ಪುಲ್ವಾಮಾ ಎಫೆಕ್ಟು!

ಬುಧವಾರ, ಮಾರ್ಚ್ 20, 2019
25 °C

ಪುಲ್ವಾಮಾ ಎಫೆಕ್ಟು!

Published:
Updated:
Prajavani

ಭಾರತೀಯರ ಸಿಟ್ಟು ನೆತ್ತಿಗೇರಿದೆ. ಪುರುಷರು ಮೀಸೆ ತಿರುವುತ್ತಾ ಗರ್ಜಿಸಲಾರಂಭಿಸಿದ್ದಾರೆ. ಮಹಿಳೆಯರು ಕಣ್ಣರಳಿಸಿ ಮಾತನಾಡುತ್ತಿದ್ದಾರೆ. ವಿಶೇಷವೆಂದರೆ, ನಮ್ಮ ಗೂಡಂಗಡಿಯ ಚೊಂಗಯ್ಯ ಕೂಡಾ ಥೇಟ್ ಪ್ರೈಮ್ ಮಿನಿಸ್ಟರ್ ಅಡ್ವೈಸರ್‌ನಂತೆ ನಾನಾ ಸಲಹೆಗಳನ್ನು ಕೊಡಲಾರಂಭಿಸಿದ್ದಾನೆ. ಅವನು ಬಿಡಿ, ದೇಶದ ಮೂಲೆ ಮೂಲೆಗಳಲ್ಲೂ ‘ರಕ್ಷಣಾ ಸಚಿವ’ರನ್ನು ಕಾಣಬಹುದು. ಅವರ ವಾಟ್ಸ್‌ ಆ್ಯಪ್‌, ಫೇಸ್‌ಬುಕ್, ಟ್ವಿಟರ್ ಹೇಳಿಕೆಗಳನ್ನು ಓದಿದರೆ, ನಮ್ಮ ರಕ್ಷಣಾ ಸಚಿವರೊಮ್ಮೆ ದಂಗಾಗಿಬಿಡಬೇಕು. ಕೆಲವರು, ತಿನ್ನುವ ವಿಚಾರದಲ್ಲೂ ದೇಶಪ್ರೇಮ ತೋರಿಸುತ್ತಿದ್ದಾರೆ. ‘ನಮ್ಮ ಮನೆಯಲ್ಲಿ ಇನ್ನು ಮುಂದೆ ಯಾರೂ ಮೈಸೂರು ಪಾಕ್ ತಿನ್ನುವುದಿಲ್ಲ ಎಂದು ತೀರ್ಮಾನಿಸಿದ್ದೇವೆ’ ಎಂದು ಫೇಸ್‌ಬುಕ್‌ನಲ್ಲಿ ಒಬ್ಬರು ಸ್ಟೇಟಸ್ ಹಾಕಿದ್ದೇ ತಡ, ಎಲ್ಲಾ ಹಿಂಬಾಲಕರೂ (ಫಾಲೋವರ್ಸ್) ‘ಅದನ್ನು ನಾವೂ ಪಾಲಿಸಲಿದ್ದೇವೆ’ ಎಂದು ಶಪಥ ಹೂಡಿದ್ದಾರೆ. ‘ಪಾಕಸ್ಥಾನ’ ಎಂಬ ಹೆಸರಿನ ರೆಸ್ಟೊರೆಂಟ್‌ಗೆ ಯಾರೋ ಬಂದು ಬೋರ್ಡಿಗೆ ಮಸಿ ಬಳಿದು ಹೋಗಿದ್ದಾರೆ. ಛೇ! ಪಾಕಸ್ಥಾನ ಎಂದರೆ ಅಡುಗೆ ಕೋಣೆ ಎಂಬುದೂ ಅವರಿಗೆ ಗೊತ್ತಿರಬೇಡವೇ?

ಒಟ್ಟಾರೆ ಎಲ್ಲಾ ಭಾರತೀಯರ ಧ್ವನಿಯ ಧಾಟಿ ಒಂದೇ. ‘ಈ ಸಾರಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲೇಬೇಕು!’ ಹೀಗೆ ಘಂಟಾಘೋಷಣೆ ಮಾಡಿದ ಮೊದಲ ಭಾರತೀಯ ಪ್ರಜೆ ಒಬ್ಬ ‘ಕಾವಲುಗಾರ’. ಪುಲ್ವಾಮಾದಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿ ನಮ್ಮ ದೇಶದ ‘ಕಾವಲುಗಾರ’ ನಿದ್ದೆ ಹೋಗುವ ಹಾಗಿರಲಿಲ್ಲ. ನಿರ್ದಿಷ್ಟ ದಾಳಿ ನಿಶ್ಚಿತ ಎಂಬ ಭಯ ಕಾಡಿದ್ದು ಮೊದಲು ರಾಯಲ್ ಗಾಂಧಿಗೆ! ಮಗರಾಯ ಯಾಕೆ ಬ್ರೇಕ್ ಡೌನ್ ಆಗಿರುವ ದಿಲ್ಲಿ ಸರ್ಕಾರಿ ಬಸ್‌ನಂತಾಗಿದ್ದಾನೆ ಎಂದು ಅಮ್ಮ ವಿಚಾರಿಸಿದರೆ, ‘ಮಮ್ಮಿ, ನನ್ನ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆಯುತ್ತೇನೋ ಎಂಬ ಸಂಶಯ. ನಮ್ಮ ಕೈಯಲ್ಲಿ ರಫೇಲ್ ವಿಮಾನ ಇರುವುದರಿಂದ ಈ ಬಾರಿ ನಾವು ಲೋಕಸಭೆ ಯುದ್ಧವನ್ನು ಗೆದ್ದೇ ಗೆಲ್ಲುತ್ತೇವೆ ಅಂದ್ಕೊಂಡಿದ್ದೆ. ಆದರೆ ಅವರೀಗ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ…’ ಎಂದು ರಾಯಲ್ ಗಾಂಧಿ ಹೇಳುವಷ್ಟರಲ್ಲಿ, ಟಿ.ವಿ.ಯಲ್ಲಿ ಸರ್ಜಿಕಲ್ ದಾಳಿ ಸುದ್ದಿಯ ಆರ್ಭಟವಾಗುತ್ತಿತ್ತು.

‘ಮೈ ಗಾಡ್! ನಾನು ಪ್ರಧಾನಿಯಾಗುವ ಕನಸು ನುಚ್ಚುನೂರಾದಂತೆ!’ ಎಂದು ರಾಯಲ್ ಗಾಂಧಿ ಮತ್ತೆ ಚಿಂತಾಕ್ರಾಂತರಾದರು.

ಅತ್ತ ಬೀದಿಗಿರಿ ದೀದಿಗೆ ಪುಲ್ವಾಮಾ ದಾಳಿಯ ಬಗ್ಗೆ ಏನೇನೋ ಶಂಕೆ. ಕೂಡಲೇ ಅವರು ಗೌಡ್ ಫಾದರ್‌ಗೆ ಫೋನ್ ಮಾಡಿ ತನ್ನ ವಾದ ಮಂಡಿಸಿದರು. ‘ಸರ್ಕಾರಕ್ಕೆ ಬಾಂಬ್ ಸ್ಫೋಟದ ಬಗ್ಗೆ ಮಾಹಿತಿ ಇದ್ದರೂ ನಿರ್ಲಕ್ಷಿಸಿದೆ ಸಾರ್! ಪುಲ್ವಾಮಾ ದಾಳಿ ನಡೆದರೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಚುನಾವಣೆ ಗೆಲ್ಲಬಹುದಲ್ಲ… ಅದಕ್ಕೆ! ನಾನು ದಿಲ್ಲಿಗೆ ಹೋಗಿ ಸಫ್‌ದರ್‌ಜಂಗ್‌ ರೋಡಿನ ಮಧ್ಯೆ ಪ್ರತಿಭಟನೆ ಕೂರಬೇಕೆಂದಿದ್ದೇನೆ’. ಇದನ್ನು ಕೇಳಿ ಗೌಡ್ ಫಾದರ್, ‘ಛೆ ಛೇ, ಹಾಗೇನಿರಲಿಕ್ಕಿಲ್ಲಮ್ಮಾ… ನಾವು ಹಾಗೆಲ್ಲಾ ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡಬಾರದು. ಸರಿ, ಇಡ್ತೀನಿ’ ಅನ್ನುತ್ತಾ, ಚುನಾವಣೆಗೆ ನಿಲ್ಲಲು ಹೊರಟಿರುವ ಮೊಮ್ಮಗನನ್ನು ಕರೆದರು. ಅವನಿಗೆ, ಪುಲ್ವಾಮಾ ದಾಳಿಯಲ್ಲಿ ತೀರಿಕೊಂಡವರ ಬಗ್ಗೆ ಸಂತಾಪ ಸೂಚಕ ಹೇಳಿಕೆ ಬಿಡುಗಡೆ ಮಾಡುವಂತೆ ಹೇಳಿ ನಿದ್ದೆಗೆ ಶರಣಾದರು.

ದೇಶಕ್ಕೆ ವೈರಿ ರಾಷ್ಟ್ರದಿಂದ ಆಪತ್ತು ಬಂದಿರುವಾಗ ಜನತೆ ಒಟ್ಟಾಗಬೇಕು ನಿಜ. ಆದರೆ ಮಾಜಿ ಸಿಎಮ್ಮಯ್ಯರು ಮತ್ತು ಎಡವಟ್ಟೂರಪ್ಪರು ಹಿಂದುಸ್ತಾನ, ಪಾಕಿಸ್ತಾನದಷ್ಟೇ ಘೋಷಿತ ವೈರಿಗಳಾಗಿರುವಾಗ, ಅವರೊಳಗೆ ‘ಲವ್ ಜಿಹಾದ್’ ಸಂಭವಿಸುವುದು ಸುತರಾಂ ಸಾಧ್ಯವಿಲ್ಲ. ಆದರೆ ಮೊನ್ನೆ ಅವರಿಬ್ಬರೂ ಪರಸ್ಪರ ಭೇಟಿಯಾಗಿ, ಕೈಕುಲುಕಿ, ಮಾತನಾಡಿದ್ದಕ್ಕೆ ಪುಲ್ವಾಮಾ ದಾಳಿಯೇ ಕಾರಣವೆಂದು ಕೆಲವರ ಅಂಬೋಣ. ‘ಬಾಗಲ್‌ಕೋಟೆ... ಅಲ್ಲಲ್ಲ.. ಬಾಲಾ ಕೋಟ್ ಮೇಲೆ ಯಾವತ್ತೋ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಿತ್ತೂರೀ… ಆದರೆ ‘ಚೌಕಿದಾರ’ರಿಗೆ ನಮ್ಮ ರಾಜ್ಯದಲ್ಲಿ ‘ಸರ್ಜರಿ ಸ್ಟ್ರೈಕ್’ ಮಾಡುವುದರಲ್ಲೇ ಆಸಕ್ತಿ… ಏನ್ ಮಾಡ್ತೀರಾ?’ ಎಂದು ಮಾಜಿ ಸಿಎಮ್ಮಯ್ಯ ಜೋರಾಗಿ ನಕ್ಕಿದರಂತೆ!

ಈ ಹೊತ್ತಿನಲ್ಲಿ ಪಿ.ಎಂ ಸಾಹೇಬ್ರು ‘ನಮ್ಮ ಶತ್ರುಗಳು ಉಗ್ರರು ಮಾತ್ರ!’ ಅಂದಿದ್ದು ಅವರ ಉಳಿದ ವೈರಿಗಳಿಗೆ ಕಸಿವಿಸಿಯಾಗಿದೆ! ಜಮ್ಮು-ಕಾಶ್ಮೀರದಲ್ಲಿರುವ ಪಾಕ್ ಪ್ರೇಮಿಗಳು ‘ಇದು ಸಾಧ್ಯವೇ ಇಲ್ಲ!’ ಎಂದು ಕಲ್ಲುಗಳ ಸಂಗ್ರಹದಲ್ಲಿ ನಿರತರಾಗಿದ್ದಾರೆ. ‘ಮಹಾಬಂಧನ’ದಲ್ಲಿರುವ ವಿರೋಧ ಪಕ್ಷದ ನಾಯಕರೆಲ್ಲಾ ಒಕ್ಕೊರಲಿನಲ್ಲಿ ‘ನಾವು ನಿಮ್ಮ ಮಿತ್ರರಾಗಲು ಯಾವತ್ತೂ ಇಷ್ಟಪಡೊಲ್ಲ!’ ಎಂದು ಸಾರಿ ಹೇಳಿದ್ದಾರೆ.

ಈ ನಡುವೆ ಶೆಹನ್ ಶಾ ತಮ್ಮ ಪಕ್ಷದ ಸೇನಾಳುಗಳನ್ನು ಉದ್ದೇಶಿಸಿ ವೀರಾವೇಶದಿಂದ ಮಾತನಾಡುತ್ತಿದ್ದರು. ‘ಎಲ್ಲರೂ ಯುದ್ಧಕ್ಕೆ ಸಿದ್ಧರಾಗಿ...!’

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !