ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ಪ್ರಜಾವಾಣಿಗೆ ಅಮೃತಮಹೋತ್ಸವ ಸಂಭ್ರಮ

Last Updated 18 ಅಕ್ಟೋಬರ್ 2022, 5:37 IST
ಅಕ್ಷರ ಗಾತ್ರ

ನಿಮ್ಮ ಮೆಚ್ಚಿನ ‘ಪ್ರಜಾವಾಣಿ’ ಪತ್ರಿಕೆ ಇಂದಿನಿಂದ ಅಮೃತಮಹೋತ್ಸವದ ಸಂಭ್ರಮಕ್ಕೆ ಹೆಜ್ಜೆ ಇಡುತ್ತಿದೆ. ಇಂದಿಗೆ ಸರಿಯಾಗಿ 74 ವರ್ಷಗಳ ಹಿಂದೆ (15–10–1948) ನಾಡಿನ ಜನರ ಶಕ್ತಿಯುತ ದನಿಯಾಗಿ ‘ಪ್ರಜಾವಾಣಿ’ ಆರಂಭವಾಯಿತು. ಮೊದಲ ದಿನದಿಂದಲೂ ಅಭಿಪ್ರಾಯವನ್ನು ಹೇರದೆ, ಸುದ್ದಿಯ ಘನತೆಯನ್ನು ಬಿಟ್ಟುಕೊಡದೆ ನಿಷ್ಪಕ್ಷಪಾತ, ನಿರ್ಭಿಡೆ ಪತ್ರಿಕೋದ್ಯಮ ನಡೆಸಿಕೊಂಡು ಬಂದಿದೆ. ಪತ್ರಿಕಾ ವೃತ್ತಿಯ ಪಾವಿತ್ರ್ಯವನ್ನು ಕಾಪಾಡುತ್ತಿದೆ.

ಸಂಸ್ಥಾಪಕ ಕೆ.ಎನ್.ಗುರುಸ್ವಾಮಿ ಅವರ ದೂರದೃಷ್ಟಿಯ ಫಲವಾಗಿ ಪತ್ರಿಕೆ ರೂಪುಗೊಂಡಿತು. ಭವಿಷ್ಯದ ದಿನಗಳ ಬಗ್ಗೆ ಭವ್ಯ ಕನಸುಗಳನ್ನು ಕಾಣುತ್ತಿದ್ದ ಗುರುಸ್ವಾಮಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ‘ಪ್ರಜಾವಾಣಿ’ ಅಲ್ಪಸಮಯದಲ್ಲಿಯೇ ಜನಪ್ರಿಯವಾಯಿತು. ಆರಂಭದ ಕಾಲದಿಂದಲೂ ಜನರ ಒಡನಾಡಿಯಾಗಿ ಬೆಳೆದ ಪತ್ರಿಕೆ ಈಗ ಪ್ರಬುದ್ಧ ಹಂತಕ್ಕೆ ಬಂದು ನಿಂತಿದೆ.

1948 ಎಂದರೆ ಅದೇ ಆಗ ದೇಶಕ್ಕೆ ಸ್ವಾತಂತ್ರ್ಯ ಬಂದಿತ್ತು. ಅದು ಪರಿವರ್ತನೆಯ ಕಾಲಘಟ್ಟವಾಗಿತ್ತು. ಹರಿದುಹಂಚಿಹೋಗಿದ್ದ ರಾಜ್ಯಗಳನ್ನು ಒಂದುಗೂಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಒಡೆದ ಮನಸ್ಸುಗಳನ್ನು ಸೇರಿಸುವ ಕೆಲಸವೂ ಆಗುತ್ತಿತ್ತು. ಇಂತಹ ಪರ್ವ ಕಾಲದಲ್ಲಿ ಆರಂಭವಾದ ‘ಪ್ರಜಾವಾಣಿ’ ನಿಷ್ಪಕ್ಷಪಾತ ರೀತಿಯಲ್ಲಿ ವರದಿಯನ್ನು ಮಂಡಿಸುವ ಮತ್ತು ಯಾವುದೇ ಸಿದ್ಧಾಂತಕ್ಕೆ ಜೋತು ಬೀಳದೆ ಘಟನೆಗಳನ್ನು ಇದ್ದದ್ದು ಇದ್ದಂತೆ ಚಿತ್ರಿಸುವ ಬದ್ಧತೆಯೊಂದಿಗೆ ಮುನ್ನಡೆಯಿತು.

ಸುದ್ದಿಯು ‘ಖರೀದಿಸಬಹುದಾದ ಸರಕು’ ಎಂದು ಪರಿಗಣಿಸಲಾಗಿರುವ ದುರದೃಷ್ಟಕರ ಬೆಳೆವಣಿಗೆಯ ಇಂದಿನ ಕಾಲಘಟ್ಟದಲ್ಲೂ ‘ಪ್ರಜಾವಾಣಿ’ಯು ಜನರ, ಓದುಗರ ಹಿತಾಸಕ್ತಿಯೇ ಮುಖ್ಯ ಎಂದು ಬಲವಾಗಿ ನಂಬಿದೆ. ಈ ನಂಬಿಕೆ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ಉದ್ದಕ್ಕೂ ದೃಢಚಿತ್ತದಿಂದ ನಡೆಸಿಕೊಂಡು ಬಂದಿದೆ.

ಪತ್ರಿಕೆಯು ಕಾಲಕಾಲಕ್ಕೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುನ್ನೆಡೆಯುತ್ತಿದೆ. ಅಂತರ್ಜಾಲ ತಾಣ ಮತ್ತು ಇ–ಪೇಪರ್ ಗೂ ಅಸಂಖ್ಯಾತ ಓದುಗರಿದ್ದಾರೆ. ಪ್ರಜಾವಾಣಿ ಆ್ಯಪ್ ಜನಮೆಚ್ಚುಗೆ ಪಡೆದಿದೆ. ಪಾಡ್ ಕಾಸ್ಟ್, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಜನಬೆಂಬಲ ಪಡೆದುಕೊಂಡಿವೆ.

74 ವರ್ಷಗಳಿಂದಲೂ ಕನ್ನಡನಾಡಿನ ಜೀವನಾಡಿಯೇ ಆಗಿರುವ ‘ಪ್ರಜಾವಾಣಿ’ಯ ಅಮೃತಮಹೋತ್ಸವದ ಸಂತಸದ ಹೊತ್ತಿನಲ್ಲಿ ನಮ್ಮೆಲ್ಲ ಓದುಗರಿಗೆ, ವಿತರಕರಿಗೆ, ಜಾಹೀರಾತುದಾರರಿಗೆ ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ಪತ್ರಿಕಾ ತತ್ವ ಸಿದ್ಧಾಂತಕ್ಕೆ ಕಟಿಬದ್ಧರಾಗಿದ್ದೇವೆ. ಜನಸಾಮಾನ್ಯರ ದೂರುದುಮ್ಮಾನಗಳಿಗೆ ಯಾವತ್ತೂ ಕಿವಿಯಾಗಿರುತ್ತೇವೆ. ಪತ್ರಿಕೋದ್ಯಮದ ಉನ್ನತ ಮೌಲ್ಯಗಳನ್ನು ಎತ್ತಿಹಿಡಿಯುತ್ತೇವೆ ಎಂದು ಪುನರುಚ್ಚರಿಸುತ್ತೇವೆ. ನಮ್ಮ ಸೇವೆ ಹೀಗೆಯೇ ಮುಂದುವರಿಯುತ್ತದೆ. ನಿಮ್ಮ ಸಂಪೂರ್ಣ ಬೆಂಬಲ ಸಿಗುತ್ತದೆ ಎಂಬ ನಂಬಿಕೆ ನಮಗಿದೆ. ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ.

–ಕಾರ್ಯನಿರ್ವಾಹ ಸಂಪಾದಕ

ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT