ಈಡುಗಾಯಿ ಭವಿಷ್ಯ!

ಗುರುವಾರ , ಏಪ್ರಿಲ್ 25, 2019
33 °C

ಈಡುಗಾಯಿ ಭವಿಷ್ಯ!

Published:
Updated:
Prajavani

‘ಈಡುಗಾಯಿ ಒಡೀಲಿಲ್ಲ, ರಥದ ಹಗ್ಗ ಹರೀತಲೇ ಪರಾಕ್...’ ತೆಪರೇಸಿ ಕಾರಣೀಕ ನುಡಿದ.

‘ಯಾವೂರ ಜಾತ್ರೆ ಕಾರ್ಣೀಕನಲೆ ಇದು?’ ದುಬ್ಬೀರನಿಗೆ ನಗು.

‘ಇದಾ? ಸದ್ಯ ಚುನಾವಣೆ ಜಾತ್ರೇದು ಅನ್ಕಾ, ಮೊನ್ನೆ ಶೃಂಗೇರೀಲಿ ಕುಮಾರಸ್ವಾಮಿ ಒಡೆದ ಒಂದು ಈಡುಗಾಯಿ ಒಡೀಲಿಲ್ಲಂತೆ. ನಿನ್ನೆ ನಂಜನಗೂಡು ರಥದ ಹಗ್ಗ ಹರಿದೋಗಿತ್ತಂತೆ. ಏನಿದರ ಶಕುನ? ಯಾರ ಭವಿಷ್ಯ ಏನಾಗಬಹುದು?’

‘ಭವಿಷ್ಯ, ಜ್ಯೋತಿಷ, ಶಕುನ ಇದನ್ನೆಲ್ಲ ರೇವಣ್ಣ ಹತ್ರ ಕೇಳಿದ್ರೆ ಒಳ್ಳೇದಿತ್ತಪ್ಪ. ನಿಮ್ ಜ್ಯೋತಿಷಿಗಳು, ಟಿ.ವಿ. ಚಾನೆಲ್‍ನೋರು ಏನಂತಾರೆ?’

‘ರಥದ ಹಗ್ಗ ಹರೀತು ಅಂದ್ರೆ ಮೈತ್ರಿ ಮುರಿಯುತ್ತೇನೋ ಅಂತ ಒಬ್ರು ಗುಣಾಕಾರ, ಭಾಗಾಕಾರ ಮಾಡಿ ಹೇಳಿದ್ರು. ಹೊಸ ಹಗ್ಗ ಜೋಡಿಸ್ಕೊಂಡು ರಥ ಎಳೆದಿದ್ರಿಂದ ಮೈತ್ರಿ ಮತ್ತೆ ತೇಪೆ ಹಚ್ಕಂಡು ನಡೀತತೆ ಬಿಡ್ರಿ ಅಂತ ಮತ್ತೊಬ್ರು ಅಂದ್ರಪ್ಪ’.

‘ಮತ್ತೆ ಈ ತೆಂಗಿನಕಾಯಿ ಕತೆ?’

‘ನಮ್ಮಲ್ಲಿ ಎಲೆಶಾಸ್ತ್ರ, ಕವಡೆಶಾಸ್ತ್ರ, ಗಿಳಿಶಾಸ್ತ್ರ, ಸಂಖ್ಯಾಶಾಸ್ತ್ರ ಹೇಳೋರೇ ಜಾಸ್ತಿ. ಕಾಯಿಶಾಸ್ತ್ರ ಯಾರೂ ಹೇಳಲ್ಲ. ಆದ್ರೂ ಒಬ್ಬ ಜ್ಯೋತಿಷಿನ ಕೇಳ್ದೆ. ಅವರು, ‘ಮುಂಡೇದೆ, ಕಾಯಿ ಒಡೀಲಿಲ್ಲ ಅಂದ್ರೆ ನಿನ್ ತಲೆ ಗಟ್ಟಿ ಅಂತ ಅರ್ಥ. ಒಂದು ಬೆಳ್ಳಿ ತೆಂಗಿನಕಾಯಿ ಮಾಡಿಸಿಕೊಡು, ಎಲ್ಲ ನೀ ಹೇಳಿದಂಗೆ ಕೇಳೋತರ ಮಾಡಿಕೊಡ್ತೀನಿ’ ಅಂದ್ರು. ‘ಮನೇಲಿ ನನ್ ಹೆಂಡ್ತೀನೇ ನನ್ ಮಾತು ಕೇಳಲ್ಲ, ಇನ್ನು ಇವನೇನೋ ಮಾಡಿಕೊಟ್ರೆ ಊರೆಲ್ಲ ಕೇಳ್ತಾರಾ?’ ತೆಪರೇಸಿ ನಕ್ಕ. ಅಷ್ಟರಲ್ಲಿ ಅಡುಗೆ ಮನೆಯಿಂದ ಚಹಾ ಹಿಡಿದು ಹೊರಕ್ಕೆ ಬಂದ ತೆಪರೇಸಿ ಹೆಂಡತಿ ‘ಏನ್ರಿ ಅದೂ, ಏನೋ ನನ್ ಬಗ್ಗೆ ಮಾತಾಡಿದಂಗಿತ್ತು? ಏನೋ ಶಾಸ್ತ್ರ, ಕಾಯಿ ಗೀಯಿ ಅಂತಿದ್ರಿ?’ ಎಂದು ಪ್ರಶ್ನಿಸಿದಳು.

‘ಅದಾ? ಏನಿಲ್ಲ, ತೆಂಗಿನಕಾಯಿ ಒಡೀದಿದ್ರೆ ಏನಾಗುತ್ತೆ ಅಂತ ಕೇಳ್ತಿದ್ದೆ...’ ತೆಪರೇಸಿ ತಡವರಿಸಿದ.

‘ನಿಮ್ ತಲೆ, ತೆಂಗಿನಕಾಯಿ ಒಡೀದಿದ್ರೆ ಅವತ್ತು ಚಟ್ನಿ ಇಲ್ಲ ಅಷ್ಟೆ, ಅದು ಬಿಟ್ಟು ಇನ್ನೇನಾಗುತ್ತೆ?’ ತೆಪರೇಸಿ ಹೆಂಡತಿ ಮಾತಿಗೆ ಎಲ್ಲರೂ ಒಟ್ಟಿಗೇ ನಕ್ಕರು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !