ಮಂಗಳವಾರ, ನವೆಂಬರ್ 19, 2019
25 °C

ಶುಕ್ರವಾರ, 12–9–1969

Published:
Updated:

ಇಸ್ರೇಲ್ ಮೇಲೆ ಬಾಂಬ್ ದಾಳಿ: ಕನಿಷ್ಠ ಏಳು ಈಜಿಪ್ಟ್ ವಿಮಾನ ಧ್ವಂಸ

ಟೆಲ್ಅವೀವ್, ಸೆ. 11– ಸಿನೈ ಪ್ರದೇಶದಲ್ಲಿರುವ ಇಸ್ರೇಲಿ ಸೇನೆ ಮತ್ತು ನೆಲೆಗಳ ಮೇಲೆ ಇಂದು ಈಜಿಪ್ಟಿನ ವಿಮಾನಗಳು ದಾಳಿ ಮಾಡಿದಾಗ ನಡೆದ ಎರಡು ಹೋರಾಟಗಳಲ್ಲಿ ಕನಿಷ್ಠ ಏಳು ಈಜಿಪ್ಟ್‌ ವಿಮಾನಗಳನ್ನು ಧ್ವಂಸ ಮಾಡಿದುದಾಗಿ ಇಸ್ರೇಲ್ ಸೇನಾ ವಕ್ತಾರರೊಬ್ಬರು ಪ್ರಕಟಿಸಿದರು. ಇನ್ನೊಂದು ವಿಮಾನಕ್ಕೂ ಜಖಂ ಆಗಿದೆಯೆಂದು ಇಸ್ರೇಲ್ ಭಾವಿಸಿದೆ.

ನಗರ ವಾರ್ಸಿಟಿ ವಿರುದ್ಧ ಆಪಾದನೆಗಳ ಬಗ್ಗೆ ಯು.ಜಿ.ಸಿ. ತನಿಖೆ

ಬೆಂಗಳೂರು, ಸೆ. 11– ‘ವಿಶ್ವವಿದ್ಯಾನಿಲಯದ ಘನತೆಗೆ, ನನ್ನ ವೈಯಕ್ತಿಕ ಗೌರವಕ್ಕೆ ಧಕ್ಕೆ ಬಂದರೂ ಚಿಂತೆ ಇಲ್ಲ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಬಗ್ಗೆ ಸಂದೇಹ ನಿವಾರಣೆ ಮಾಡಲು ಆಪಾದನೆಗಳನ್ನು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ನಿನ ವಿಚಾರಣೆಗೆ ಕಳುಹಿಸಲು ನಿರ್ಧರಿಸಿದ್ದೇನೆ’ ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ಹೇಳಿದರು.

ಗಾಂಧೀ ರಾಗ

ಭೋಪಾಲ್, ಸೆ. 11– ದೇವಸ್‌ನ ಸುಪ್ರಸಿದ್ಧ ಸಂಗೀತ ವಿದ್ವಾಂಸ ಕುಮಾರ್ ಗಂಧರ್ವ ಅವರು ರಾಷ್ಟ್ರಪಿತನ ಜನ್ಮಶತಾಬ್ದಿಗಾಗಿ ಭಾರತೀಯ ಸಂಗೀತದಲ್ಲಿ ‘ಗಾಂಧೀ ರಾಗ’ವನ್ನು ರೂಪಿಸಿದ್ದಾರೆ.

‌ಸ್ವತಃ ಖ್ಯಾತ ಸಂಗೀತಗಾರರಾದ ಮಧ್ಯ ಪ್ರದೇಶದ ವಾರ್ತಾ ಖಾತೆ ಸ್ಟೇಟ್ ಸಚಿವ ಶ್ರೀ ಬಾಲ್‌ಕವಿ ಬೈರಾಗಿ ಅವರು ಇಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರಲ್ಲದೆ ಹೊಸ ರಾಗದ ಧ್ವನಿಮುದ್ರಿಕೆಗಳು ಅ.2ರಂದು ಸಾರ್ವಜನಿಕರಿಗೆ ದೊರೆಯುತ್ತವೆ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)