ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಬರಹ | ಸಂಸ್ಕೃತ ವಿರೋಧಕ್ಕೂ ಇದೆ ಕನ್ನಡ ಇತಿಹಾಸ

Last Updated 4 ಫೆಬ್ರುವರಿ 2022, 20:10 IST
ಅಕ್ಷರ ಗಾತ್ರ

ಸಂಸ್ಕೃತ ವಿಶ್ವವಿದ್ಯಾಲಯ ಕುರಿತು ಈಗ ವಿವಾದದ ಹೊಗೆಯಾಡುತ್ತಿದೆ. ಸಂಸ್ಕೃತ ವಿಶ್ವವಿದ್ಯಾಲಯವು ಸ್ಥಾಪನೆಯಾಗಿ (2010) ಒಂದು ದಶಕ ಮೀರಿದ ಮೇಲೆ ‘ಬೇಡ’ ಎನ್ನುವುದು ಅಪ್ರಸ್ತುತವೆನ್ನಿಸಿದರೂ ಕನ್ನಡ ಮತ್ತು ಕನ್ನಡ ವಿಶ್ವವಿದ್ಯಾಲಯದ ಸಮಸ್ಯೆಯನ್ನು ನಿರ್ಲಕ್ಷಿಸಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ 320 ಕೋಟಿ ಕೊಡಮಾಡುವುದಕ್ಕೆ ಕೋಪ ಬರುವುದು ಪ್ರಸ್ತುತ. ಈ ಕೋಪವು ಕನ್ನಡ ಪರ ತಾಪದಿಂದ ಹುಟ್ಟಿದೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾರ್ಥಿಗಳಿಗೆ 36 ತಿಂಗಳಿಂದ ಶಿಷ್ಯವೇತನ ನೀಡಲಾಗಿಲ್ಲ. ಅಧ್ಯಾಪಕರಿಗೆ ಎರಡು-ಮೂರು ತಿಂಗಳ ಸಂಬಳ ಕೊಡಲಾಗಿಲ್ಲ. ಅಷ್ಟೇಕೆ ನೀರಿನ ತೆರಿಗೆ 25 ಲಕ್ಷ, ವಿದ್ಯುತ್ ಬಿಲ್ 69 ಲಕ್ಷ, ನಿವೃತ್ತ ನೌಕರರ ಪಿಂಚಣಿ 7 ಕೋಟಿ 13 ಲಕ್ಷ, ವಿದ್ಯಾರ್ಥಿಗಳಿಗೆ ಕೊಡಬೇಕಾದ 8 ಕೋಟಿ 58 ಲಕ್ಷ, ತಾತ್ಕಾಲಿಕ ಸಿಬ್ಬಂದಿಯ ವೇತನ 2 ಕೋಟಿ ಮುಂತಾದ ಇನ್ನೂ ಕೆಲವು ಬಾಬ್ತುಗಳನ್ನು ಸೇರಿಸಿ ವಿಶ್ವವಿದ್ಯಾಲಯ ಕೊಡಬೇಕಾದ ತುರ್ತು ಬಾಕಿ ಹಣದ ಮೊತ್ತ 24 ಕೋಟಿ 16 ಲಕ್ಷದಷ್ಟಿದೆ. ವಿದ್ಯುತ್ ಬಿಲ್ಲನ್ನೂ ಕಟ್ಟಲಾಗದ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿವಾದದ ಬಿಲ್ಲು ಬಾಣಗಳಿಗೇನೂ ಕೊರತೆಯಿಲ್ಲ.

ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯ ಭಾಗವಾಗಿಯೇ ಉಳಿದು ಸೊರಗುತ್ತಿರುವ ‘ಶಾಸ್ತ್ರೀಯ ಕನ್ನಡ ಸಂಸ್ಥೆ’ಗೆ ಸ್ವಾಯತ್ತತೆ ದೊರಕಿಸಿ ತಮಿಳು ಮತ್ತು ತೆಲುಗಿನಂತೆ ಪ್ರತ್ಯೇಕ ಅಸ್ತಿತ್ವ ದೊರಕಿಸಲು ಸಾಧ್ಯವಾಗಿಲ್ಲ.

ಭಾಷಾ ವಿಜ್ಞಾನದಂತೆ ದ್ರಾವಿಡ ಭಾಷೆ ಕನ್ನಡಕ್ಕೆ ಸಂಸ್ಕೃತವು ತಾಯಿ ಭಾಷೆಯಲ್ಲ. ಹಾಗೆಂದು ಸಂಸ್ಕೃತವನ್ನೂ ಒಳಗೊಂಡಂತೆ ಯಾವ ಭಾಷೆಯ ಕಲಿಕೆಯನ್ನೂ ನಾವು ವಿರೋಧಿಸಬೇಕಿಲ್ಲ. ಆದರೆ ‘ಕಲಿಕೆ’ ಬೇರೆ, ‘ಹೇರಿಕೆ’ ಬೇರೆ. ಕನ್ನಡವನ್ನು ನಿರ್ಲಕ್ಷಿಸಿ ಬೇರೆ ಭಾಷೆಗೆ ಆದ್ಯತೆ ನೀಡಿದಾಗ ‘ಹೇರಿಕೆ’ ಅನ್ನಿಸಿ ವಿರೋಧ ಹುಟ್ಟುತ್ತದೆ. ಇದು ಒಂದು ಭಾಷೆ- ಸಾಹಿತ್ಯವಾಗಿ ಸಂಸ್ಕೃತಕ್ಕೆ ವಿರೋಧವಲ್ಲ ಯಜಮಾನ ಸಂಸ್ಕೃತಿಗೆ ವಿರೋಧ. ಈ ಯಜಮಾನಿಕೆಗೆ ವಿರುದ್ಧವಾದ ಕನ್ನಡದ ಹೋರಾಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವುದನ್ನು ಗಮನಿಸಬೇಕು.

ಹತ್ತನೇ ಶತಮಾನದ ಮಹಾಕವಿ ಪಂಪ ‘ಮಾರ್ಗ’ದ (ಸಂಸ್ಕೃತ) ಜೊತೆಗೆ ‘ದೇಸಿ’ಯನ್ನು ಬಳಸುವುದರೊಂದಿಗೆ ಸಂಸ್ಕೃತದಿಂದ ಬಿಡಿಸಿಕೊಳ್ಳುವ ದೇಸಿ ಸಂಸ್ಕೃತಿ ಚಿಂತನೆ ಆರಂಭವಾಗಿದೆ. ಕೆಲವರು ಗ್ರಹಿಸಿದಂತೆ ಪಂಪನದು ಮಾರ್ಗ-ದೇಸಿಗಳ ಸಮನ್ವಯ ಎಂದು ನಾನು ತಿಳಿದಿಲ್ಲ. ಅದು ‘ಮಾರ್ಗ’ಕ್ಕೆ ಎದುರಾದ ‘ದೇಸಿ’ ಎಂದೇ ನನ್ನ ಭಾವನೆ. ಮುಂದೆ ಹನ್ನೊಂದನೇ ಶತಮಾನದಲ್ಲಿ ಕವಿ ನಯಸೇನ, ಸಂಸ್ಕೃತ ಮತ್ತು ಕನ್ನಡಗಳನ್ನು ಬೆರೆಸುವ ಪ್ರವೃತ್ತಿಯನ್ನು ಕಟುವಾಗಿ ವಿರೋಧಿಸಿ ‘ತೈಲ ಮತ್ತು ತುಪ್ಪವನ್ನು ಬೆರೆಸುವುದು ತಕ್ಕುದೆ?’ ಎಂದು ಪ್ರಶ್ನಿಸಿದ.

ಹದಿಮೂರನೇ ಶತಮಾನದ ಕವಿ ಆಂಡಯ್ಯ, ಸಂಸ್ಕೃತ ಪದ ಬಳಕೆಯನ್ನೇ ವಿರೋಧಿಸಿ, ಕನ್ನಡ ತದ್ಭವ ಪದಗಳನ್ನು ಬಳಸಿ, ಪ್ರಬಲ ಪ್ರತಿರೋಧ ಒಡ್ಡಿದ. ಆತನಲ್ಲಿ ಕಾವ್ಯವು ‘ಕಬ್ಬ’ ಆಯಿತು. ಮುಖ ‘ಮೊಗ’ವಾಯಿತು. ಸುಖ ‘ಸೊಗ’ವಾಯಿತು. ಹದಿನೇಳನೇ ಶತಮಾನದ ಕವಿ ಮಹಲಿಂಗರಂಗನು ಕನ್ನಡವನ್ನು ‘ಸುಲಿದ ಬಾಳೆಯ ಹಣ್ಣಿನಂದದಿ! ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ’ ಇರುವ ಭಾಷೆಯೆಂದು ವಿವರಿಸುತ್ತ ಈ ‘ಲಲಿತವಹ ಕನ್ನಡ ನುಡಿಯಲಿ! ತಿಳಿದು ತನ್ನೊಳು ತನ್ನ ಮೋಕ್ಷವ| ಗಳಿಸಿಕೊಂಡರೆ ಸಾಲದೇ? ಸಂಸ್ಕೃತದಲ್ಲಿನ್ನೇನು?’ ಎಂದು ಪ್ರಶ್ನಿಸುವುದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಆಯಾಮವನ್ನು ಪಡೆದಿದೆ. ಮೋಕ್ಷಕ್ಕೆ ಸಂಸ್ಕೃತವೇ ಬೇಕೆಂಬ ಜಡ ವಿಚಾರಕ್ಕೆ ವಿರುದ್ಧವಾಗಿದೆ.

ಬಹುಮುಖ್ಯ ಸಂಗತಿಯೆಂದರೆ, ನಮ್ಮ ಪ್ರಮುಖ ಕವಿಗಳು ರಾಮಾಯಣ, ಮಹಾಭಾರತವೇ ಮುಂತಾದ ಸಂಸ್ಕೃತ ಕಾವ್ಯಗಳ ವಸ್ತುವನ್ನು ಅವರವರ ಚಾರಿತ್ರಿಕ ಸಂದರ್ಭದ ಸಾಂಸ್ಕೃತಿಕ ದೇಸಿತನಕ್ಕೆ ಒಗ್ಗಿಸಿಕೊಂಡು ಮರುಸೃಷ್ಟಿ ಮಾಡಿದರು. ಇದು ಸಂಸ್ಕೃತದ ಹಿಡಿತದಿಂದ ವಿಮೋಚನೆಗೊಂಡ ಸಾಂಸ್ಕೃತಿಕ ಸ್ವಾಯತ್ತತೆಯ ಹೋರಾಟ.

ಈ ಮಧ್ಯೆ ವಚನಕಾರರು ಬಳಸಿದ ಹೊಚ್ಚ ಹೊಸ ಕನ್ನಡ ಮತ್ತು ವಿಚಾರಧಾರೆ ಎರಡೂ ವಿಮೋಚನೆಯ ಸಾರ್ಥಕ ರೂಪಕಗಳು. ದಾಸ ಸಾಹಿತ್ಯದಲ್ಲಿನ ಭಾಷಿಕ ದೇಸಿತನ, ಕುಮಾರವ್ಯಾಸ ಕವಿಯ ತಿಳಿಗನ್ನಡ ಜನಪದೀಯತೆಗಳೂ ಇಲ್ಲಿ ಉಲ್ಲೇಖನೀಯ.

ಇನ್ನು ಆಧುನಿಕ ಪ್ರಸಂಗಗಳನ್ನು ನೋಡೋಣ. ಪ್ರೌಢಶಾಲೆಯ ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಆಯಾ ರಾಜ್ಯಭಾಷೆಯ ಜೊತೆಗೆ ಸಂವಿಧಾನಾತ್ಮಕ ಅಗತ್ಯದಂತೆ ಭಾಷಿಕ ಅಲ್ಪಸಂಖ್ಯಾತರ ಮಾತೃಭಾಷೆಯನ್ನೂ ಸೇರಿಸಲಾಗುತ್ತದೆ. ಆದರೆ ಪ್ರಸ್ತುತ ಯಾರ ಮಾತೃಭಾಷೆಯೂ ಆಗಿರದ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಪರೀಕ್ಷೆಯಲ್ಲಿ ಸಂಸ್ಕೃತದಲ್ಲೇ ಉತ್ತರಿಸಬೇಕೆಂಬ ನಿಯಮವೇ ಇರಲಿಲ್ಲ! ಬೇರೆ ಭಾಷೆಗಳಲ್ಲೂ ಉತ್ತರಿಸಬಹುದಿತ್ತು. ಪ್ರಶ್ನೆಗಳಂತೂ ತೀರಾ ಸರಳವಾಗಿದ್ದವು. ಹೀಗಾಗಿ ಸಂಸ್ಕೃತ ಓದುವವರೇ ಹೆಚ್ಚು ಅಂಕ ಪಡೆದು ರ‍್ಯಾಂಕ್ ಗಳಿಸುತ್ತಿದ್ದರು. ಈ ಕಾರಣಕ್ಕಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಓದುವವರ ಸಂಖ್ಯೆ ಕಡಿಮೆಯಾಯಿತು.

ಈ ವಿಷಯ ಗಮನಕ್ಕೆ ಬಂದಾಗ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಯಾರ ಮಾತೃಭಾಷೆಯೂ ಆಗಿರದ’ ಸಂಸ್ಕೃತವನ್ನು ಪ್ರಥಮ ಭಾಷೆ ಪಟ್ಟಿಯಿಂದ ತೆಗೆಯಿಸಿ ಮೂರನೇ ಭಾಷೆಯ ಪಟ್ಟಿಗೆ ಸೇರಿಸಿದರು. ಮುಂದೆ ಗುಂಡೂರಾವ್ ಅವರು ಮುಖ್ಯಮಂತ್ರಿಯಾದಾಗ ಒತ್ತಡಕ್ಕೆ ಮಣಿದು ಸಂಸ್ಕೃತವನ್ನು ಮತ್ತೆ ಪ್ರಥಮ ಭಾಷೆಯ ಪಟ್ಟಿಗೆ ಸೇರಿಸಿದರು. ಬಂಡಾಯ ಸಾಹಿತ್ಯ ಸಂಘಟನೆಯು ಇದನ್ನು ವಿರೋಧಿಸಿ ರಾಜ್ಯದ ಐವತ್ತಕ್ಕೂ ಹೆಚ್ಚು ಬರಹಗಾರರ ಸಹಿ ಸಂಗ್ರಹಿಸಿ 25 ಸಾವಿರ ಕರಪತ್ರಗಳನ್ನು ಮುದ್ರಣ ಮಾಡಿ ಹಂಚಿತು. ಜೊತೆಗೆ ಹಲವು ಸಂಘಟನೆಗಳ ವಿರೋಧದ ಫಲವಾಗಿ ಸರ್ಕಾರವು ವಿ.ಕೃ.ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಕನ್ನಡವೊಂದನ್ನೇ ಪ್ರಥಮ ಭಾಷೆ ಎಂದು ಸಾರಿದ ಈ ಸಮಿತಿಯ ಆಕರ್ಷಕ ವರದಿಯ ಅನುಷ್ಠಾನಕ್ಕೆ ಸಾಹಿತಿ ಕಲಾವಿದರ ಬಳಗ, ಸಾಮಾನ್ಯ ಕನ್ನಡಿಗರು, ಧಾರವಾಡದ ಕನ್ನಡ ಕ್ರಿಯಾ ಸಮಿತಿ, ವಿಶೇಷವಾಗಿ ಡಾ. ರಾಜಕುಮಾರ್ ಅವರು ಹೋರಾಟಕ್ಕಿಳಿದರು. ಸರ್ಕಾರವು ಗೋಕಾಕ್ ವರದಿಗನುಗುಣವಾಗಿ 20-7-1982ರಂದು ಆದೇಶ ಹೊರಡಿಸಿತು. ಆದರೆ ರಾಜ್ಯದ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಲಾಗಿ, ಸಂವಿಧಾನದ 14, 29(1) ಮತ್ತು 30(1) ವಿಧಿಗಳ ಪ್ರಕಾರ ಈ ಆದೇಶವು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ವಿರುದ್ಧವಾಗಿದೆಯೆಂದು ನ್ಯಾಯಾಲಯವು ತೀರ್ಪು ಕೊಟ್ಟಿತು.

ಸರ್ಕಾರವು ಪ್ರಥಮ ಭಾಷೆಯ ಪಟ್ಟಿಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ಭಾಷೆಗಳನ್ನು ಸೇರಿಸುವುದು ಅನಿವಾರ್ಯವಾದಾಗ, ಅಲ್ಪಸಂಖ್ಯಾತರ ಭಾಷೆಯಲ್ಲದ ಸಂಸ್ಕೃತವೂ ಮತ್ತೆ ಮೊದಲಿನ ಸ್ಥಾನಕ್ಕೆ ಬಂದುಬಿಟ್ಟಿತು! ಇದು ಸಂಸ್ಕೃತದ ವಿಶೇಷ!

ಈಗಿನ ಸರ್ಕಾರವು ಪದವಿ ತರಗತಿಗಳ ಮೊದಲ ಎರಡು ವರ್ಷಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ ಮಾಡಿದಾಗ 1982ರ ಆದೇಶಕ್ಕೆ ಆದ ಗತಿಯೇ ಆದೀತೆಂದೂ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಕನ್ನಡವನ್ನು ಕಡ್ಡಾಯ ಮಾಡಬೇಕೆಂದೂ ನಾನು ಸರ್ಕಾರಕ್ಕೆ ಬರೆದಿದ್ದೆ. ಭಾಷಿಕ ಅಲ್ಪಸಂಖ್ಯಾತರು ಸಂವಿಧಾನದ 29(1), 30(1) ಮತ್ತು 350ಎ-ವಿಧಿಗಳ ಪ್ರಕಾರ ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಊಹಿಸಿದ್ದೆ. ಅಲ್ಪಸಂಖ್ಯಾತರು ಪ್ರಶ್ನಿಸಲಿಲ್ಲ. ಬದಲಾಗಿ ‘ಸಂಸ್ಕೃತ ಭಾರತಿ ಟ್ರಸ್ಟ್’ ಮುಂತಾದವರು ಪ್ರಶ್ನಿಸಿದರು. ನ್ಯಾಯಾಲಯವು ಮಧ್ಯಂತರ ಆದೇಶ ನೀಡಿ ಕನ್ನಡ ಕಡ್ಡಾಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಿತು. ಹೀಗೆ ಸಂಸ್ಕೃತದವರ ವಿರೋಧದಿಂದ ಕನ್ನಡ ಕಡ್ಡಾಯ ತಪ್ಪಿಹೋದದ್ದು ಈಗಿನ ಇತಿಹಾಸ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT