ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022-23: ಭಾರತದ ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆಯ ಹೊಸ ಬೆಳಕು

Last Updated 6 ಜನವರಿ 2023, 13:10 IST
ಅಕ್ಷರ ಗಾತ್ರ

ಭಾರತದ ರಕ್ಷಣಾ ಸಚಿವಾಲಯ 2022ರಲ್ಲಿ ಭಾರತೀಯ ಸೇನಾಪಡೆಗಳಿಗೆ ಅತ್ಯಾಧುನಿಕವಾದ, ಉನ್ನತ ಗುಣಮಟ್ಟದ ಆಯುಧಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಸ್ವತಂತ್ರವಾದ ದೇಶೀಯ ಉದ್ಯಮಗಳ ಮೂಲಕ ಒದಗಿಸುವ ತನ್ನ ಗುರಿಯ ಕಡೆ ದಾಪುಗಾಲಿಟ್ಟಿತು. 2022ರಲ್ಲಿ ಭಾರತ ಹಾಕಿಕೊಂಡ ಗುರಿಯನ್ನು ಸಾಧಿಸಿದ್ದು, ಈ ಬೆಳವಣಿಗೆ ಪರಿವರ್ತನೆಯ ಹೊಸ ಗಾಳಿಯನ್ನೇ ತಂದಿದೆ. 2022ರಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಸಾಧನೆಗಳು ಮತ್ತು 2023ರಲ್ಲಿನ ನಿರೀಕ್ಷೆಗಳು ಇಲ್ಲಿವೆ.

ಅಗ್ನಿ 5ರ ಪರೀಕ್ಷಾ ಪ್ರಯೋಗ

ನ್ಯೂಕ್ಲಿಯರ್ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಅಗ್ನಿ - 5 ಕ್ಷಿಪಣಿ 5,000 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದ್ದು, ಭಾರತೀಯ ಸೇನೆಯ ಕಾರ್ಯತಂತ್ರದ ರಕ್ಷಣೆಯನ್ನು ಒದಗಿಸುತ್ತದೆ. ಇದನ್ನು ಡಿಸೆಂಬರ್ 22ರಂದು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಯಿತು. ಭಾರತ - ಚೀನಾ ಗಡಿ ಚಕಮಕಿ ತೀವ್ರವಾಗಿದ್ದ ಸಂದರ್ಭದಲ್ಲೇ ಈ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿದೆ. ಈ ಕ್ಷಿಪಣಿಯ ಕುರಿತಾಗಿ ಭಾರತ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ಅಗ್ನಿ-5 ಉಡಾವಣೆಯ ವೀಡಿಯೋಗಳನ್ನು ಸಾಕಷ್ಟು ಭಾರತೀಯರು ನೋಡಿದ್ದರು.

ಐಎನ್ಎಸ್ ವಿಕ್ರಾಂತ್

ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಭಾರತದ ಪ್ರಥಮ ಸಂಪೂರ್ಣವಾಗಿ ದೇಶೀಯ ನಿರ್ಮಾಣದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನಿರ್ಮಾಣಗೊಳಿಸಲಾಯಿತು. ಅದನ್ನು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಐಎನ್ಎಸ್ ವಿಕ್ರಾಂತ್ 262 ಮೀಟರ್ ಉದ್ದವಿದ್ದು, 45,000 ಟನ್ ತೂಕ ಹೊಂದಿದೆ. ಇದಕ್ಕೆ ನಾಲ್ಕು ಟರ್ಬೈನ್‌ಗಳು ಶಕ್ತಿ ನೀಡುತ್ತವೆ. ಇದು 88 ಮೆಗಾವ್ಯಾಟ್ ಶಕ್ತಿಯೊಡನೆ, 28 ನಾಟ್ಸ್ ವೇಗದಲ್ಲಿ ಚಲಿಸಬಲ್ಲದು. 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೌಕೆ 1,700 ಸಿಬ್ಬಂದಿಗಳನ್ನು ಹೊಂದಬಲ್ಲದು. ಅದರೊಡನೆ, ಮಹಿಳಾ ಸಿಬ್ಬಂದಿಗಳಿಗಾಗಿ ಪ್ರತ್ಯೇಕ ಕ್ವಾರ್ಟರ್ಸ್ ವ್ಯವಸ್ಥೆಯೂ ಇದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐಎಲ್) ಲಿಮಿಟೆಡ್ ನೌಕೆಯ ನಿರ್ಮಾಣಕ್ಕೆ ನಿರ್ಮಾಣ ಕಾರ್ಯದಲ್ಲಿ ಬಳಸುವ ಉಕ್ಕನ್ನು ಪೂರೈಸಿದೆ. ಎಸ್ಎಐಎಲ್ ಅಂದಾಜು 30,000 ಟನ್‌ಗಳಷ್ಟು ಡಿಎಂಆರ್ ಪ್ಲೇಟ್‌ಗಳನ್ನು ಒದಗಿಸಿದೆ. ಪ್ರಮುಖ ಔದ್ಯಮಿಕ ಸಂಸ್ಥೆಗಳಾದ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್), ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಇಂಜಿನಿಯರ್ಸ್ ಲಿಮಿಟೆಡ್ (ಜಿಆರ್‌ಎಸ್‌ಇ), ಕೆಲ್ಟ್ರೋನ್ ಕಿರ್ಲೋಸ್ಕರ್, ಲಾರ್ಸನ್ ಆ್ಯಂಡ್ ಟರ್ಬೋ, ವಾರ್ಟ್ಸಿಲಾ ಇಂಡಿಯಾ, ಹಾಗೂ ನೂರಾರು ಸಣ್ಣಪುಟ್ಟ (ಎಂಎಸ್ಎಂಇ) ಸಂಸ್ಥೆಗಳೂ ಭಾಗವಹಿಸಿದ್ದವು. ಅವುಗಳು ದೇಶೀಯ ನಿರ್ಮಾಣದ ಯಂತ್ರಗಳು ಮತ್ತು ಉಪಕರಣಗಳನ್ನು ಒದಗಿಸಿದ್ದವು.

ಸಿ-295

ಸಿ-295 ಸಾಗಾಣಿಕಾ ವಿಮಾನದ ಉತ್ಪಾದನೆ ಗುಜರಾತಿನ ವಡೋದರಾದಲ್ಲಿ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಶಂಕುಸ್ಥಾಪನೆ ನಡೆಸಲಾಗಿದೆ. ಟಾಟಾ ಕನ್ಸಾರ್ಷಿಯಂ ಮತ್ತು ಏರ್‌ಬಸ್ ಡಿಫೆನ್ಸ್ ಭಾರತದಲ್ಲಿ 40 ವಿಮಾನಗಳನ್ನು ಉತ್ಪಾದಿಸಲಿದೆ. ಬಹು ಪಾತ್ರಗಳ ಸಿ-295 ವಿಮಾನ ಎಲ್ಲಾ ರೀತಿಯ ವಾತಾವರಣಗಳಲ್ಲೂ, ಹಗಲು ರಾತ್ರಿಗಳಲ್ಲೂ ಕಾರ್ಯ ನಿರ್ವಹಿಸಬಲ್ಲದು. ಇದು ಕ್ಷಿಪ್ರ ಕಾರ್ಯಾಚರಣೆ ಮತ್ತು ಸೈನಿಕರು ಮತ್ತು ವಸ್ತುಗಳನ್ನು ಕೆಳಗಿಳಿಸಲು ಬಳಸಲಾಗುತ್ತದೆ.

ಎಲ್‌ಸಿಎಚ್ ಪ್ರಚಂಡ್

ದೇಶೀಯವಾಗಿ ನಿರ್ಮಿಸಲಾದ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್), ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಲಿಮಿಟೆಡ್ ಸೀರೀಸ್ ಪ್ರೊಡಕ್ಷನ್ (ಎಲ್ಎಸ್‌ಪಿ) ದೇಶೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿ ಉತ್ಪಾದಿಸಲಾದ ಅತ್ಯುತ್ತಮ ಗುಣಮಟ್ಟದ ಆಧುನಿಕ ಯುದ್ಧ ಹೆಲಿಕಾಪ್ಟರ್ ಆಗಿದೆ. ಇದರಲ್ಲಿ 45% ದೇಶೀಯ ನಿರ್ಮಾಣದ ಉತ್ಪನ್ನಗಳಿವೆ. ಇದು ಸರಣಿ ಉತ್ಪಾದನೆಯ ಮೂಲಕ ದೇಶೀಯ ಉತ್ಪಾದನೆ 55%ಕ್ಕೆ ಹೆಚ್ಚಳವಾಗಲಿದೆ. ಎಲ್‌ಸಿಎಚ್ ಗನ್‌ಶಿಪ್ 5,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ ಸಾಕಷ್ಟು ಆಯುಧಗಳು ಮತ್ತು ಇಂಧನದೊಡನೆ ಭೂಸ್ಪರ್ಶ ಮಾಡುವ, ಮೇಲೇರುವ ಏಕೈಕ ಯುದ್ಧ ಹೆಲಿಕಾಪ್ಟರ್ ಆಗಿದೆ. ಇದು ಆ ಮೂಲಕ ಭಾರತೀಯ ಸೇನೆಯ ಅಗತ್ಯತೆಗಳನ್ನು ಪೂರೈಸುತ್ತದೆ.

ರಫ್ತು - ಬ್ರಹ್ಮೋಸ್, ಪಿನಾಕ, ಕಲ್ಯಾಣಿ ಎಂಎಆರ್‌ಜಿ

2022ರಲ್ಲಿ ಭಾರತ ತನ್ನ ಪ್ರಮುಖ ಆಯುಧ ರಫ್ತು ಒಪ್ಪಂದಗಳನ್ನು ಪಡೆದುಕೊಂಡಿತು. ಅರ್ಮೇನಿಯಾ ಭಾರತೀಯ ಪಿನಾಕಾ ಮಲ್ಟಿ ಬ್ಯಾರಲ್ ವ್ಯವಸ್ಥೆಯ ಖರೀದಿಗೆ ಆದೇಶ ನೀಡಿದರೆ, ಫಿಲಿಪೈನ್ಸ್ ಭಾರತ - ರಷ್ಯಾ ಜಂಟಿ ನಿರ್ಮಾಣದ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಗೆ ಆದೇಶ ನೀಡಿದೆ. ಹೆಸರು ಬಯಲು ಮಾಡದ ಒಂದು ರಾಷ್ಟ್ರ ಎಂಎಆರ್‌ಜಿ ಎಂದು ಜನಪ್ರಿಯವಾದ ಕಲ್ಯಾಣಿ 155 ಎಂಎಂ ಟ್ರಕ್ ಮೌಂಟೆಡ್ ಕ್ಯಾನನ್‌ ಖರೀದಿಗೆ ಮುಂದಾಗಿದೆ.

ಪ್ರಳಯ್

ಭಾರತ ತನ್ನ ಪಾಕಿಸ್ತಾನ ಮತ್ತು ಚೀನಾ ಗಡಿಯಾದ್ಯಂತ ಪ್ರಳಯ್ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲು ಆದೇಶಿಸಿದೆ. ಘನ ಇಂಧನ ಆಧಾರಿತ ಪ್ರಳಯ್ ಕ್ಷಿಪಣಿ 500 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಶತ್ರುಗಳ ಆ್ಯಂಟಿ ಮಿಸೈಲ್ ರಕ್ಷಣಾ ವ್ಯವಸ್ಥೆಯನ್ನು ಭೇದಿಸಬಲ್ಲದಾಗಿದೆ.

ಅಭಿವೃದ್ಧಿ ಹೊಂದಿದ ಬ್ರಹ್ಮೋಸ್

ಆ್ಯಂಟಿ ಶಿಪ್ಪಿಂಗ್ ಯುದ್ಧ ಸಾಮರ್ಥ್ಯಕ್ಕೆ ಉತ್ತೇಜನ ನೀಡಲು ಭಾರತೀಯ ವಾಯುಪಡೆ ಸು-30 ಎಂಕೆಐ ಯುದ್ಧ ವಿಮಾನದಿಂದ ಅಂದಾಜು 450 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಪ್ರಯೋಗಿಸಿತು.

ಇವಿಷ್ಟು ಭಾರತ 2022ರಲ್ಲಿ ಸಾಧಿಸಿದ ಸಾಧನೆಗಳಾದರೆ, 2023 ಸಹ ಭಾರತೀಯ ರಕ್ಷಣಾ ವಲಯದಲ್ಲಿ ಹಲವು ಆಸಕ್ತಿಕರ ಆಯುಧಗಳ ಪೂರೈಕೆಯನ್ನು ನಿರೀಕ್ಷಿಸುತ್ತಿದೆ.

ಎಸ್-400 ಸ್ಕ್ವಾಡ್ರನ್

2023ರ ಆರಂಭದಲ್ಲಿ ಭಾರತ ರಷ್ಯಾದಿಂದ ತನ್ನ ಎಸ್-400 ಕ್ಷಿಪಣಿ ವ್ಯವಸ್ಥೆಯ ಪೂರೈಕೆಯನ್ನು ಎದುರು ನೋಡುತ್ತಿದೆ.

ಪ್ರೊಜೆಕ್ಟ್ ಜ಼ೊರಾವರ್

ಪ್ರಾಜೆಕ್ಟ್ ಜ಼ೊರಾವರ್ ಯೋಜನೆಯಡಿ ಡಿಆರ್‌ಡಿಓ ಮತ್ತು ಎಲ್&ಟಿ ಭಾರತೀಯ ಸೇನೆಗಾಗಿ ಭಾರತದ ಪ್ರಥಮ ದೇಶೀಯ ನಿರ್ಮಾಣದ ಲೈಟ್ ಟ್ಯಾಂಕ್ ನಿರ್ಮಾಣಗೊಳಿಸಲಿವೆ. ಈ ಟ್ಯಾಂಕ್‌ಗಳು ಕಾಂಟ್ರಾಕ್ಟ್‌ಗಾಗಿ ಪ್ರಯತ್ನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚೀನಾ ವಿರುದ್ಧ ಹಿಮಾಲಯ ಪರ್ವತಗಳಲ್ಲಿ ನಿಯೋಜನೆಗೊಳ್ಳಲಿವೆ.

5 & 6 ಸ್ಕಾರ್ಪೀನ್

2023ರಲ್ಲಿ ಭಾರತೀಯ ನೌಕಾಪಡೆ ತನ್ನ ಬಾಕಿ ಉಳಿದಿರುವ ಎರಡು ಸ್ಕಾರ್ಪೀನ್ ಸಬ್‌ಮರೀನ್ ಗಳನ್ನು ಪಡೆದುಕೊಳ್ಳಲಿದೆ. ಭಾರತ ಸರ್ಕಾರ ಈ ಉತ್ಪಾದನಾ ವ್ಯವಸ್ಥೆಯನ್ನು ಮುಂದುವರಿಸಿ, ಇನ್ನೆರಡು ಸಬ್‌ಮರೀನ್‌ಗಳ ನಿರ್ಮಾಣ ಕೈಗೊಳ್ಳುತ್ತದೋ ಎಂದು ಕಾದು ನೋಡಬೇಕಿದೆ.

ಮೊದಲ ಸಿ-295 ಪೂರೈಕೆ

ವಿದೇಶೀ ಉತ್ಪಾದಕರಿಂದ ಭಾರತ ತನ್ನ ಮೊದಲ ಸಿ-295 ವಿಮಾನದ ಪೂರೈಕೆಯನ್ನು ಸೆಪ್ಟೆಂಬರ್ 2023ರಲ್ಲಿ ಎದುರು ನೋಡುತ್ತಿದೆ. ಭಾರತೀಯ ವಾಯುಪಡೆ 16 ವಿಮಾನಗಳನ್ನು 2023 ಸೆಪ್ಟೆಂಬರ್ ಮತ್ತು ಆಗಸ್ಟ್ 2025ರ ಮಧ್ಯ ಪಡೆಯಲಿದೆ. ಈ ವಿಮಾನ ಭಾರತೀಯ ವಾಯುಪಡೆಯ ಏರ್ ಲಿಫ್ಟ್ ಸಾಮರ್ಥ್ಯವನ್ನು ವೃದ್ಧಿಸಲಿದೆ.

ಇಲ್ಲಿ ದಾಖಲಿಸಲಾಗಿರುವ ಬಹುತೇಕ ಯೋಜನೆಗಳು 2023ರಲ್ಲಿ ಪೂರ್ಣಗೊಳ್ಳಲಿವೆ. 2022ರಂತೆಯೇ, 2023ರಲ್ಲೂ ಭಾರತ ರಕ್ಷಣಾ ವಲಯದಲ್ಲಿ ಸಾಕಷ್ಟು ಆಶ್ಚರ್ಯಕರ ಬೆಳವಣಿಗೆಗಳನ್ನು ನಿರೀಕ್ಷಿಸಬಹುದು.

ಲೇಖಕ: ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT