ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ 04 ಆಗಸ್ಟ್‌, 1969

Last Updated 3 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ಅಮೆರಿಕ – ರುಮೇನಿಯ ಬಾಂಧವ್ಯ ಸುಧಾರಣೆ
ಬುಕಾರೆಸ್ಟ್‌, ಆ.3– ಅಮೆರಿಕಾ ಮತ್ತು ರುಮೇನಿಯಾ ನಡುವೆ ಬಾಂಧವ್ಯ ಉತ್ತಮಗೊಂಡಿದೆ ಯೆಂದು ಅಧ್ಯಕ್ಷ ನಿಕ್ಸನ್‌ ಮತ್ತು ಅಧ್ಯಕ್ಷ ನಿಕೋಲೆ ಸಿಯೂಸೆಸ್ಕು ಅವರು ತಮ್ಮ ಎರಡು ದಿನಗಳ ಮಾತುಕತೆ ಅಂತ್ಯದಲ್ಲಿ ಇಂದು ಒಪ್ಪಿಕೊಂಡು ಮತ್ತಷ್ಟು ಪ್ರಗತಿ ಸಾಧ್ಯವಾದೀತೆಂಬ ಆಶಾವಾದ ವ್ಯಕ್ತಪಡಿಸಿದರು.

ಶ್ವೇತಭವನದ ಕಾರ್ಯದರ್ಶಿ ರೊನಾಲ್ಡ್‌ ಜಿಗ್ಲರ್‌ ಅವರು ಸುದ್ದಿ ತಿಳಿಸಿ ರುಮೇನಿಯಾ ಜನತೆ ತಮಗೆ ‘ಅಮೋಘ’ ಸ್ವಾಗತಕ್ಕಾಗಿ ಸಂತಸ ಸೂಚಿಸಿದ್ದಾರೆಂದರು.

ತಾವು ತಿಳಿಸಬೇಕೆಂದಿದ್ದ ಸುದ್ದಿಗೆ ಇಬ್ಬರು ಅಧ್ಯಕ್ಷರೂ ಒಪ್ಪಿಗೆ ಕೊಟ್ಟಿರುವುದಾಗಿ ಹೇಳಿದ ಜಿಗ್ಲರ್‌ ಅವರು, ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಪ್ರಧಾನವಾಗಿ ಪ್ರಸ್ತಾಪಿಸುವ ಒಂದು ಹೇಳಿಕೆ ಕೊಟ್ಟರು.

ಸೆಣಬು ಕಾರ್ಮಿಕರ ಮುಷ್ಕರ ತಪ್ಪಿಸುವ ಕೊನೆಗಳಿಗೆ ಯತ್ನ ವಿಫಲ
ಕಲ್ಕತ್ತ, ಆ.3– ನಾಳೆ ಬೆಳಿಗ್ಗೆಯಿಂದ ಪ್ರಾರಂಭವಾಗಲಿರುವ ಸೆಣಬಿನ ಗಿರಣಿಗಳ ಕಾರ್ಮಿಕರ ಮುಷ್ಕರವನ್ನು ತಪ್ಪಿಸಲು ಕೇಂದ್ರ ವಿದೇಶಾಂಗ ವಾಣಿಜ್ಯ ಖಾತೆ ಸಚಿವ ಬಿ.ಆರ್‌.ಭಗತ್‌ ಅವರು ಇಂದು ಕೊನೆಗಳಿಗೆಯವರೆಗೆ ನಡೆಸಿದ ಪ್ರಯತ್ನಗಳೆಲ್ಲ ವಿಫಲಗೊಂಡವು.

ಪಶ್ಚಿಮ ಬಂಗಾಳದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸೆಣಬು ಕಾರ್ಖಾನೆ ಕಾರ್ಮಿಕರು ನಾಳೆಯಿಂದ ಅನಿರ್ದಿಷ್ಟ ಕಾಲದ ಮುಷ್ಕರ ಮಾಡುವರು. ವರ್ಷಕ್ಕೆ ಸುಮಾರು ಮುನ್ನೂರು ಕೋಟಿ ಆದಾಯ ತರುವ ಹೌರಾ ಮತ್ತು ಹೂಗ್ಲಿ ಜಿಲ್ಲೆಯಲ್ಲಿನ ಅರವತ್ಮೂರು ಸೆಣಬಿನ ಕಾರ್ಖಾನೆಗಳಿಗೆ ನಾಳೆಯಿಂದ ಮುಷ್ಕರದ ಬಿಸಿ ಮುಟ್ಟಲಿದೆ.

‘ಕನ್ನಡ ಕಲ್ಯಾಣಕ್ಕೆ ಸಂಜೀವಿನಿ’ ಭರವಸೆ ನಡುವೆ ಪರಿಷತ್‌ ತ್ರೈವಾರ್ಷಿಕ ಯೋಜನೆ ಅಸ್ತಿತ್ವಕ್ಕೆ
ಬೆಂಗಳೂರು, ಆ.3– ‘ಕನ್ನಡ ಕಲ್ಯಾಣಕ್ಕೆ ಸಂಜೀವಿನಿ’ ಎಂದು ಉದ್ಘಾಟಕ ಡಾ. ವಿ.ಕೃ.ಗೋಕಾಕ್‌ ಅವರು ಕರೆದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ತ್ರೈವಾರ್ಷಿಕ ಯೋಜನೆ, ಶಿಕ್ಷಣ ಸಚಿವ ಶ್ರೀ ಶಂಕರಗೌಡ ಅವರಿಂದ ‘ಸಂಪೂರ್ಣ ಬೆಂಬಲದ ಭರವಸೆ’ ಪಡೆದು ಇಂದು ಅಸ್ತಿತ್ವಕ್ಕೆ ಬಂತು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ವಿವಿಧ ಮುಖಗಳಲ್ಲಿ ಹಲವಾರು ಅಭ್ಯುದಯ ಕಾರ್ಯಕ್ರಮಗಳನ್ನು ಉದ್ದೇಶಿಸಿರುವ ತ್ರೈವಾರ್ಷಿಕ ಯೋಜನೆಯ ಅಂದಾಜು ವೆಚ್ಚ ಸುಮಾರು 15 ಲಕ್ಷ ರೂಪಾಯಿಗಳು.

ನಾಗರಿಕ ಸಂಯುಕ್ತ ರಂಗದ ಪ್ರಣಾಳಿಕೆಗೆ ನಗರದ ಸಮಾವೇಶದ ಅಂಗೀಕಾರ
ಬೆಂಗಳೂರು, ಆ.3– ಮುಂದಿನ ಚುನಾವಣೆಯ ನಂತರ ತಾನು ಕಾರ್ಪೊರೇಷನ್ನಿನಲ್ಲಿ ಅಧಿಕಾರಕ್ಕೆ ಬಂದರೆ ಕೈಗೊಳ್ಳುವುದಾಗಿ ನಾಗರಿಕ ಸಂಯುಕ್ತ ರಂಗವು ನೀಡಿರುವ ಭರವಸೆಗಳನ್ನೊಳಗೊಂಡ ಕಾರ್ಯಕ್ರಮಕ್ಕೆ ನಾನಾ ರಾಜಕೀಯ ಪಕ್ಷಗಳು ಇಂದು ಬೆಂಬಲ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT