ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 13-01-1969

Last Updated 12 ಜನವರಿ 2019, 20:08 IST
ಅಕ್ಷರ ಗಾತ್ರ

ಪಾಕ್‌ ಜೊತೆ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆಗೆ ಭಾರತದ ವಿರೋಧ

ನವದೆಹಲಿ, ಜ.12– ಕಾಶ್ಮೀರವೂ ಸೇರಿ ಪಾಕಿಸ್ತಾನದ ಜತೆ ಇರುವ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆಗೆ ಅಥವಾ ಪಂಚಾಯಿತಿಗೆ ಭಾರತ ಸಿದ್ಧ ಇಲ್ಲ.

ಈ ವಿಷಯವನ್ನು ಇಂದು ಇಲ್ಲಿ ಅಧಿಕೃತ ವಲಯಗಳು ತಿಳಿಸಿದವು. ಕಾಶ್ಮೀರದ ಬಗ್ಗೆ ಮಧ್ಯಸ್ಥಿಕೆಗೆ ತಾವು ಸಿದ್ಧ ಎಂಬ ಇರಾನಿನ ಷಾ ಅವರ ಹೇಳಿಕೆಯನ್ನು ರಾವಲ್ಪಿಂಡಿ ಸ್ವಾಗತಿಸಿದ ವರದಿಗಳನ್ನು ಕುರಿತು ಈ ವಲಯಗಳು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದವು.

ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅಥವಾ ಇತರ ನಾಯಕರ ಜತೆ ಮಾತುಕತೆ ನಡೆಸುವಾಗ ಇರಾನಿನ ಷಾ ಈ ರೀತಿಯ ಹೇಳಿಕೆ ನೀಡಿರಲಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿದವು.

ಭಾರತ–ಪಾಕಿಸ್ತಾನ್‌ ನಡುವೆ ಉತ್ತಮ ಬಾಂಧವ್ಯ ತರಲು ಅವರು ನೆರವು ನೀಡುವರೇ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಷಾ ಅವರನ್ನು ಕೇಳಲಾಗಿತ್ತು. ಎರಡೂ ರಾಷ್ಟ್ರಗಳು ಅದಕ್ಕೆ ಸಿದ್ಧವಿದ್ದರೆ ಮಧ್ಯಸ್ಥಿಕೆ ವಹಿಸುವುದಾಗಿ ಅವರು ಉತ್ತರ ಕೊಟ್ಟಿದ್ದರು.

‌ಸಮತೂಕದ ಬಜೆಟ್‌, ದೃಢ ಬೆಳವಣಿಗೆ ಗುರಿ ಸಾಧನೆಗೆ ಆರ್ಥಿಕ ನೀತಿ

ನವದೆಹಲಿ, ಜ.12– ಉಪಪ್ರಧಾನಿ ಮುರಾರಜಿ ದೇಸಾಯಿ ಅವರು 1969–70ರ ಕೇಂದ್ರ ಅಯವ್ಯಯ ಪತ್ರವನ್ನು ಫೆಬ್ರುವರಿ 28ರಂದು ಸಂಸತ್ತಿನಲ್ಲಿ ಮಂಡಿಸುವರು.‌

ಆರ್ಥಿಕ ರಂಗದಲ್ಲಾದ ಇತ್ತೀಚಿನ ಗಳಿಕೆಗಳನ್ನು ಕ್ರೋಢೀಕರಿಸಲು ಮುಖ್ಯವಾಗಿ ಯತ್ನಿಸಲಾಗುವುದೆಂಬ ಬಗ್ಗೆ ಸೂಚನೆಗಳಿವೆ.

ಸುಭದ್ರ ಬೆಳವಣಿಗೆ ಮತ್ತು ತೃಪ್ತಿಕರ ಸಮತೋಲ ಬಜೆಟ್ ಗುರಿ ಸಾಧಿಸುವ ದೃಷ್ಟಿಯಿಂದ 1969–70ರ ಆರ್ಥಿಕ ನೀತಿಯನ್ನು ರೂಪಿಸಲಾಗುವುದು.

ಮುಂದಿನ ವರ್ಷದ ಬೆಳವಣಿಗೆ ಉತ್ತಮಗೊಳ್ಳುವುದರ ಮೂಲಕ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ವಿಸ್ತರಣೆ ಸಾಧಿಸುವ ಭರವಸೆಯನ್ನು ಮುರಾಜಿ ಹೊಂದಿದ್ದಾರೆ.

1968–69ನೇ ಸಾಲಿನ 290 ಕೋಟಿ ರೂಗಳ ಪ್ರಮಾಣದ ಖೋತಾ ಬಜೆಟ್‌ನಿಂದಲೂ ಬೆಲೆಗಳು ಅದೇ ಮಟ್ಟದಲ್ಲಿ ಉಳಿದಿವೆ. ಕೈಗಾರಿಕೆ ಉತ್ಪನ್ನ ಹಾಗೂ ರಫ್ತುಗಳು ಅಂದಾಜಿನಂತೆ ಚೇತರಿಸಿಕೊಂಡಿವೆ. ಕಳೆದ ಸಾರ್ವತ್ರಿಕ ಚುನಾವಣೆಯ ನಂತರ ಮೂರನೇ ಬಜೆಟ್ಟನ್ನು ಮಂಡಿಸುವ ಮುರಾಜಿಯವರಿಗೆ ಹೆಚ್ಚಿನ ಆತಂಕಗಳಿಲ್ಲ.1966–67ರ ಆರ್ಥಿಕ ಸ್ಥಿತಿಗತಿಗೆ ಅನಾವೃಷ್ಟಿಯಿಂದೊದಗಿದ ದುರ್ಗತಿ, 1967–68ರಲ್ಲಿ ಆದ ಆದಾಯ ಇಳುವರಿ ಚಿಂತೆ ಈ ಬಾರಿ ಅವರಿಗಿಲ್ಲ.

ಕಾರ್ಮಿಕ ಮಹಾಸಂಘ ರಚನೆಗೆ ಅಧ್ಯಯನ ತಂಡದ ಶಿಫಾರಸು

ನವದೆಹಲಿ, ಜ.12– ಬ್ರಿಟನ್ನಿನ ಟ್ರೇಡ್ ಯೂನಿಯನ್ ಕಾಂಗ್ರಸ್ಸಿನ ಮಾದರಿಯಲ್ಲಿ ಭಾರತದಲ್ಲಿ ಕಾರ್ಮಿಕ ಮಹಾಸಂಘವನ್ನು ರಚಿಸುವಂತೆ ಕಾರ್ಮಿಕ ಆಯೋಗದ ಅಧ್ಯಯನ ತಂಡವು ಪ್ರತಿಪಾದಿಸಿದೆ.

‘ಕಾರ್ಮಿಕ ಆಡಳಿತ ವರ್ಗದ ಬಾಂಧವ್ಯದ ಸಾಮಾಜಿಕ ವಿಷಯಗಳ’ ಬಗ್ಗೆ ಅಧ್ಯಯನ ತಂಡದ ಮಾದರಿಯನ್ನು ಇಂದು ಇಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಮಿಕರು, ಮಾಲಿಕರು ಮತ್ತು ಮ್ಯಾನೇಜರುಗಳಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ಕೊಡುವುದಕ್ಕಾಗಿ ಭಾರತೀಯ ಕಾರ್ಮಿಕ ಸಮ್ಮೇಳನ(ಐ.ಎಲ್.ಸಿ) ಮತ್ತು ಸ್ಥಾಯಿ ಕಾರ್ಮಿಕ ಸಮಿತಿಯನ್ನು(ಎಸ್‌.ಎಲ್‌.ಸಿ) ಪುನರ್ರಚಿಸುವಂತೆಯೂ ಅಧ್ಯಯನ ತಂಡ ಶಿಫಾರಸು ಮಾಡಿದೆ.

ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರಕಾರಗಳು ರಚಿತವಾಗಿರುವುದರಿಂದ ಕೇಂದ್ರ–ರಾಜ್ಯಗಳ ಬಾಂಧವ್ಯದ ಸಂಬಂಧದಲ್ಲಿ ಈ ರೀತಿ ಪುನರ್ರಚನೆ ಅಗತ್ಯವೆಂದು ತಿಳಿಸಿದೆ. ರಾಷ್ಟ್ರದಲ್ಲಿಯ ಟ್ರೇಡ್‌ ಯೂನಿಯನ್‌ ಸಂಸ್ಥೆಗಳ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅಧ್ಯಯನ ತಂಡವು ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಕೇವಲ ಸ್ವಲ್ಪೇ ಜನ ಸಂಘಗಳಿಗೆ ಸೇರಿದ್ದಾರೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT