ಬುಧವಾರ, ನವೆಂಬರ್ 13, 2019
22 °C

ಇದ್ಯಾವ ನ್ಯಾಯ?

Published:
Updated:
Prajavani

‘ಹಲೋ... ಅಬಕಾರಿ ಮಿನಿಸ್ಟ್ರಾ? ನಾನ್ಸಾರ್ ತೆಪರೇಸಿ, ನಿಮ್ಮ ಅಭಿಮಾನಿ... ಅದೇ ನೀವು ಮಿನಿಸ್ಟ್ರು ಆಗ್ಲಿ ಅಂತ ತಲೆ ಬೋಳಿಸ್ಕಂಡಿದ್ನಲ್ಲ...’

‘ಯಾವ ತೆಪರೇಸಿನಯ್ಯ ನೀನು? ಸರಿ ಏನೀಗ? ರಾತ್ರಿ ಹತ್ತು ಗಂಟೇಲಿ ಯಾಕೆ ಫೋನ್ ಮಾಡಿದೀಯ...?’

‘ಅದೇ ಸಾ, ನೀವು ಅಬಕಾರಿ ಮಿನಿಸ್ಟ್ರು ಆದ ಮೇಲೆ ಇಲಾಖೆ ಆದಾಯ ಹೆಚ್ಚಿಸ್ತೀನಿ ಅಂದಿದ್ರಿ. ನಿಮ್ ಮಾತಿಗೆ ಬೆಲೆ ಕೊಟ್ಟು ಒಂದು ನೈನ್ಟಿ ಜಾಸ್ತಿ ತಗಂಡು ಮನೆಗೆ ಹೊಂಟಿದ್ದೆ...’

‘ಸರಿ, ಬೇಗ ಮನೆ ಸೇರ್ಕೋ. ಚರಂಡಿ ಗಿರಂಡಿ ಹುಷಾರು...’

‘ಒಳ್ಳೆ ಕತೆ ಸಾ, ನಾನು ಮನೆಗೆ ಹೋಗೋಕೆ ಈ ಟ್ರಾಫಿಕ್ ಪೊಲೀಸ್ನೋರು ಬಿಡಬೇಕಲ್ಲ... ಇನ್ನೂ ಬೈಕ್ ಸ್ಟಾರ್ಟ್ ಮಾಡಿಲ್ಲ, ‘ಗಬಕ್’ ಅಂತ ಬಂದು ಹಿಡ್ಕಂಡು ಹತ್ತು ಸಾವಿರ ದಂಡ ಕಟ್ಟು ಅಂತಿದಾರೆ... ಸ್ವಲ್ಪ ಬಿಡೋಕೆ ಹೇಳಿ...’

‘ಅವರ ಡ್ಯೂಟಿ ಅವರು ಮಾಡ್ತಾರೆ ಕಣಯ್ಯ... ನೀನು ಕುಡಿದು ಗಾಡಿ ಓಡ್ಸಾದು ತಪ್ಪಲ್ವ?’

‘ಹಂಗಂತ? ಮನೆ ಐದು ಕಿಲೊಮೀಟರ್ ಐತೆ. ನಡ್ಕಂಡ್ ಹೋಗೋಕಾಯ್ತದಾ? ಕುಡಿದಿದ್ದೆಲ್ಲ ಇಳಿದೋಗಲ್ವ?’

‘ಅದಕ್ಕೆ ನಾನೇನ್ ಮಾಡ್ಲಿ?’

‘ಅಲ್ಲ ಸಾ, ಕುಡೀರಿ ಅಂತ ಹೇಳೋರೂ ನೀವೇ, ಹತ್ತತ್ತು ಸಾವಿರ ದಂಡ ಹಾಕೋರು ನೀವೇ. ಇದ್ಯಾವ ನ್ಯಾಯ? ನಾವು ಕುಡಿಯೋದು ನೂರು ರೂಪಾಯಿ, ದಂಡ ಹತ್ತು ಸಾವಿರಾನ? ಬಾರ್ ಪಕ್ಕ ಸಂದೀಲಿ ನಿಂತ್ಕಂಡು ಕುಡಿಯೋರ್ನೆಲ್ಲ ಹಿಂಗೆ ಪೊಲೀಸ್ರು ಹಿಡೀತಾ ಇದ್ರೆ ನಮ್ ಗತಿ ಏನು?’

‘ಅದಕ್ಕೆ ನಾನೇನಯ್ಯ ಮಾಡ್ಲಿ?’

‘ಅದೇನೋ ‘ಮನೆ ಬಾಗಿಲಿಗೆ ಮದ್ಯ’ ಅಂತಿದ್ರಲ್ಲ, ಆ ಸ್ಕೀಂನ್ಯಾಕೆ ವಾಪಸ್ ತಗಂಡ್ರಿ? ಅದು ಇದ್ದಿದ್ರೆ ಮನೆ ಬಾಗಿಲಲ್ಲೇ ಕುಡಿದು ಅಲ್ಲೇ ಬಿದ್ಕಂತಿದ್ವಿ. ಈ ಪೊಲೀಸರ ಕಾಟ ತಪ್ತಿತ್ತು...’

‘ಭಾಷಣ ಸಾಕು, ಗಾಡಿ ನಿಲ್ಸಿ ಮನೆಗೆ ನಡ್ಕಂಡ್ ಹೋಗು...’

‘ಲೇಟಾಗಿ ಹೋದ್ರೆ ಹೋಂ ಮಿನಿಸ್ಟ್ರ ಭಾಷಣ ಕೇಳಬೇಕಾಯ್ತದೆ...’

‘ಹೋಂ ಮಿನಿಸ್ಟ್ರಾ?’

‘ಹೆಂಡ್ತಿ ಭಾಷಣ ಸಾರ್, ಪ್ಲೀಸ್ ಪೊಲೀಸರಿಗೆ ಬಿಡೋಕೆ ಹೇಳಿ... ಹಲೋ... ಹಲೋ...’

ಪ್ರತಿಕ್ರಿಯಿಸಿ (+)