ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸುಂದರಬನದ ಸಂತ್ರಸ್ತೆಯರ ಗೋಳು

ಹುಲಿ ದಾಳಿಯಿಂದ ಗಂಡನನ್ನು ಕಳೆದುಕೊಂಡ ಸಂತ್ರಸ್ತೆಯರ ಬದುಕಿಗೆ ಬೇಕು ಆಸರೆ
Last Updated 10 ಅಕ್ಟೋಬರ್ 2022, 1:47 IST
ಅಕ್ಷರ ಗಾತ್ರ

ಈ ತಿಂಗಳ ಮೊದಲ ವಾರ ದೇಶದಾದ್ಯಂತ ವನ್ಯಜೀವಿ ಸಪ್ತಾಹದ ಸಭೆ– ಸಮಾರಂಭಗಳು ಭರದಿಂದ ನಡೆಯುತ್ತಿದ್ದ ಸಮಯದಲ್ಲೇ ಪಶ್ಚಿಮ ಬಂಗಾಳದ ಹಲವಾರು ಸ್ವಯಂಸೇವಾ ಸಂಘಟನೆಗಳು, ಸುಂದರಬನದಲ್ಲಿ ಹುಲಿಯ ದಾಳಿಗೆ ತುತ್ತಾಗಿ ಮೃತಪಟ್ಟವರ ಪತ್ನಿಯರ ಹಸಿವು, ಬಡತನದ ತೀವ್ರ ಸಂಕಷ್ಟದ ಬದುಕಿನತ್ತ ಸಮಾಜದ ಗಮನ ಸೆಳೆದಿವೆ.

ವಿಶ್ವ ಪರಂಪರೆಯ ತಾಣವಾದ ಸುಂದರಬನವು ಗಂಗಾ, ಬ್ರಹ್ಮಪುತ್ರಾ ಮತ್ತು ಬಾಂಗ್ಲಾದೇಶದ ಮೇಘನಾ ನದಿಯು ಬಂಗಾಳ ಕೊಲ್ಲಿಗೆ ಅನಾದಿ ಕಾಲದಿಂದ ತಂದು ಸೇರಿಸುತ್ತಿರುವ ಮೆಕ್ಕಲು ಮಣ್ಣಿನಿಂದಾದ, ಪ್ರಪಂಚದ ಅತಿ ದೊಡ್ಡ ಮುಖಜ ಭೂಮಿ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಹಬ್ಬಿರುವ ಸುಂದರಬನ, ಪ್ರಪಂಚದಲ್ಲಿಯೇ ಅತಿ ವಿಸ್ತಾರವಾದ ಕಾಂಡ್ಲಾ ಕಾಡುಗಳಿಗೆ (ಮ್ಯಾಂಗ್ರೋವ್ ಫಾರೆಸ್ಟ್) ಹೆಸರಾಗಿದೆ. ನಮ್ಮ ದೇಶದ ಆರು ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ರಾಷ್ಟ್ರೀಯ ಉದ್ಯಾನಗಳಲ್ಲಿ ಸುಂದರಬನವೂ ಒಂದು.

ಪಶ್ಚಿಮ ಬಂಗಾಳದಲ್ಲಿ 4,200 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಸುಂದರಬನವು 104 ದ್ವೀಪಗಳ ಸಮೂಹ. ಇದರಲ್ಲಿ 54 ದ್ವೀಪಗಳಲ್ಲಿ ಜನವಸತಿಯಿದೆ. ಕೃಷಿ, ಮೀನುಗಾರಿಕೆ, ಏಡಿಗಳನ್ನು ಹಿಡಿಯುವುದು, ಜೇನು, ಉರುವಲು ಸೌದೆ, ನಾಟಾ ಸಂಗ್ರಹದಂತಹವು ಇಲ್ಲಿನ ಜನರ ಜೀವನೋಪಾಯದ ಮುಖ್ಯ ಮಾರ್ಗಗಳು. ಈ ದ್ವೀಪಗಳ ಸುಮಾರು 45 ಲಕ್ಷ ನಿವಾಸಿಗಳಲ್ಲಿ ಅಂದಾಜು 5 ಲಕ್ಷ ಜನ ತಮ್ಮ ಬದುಕಿಗಾಗಿ ನೇರವಾಗಿ ಕಾಂಡ್ಲಾ ಕಾಡುಗಳನ್ನು ಅವಲಂಬಿಸಿದ್ದಾರೆ. ಸುಂದರಬನದ ಈ ಅರಣ್ಯ ಪ್ರದೇಶವು ಹುಲಿಗಳ (ರಾಯಲ್ ಬೆಂಗಾಲ್ ಟೈಗರ್) ಸಹಜ ಆವಾಸವೂ ಹೌದು. ಹುಲಿ ಸಂರಕ್ಷಣಾ ಯೋಜನೆಯ ಕ್ರಮಗಳಿಂದಾಗಿ ಹುಲಿಗಳ ಸಂಖ್ಯೆಯೂ ಇಲ್ಲಿ ಹೆಚ್ಚುತ್ತಿದೆ. 2010ರ ಗಣತಿಯಲ್ಲಿ 70 ಹುಲಿಗಳಿದ್ದು, ಈಗ 96 ಹುಲಿಗಳಿವೆಯೆಂದು ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ತಿಳಿಸಿದೆ.

ಈ ಪರಿಸ್ಥಿತಿಯಲ್ಲಿ, ಜೀವನೋಪಾಯಕ್ಕಾಗಿ ಕಾಂಡ್ಲಾ ಕಾಡುಗಳನ್ನು ಪ್ರವೇಶಿಸುವ ಸ್ಥಳೀಯರು, ಹುಲಿಯ ಆಕ್ರಮಣದಿಂದ ಪ್ರಾಣ ಬಿಟ್ಟಿರುವ ನೂರಾರು ಪ್ರಕರಣಗಳಿವೆ. ಮೀನು ಹಿಡಿಯುವ ಸಣ್ಣ ದೋಣಿಗಳ ಮೇಲೆ ಆಕ್ರಮಣ ಮಾಡಿ, ಜನರನ್ನು ಕೊಂದಿರುವ ನಿದರ್ಶನಗಳಿವೆ. ಇಂಥ ಸಂಘರ್ಷದಲ್ಲಿ ಗಂಡಂದಿರನ್ನು ಕಳೆದುಕೊಂಡ ಅಂದಾಜು 4,000 ಸಂತ್ರಸ್ತೆಯರು ಸುಂದರಬನದ ದ್ವೀಪಗಳಲ್ಲಿ ಇದ್ದಾರೆ ಎಂದು ಕೋಲ್ಕತ್ತದ ನ್ಯಾಷನಲ್ ಫಿಶ್ ವರ್ಕರ್ಸ್ ಫೋರಮ್‍ನ ಕಾರ್ಯದರ್ಶಿ ಪ್ರದೀಪ್ ಚಟರ್ಜಿ ತಿಳಿಸುತ್ತಾರೆ. ದಕ್ಷಿಣ ಬಂಗಾ ಮತ್ಸ್ಯಜೀವಿ ವೇದಿಕೆ, ಹುಲಿ ವಿಧವಾ ಕಲ್ಯಾಣ ಸಂಘ, ಸುಂದರಬನ ಗ್ರಾಮೀಣ ಅಭಿವೃದ್ಧಿ ಸಂಘಗಳು ಇದನ್ನು ಖಚಿತಪಡಿಸುತ್ತವೆ. ಸುಂದರಬನ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರಭಾಗದ (ಕೋರ್ ಏರಿಯಾ) ವಿಸ್ತೀರ್ಣ 1,700 ಚದರ ಕಿ.ಮೀ. ಮಾನವನ ಯಾವುದೇ ಚಟುವಟಿಕೆಗೆ ಇಲ್ಲಿ ಅವಕಾಶವಿಲ್ಲ. ಕೇಂದ್ರ ವಲಯವನ್ನು ಸುತ್ತುವರಿದಿರುವ ಕಾಪು ವಲಯದಲ್ಲಿ (ಬಫರ್ ಜೋನ್) ಮೀನು, ಏಡಿಗಳನ್ನು ಹಿಡಿಯುವುದು, ಜೇನು, ಸೌದೆ, ನಾಟಾಗಳ ಸಂಗ್ರಹಣೆಗೆ ಸೀಮಿತ ಅವಕಾಶವುಂಟು. ಯಾಂತ್ರೀಕೃತ ದೋಣಿಗಳಿಂದ ನಡೆಯುತ್ತಿರುವ ಮೀನುಗಾರಿಕೆ, ಕಲುಷಿತಗೊಳ್ಳುತ್ತಿರುವ ನೀರು, ನೀರಿನಲ್ಲಿ ಹೆಚ್ಚುತ್ತಿರುವ ಲವಣದ ಅಂಶ, ವಾಯುಗುಣ ಬದಲಾವಣೆಗಳ ಪರಿಣಾಮವಾಗಿ ಮೀನು, ಏಡಿಗಳ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದರಿಂದ, ಸ್ಥಳೀಯರು ಬೇರೆ ದಾರಿ ಕಾಣದೆ ಅಕ್ರಮವಾಗಿ ಕೇಂದ್ರ ವಲಯದೊಳಗೆ ಪ್ರವೇಶಿಸುತ್ತಾರೆ. ಹುಲಿಗಳಿಂದ ಆಕ್ರಮಣಕ್ಕೆ ಒಳಗಾಗುತ್ತಾರೆ.

ಇಲ್ಲಿ ಮತ್ತೊಂದು ಸಮಸ್ಯೆಯೂ ಎದುರಾಗುತ್ತದೆ. ನೆಲದ ಮೇಲಿನ ಅರಣ್ಯದಲ್ಲಿ ಕೇಂದ್ರ ಮತ್ತು ಕಾಪು ವಲಯಗಳ ಗಡಿಯನ್ನು ಗುರುತಿಸಬಹುದು. ಆದರೆ ದ್ವೀಪಗಳ ನಡುವಿನ ನೀರಿನ ಮೇಲೆ ಇದು ತುಂಬ ಕಷ್ಟ. ಇದು ಗೊಂದಲಕ್ಕೆ ಕಾರಣವಾಗುತ್ತದೆ. ಇದರೊಂದಿಗೆ ಪ್ರವಾಸಿಗರನ್ನು ಹೊತ್ತ ಯಾಂತ್ರೀಕೃತ ದೋಣಿಗಳು ಯಾವುದೇ ಅಡೆತಡೆಯಿಲ್ಲದೆ ಹುಲಿ ಸಂರಕ್ಷಣಾ ಪ್ರದೇಶದ ಕೇಂದ್ರ ವಲಯದಲ್ಲಿ ಸಂಚರಿಸುತ್ತವೆ ಎಂಬುದು ಸ್ಥಳೀಯರ ದೂರು. ಹುಲಿಗಳಿಂದ ಸಾವಿಗೀಡಾದವರ ಮನೆಯವರಿಗೆ ಸರ್ಕಾರದ ಕಡೆಯಿಂದ ₹ 5 ಲಕ್ಷದವರೆಗೂ ಪರಿಹಾರ ನೀಡುವ ಅವಕಾಶವಿದೆ. ಆದರೆ ಇದನ್ನು ಪಡೆಯಲು ಅರ್ಜಿ ಸಲ್ಲಿಸುವವರ ಸಂಖ್ಯೆ ಬಹು ಕಡಿಮೆ. ಉದಾಹರಣೆಗೆ, 2010- 16ರ ನಡುವೆ 100 ಮೀನುಗಾರರು ಹುಲಿಯ ಆಕ್ರಮಣದಿಂದ ಸತ್ತಿದ್ದರೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದವರು 5 ಮಂದಿ ಮಾತ್ರ. ಪರಿಹಾರ ದೊರೆತದ್ದು 3 ಕುಟುಂಬಗಳಿಗಷ್ಟೇ. ಇದೇ ಪ್ರವೃತ್ತಿ ಈಗಲೂ ಮುಂದುವರಿದಿದೆ. ಈ ವಿಚಿತ್ರ ಪರಿಸ್ಥಿತಿಗೆ ಹಲವಾರು ಕಾರಣಗಳಿವೆ.

ಹುಲಿ ಸಂರಕ್ಷಣಾ ಪ್ರದೇಶದ ಕೇಂದ್ರ ಭಾಗದಲ್ಲಿ ಪ್ರವೇಶವೇ ನಿಷಿದ್ಧವಾದ್ದರಿಂದ ಅಲ್ಲಿ ಹುಲಿಯಿಂದ ಸಾವಿಗೀಡಾದರೆ ಯಾವ ಪರಿಹಾರವೂ ದೊರೆಯುವುದಿಲ್ಲ. ಕಾಪು ವಲಯದಲ್ಲಿ ಸತ್ತರೆ ಪರಿಹಾರ ಪಡೆಯಲು ಪೊಲೀಸರು ಮತ್ತು ಅರಣ್ಯ ಇಲಾಖೆಯಿಂದ ಪಡೆದ ಹಲವಾರು ದಾಖಲೆಗಳನ್ನು ಸಲ್ಲಿಸಬೇಕು. ಇದರಲ್ಲಿ ಬಹು ಮುಖ್ಯವಾದದ್ದು ‘ಬೋಟ್ ಲೈಸೆನ್ಸ್ ಸರ್ಟಿಫಿಕೇಟ್’ (ಬಿಎಲ್‍ಸಿ) ಎಂಬ ಪರವಾನಗಿ. ಇದನ್ನು ಪಡೆಯದಿದ್ದರೆ ಕಾಪು ವಲಯದಲ್ಲಿ ಮೀನು, ಏಡಿಗಳನ್ನು ಹಿಡಿಯುವಂತಿಲ್ಲ. ಜೇನು, ಸೌದೆಗಳನ್ನು ಸಂಗ್ರಹಿಸು ವಂತಿಲ್ಲ. ಈ ಚಟುವಟಿಕೆಗಳಿಗೆ ಕಾಪು ವಲಯದಲ್ಲಿ ಇರುವ ಅವಕಾಶಗಳು ಸೀಮಿತವಾದ್ದರಿಂದ, ಅರಣ್ಯ ಇಲಾಖೆ ನೀಡುವ ಬಿಎಲ್‍ಸಿಗಳ ಸಂಖ್ಯೆಯೂ ಕಡಿಮೆ. ಇದುವರೆವಿಗೂ ಸುಮಾರು 900 ಬಿಎಲ್‍ಸಿಗಳನ್ನು ಮಾತ್ರ ನೀಡಲಾಗಿದೆ.

ಈ ಪರವಾನಗಿ ದೊರೆಯದಿರುವ ಕಾರಣ, ಜೀವನೋಪಾಯಕ್ಕಾಗಿ ಅಕ್ರಮವಾಗಿಯೇ ಕಾಪು ಮತ್ತು ಕೇಂದ್ರ ವಲಯಗಳನ್ನು ಪ್ರವೇಶಿಸುತ್ತಾರೆ. ಹುಲಿಗಳ ಆಕ್ರಮಣಕ್ಕೆ ಈಡಾಗಿ ಸಾಯುತ್ತಾರೆ. ಬಿಎಲ್‍ಸಿ ಇಲ್ಲದಿರುವುದರಿಂದ ಅಂತಹವರು ಪರಿಹಾರಕ್ಕೆ ಅರ್ಜಿ ಸಲ್ಲಿಸುವುದೇ ಇಲ್ಲ. ಬಿಎಲ್‍ಸಿ ಇದ್ದರೂ ಪರಿಹಾರ ಸುಲಭವಾಗಿ ದೊರೆಯುವುದಿಲ್ಲ. ಸಾವು ಹುಲಿಯಿಂದಲೇ ಆಗಿದೆ ಎಂಬುದನ್ನು ಸಾಬೀತುಪಡಿಸಬೇಕು. ಆಕ್ರಮಣ ನಡೆದು, ವ್ಯಕ್ತಿ ಸತ್ತದ್ದು ಕಾಪು ವಲಯದಲ್ಲೇ ಎಂಬುದು ರುಜುವಾತಾಗಬೇಕು. ಈ ಕೆಲಸಗಳಿಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಗಳ ನೆರವು ಬೇಕು. ಗಂಡನ ಸಾವಿನಿಂದ ಮಾನಸಿಕವಾಗಿ ಕುಗ್ಗಿಹೋಗಿ, ದಿಕ್ಕೇ ತೋಚದ ಪರಿಸ್ಥಿತಿಯಲ್ಲಿರುವ ಸಂತ್ರಸ್ತೆಯರು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಗೋಳೇ ಬೇಡ ಎಂದು ದೂರ ಉಳಿಯುತ್ತಾರೆ.

ಪ್ರದೀಪ್ ಚಟರ್ಜಿ ಖಾರವಾಗಿ ಹೇಳುವಂತೆ, ಈ ಸಂತ್ರಸ್ತೆಯರ ಮುಂದಿರುವ ದಾರಿ ಎರಡು ಮಾತ್ರ- ಬದುಕುವ ದಾರಿಯಿಲ್ಲದೆ ಉಪವಾಸದಿಂದ ಸಾಯುವುದು ಅಥವಾ ಅಪಾಯವನ್ನು ಲೆಕ್ಕಿಸದೆ ಅರಣ್ಯದೊಳಗೆ ಹೋಗಿ ಕಡೆಗೊಮ್ಮೆ ಹುಲಿಯಿಂದ ಸಾಯುವುದು.

ಸುಂದರಬನದ ಸಂತ್ರಸ್ತೆಯರಿಗೆ ಜೀವನೋಪಾಯದ ಪರ್ಯಾಯ ಅವಕಾಶಗಳನ್ನು ಕಲ್ಪಿಸಿಕೊಡುವ ಪ್ರಯತ್ನ ವನ್ನು ಸರ್ಕಾರ ಮಾಡುತ್ತಿರುವುದು ನಿಜ. ಕೃಷಿ, ಹೊಲಿಗೆ, ಕ್ಯಾಂಡಲ್ ತಯಾರಿಕೆ, ಜೇನು ಸಾಕಣೆ, ಚರ್ಮದ ಚೀಲ, ಬೆಲ್ಟ್‌ ತಯಾರಿಸಲು ಬೇಕಾದ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತಿದೆ. ಅರಣ್ಯ ಇಲಾಖೆಯ ನರ್ಸರಿಗಳಲ್ಲೂಸಂತ್ರಸ್ತೆಯರು ಕೆಲಸ ಮಾಡುತ್ತಾರೆ. ಸ್ವಸಹಾಯ ಸಂಘಗಳಲ್ಲೂ ಅವಕಾಶವಿದೆ. ಸುಂದರಬನದ ವಿಧವೆಯರ ಕಲ್ಯಾಣ ಸಂಘದ ಅಧ್ಯಕ್ಷ ಜಾನಾ ಅವರ ಅಭಿಪ್ರಾಯದಂತೆ, ಈ ಎಲ್ಲವೂ ತಾತ್ಕಾಲಿಕವಾದ ಅಲ್ಪಕಾಲಿಕ ಕ್ರಮಗಳೇ ವಿನಾ ಸಂತ್ರಸ್ತೆಯರಿಗೆ, ಅವರ ಮಕ್ಕಳಿಗೆ ಭವಿಷ್ಯವನ್ನು ರೂಪಿಸಿಕೊಳ್ಳುವಂತಹ ಸಾಮರ್ಥ್ಯವನ್ನು ನೀಡುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಂದರಬನವನ್ನು ಅತ್ಯಾಕರ್ಷಕವಾದ ಪ್ರವಾಸಿ ತಾಣವನ್ನಾಗಿ ಬಿಂಬಿಸಿ, ವಿದೇಶಿ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಸರ್ಕಾರವು ಆ ಹಣದ ಅಲ್ಪ ಭಾಗವನ್ನಾದರೂ ಈ ಸಂತ್ರಸ್ತೆಯರ ಸಂಕಷ್ಟವನ್ನು ನಿವಾರಿಸಲು ಬಳಸಬೇಕೆನ್ನುವುದು ಸ್ವಯಂಸೇವಾ ಸಂಘಟನೆಗಳ ಒತ್ತಾಯ.

ನಿಶ್ಚಿತ ಆದಾಯ, ಬದುಕಿಗೊಂದು ಭದ್ರತೆ, ಆಹಾರ, ವಸತಿ, ಆರೋಗ್ಯ, ಶಿಕ್ಷಣದಂತಹ ಎಲ್ಲ ಮೂಲ ಸೌಲಭ್ಯಗಳಿಂದ ವಂಚಿತರಾಗಿರುವ ಸಂತ್ರಸ್ತೆಯರ ದಾರುಣ ಬದುಕನ್ನು, ದಕ್ಷಿಣ್‍ಬಂಗಾ ಮತ್ಸ್ಯಜೀವಿ ಫೋರಮ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಕಲ್ಕತ್ತ ಹೈಕೋರ್ಟ್‌ ಗಮನಕ್ಕೆ ತಂದಿದೆ. ನಾಯಾಲಯದ ಮಧ್ಯಪ್ರವೇಶದಿಂದ, ವನ್ಯಜೀವಿಗಳಿಗೆ ತೊಂದರೆಯಾಗದಂತೆ, ಸಂತ್ರಸ್ತೆಯರ ಬದುಕು ಸಹ್ಯವಾಗಬೇಕೆಂಬುದು ಎಲ್ಲರ ಆಶಯ.

ಡಾ.ಎಚ್.ಆರ್.ಕೃಷ್ಣಮೂರ್ತಿ
ಡಾ.ಎಚ್.ಆರ್.ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT