಎಸ್. ನಾರಿಮನ್ ಅವರೊಂದಿಗೆ ನಾವು ಚರ್ಚೆ ನಡೆಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

26ರಂದು ಬಸವಣ್ಣ ಪ್ರತಿಮೆ ಅನಾವರಣ

ಬೆಂಗಳೂರು, ಆ. 23– ನಿತ್ಯ ನೂತನ ಮಾನವೀಯ ಮೌಲ್ಯಗಳನ್ನು ಸಾರಿದ ಮಾನವತಾವಾದಿ ಬಸವಣ್ಣನವರ ಚಿರಸ್ಮರಣೆಗಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಸಮಿತಿ ಪ್ರತಿಷ್ಠಾಪಿಸಿರುವ ಅಶ್ವಾರೂಢ ಶ್ರೀ ಬಸವೇಶ್ವರರ ಕಂಚಿನ ಪ್ರತಿಮೆಯನ್ನು ಆ. 26ರಂದು ಉಪರಾಷ್ಟ್ರಪತಿ ಡಾ. ಕೆ.ಆರ್. ನಾರಾಯಣನ್ ಅನಾವರಣ ಮಾಡಲಿದ್ದಾರೆ.

ಶಾಸಕರ ಭವನದ ಆವರಣದಲ್ಲಿ ಜರುಗಲಿರುವ ಈ ಸಮಾರಂಭದಲ್ಲಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ದಾನಿಗಳನ್ನು ಸನ್ಮಾನಿಸಲಿದ್ದಾರೆ ಎಂದು ಬಸವ ಸಮಿತಿಯ ಅಧ್ಯಕ್ಷ ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೈಲಲ್ಲಿ ಎರ್ಷಾದ್ ನಿರ್ವಾಣಾವಸ್ಥೆ

ಢಾಕಾ, ಆ. 23 (ಎಎಫ್‌ಪಿ)– ಜೈಲಿನ ಸಿಬ್ಬಂದಿ ತಮ್ಮನ್ನು ಸಂಪೂರ್ಣವಾಗಿ ಬೆತ್ತಲೆ ಮಾಡಿದ್ದಾರೆ ಎಂದು ಬಾಂಗ್ಲಾ ದೇಶದ ಮಾಜಿ ಅಧ್ಯಕ್ಷ ಹುಸೇನ್ ಮಹಮ್ಮದ್ ಎರ್ಷಾದ್ ಆರೋಪಿಸಿದ್ದಾರೆ. ಈ ಘಟನೆಯಿಂದ ತಾವು ಬೇಸತ್ತಿದ್ದು ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅವರು ಕೋರಿದ್ದಾರೆ.

ಎರ್ಷಾದ್ ಅವರ ದೇಹಶೋಧ ನಡೆಸುವ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಅವರನ್ನು ಸಂಪೂರ್ಣವಾಗಿ ವಿವಸ್ತ್ರರನ್ನಾಗಿ ಮಾಡಿದರು ಎಂದು ಅವರ ವಕೀಲರು ಕೋರ್ಟಿನಲ್ಲಿ ಹೇಳಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಎರ್ಷಾದ್ ಜೈಲು ವಾಸ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT