ಶನಿವಾರ, ಮಾರ್ಚ್ 25, 2023
27 °C
ವಿರೋಧಿಗಳನ್ನು ವಿವಾದದ ಅಲೆಗಳಲ್ಲಿ ತೇಲಿಸುತ್ತದೆ ಆಡಳಿತ ಪಕ್ಷದ ತಂತ್ರ!

ವಿಶ್ಲೇಷಣೆ | ಇನ್ನಾದರೂ ಬುದ್ಧಿ ‘ಭೆಟ್ಟಿ’ ಆಗಬಹುದೇ?

ಚಂದ್ರಕಾಂತ ವಡ್ಡು Updated:

ಅಕ್ಷರ ಗಾತ್ರ : | |

ಮಾಡಿದ ತಪ್ಪುಗಳನ್ನೇ ಪುನರಾವರ್ತಿಸುವ ವ್ಯಕ್ತಿಯನ್ನು ಕುರಿತು ಉತ್ತರ ಕರ್ನಾಟಕದಲ್ಲಿ, ‘ಇಷ್ಟೆಲ್ಲಾ ಆದ್ರೂ ಅಂವಗ ಇನ್ನಾ ಬುದ್ಧಿ ಭೆಟ್ಟಿ ಆಗಿಲ್ಲ ನೋಡು…’ ಅಂತ ಮೂದಲಿಕೆಯ ಮಾತು ಆಡುವುದುಂಟು. ರಾಜ್ಯದಲ್ಲಿನ ವಿರೋಧಿ ಪಾಳಯದಲ್ಲಿರುವ ರಾಜಕಾರಣಿಗಳ ಪಾಡು ಹೆಚ್ಚುಕಡಿಮೆ ಹಾಗೆಯೇ ಆಗಿದೆ.

ಸರ್ಕಾರ ನಡೆಸುವ ಪಕ್ಷಕ್ಕೆ ತನ್ನ ಆಡಳಿತದ ಬಗೆಗಿನ ವಸ್ತುನಿಷ್ಠ ಅವಲೋಕನ ಸದಾಕಾಲ ಬೇಡವೆನಿಸುವ ಇರಿಸುಮುರಿಸಿನ ವಿಚಾರ. ಆಡಳಿತದಲ್ಲಿ ಇರುವವರ ನಡೆನುಡಿಯನ್ನು ತಮ್ಮ ಟೀಕೆಟಿಪ್ಪಣಿ ಮೂಲಕ ವಿಮರ್ಶೆಗೆ ಗುರಿಪಡಿಸುವ ನಿಷ್ಠುರ ಧೋರಣೆಯ ಪತ್ರಿಕೆಗಳು, ರಾಜಕಾರಣಿಗಳು, ಸಂಘಟನೆಗಳನ್ನು ಕಂಡರೆ ಸರ್ಕಾರಗಳಿಗೆ ಸಹಜವಾಗಿ ಆಗಿಬರುವುದಿಲ್ಲ. ಜನಪರ ಕಾಳಜಿ ತ್ಯಜಿಸಿ ಆದ್ಯತೆಗಳನ್ನು ತಿರುವುಮುರುವುಗೊಳಿಸಿದ ಸರ್ಕಾರಗಳಂತೂ ವಿಮರ್ಶಕರನ್ನು ಫಲಾನುಭವಿಗಳನ್ನಾಗಿ, ಫಲಾಕಾಂಕ್ಷಿಗಳನ್ನಾಗಿ ಪರಿವರ್ತಿಸಲು, ಸಾಧ್ಯವಾಗದಿದ್ದರೆ ದಿಕ್ಕು ತಪ್ಪಿಸಲು ತರಹೇವಾರಿ ತಂತ್ರಗಳನ್ನು ಬಳಸಲು ತುದಿಗಾಲ ಮೇಲೆ ನಿಂತಿರುತ್ತವೆ. ಸಾರ್ವಜನಿಕವಾಗಿ ಚರ್ಚೆಗೆ ಒಡ್ಡಿಕೊಳ್ಳಬೇಕಾದ ಆಡಳಿತದ ವೈಫಲ್ಯ, ಭ್ರಷ್ಟಾಚಾರ, ಜನರ ಬವಣೆ, ದುಸ್ತರ ಬದುಕಿನಂತಹ ಕೇಂದ್ರ ವಿಷಯಗಳನ್ನು ಮರೆಮಾಚಲು ಭಾಷೆ, ಧರ್ಮ, ಜಾತಿಯಂತಹ ಭಾವನಾತ್ಮಕ ಸಂಗತಿಗಳನ್ನು ತೇಲಿಬಿಡುವುದು ಇಂತಹ ತಂತ್ರಗಾರಿಕೆಯ ಭಾಗವೇ ಆಗಿರುತ್ತದೆ.

ಆಡಳಿತ ಪಕ್ಷಗಳು ಹೀಗೆ ತಮ್ಮ ತೊಗಲು ಉಳಿಸಿಕೊಳ್ಳಲು ಹೆಣೆಯುವ ತಂತ್ರಗಾರಿಕೆ ಹೊಸದಂತೂ ಅಲ್ಲ, ಅದು ಅರ್ಥವಾಗದಷ್ಟು ಸಂಕೀರ್ಣವೂ ಇಲ್ಲ. ಆದರೆ ವಿರೋಧ ಪಕ್ಷದಲ್ಲಿ ಇರುವವರು ಈ ಬಲೆಯಲ್ಲಿ ಮತ್ತೆ ಮತ್ತೆ ಸಿಲುಕಿಬೀಳುವುದು, ತೊಳಲಾಡುವುದು ಮಾತ್ರ ಸೋಜಿಗ ಹುಟ್ಟಿಸುವ ಸಂಗತಿ.

ಈವರೆಗೆ ಉದ್ದೇಶಪೂರ್ವಕವಾಗಿ ಹುಟ್ಟುಹಾಕಿದ ಹಿಜಾಬ್, ಆಜಾನ್, ಹಲಾಲ್, ಜಾತ್ರೆಯಂಗಡಿ, ಟಿಪ್ಪು ವಿವಾದದ ಸಂದರ್ಭಗಳನ್ನು ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷ ನಿರ್ವಹಿಸಿದ ರೀತಿಯಲ್ಲಿಯೇ ಅದರ ಸಾಮರ್ಥ್ಯದ ಮಿತಿ ಮತ್ತು ಗೊಂದಲದ ಅತಿ ವ್ಯಕ್ತವಾಗಿದೆ. ಪಠ್ಯಪುಸ್ತಕಗಳು, ಜನಪದ ಹಾಡುಗಳು ಮತ್ತು ಐತಿಹಾಸಿಕ ಕುರುಹುಗಳ ಮೂಲಕ ಜನಮಾನಸದಲ್ಲಿ ಒಂದು ಗಣ್ಯಸ್ಥಾನ ಪಡೆದಿದ್ದ ಟಿಪ್ಪು ಸುಲ್ತಾನನನ್ನು ಕಾಂಗ್ರೆಸ್ ಪಕ್ಷ ಸಮಕಾಲೀನ ರಾಜಕೀಯದ ಅಂಗಳಕ್ಕೆ ಕರೆತರುವ ಮೂಲಕ ಬಲಪಂಥೀಯ ಚಟುವಟಿಕೆಗಳಿಗೆ ಪರೋಕ್ಷ ಕುಮ್ಮಕ್ಕು ನೀಡಿದಂತಾಗಿದೆ. ಇದರಿಂದ ಅಲ್ಪಸಂಖ್ಯಾತರ ಮತಗಳ ಕ್ರೋಡೀಕರಣದ ಉದ್ದೇಶಕ್ಕಿಂತ ಬಹುಸಂಖ್ಯಾತ ಮತದಾರರನ್ನು ಧ್ರುವೀಕರಿಸುವ ಬಿಜೆಪಿ ಆಕಾಂಕ್ಷೆ ಈಡೇರಿರುವುದು ಕಣ್ಣೆದುರಿಗಿನ ಸತ್ಯ. ಇಂತಹ ಅನಾಯಾಸ ಫಲದ ರುಚಿ ಕಂಡ ಬಿಜೆಪಿ ಸಹಜವಾಗಿಯೇ ತನಗೆ ಅನುಕೂಲಕರ ಅನ್ನಿಸುವ ಇತಿಹಾಸದ ಪುಟಗಳನ್ನು ತೆರೆಯತೊಡಗಿದೆ.

ಈ ವಿಷಯದಲ್ಲಿ ಆಡಳಿತ ಪಕ್ಷಕ್ಕೆ ತನ್ನ ಕಾರ್ಯಸೂಚಿ ಬಗ್ಗೆ ಸ್ಪಷ್ಟತೆ ಮತ್ತು ನಿಖರತೆ ಇದೆ. ಅವರಿಗೆ ತಮ್ಮ ತತ್ಕಾಲೀನ ಮತ್ತು ದೀರ್ಘಾವಧಿ ಗುರಿಗಳು ಕಣ್ಣಿಗೆ ಕಟ್ಟಿದಂತಿವೆ. ಯಾವ ದಾರಿಯಾದರೂ ಸರಿ, ಗುರಿ ತಲುಪುವುದಷ್ಟೇ ಮುಖ್ಯ ಎಂದು ಪರಿಭಾವಿಸಿ ಮುನ್ನಡೆಯುತ್ತಿರುವ ಪಕ್ಷವಿದು. ಪೂರ್ವನಿಗದಿತ ಪರಿಕಲ್ಪನೆಯ ಅಂಗವಾಗಿ ಕಾಲಕಾಲಕ್ಕೆ ಒಂದೊಂದೇ ಭಾವನಾತ್ಮಕ ವಿಷಯಗಳನ್ನು ಹರಿಯಬಿಟ್ಟು ಮರೆಯಲ್ಲಿ ವಿರಮಿಸುವುದು ‘ಇವರ’ ಕಾರ್ಯತಂತ್ರ. ಸಾರ್ವಜನಿಕ ಅಖಾಡಕ್ಕೆ ಬಂದಿಳಿಯುವ ಇಂತಹ ವಿವಾದಾತ್ಮಕ ವಿಷಯಗಳನ್ನು ವಿವೇಕರಹಿತವಾಗಿ ನಿರ್ವಹಿಸುವ ಮೂಲಕ ‘ಗುರಿ’ ತಲುಪಿಸುವ ಪರೋಕ್ಷ ಕಾರ್ಯದಲ್ಲಿ ವಿರೋಧ ಪಕ್ಷಗಳು, ಅವರ ಸಮರ್ಥಕರು ಮತ್ತು ವಕ್ತಾರರು ನಿರತರಾಗಿರುವುದು ವಿಪರ್ಯಾಸಕರ.

ಇತ್ತೀಚೆಗೆ ಈ ದಿಸೆಯಲ್ಲಿ ಎಚ್ಚೆತ್ತಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಜಾತಿ–ಧರ್ಮಗಳಂತಹ ಸೂಕ್ಷ್ಮ ವಿಚಾರದಲ್ಲಿ ಮೂಗುತೂರಿಸದಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದಂತಿದೆ. ಕೇವಲ ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲಿ ದಾಖಲಿಸುವ ತಾತ್ಕಾಲಿಕ ಕಾರ್ಯಕ್ರಮಗಳು, ಗಂಭೀರ ಸ್ವರೂಪದ ಭಾವನಾತ್ಮಕ ವಿಷಯಗಳನ್ನು ಸಾಮಾಜಿಕ ಮಾಧ್ಯಮದ ಟ್ರೋಲುಗಳ ಮಟ್ಟಕ್ಕಿಳಿಸುವ ಚಟುವಟಿಕೆಗಳು, ಬಾಯಿಚಪಲದ ಚಮತ್ಕಾರದ ಭಾಷಣಗಳು ಶಾಶ್ವತ ಪರಿಹಾರದತ್ತ ಕರೆದೊಯ್ಯಲಾರವು. ಬಹುಸಂಖ್ಯಾತರ ಧಾರ್ಮಿಕ ಭಾವನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವ ಬಲಪಂಥೀಯ ಚಿಂತನೆಯ ಆಳ–ಅಗಲವನ್ನು ಪರ್ಯಾಯ ಚಿಂತನೆಯ ಪಕ್ಷಗಳು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕೆ ತಕ್ಕ ಬಹುಕಾಲೀನ ಕಾರ್ಯಯೋಜನೆ ಹೆಣೆಯುವುದು ಮುಂದಿನ ಹಂತ. ಆರೋಗ್ಯಕರ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಸಶಕ್ತ ಪ್ರತಿಪಕ್ಷದ ಅಗತ್ಯ ಮತ್ತು ಮಹತ್ವವನ್ನು ಬಲ್ಲ ಪ್ರತಿಯೊಬ್ಬರೂ ಬಯಸುವುದು ಇದನ್ನೇ.

ಇದೀಗ ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಲ್ಲಿ ನ್ಯಾಯವಾಗಿ ಚರ್ಚೆಗೆ, ತೀರ್ಮಾನಗಳಿಗೆ ಈಡಾಗಬೇಕಾದ ಮಹದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ, ಅತಿವೃಷ್ಟಿ, ಅಭಿವೃದ್ಧಿ ತಾರತಮ್ಯ, ನಿರುದ್ಯೋಗ ಬವಣೆಯಂತಹ ಉತ್ತರ ಕರ್ನಾಟಕ ಭಾಗದ ವಿಶಿಷ್ಟ ಸಮಸ್ಯೆಗಳ ಗುಡ್ಡವೇ ‘ಕಾಯು’ತ್ತಾ ಕುಳಿತಿದೆ. ಆದರೆ ಇವ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳಲು ಒಲ್ಲದ ಆಡಳಿತ ಪಕ್ಷ ಎಂದಿನಂತೆ ವಿರೋಧ ಪಕ್ಷದವರನ್ನು ಹಾದಿ ತಪ್ಪಿಸಲು, ಹೊಣೆಗಾರಿಕೆಯ ಹೆಣಭಾರ ಇಳಿಸಿಕೊಳ್ಳಲು ವಿವಾದಗಳ ಮೊರೆ ಹೋಗುವಂತೆ ಕಾಣಿಸುತ್ತದೆ.

ವರ್ಷವಿಡೀ ಒಂದಲ್ಲಾ ಒಂದು ಭಾವನಾತ್ಮಕ ವಿಚಾರಗಳ ಅಲೆಯಲ್ಲಿ ವಿರೋಧಿಗಳು ತೇಲುವಂತೆ ಮಾಡಿ ನಿಗಿನಿಗಿ ನಗುತ್ತಿದ್ದ ಆಡಳಿತಪಕ್ಷ, ಈ ಬಾರಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆಯ ಅಸ್ತ್ರ ಪ್ರಯೋಗಿಸಿದೆ. ಸದನದಲ್ಲಿ ಸಾವರ್ಕರ್ ಆಗಮನದಿಂದ ರಚನಾತ್ಮಕ ಸಂವಾದದ ನಿರ್ಗಮನ ಮತ್ತು ವಿರೋಧ ಪಕ್ಷಗಳ ಸಹಗಮನವೂ ಘಟಿಸಿದರೆ ಅಚ್ಚರಿಯಿಲ್ಲ.

ವಿರೋಧ ಪಕ್ಷಗಳು ಸಾವರ್ಕರ್ ಚಿತ್ರಪಟ ಮುಂದಿಟ್ಟುಕೊಂಡು ಸದನದಲ್ಲಿ ಹುಯಿಲೆಬ್ಬಿಸುವುದು ನಿರೀಕ್ಷಿತ. ಹಾಗೆಯೇ ಆಡಳಿತ ನಡೆಸುವವರು ಗಲಾಟೆ- ಸಭಾತ್ಯಾಗಗಳ ನಡುವೆ ಏಕರೂಪ ನಾಗರಿಕ ಸಂಹಿತೆ ಸೇರಿದಂತೆ ತಮಗೆ ಬೇಕಾದ ಮಸೂದೆಗಳನ್ನು ಚರ್ಚೆಯಿಲ್ಲದೆಯೇ ಅಂಗೀಕರಿಸುವುದೂ ಪರಂಪರೆಯ ಮುಂದುವರಿಕೆಯಂತೆಯೇ ಕಾಣಿಸುತ್ತದೆ.

ಹಾಗೆಂದು ವಿರೋಧ ಪಕ್ಷಗಳು ಸರ್ಕಾರದ ಜನವಿರೋಧಿ ನಿಲುವು, ಸೌಹಾರ್ದ ಕದಡುವ ನಡೆಗಳನ್ನು ಸಹಿಸಿಕೊಂಡು ಮೌನ ವಹಿಸಬೇಕಿಲ್ಲ. ಆದರೆ ಅವರ ಪ್ರತಿಭಟನೆ, ಪ್ರತಿರೋಧದ ಪರಿ ಆಡಳಿತಾರೂಢರ ಅಜೆಂಡಾ ಪ್ರಕಾರವೇ ಧರ್ಮಗಳ ಧ್ರುವೀಕರಣಕ್ಕೆ ಕಾರಣವಾಗಬಾರದಲ್ಲವೇ? ಅವರ ನಿಲುವುಗಳು, ಹೇಳಿಕೆಗಳು ಪ್ರತಿಭಟನೆಯ ಮೂಲ ಆಶಯಕ್ಕೆ ತದ್ವಿರುದ್ಧ ಪರಿಣಾಮ, ಪ್ರಭಾವ ಉಂಟು ಮಾಡುವ ವಿಪರ್ಯಾಸಕ್ಕೆ ಏನೆನ್ನಬೇಕು? ಹೊಸ ಬಗೆಯ ರಾಜಕೀಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಎದುರಾಳಿಯನ್ನು ಹಣಿಯಲು ಅವೇ ಸಾಂಪ್ರದಾಯಿಕ ವಿಫಲ ಸಲಕರಣೆಗಳನ್ನು ಅವಲಂಬಿಸಿದರೆ ಹೇಗೆ? ಹೊಸ ರೀತಿಯ, ಹೊಸ ನುಡಿಗಟ್ಟಿನ ಪ್ರತಿತಂತ್ರದ ಅನ್ವೇಷಣೆ-ಅಳವಡಿಕೆ ಆಗಬೇಡವೇ?

ಮೊದಲೇ ಬೆಳಗಾವಿ ಅಧಿವೇಶನವೆಂದರೆ, ಬೆಂಗಳೂರಿನಲ್ಲಿ ತಳ ಊರಿರುವ ಶಾಸಕರು ಮತ್ತು ಅಧಿಕಾರಿಗಳಿಗೆ ಅನಾಸಕ್ತಿ. ಅಧಿವೇಶನ ಯಾವುದಾದರೂ ಕಾರಣಕ್ಕೆ ಆದಷ್ಟು ಬೇಗ ಮೊಟಕುಗೊಂಡು ರಾಜಧಾನಿಗೆ ಹಿಂದಿರುಗಿದರೆ ಸಾಕೆಂದು ಕಾತರಿಸುವವರೇ ಎಲ್ಲಾ. ಪಂಚರತ್ನ ಯಾತ್ರೆಯಲ್ಲಿ ತಲ್ಲೀನರಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರಂತೂ ಅಧಿವೇಶನದಲ್ಲಿ ಭಾಗವಹಿಸುವುದೇ ಅನುಮಾನ.

ಕೊನೆಗೆ ಅಧಿವೇಶನ ಹಾಗೋ ಹೀಗೋ ಮುಗಿಯುತ್ತದೆ. ಆದರೆ ವಿರೋಧ ಪಕ್ಷಗಳಿಗೆ ಬೆಳಗಾವಿಯಲ್ಲಾದರೂ ಬುದ್ಧಿ ‘ಭೆಟ್ಟಿ’ ಆಗಬಹುದೇ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು