ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮಾತೃ ಸಮೂಹಕ್ಕೆ ಏರ್‌ ಇಂಡಿಯಾ?

ಈ ಸಂಸ್ಥೆಯನ್ನು ಟಾಟಾ ಸಮೂಹವೇ ಖರೀದಿಸುವುದು ಸರಿ ಎಂಬ ಮಾತಿನ ಹಿಂದೆ ಸಕಾರಣ ಇದೆ
Last Updated 16 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಏರ್‌ ಇಂಡಿಯಾ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಕೊಟ್ಟ ಮೂರು ವರ್ಷಗಳ ನಂತರ, ಟಾಟಾ ಸಮೂಹವು ಅದನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂಬ ಸುದ್ದಿ ಬಂದಿದೆ. ಇದು ಖುಷಿ ತರುವಂಥದ್ದು. ಈ ಹಿಂದೆ ಬಿಡ್ ಆಹ್ವಾನಿಸಿದ್ದಾಗ ಖರೀದಿಗೆ ಯಾರೂ ಮುಂದೆ ಬಂದಿರಲಿಲ್ಲ. ಈ ಮಹಾನ್ ವಿಮಾನಯಾನ ಕಂಪನಿಯು ತನಗೆ ಜನ್ಮ ನೀಡಿದ, ಆರಂಭದ ದಿನಗಳಲ್ಲಿ ತನ್ನನ್ನು ಪೋಷಿಸಿದ ಉದ್ಯಮ ಸಮೂಹದ ಕೈಗೆ ಮರಳುವುದೇ ಸರಿಯಾದುದು.

ಸರ್ಕಾರವು ಯಾರಿಗೆ ಸೇರಿದ ಮುಕುಟಮಣಿಯನ್ನಾದರೂ ಕಿತ್ತುಕೊಳ್ಳಬಹುದು, ತಾನು ಮಾಡಿದ್ದು ಸರಿ ಎಂದು ಸಾಧಿಸಿ ತೋರಿಸಬಹುದು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಕೆಲವೇ ವರ್ಷಗಳಲ್ಲಿ, ಆಗ ಟಾಟಾ ಸಮೂಹದ ಕೈಯಲ್ಲಿದ್ದ ಏರ್ ಇಂಡಿಯಾ ಕಂಪನಿಯ ವಿಚಾರದಲ್ಲಿಯೂ ಸರ್ಕಾರ ಹಾಗೇ ಮಾಡಿತು. ಆದರೆ, ಈಗ ಅದೇ ಕಂಪನಿಯನ್ನು ಸರ್ಕಾರವು ಏಕಪಕ್ಷೀಯವಾಗಿ ಮೊದಲೇ ಮಾತನಾಡಿಕೊಂಡ ಮೊತ್ತಕ್ಕೆ ಅದೇ ಸಮೂಹಕ್ಕೆ ಮರಳಿಸಲು ಸಾಧ್ಯವಿಲ್ಲ. ಇದೊಂದು ಬಗೆಯ ಕ್ರೂರ ವ್ಯಂಗ್ಯ.

ದೂರದೃಷ್ಟಿಯುಳ್ಳ ಉದ್ಯಮಿ ಎಂಬ ಹೆಗ್ಗಳಿಕೆ ಜೆ.ಆರ್.ಡಿ. ಟಾಟಾ ಅವರಿಗಿತ್ತು. ಟಾಟಾ ಟ್ರಸ್ಟ್‌ಗಳ ಮೂಲಕ ಮಾಡುತ್ತಿದ್ದ ಮಾನವೀಯ ಕಾರ್ಯಗಳಿಂದಾಗಿ ಅವರು ಗೌರವ ಸಂಪಾದಿಸಿದ್ದರು. ವಿಮಾನಯಾನವನ್ನು ಪ್ರೀತಿಸುತ್ತಿದ್ದರು ಅವರು. ರಾಷ್ಟ್ರ ಮತ್ತು ಅಂತರ
ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜಾಲವನ್ನು ಹೊಂದಿದ್ದ ಮಹಾನ್ ವಿಮಾನಯಾನ ಸಂಸ್ಥೆಯೊಂದನ್ನು ಸ್ಥಾಪಿಸಿದ ಹಿರಿಮೆಯೂ ಅವರಿಗಿದೆ. ಭಾರತದಲ್ಲಿನ ಮೊದಲ ಪರವಾನಗಿ ಹೊಂದಿದ ಪೈಲಟ್ ಟಾಟಾ ಅವರೇ. ದೇಶದಲ್ಲಿ ವಾಣಿಜ್ಯ ಉದ್ದೇಶದ ಮೊದಲ ವಿಮಾನವನ್ನು ಕರಾಚಿಯಿಂದ ಬಳ್ಳಾರಿ ಮಾರ್ಗವಾಗಿ ಮದ್ರಾಸ್‌ಗೆ ಚಾಲನೆ ಮಾಡಿದವರೂ ಅವರೇ. ಇದು ಟಾಟಾ ಏರ್‌ಲೈನ್ಸ್‌ನ ಆರಂಭದ ದಿನಗಳಾಗಿದ್ದವು. 1946ರಲ್ಲಿ ಇದು ಏರ್‌ ಇಂಡಿಯಾ ಎಂಬ ಹೆಸರು ಪಡೆದುಕೊಂಡಿತು. ತುಸು ಮಾಸಿದ್ದರೂ ಏರ್‌ ಇಂಡಿಯಾ ಇಂದಿಗೂ ಒಂದು ರತ್ನವೇ ಸರಿ.

ಸರ್ಕಾರವು ವಿವೇಕದಿಂದ, ಪಾರದರ್ಶಕತೆಯಿಂದ ಕೆಲಸ ಮಾಡಿದರೆ ಏರ್‌ ಇಂಡಿಯಾದ ನಿಜವಾದ ಮೌಲ್ಯವನ್ನು ಕಂಡುಕೊಳ್ಳಬಹುದು. ಹೆಸರು ಅಂತಿಮಗೊಂಡಿರುವ ಬಿಡ್ಡರ್‌ಗಳು ಮೀಸಲು ಹಣವನ್ನು ಮೊದಲು ಠೇವಣಿಯಾಗಿ ಇರಿಸಬೇಕು. ಹರಾಜು ಪ್ರಕ್ರಿಯೆಯು ಮುಕ್ತವಾಗಿ ನಡೆಯಬೇಕು. ಬೇರೆ ಬಿಡ್ಡರ್‌ಗಳು ಎಷ್ಟು ಹಣ ನೀಡಲು ಸಿದ್ಧರಿದ್ದಾರೆ ಎಂಬುದನ್ನು ಗಮನಿಸಿ ತಾವು ಕೊಡಬಹುದಾದ ಹಣದ ಮೊತ್ತ ಹೆಚ್ಚಿಸಲು ಎಲ್ಲರಿಗೂ ಅವಕಾಶ ಇರಬೇಕು. ಟಾಟಾ ಸಮೂಹವು ಕೋರಸ್ ಉಕ್ಕು ಕಂಪನಿಯನ್ನು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಗೆದ್ದುಕೊಂಡಿದ್ದು ಕೂಡ ಈ ಮಾದರಿ ಅನುಸರಿಸಿ. ಏರ್‌ ಇಂಡಿಯಾ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿ ಅಲ್ಲದಿರುವ ಕಾರಣ, ಅದರ ನಿಜವಾದ ಮೌಲ್ಯವನ್ನು ಕಂಡುಕೊಳ್ಳಲು ಇರುವ ಅತ್ಯುತ್ತಮ ಮಾರ್ಗ ಇದು.

ಹೆಚ್ಚಿನ ಮೌಲ್ಯ ಸಿಗಬೇಕು ಎಂದಾದರೆ ಸರ್ಕಾರವು ಜಾಗತಿಕ ಮಟ್ಟದ ಕನ್ಸಲ್ಟೆಂಟ್‌ಗಳ ಮೂಲಕ ಟೆಂಡರ್ ಪ್ರಕ್ರಿಯೆಯನ್ನು ಪರಿಶೀಲಿಸಬೇಕು. ಬ್ರಿಟಿಷ್ ಏರ್‌ವೇಸ್‌, ಲುಫ್ತಾನ್ಸಾ, ಕ್ವಾಂಟಾಸ್‌ನಂತಹ ವಿಮಾನಯಾನ ಕಂಪನಿಗಳ ಖಾಸಗೀಕರಣದ ಅನುಭವ ಇರುವವರಿಂದ ಈ ಕೆಲಸ ಮಾಡಿಸಬೇಕು. ಬಿಡ್ಡಿಂಗ್‌ನಲ್ಲಿ ಹೆಸರು ಅಂತಿಮಗೊಂಡ ಕಂಪನಿಗಳ, ಗುಂಪುಗಳ ಜೊತೆ ಟೆಂಡರ್‌ಪೂರ್ವ ಮಾತುಕತೆ ನಡೆಸಬೇಕು. ಗರಿಷ್ಠ ಮೌಲ್ಯ ಸಿಗುವಲ್ಲಿ ಇದು ಮಹತ್ವದ್ದು.

ಕೇಂದ್ರ ಸರ್ಕಾರವು ಏರ್‌ ಇಂಡಿಯಾ ಮಾರಾಟ ಮಾಡುವಾಗ ಅದನ್ನು ಶೂನ್ಯ ಸಾಲದ ಕಂಪನಿಯನ್ನಾಗಿ ಪರಿವರ್ತಿಸಿದರೆ, ಕಂಪನಿಯ ಅಷ್ಟೂ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ಅವರಿಗೆ ಕಂಪನಿಯ ನಿರ್ವಹಣೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಯಾವ ಹಸ್ತಕ್ಷೇಪವೂ ಇರುವುದಿಲ್ಲ ಎಂಬ ಭರವಸೆ ನೀಡಿದರೆ, ಖರೀದಿಸುವ ಕಂಪನಿಯು ಕನಿಷ್ಠ ಸಂಖ್ಯೆಯ ನೌಕರರನ್ನು ಮಾತ್ರ ಹೊಂದಿದ್ದರೆ ಸಾಕು ಎಂಬ ನಿಯಮ ರೂಪಿಸಿಕೊಟ್ಟರೆ, ಕೆಲಸದಿಂದ ಹೊರನಡೆಯಬೇಕಿರುವ
ನೌಕರರಿಗೆ ಸರ್ಕಾರವೇ ಪರಿಹಾರ ನೀಡಿದರೆ, ಏರ್‌ ಇಂಡಿಯಾ ಕಂಪನಿಯು ಬಹಳ ಆಕರ್ಷಕವಾಗಿ ಕಾಣಿಸಲಿದೆ.

ಶೂನ್ಯ ಸಾಲದ ಕಂಪನಿಯನ್ನಾಗಿ ಪರಿವರ್ತಿಸಿ ಕೊಡುವುದು ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಏಕೆಂದರೆ, ಭಾರಿ ಮೊತ್ತ ಪಾವತಿಸಿ ಮಾಡಿದ ಕೆಲವು ಖರೀದಿಗಳು ಹಾಗೂ ದೊಡ್ಡ ಮೊತ್ತಕ್ಕೆ ವಿಮಾನಗಳನ್ನು ಭೋಗ್ಯಕ್ಕೆ ಪಡೆದಿರುವುದರ ಸುತ್ತ ಅನುಮಾನಗಳಿವೆ. ಅವುಗಳ ಮೌಲ್ಯವನ್ನು ಮತ್ತೆ ಮಾತುಕತೆ ಮೂಲಕ ಮರುಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಹಲವು ವಿಮಾನ ಖರೀದಿಗಳಿಗೆ ಸಂಬಂಧಿಸಿದಂತೆ ಸರ್ಕಾರವೇ ಸಿಬಿಐ ತನಿಖೆಗೆ ಆದೇಶಿಸಿದ್ದರಿಂದ, ಅದು ಈ ಅನುಮಾನಗಳನ್ನು ತಳ್ಳಿಹಾಕುವಂತೆ ಇಲ್ಲ.

ವಿಶ್ವದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಪರವಾನಗಿ, ಪ್ರತಿಷ್ಠಿತ ವಿಮಾನ ನಿಲ್ದಾಣಗಳಲ್ಲಿ ಕಾಯ್ದಿರಿಸಿದ ಸ್ಥಳ, ರಾಷ್ಟ್ರದೊಳಗೆ ಇರುವ ದೊಡ್ಡ ಜಾಲ, ತರಬೇತಿ ಪಡೆದ ಎಂಜಿನಿಯರ್‌ಗಳು ಮತ್ತು ವಿಮಾನ ಸಿಬ್ಬಂದಿ, ದ್ವಿಪಕ್ಷೀಯ ಹಕ್ಕುಗಳನ್ನು ರಕ್ಷಿಸುವ ಭರವಸೆ, ₹ 26 ಸಾವಿರ ಕೋಟಿಯಷ್ಟು ಇರುವ ಆದಾಯ, ಕಂಪನಿಯನ್ನು ಚೆನ್ನಾಗಿ ನಿರ್ವಹಿಸಿದರೆ ಈ ಆದಾಯವನ್ನು ದ್ವಿಗುಣಗೊಳಿಸಲು ಇರುವ ಅವಕಾಶ... ಇಷ್ಟೆಲ್ಲ ಇರುವ ಏರ್‌ ಇಂಡಿಯಾ ಕಂಪನಿಗೆ ₹ 50 ಸಾವಿರ ಕೋಟಿಯಷ್ಟು ಬೆಲೆ ನಿಗದಿ ಮಾಡಲು ಸಾಧ್ಯವಿದೆ. ಹಾಗೆ ನೋಡಿದರೆ ಯಾವುದೇ ಆಸ್ತಿ ಹೊಂದಿಲ್ಲದ ಇಂಡಿಗೊ ಕಂಪನಿಯ ಇಂದಿನ ಮಾರುಕಟ್ಟೆ ಬಂಡವಾಳವೇ ₹ 43 ಸಾವಿರ ಕೋಟಿ ಎಂಬುದನ್ನು ಇಲ್ಲಿ ಗಮನಿಸಬಹುದು.

ಎದುರಾಳಿಗಳನ್ನು ಮೀರಿ ನಿಂತು, ಬಿಡ್‌ಅನ್ನು ಗೆದ್ದುಕೊಳ್ಳುವ ದೂರದೃಷ್ಟಿ, ಗಟ್ಟಿ ನಾಯಕತ್ವ, ಆಡಳಿತ ನಿರ್ವಹಣಾ ಕೌಶಲ, ಹಣಕಾಸಿನ ಶಕ್ತಿ, ಅಗತ್ಯ ಬಂಡವಾಳವನ್ನು ಸಂಗ್ರಹಿಸುವ ಶಕ್ತಿ ಇರುವ ಸಮೂಹವು ಈಗ ಬಹುಶಃ ಟಾಟಾ ಮಾತ್ರವೇ ಆಗಿದ್ದಿರಬಹುದು. ಏರ್‌ ಇಂಡಿಯಾವನ್ನು ಖರೀದಿಸಿ, ಅದನ್ನು ನಿರ್ವಹಿಸುವ ಔದ್ಯಮಿಕ ಸವಾಲನ್ನು ಮೈಮೇಲೆ ಎಳೆದುಕೊಳ್ಳುವ ಕ್ಷಮತೆ, ಜಾಗತಿಕ ಮಟ್ಟದ ಪ್ರಭಾವ ಕೂಡ ಟಾಟಾ ಸಮೂಹಕ್ಕೆ ಇದೆ. ಸಮೂಹದ ಚಟುವಟಿಕೆಗಳಲ್ಲಿ ರತನ್ ಟಾಟಾ ಅವರು ಈಗಲೂ ಸಕ್ರಿಯರಾಗಿರುವ ಕಾರಣ, ಸಮೂಹದ ನಾಯಕತ್ವದಲ್ಲಿ ಅವರ ಪಾತ್ರವೂ ಇದ್ದಿರುವ ಕಾರಣ, ಏರ್‌ ಇಂಡಿಯಾ ಕಂಪನಿಯನ್ನು ತನ್ನ ಮಾತೃ ಕುಟುಂಬಕ್ಕೆ ಮರಳಿ ತರಲು ಅಗತ್ಯವಿರುವ ಭೂಮಿಕೆ ಸಿದ್ಧವಾಗಿರುವಂತೆ ಕಾಣುತ್ತಿದೆ. ವಿಮಾನಯಾನ ಕ್ಷೇತ್ರದ ಬಗ್ಗೆ ರತನ್ ಟಾಟಾ ಅವರಿಗೆ ಪ್ರೀತಿ ಇದೆ.

ಏರ್‌ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹ ಖರೀದಿ ಮಾಡುವುದರ ಜೊತೆಯಲ್ಲೇ ಒಂದಿಷ್ಟು ಸವಾಲುಗಳು ಇದ್ದೇ ಇರುತ್ತವೆ. ಅಪಾಯಗಳೂ ಒಂದಿಷ್ಟು ಇರುತ್ತವೆ. ಆದರೆ, ಖರೀದಿ ಯತ್ನ ನಿಜವಾಗಿಯೂ ಆಗಬೇಕಾದಂಥದ್ದು. ಇದು ಏರ್‌ ಇಂಡಿಯಾ ಕಂಪನಿಗೆ, ಅದರ ನೌಕರರಿಗೆ, ಗ್ರಾಹಕರಿಗೆ ಒಳಿತು ಮಾಡಬಲ್ಲದು. ಟಾಟಾ ಸಮೂಹವು ಏರ್‌ ಇಂಡಿಯಾ ಕಂಪನಿಯನ್ನು ಖರೀದಿಸುವುದು ಜೆ.ಆರ್‌.ಡಿ. ಟಾಟಾ ಅವರಿಗೆ ಸಲ್ಲಿಸುವ ಸೂಕ್ತ ಗೌರವವೂ ಹೌದು. ಖರೀದಿ ಸಾಧ್ಯವಾದಾಗ ಜೆ.ಆರ್‌.ಡಿ. ಅವರು ಸ್ವರ್ಗದಿಂದಲೇ
ಮುಗುಳ್ನಗಬಹುದು.

ಲೇಖಕ: ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಏರ್‌ ಡೆಕ್ಕನ್ ಕಂಪನಿಯ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT