ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಸ್ಥೂಲಕಾಯ: ಮುಂದೇನು?

ಯಾವ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಬೇಕೆಂಬ ಬಗ್ಗೆ ಪುನರವಲೋಕನ ಬೇಕು
Last Updated 14 ಸೆಪ್ಟೆಂಬರ್ 2019, 3:19 IST
ಅಕ್ಷರ ಗಾತ್ರ

ಮಧ್ಯಾಹ್ನ 12.30ರಿಂದ 1.30ರ ನಡುವಿನ ಅವಧಿಯಲ್ಲಿ ದೇಶದ ಯಾವುದೇ ಸರ್ಕಾರಿ ಶಾಲೆಗೆ ಭೇಟಿ ನೀಡಿದರೆ, ಮನಸ್ಸನ್ನು ಆರ್ದ್ರಗೊಳಿಸುವ ದೃಶ್ಯಗಳು ಕಾಣಿಸುತ್ತವೆ. ಈ ಮಾತಿಗೆ ಕೆಲವು ಅಪವಾದಗಳು ಇರಬಹುದು. ಆ ಹೊತ್ತಿನಲ್ಲಿ ಪ್ರಾಥಮಿಕ ಶಾಲೆಗಳ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿರುತ್ತದೆ. ಕೆಲವು ಮಕ್ಕಳ ಪಾಲಿಗೆ ಇಡೀ ದಿನದಲ್ಲಿ ಸಿಗುವ ಊಟ ಇದೊಂದೇ.ಬಹುತೇಕ ಸಂದರ್ಭಗಳಲ್ಲಿ ಅವರಿಗೆ ಸಿಗುವ ಊಟ ಅನ್ನ–ಸಾಂಬಾರು ಅಥವಾ ರೋಟಿ–ದಾಲ್. ಊಟ ಮಾಡುವಾಗ ಆ ಮಕ್ಕಳ ಮುಖದಲ್ಲಿ ಕಾಣಿಸುವ ಸಂತೃಪ್ತಿ ಯಾರಿಗೇ ಆದರೂ ಕಣ್ಣು ಒದ್ದೆಯಾಗುವಂತೆ ಮಾಡುತ್ತದೆ.

ರಾಷ್ಟ್ರೀಯ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಶಾಲಾ ಮಕ್ಕಳಿಗೆ ಊಟ ಒದಗಿಸುವ ವಿಶ್ವದ ಅತಿದೊಡ್ಡ ಯೋಜನೆ. ಮಕ್ಕಳು ಶಾಲೆಯಲ್ಲಿ ಹಸಿದು ಕುಳಿತುಕೊಳ್ಳುವ ಕೆಟ್ಟ ಸನ್ನಿವೇಶವನ್ನು ಇಲ್ಲವಾಗಿಸುವುದು ಇದರ ಉದ್ದೇಶ. ಶಾಲೆಗೆ ಹೋಗುವ ವಯಸ್ಸಿನವರು ಅಪೌಷ್ಟಿಕತೆಯಿಂದ ಬಳಲಿದರೆ, ಅವರ ದೈಹಿಕ, ಬೌದ್ಧಿಕ ಹಾಗೂ ಭಾವನಾತ್ಮಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಹಾಗಾಗಿ ಈ ಯೋಜನೆ ಮಹತ್ವದ್ದು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಪೌಷ್ಟಿಕತೆಯ ಪ್ರಮಾಣ–ಪರಿಣಾಮ ಹೇಳುವ ಅಂಕಿ–ಅಂಶಗಳು ಇವೆಯಾದರೂ, ಶಾಲೆಗೆ ಹೋಗುವ ಮಕ್ಕಳ ವಿಚಾರದಲ್ಲಿ ನಮಗಿರುವ ಮಾಹಿತಿ ಅಲ್ಪ.

ಕರ್ನಾಟಕದ ಆನೇಕಲ್ ತಾಲ್ಲೂಕಿನ 16 ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳ ಎತ್ತರ ಹಾಗೂ ತೂಕವನ್ನು ದಾಖಲಿಸಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ತಂಡವೊಂದು ಈ ವಿಚಾರವನ್ನು ಇನ್ನಷ್ಟು ಸೂಕ್ಷ್ಮವಾಗಿ ಅವಲೋಕಿಸಿದೆ. ಈ ಶಾಲೆಗಳು ಬೆಂಗಳೂರು ನಗರ ಆಗ್ನೇಯ ಗಡಿಗೆ ಹೊಂದಿಕೊಂಡಿವೆ.

ಈ ಅಧ್ಯಯನ ಆರಂಭವಾಗಿದ್ದು 2016ರಲ್ಲಿ. ಆಗ 1, 3 ಮತ್ತು 5ನೇ ತರಗತಿಗಳ ಮಕ್ಕಳ ಎತ್ತರ ಹಾಗೂ ತೂಕವನ್ನು ದಾಖಲಿಸಿಕೊಳ್ಳಲಾಯಿತು. 2018ರಲ್ಲಿ ಅದೇ ಮಕ್ಕಳು ಕ್ರಮವಾಗಿ 3, 5 ಮತ್ತು 7ನೇ ತರಗತಿಗಳಲ್ಲಿ ಇದ್ದರು. ಅವರ ಎತ್ತರ ಮತ್ತು ತೂಕವನ್ನು ಪುನಃ ದಾಖಲಿಸಲಾಯಿತು. ಎರಡೂ ಬಾರಿ ಒಟ್ಟು 442 ಮಕ್ಕಳ (229 ಹುಡುಗಿಯರು, 213 ಹುಡುಗರು) ದಾಖಲೆಗಳನ್ನು ಪಡೆದುಕೊಳ್ಳಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಸಿದ್ಧಪಡಿಸಿದ ಬೆಳವಣಿಗೆ ಮಾನದಂಡವನ್ನು ಇರಿಸಿಕೊಂಡು, ಮಕ್ಕಳನ್ನು ‘ಸಾಮಾನ್ಯ’, ‘ಸಪೂರ’, ‘ಸ್ಥೂಲಕಾಯ’ ಎಂದು (ಬಿಎಂಐ ಆಧರಿಸಿ) ವರ್ಗೀಕರಿಸ ಲಾಯಿತು. ಹಾಗೆಯೇ, ಅವರ ಎತ್ತರವನ್ನು ಆಧರಿಸಿ ‘ಕುಂಠಿತ’, ‘ಸಾಮಾನ್ಯ’ ಎಂದೂ ವರ್ಗೀಕರಣ ಮಾಡಲಾಯಿತು.

2016ರಿಂದ 2018ರ ನಡುವಿನ ಅವಧಿಯಲ್ಲಿ ಹುಡುಗರು ‘ಪೌಷ್ಟಿಕತೆಯ ‍ಪರಿಣಾಮ’ದ ವಿಚಾರದಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದಾರೆ. 2016ರಲ್ಲಿ ಶೇಕಡ 75ರಷ್ಟಕ್ಕಿಂತ ಹೆಚ್ಚು ಹುಡುಗರು ‘ಸಾಮಾನ್ಯ’ ವರ್ಗದಲ್ಲಿ ಇದ್ದರು. 2018ರ ವೇಳೆಗೆ ಈ ಪ್ರಮಾಣ ಶೇಕಡ 50ಕ್ಕೆ ಇಳಿದಿತ್ತು. ‘ಸಪೂರ’ ವರ್ಗದಲ್ಲಿನ ಹುಡುಗರ ಪ್ರಮಾಣ ಶೇಕಡ 21 ಇದ್ದಿದ್ದು ಶೇ 27ಕ್ಕೆ ಏರಿತ್ತು. ಅತ್ಯಂತ ಪ್ರಮುಖವಾಗಿದ್ದೆಂದರೆ, ಸ್ಥೂಲಕಾಯದ ಹುಡುಗರ ಶೇಕಡಾವಾರು ಪ್ರಮಾಣ ಐದು ಪಟ್ಟು ಹೆಚ್ಚಾಗಿತ್ತು! ‘ಸಾಮಾನ್ಯ’ ವರ್ಗದಲ್ಲಿದ್ದ ಹುಡುಗಿಯರ ಪ್ರಮಾಣದಲ್ಲಿ ಸಣ್ಣ ಏರಿಕೆ ಕಂಡುಬಂತು. ‘ಸಪೂರ’ ಮತ್ತು ‘ಸ್ಥೂಲಕಾಯ’ ವರ್ಗದ ಹುಡುಗಿಯರ ಸಂಖ್ಯೆಯಲ್ಲಿ ಕೂಡ ಸಣ್ಣ ಬದಲಾವಣೆ ಕಂಡುಬಂತು.

2016ರಿಂದ 2018ರ ನಡುವಿನ ಅವಧಿಯಲ್ಲಿ ಕಂಡುಬಂದ ಒಂದು ಸಾಮಾನ್ಯ ಅಂಶವೆಂದರೆ, ಸ್ಥೂಲ ಕಾಯದ ಮಕ್ಕಳ ಪ್ರಮಾಣದಲ್ಲಿ ಆಗಿರುವ ಹೆಚ್ಚಳ. 2016ರಲ್ಲಿ 1ನೇ ತರಗತಿಯ ಶೇಕಡ 2.8ರಷ್ಟು ಮಕ್ಕಳು ಮಾತ್ರ ಸ್ಥೂಲಕಾಯ ಹೊಂದಿದ್ದರು. ಆದರೆ, ಅದೇ ಮಕ್ಕಳು 3ನೇ ತರಗತಿ ತಲುಪುವ ವೇಳೆಗೆ ಸ್ಥೂಲಕಾಯದ ಮಕ್ಕಳ ಪ್ರಮಾಣ ಶೇ 11.1ಕ್ಕೆ ಏರಿತ್ತು. ಅಂದರೆ ಸರಿ ಸುಮಾರು ನಾಲ್ಕು ಪಟ್ಟು ಹೆಚ್ಚಳ ಆಗಿತ್ತು. ಅದೇ ರೀತಿ, 2016ರಲ್ಲಿ 3ನೇ ತರಗತಿಯ ಶೇಕಡ 3.3ರಷ್ಟು ಮಕ್ಕಳು ಮಾತ್ರ ಸ್ಥೂಲಕಾಯ ಹೊಂದಿದ್ದರು. 2018ರಲ್ಲಿ ಈ ಮಕ್ಕಳು 5ನೇ ತರಗತಿ ತಲುಪಿದ್ದರು, ಅವರಲ್ಲಿ ಶೇಕಡ 13.1ರಷ್ಟು ಮಕ್ಕಳು ಸ್ಥೂಲಕಾಯ ಹೊಂದಿದ್ದರು. 7ನೇ ತರಗತಿಗೆ ಬಂದಿದ್ದ ಸರಿಸುಮಾರು ಶೇಕಡ 15ರಷ್ಟು ಮಕ್ಕಳಿಗೆ ಸ್ಥೂಲಕಾಯ ಇತ್ತು.

ಅಧ್ಯಯನದ ಮೂಲಕ ಕಂಡುಕೊಂಡ ಈ ವಿಚಾರಗಳ ಬಗ್ಗೆ ವಿವರಣೆ ನೀಡಬೇಕು. ಹುಡುಗರು ಬೆಳೆದಂತೆಲ್ಲ ಒಂದೋ ಸಪೂರ ಆಗಿರುವುದು ಅಥವಾ ಸ್ಥೂಲಕಾಯ ಹೊಂದಿರುವುದು ಹುಡುಗಿಯರಿಗಿಂತ ಹೆಚ್ಚಿರುವುದು ಏಕೆ? ಮಕ್ಕಳು ದೊಡ್ಡವರಾದಂತೆಲ್ಲ ಅವರಲ್ಲಿ ಸ್ಥೂಲಕಾಯ ಹೆಚ್ಚುತ್ತಿರುವುದು ಏಕೆ?

ಹುಡುಗರು ಮತ್ತು ಹುಡುಗಿಯರು ಸಮಾಜದೊಳಗೆ ಬೆರೆಯುವ ಬಗೆಯಲ್ಲಿ ಇದಕ್ಕೊಂದು ಒಳನೋಟ ಸಿಗಬಹುದು. ಹೊರಗಡೆ ಹೋಗಿ ಆಟವಾಡಲು ಹುಡುಗರಿಗೆ ಹೆಚ್ಚಿನ ಸ್ವಾತಂತ್ರ್ಯ ಇದೆ. ಅಂದರೆ, ಶಾಲಾ ಅವಧಿಯ ನಂತರ ಅವರ ಊಟ–ತಿಂಡಿ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ ಹಾಗೂ ಅವರಿಗೆ ಜಂಕ್‌ ಫುಡ್‌ ಸೇವಿಸುವ ಅವಕಾಶ ಹೆಚ್ಚು. ಹುಡುಗಿಯರು ಹೆಚ್ಚಾಗಿ ಮನೆಯಲ್ಲೇ ಇರುವ ಕಾರಣ, ಮನೆಯ ಊಟ–ತಿಂಡಿ ಸೇವಿಸುವ ಅವಕಾಶ ಅವರಿಗೆ ಹೆಚ್ಚಿರುತ್ತದೆ.

ಅತಿಯಾದ ತೂಕ ಮತ್ತು ಸ್ಥೂಲಕಾಯ ಹೆಚ್ಚಾಗುತ್ತಿ ರುವುದಕ್ಕೆ ಎಷ್ಟೋ ಕಾರಣಗಳಿರಬಹುದು. ಮಧ್ಯಾಹ್ನದ ಬಿಸಿಯೂಟದಲ್ಲಿ ಕಾರ್ಬೊಹೈಡ್ರೇಟ್‌ ಹೆಚ್ಚಿರುವುದು ಹಾಗೂ ಮಕ್ಕಳನ್ನು ಗಂಟೆಗಳ ಕಾಲ ಒಂದೇ ಕಡೆ ಕೂರಿಸಿ ಪಾಠ ಹೇಳುವ ಪಠ್ಯಕ್ರಮ ಇದಕ್ಕೆ ಕಾರಣವಾಗಿರಬಹುದು. ಆದಾಯ ಹೆಚ್ಚಳ, ಪೊಟ್ಟಣ ತೆರೆದು ಹಾಗೆಯೇ ಸೇವಿಸಬಹುದಾದ ಕುರುಕಲು ತಿಂಡಿ– ಪಾನೀಯಗಳು ಸುಲಭವಾಗಿ ಸಿಗುತ್ತಿರುವುದು, ಪಾಲಕರ ಒತ್ತಡದ ದಿನಚರಿಯ ಪರಿಣಾಮವಾಗಿ ಮಕ್ಕಳು ಜಂಕ್‌ ಫುಡ್‌ಗಳನ್ನು ಹೆಚ್ಚೆಚ್ಚು ಸೇವಿಸುತ್ತಿರುವುದು, ಜಂಕ್‌ ಫುಡ್‌ಗಳ ಬಳಕೆಗೆ ಇಂಬು ಕೊಡುತ್ತಿರುವ ಮಾಧ್ಯಮಗಳು (ಅದರಲ್ಲೂ ಮುಖ್ಯವಾಗಿ ಟಿ.ವಿ) ಕೂಡ ಕಾರಣಗಳಾಗಿರಬಹುದು.

ಬಾಲ್ಯದಲ್ಲಿ ಸ್ಥೂಲಕಾಯ ಕಾಣಿಸಿಕೊಂಡರೆ ಬದುಕಿನ ಮುಂದಿನ ಹಂತಗಳಲ್ಲಿ ಮಧುಮೇಹ, ಹೃದಯದ ಸಮಸ್ಯೆಗಳು ಹಾಗೂ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ಆತ್ಮವಿಶ್ವಾಸ ಕಡಿಮೆ ಇರುವುದು, ಆತಂಕ ಹಾಗೂ ಖಿನ್ನತೆ ಕೂಡ ಕಾಣಿಸಿಕೊಳ್ಳಬಹುದು. ಶಾಲಾ ಮಕ್ಕಳಿಗೆ ಯಾವ ಪೌಷ್ಟಿಕ ಆಹಾರ ನೀಡಬೇಕು ಎಂಬುದರ ಬಗ್ಗೆ ಪುನರವಲೋಕನ ಬೇಕು ಎಂದು ಈ ಅಂಕಿ–ಅಂಶಗಳು ಹೇಳುತ್ತವೆ. ಹಸಿವು ಎಂಬುದು ದಿನನಿತ್ಯದ ವಾಸ್ತವ ಆಗಿರುವ ಮಕ್ಕಳ ಪಾಲಿಗೆ ಆಹಾರ ಕೊಡುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಅತ್ಯಗತ್ಯ. ಆದರೆ ಆಹಾರ ಎಂದರೆ ದಿನಕ್ಕಿಷ್ಟು ಎಂದು ಕ್ಯಾಲರಿ ಒದಗಿಸುವುದಷ್ಟೇ ಅಲ್ಲ. ವೈವಿಧ್ಯಮಯವಾದ, ಪೌಷ್ಟಿಕಾಂಶಗಳು ಹೆಚ್ಚಿರುವ ಆಹಾರ ಒದಗಿಸುವುದು ಅಗತ್ಯ. ಅಂದರೆ, ಅಕ್ಕಿ ಮತ್ತು ಗೋಧಿಯ ಬಳಕೆ ತಗ್ಗಿಸಿ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳು, ಮೊಟ್ಟೆ ಹಾಗೂ ಹಾಲಿನ ಉತ್ಪನ್ನಗಳತ್ತ ಮುಖ ಮಾಡುವುದು.

ಇದರಿಂದ ಯೋಜನೆಯ ವೆಚ್ಚ ಹೆಚ್ಚಾಗಬಹುದು. ಆದರೆ, ಸರ್ಕಾರ ಮಾಡಬಹುದಾದ ಅತ್ಯುತ್ತಮ ಹೂಡಿಕೆ ಇದಾಗುತ್ತದೆ. ಪೌಷ್ಟಿಕಾಂಶಗಳು ಸರಿಯಾಗಿ ಸಿಕ್ಕ ಮಗು ಖುಷಿಯಿಂದ ಇರುತ್ತದೆ, ಆರೋಗ್ಯವಾಗಿರುತ್ತದೆ. ಅಷ್ಟೇ ಅಲ್ಲ, ಮುಂದೆ ಆರೋಗ್ಯ ಸಮಸ್ಯೆಯಿಂದ ವೈಯಕ್ತಿಕ ಹಾಗೂ ಹಣಕಾಸಿನ ತೊಂದರೆ ಎದುರಿಸಬೇಕಾದ ಪ್ರಮೇಯವೂ ಅದಕ್ಕೆ ಇರುವುದಿಲ್ಲ.

ಲೇಖಕಿ: ಪ್ರಾಧ್ಯಾಪ‍ಕಿ, ಅಜೀಂ ಪ್ರೇಮ್‌ಜಿವಿಶ್ವವಿದ್ಯಾಲಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT