ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸತ್ಯದ ದಾರಿ ಕತ್ತಿಯ ಮೇಲಿನ ನಡಿಗೆ

ಯಾರು ಯಾವತ್ತಿಗೂ ಆಡಬಹುದಾದ ಸುಳ್ಳುಗಳು ಸಾರ್ವಜನಿಕರಿಗೆ ಅರ್ಥವಾಗುತ್ತಲೇ ಇರುತ್ತವೆ
Last Updated 7 ಜನವರಿ 2022, 19:31 IST
ಅಕ್ಷರ ಗಾತ್ರ

ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಬಯಲಾಟ ‘ಸತ್ಯ ಹರಿಶ್ಚಂದ್ರ’ ನಾಟಕದ ಆರಂಭಿಕ ದೃಶ್ಯದಲ್ಲಿ ವಸಿಷ್ಠ– ವಿಶ್ವಾಮಿತ್ರರ ಸಂಭಾಷಣೆ ಸ್ವಲ್ಪ ಉದ್ದವೆನಿಸಿತು. ಆದರೂ ಬಯಲಲ್ಲಿ ಕೂತ ಪ್ರೇಕ್ಷಕವೃಂದ ಕಣ್ಣುಬಿಟ್ಟು, ಚಿತ್ತವಿಟ್ಟು ನಾಟಕ ನೋಡುತ್ತಿತ್ತು.

ದೃಶ್ಯದಲ್ಲಿ ಇಬ್ಬರು ಮುನಿವರ್ಯರ ಸತ್ಯಸಂಬಂಧದ ವಾಗ್ವಾದವನ್ನು ದೇವೇಂದ್ರನು ಪ್ರೇಕ್ಷಕರಂತೆಯೇ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದನು. ಈ ಪಾತ್ರವು ಮಾತೇ ಆಡುತ್ತಿಲ್ಲವಲ್ಲ ಎಂದು ಅಲ್ಲೇ ಹಗ್ಗದ ಮಂಚದ ಮೇಲೆ ಕೂತಿದ್ದ ಯಜಮಾನರೊಬ್ಬರನ್ನು ಕೇಳಲು, ಅವರು ಥಟ್ಟನೆ ‘ಅಯ್ಯೋ ಅವನು ಲೋಕ ಆಳುವ ದೊರೆ, ಅವನಿಗೂ ಸತ್ಯಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಆದರೂ ಮುನಿಗಳ ಮಾತುಕತೆಯನ್ನು ಅರೆಗಿವುಡಾಗಿ ಕೇಳಿಸಿ ಕೊಳ್ಳುತ್ತಿದ್ದಾನೆ’ ಎಂದರು. ಆಶ್ಚರ್ಯವೆನಿಸಿ, ಈ ಮುನಿ ವರ್ಯರ ಸಂಭಾಷಣೆಯೂ ಸ್ವಲ್ಪ ಜಾಸ್ತಿಯಾಯಿತೆನ್ನಲು, ಯಜಮಾನರು ಗಂಭೀರ ಮುಖದಲ್ಲಿ ‘ಸತ್ಯ ವಿಚಾರದ ದಾರಿ ಕಷ್ಟ, ಅದನ್ನು ಒಂದು ಮಾತಿನಲ್ಲಿ ಮುಗಿಸಲಾಗದು. ಅದಕ್ಕೇ ಅವರು ಒಬ್ಬ ರಾಜನನ್ನು ಮಧ್ಯ ತಂದು ಅವನು ಸತ್ಯವಂತ ಹೌದೋ ಅಲ್ಲವೋ ಅಂದು ವಾದಕ್ಕೆ ಬಿದ್ದಿರುವರು. ಋಜುಮಾರ್ಗವೆಂದರೆ ಅದೇನು ನಡೆಮುಡಿ ಹಾಸಿದ ದಿಬ್ಬಣದ ಮೆರವಣಿಗೆಯೇ’ ಅಂದರು.

ಹಿರಿಯರು ಅನುಭವದ ಹಿನ್ನೆಲೆ ಮತ್ತು ಇದೀಗ ಕಣ್ಣೆದುರೇ ಕಾಣುತ್ತಿರುವ ಸತ್ಯದ ಹೆಸರಿನ ಮೇಲೆ ನಡೆಯುತ್ತಿರುವ ಘನ ಕಾರ್ಯ, ಸೇವೆ ಮತ್ತು ವಹಿವಾಟುಗಳನ್ನು ತಿಳಿದೋ ತಿಳಿಯದೆಯೋ ಮಾತಾಡಿದ್ದು ಕಳೆದ ಶತಮಾನಗಳ ಜನಬದುಕಿನ ಪಡಿಪಾಟಲುಗಳನ್ನೂ ಅರಸರ ಸತ್ಯಮಿಥ್ಯಾ ಸಂಗತಿಗಳನ್ನೂ ಹೇಳುವಂತಿತ್ತು. ಸತ್ಯವನ್ನು ನುಡಿಯಲಾಗದೆ, ನಡೆಯಲಾಗದೆ ಸ್ಮಶಾನ ಸೇರುತ್ತಿರುವ, ಒಂದು ವೇಳೆ ನುಡಿದು ನಡೆದರೂ ಅದೇ ದಾರಿಯಾಗಿಬಿಡುವ ಋಜುಮಾರ್ಗದ ಅಲ್ಪಸಂಖ್ಯಾತರ ಗತಿಯನ್ನೂ ಹೇಳುವಂತಿತ್ತು.

ನಾಟಕ ನೋಡುತ್ತ ಯಜಮಾನರು ಬಳಸಿದ ‘ಸತ್ಯದ ದಾರಿ ಕಷ್ಟ’ ಎಂಬ ಮಾತು ಗ್ರಾಮಸ್ಥ ಮಹಿಳೆಯರಲ್ಲಿ ಬೇರೊಂದು ಭಯವನ್ನೂ ಹುಟ್ಟುಹಾಕಿದ್ದು ಗೊತ್ತಾ ಯಿತು. ಸತ್ಯವಂತನ ಪಾರ್ಟು ಮಾಡುವ ತಮ್ಮ ಗಂಡಂದಿರು ಸ್ಮಶಾನದ ದಾರಿಯನ್ನೇ ಹಿಡಿದು ಗತಿ ಇಲ್ಲದಂತಾಗಿಬಿಡುವರೆಂಬ ಕಾಲಾನುಕಾಲದ ನಂಬಿಕೆ ಬಲವಾಗಿದ್ದು, ಆ ಥರದ ಕಷ್ಟ ಮಾರ್ಗಕ್ಕಿಂತ ಇನ್ಯಾವುದಾದರೂ ಸುಲಭದ ದಾರಿ ಹಿಡಿಯುವುದೇ ಲೇಸು ಎಂಬ ಚಿಂತೆಯಲ್ಲಿದ್ದರು. ಇಂಥದೆಲ್ಲ ನಂಬಿಕೆಗಳ ಮೇಲೋ ಅಥವಾ ಇದಲ್ಲದೆಯೋ ‘ನ ಬ್ರೂಯಾತ್ ಸತ್ಯಮಪ್ರಿಯಂ’ ಎಂದೂ, ಶುದ್ಧ ಜನಪದದಲ್ಲಿ ‘ಸತ್ಯ ನುಡಿದವನ ಬೆನ್ನು ಬೆತ್ತಲು’ ಎಂಬೆಲ್ಲ ಲೋಕವಾರ್ತೆ ರೂಢಿಗೆ ಬಂದುಬಿಟ್ಟವು.

ನಾಟಕದ ಒಂದೆರಡು ಸೀನುಗಳ ನಂತರ, ಈಗ ನಮ್ಮೆದುರು ನಡೆಯುತ್ತಿದೆಯಲ್ಲ ಈ ಬಯಲಾಟದ ಕಥೆಯನ್ನು ಬರೆದವರು ಯಾರು ಎಂಬ ಪ್ರಶ್ನೆಗೆ, ನಿರೀಕ್ಷೆ ಯಂತೆ ಗ್ರಾಮ ಮಟ್ಟದ ಓದು ಮತ್ತು ಕಾವ್ಯಾಲಾಪದ ಅರಿವಿದ್ದ ಹಿರಿಯರೊಬ್ಬರು ‘ಅದೇ ಎಂಟುನೂರು ವರ್ಷಗಳ ಹಿಂದಿನ ಕವಿ ರಾಘವಾ೦ಕ’ ಎಂದು ಉತ್ತರಿಸಬಹುದೆನಿಸಿತು. ಅನೇಕಾನೇಕ ಪ್ರಾಚೀನ ಪುರಾಣ ಕಥನ ಕಾವ್ಯಗಳಲ್ಲೆಲ್ಲ ಪ್ರಸ್ತಾಪಗೊಂಡು ಭಾರತದಾದ್ಯಂತ ನಾನಾ ಪ್ರಕಾರಗಳಲ್ಲಿ ಪ್ರಸಿದ್ಧವಾಗಿ, ತತ್ಸಂಬಂಧದಲ್ಲಿಯೇ ಉತ್ತರ ಕೊಡಬಹುದು ಎಂದುಕೊಳ್ಳುವಲ್ಲಿ ಹಿರಿಯರು ಅದೇ ನಮ್ಮ ಬರಹದ ನರಸಿಂಹಪ್ಪ ಭಾಗವತರು ಬರೆದದ್ದು ಅಂದರು! ನನ್ನ ಯಥಾವಿಧಿಯಾದ ತಿಳಿವಳಿಕೆ ಬದಲಾಗಿ ಬಿಟ್ಟಿತು.

ನಿರಂತರ ಶಾಶ್ವತ ಮೌಲ್ಯ ಸಾರುವ ನಮ್ಮ ಕಣ್ಣ ಮುಂದಿನ ಯಾವುದೇ ಕಥೆಯಾಗಲಿ ಅದು ಯಾವತ್ತೂ ತನ್ನ ರೂಪವನ್ನು ಬದಲಿಸಿಕೊಂಡೇ ಬಂದಿರುತ್ತದೆ. ಈ ಮಾತು ಮಹಾಭಾರತಕ್ಕೂ ರಾಮಾಯಣಕ್ಕೂ ಯಾವುದೇ ಪುರಾಣಗಳಿಗೂ ಅದರೊಳಗೇ ಕಂಡು ಬರುವ ಹರಿಶ್ಚಂದ್ರನ ಕಥೆಗೂ ಅನ್ವಯವಾಗು
ತ್ತದೆ. ಆದರೆ ಒಂದನ್ನಂತೂ ತಿಳಿಯಲೇಬೇಕು, ಕಥನ ಸ್ವರೂಪ ಬದಲಾದರೂ ಅದರ ಮೂಲ ತತ್ವ ಅಂದರೆ ಮೌಲ್ಯ ಬದಲಾಗುವುದಿಲ್ಲ. ಅದು ಹರಿಶ್ಚಂದ್ರನ ಕಥೆಗೆ ಮಾತ್ರ ಯಾಕೆ, ಸತ್ಯವನ್ನು ಕುರಿತ ತತ್ವಕ್ಕಾಗಿ ಮಹಾತ್ಮ ಗಾಂಧಿಯವರೂ ಮೆಚ್ಚಿದ ಗೋವಿನ ಹಾಡಿಗೂ ಅನ್ವಯಿಸುತ್ತದೆ. ಅದೇ ಕಾರಣಕ್ಕೋ ಏನೋ ಎದುರು ಜರುಗು ತ್ತಿದ್ದ ನರಸಿಂಹಪ್ಪ ಭಾಗವತರ ನಾಟಕದಲ್ಲಿ ಸತ್ಯವನ್ನು ಕುರಿತಾದ ಸಂಭಾಷಣೆಯು ದೀರ್ಘವಾಗಿ, ದೇವೇಂದ್ರನು ಅರೆಗಿವುಡನಾಗಿ, ನಕ್ಷತ್ರಿಕನು ಕಾಸು ವಸೂಲಿಯವನಾಗಿ, ರೈತರು ಹರಿಶ್ಚಂದ್ರನಲ್ಲಿ ತಮ್ಮ ಕಷ್ಟ ಹೇಳಿಕೊಳ್ಳುವವರಾಗಿ, ಅವನು ಅಲ್ಲಿಂದ ಬೇಟೆಗೆ ಹೊರಟು ಸತ್ಯದ ಕಠಿಣ ಮಾರ್ಗ ತುಳಿದದ್ದು, ಹಳೆಯ ಕಥೆಯ ಹಳಿಯ ಮೇಲಿನ ಹೊಸ ಪಠ್ಯವಾಗಿ ಕಾಣಿಸುತ್ತಿತ್ತು.

ಆಗೀಗ ದೃಶ್ಯಾವಳಿಗಳ ಮಧ್ಯೆ ಮಾತಾಡುತ್ತಲೇ ಇದ್ದ ಹಿರಿಯರು ಹರಿಶ್ಚಂದ್ರನ ಅರಣ್ಯ ಗಮನವನ್ನು ಕುರಿತಾಗಿ, ‘ಇದೀಗ ನೋಡಪ್ಪ, ಹರಿಶ್ಚಂದ್ರ ತನ್ನ ಸುಳ್ಳಿನ ಸಿಂಹಾಸನ ಬಿಟ್ಟು ಸತ್ಯದ ಸಿಂಹಾಸನ ಹುಡುಕಿ ಹೊಂಟನಲ್ಲ’ ಎಂಬ ಅರ್ಥಪೂರ್ಣ ಮಾತನಾಡಿದರು. ಅದು ಸರಿ ಇತ್ತು. ಬಿಜ್ಜಳನ ಅರಮನೆಯನ್ನು ತೊರೆದು ಬಸವಣ್ಣನವರು ಹೊರಟದ್ದು ಬಯಲ ಶೂನ್ಯ ಸಿಂಹಾಸನದ ಕಡೆಗೆ ತಾನೇ ಎನಿಸಿತು. ಅನುಭವ ಮಂಟಪದ ಸಿಂಹಾಸನವೆಂದರೆ ಜನಪದರಿಗೆ ಅದು ಮುರಿದು ಬೀಳುವ, ಅದೃಷ್ಟ ಕೆಟ್ಟಾಗ ಕಳೆದು ಹೋಗುವ ಕುರ್ಚಿಯಲ್ಲ ಎಂಬುದು ಗೊತ್ತಿದೆ. ಅದು ಭೂಮಿಯ ಕಾಠಿಣ್ಯ, ಜಲದ ರಸ, ಅಗ್ನಿಯ ಬಿಸಿ, ವಾಯುವಿನ ಕಲೆ, ಆಕಾಶದ ಶಬ್ದಗುಣ ಇದೆಲ್ಲದರ ದೃಶ್ಯ, ಅದೃಶ್ಯ ರೂಪಿ ಆಸನ. ಇಂಥದೊಂದು ಪರಮ ಪವಿತ್ರ ಆಸನ ಒಂದು ಕಡೆಗೆ ಇದ್ದರೆ, ಇದರ ಸಮೀಪ ಬಂದು ಅಹವಾಲು ಹೇಳಿಕೊಳ್ಳಬೇಕಾದವನು ರೋಗಗ್ರಸ್ತ ಕುರೂಪಿಯಾಗಿ, ಜರಾಜೀರ್ಣವೇಷಿಯಾಗಿ ದೂರದಲ್ಲಿ ಹೊರಗೆ ನಿಂತಿದ್ದಾನೆ. ಇಂತಹವನನ್ನು ಈ ದಿವ್ಯ ಸಿಂಹಾಸನದತ್ತ ಕರೆತರುವವನಿಗೆ ಅಸಾಧಾರಣ ಶಕ್ತಿ, ಆತ್ಮಸ್ಥೈರ್ಯ, ಮನುಷ್ಯಪ್ರೀತಿ ಇರಬೇಕಾಗುತ್ತದೆ. ಆ ಶಕ್ತಿ ಒದಗಿ ಬರುವುದು ಸತ್ಯ ಮತ್ತು ಮಹಾ ಪ್ರಾಮಾಣಿಕತೆಯಿಂದಲೇ!

ಯುದ್ಧ ಮತ್ತು ಪರಾಕ್ರಮ, ಅದರ ಸಾವಿನಲ್ಲೇ ದೊರಕುವ ಇನ್ನೊಂದು ಲೋಕದ ಬರೀ ಕನಸುಗಳನ್ನು ತೊಡೆದುಹಾಕಲು ಹೊರಟ ಬಸವಾದಿ ವಚನಕಾರರು, ಸಂತರು ಸತ್ಯದ ಪರಾಕಾಷ್ಠೆಯನ್ನು ಮುಟ್ಟಿಯೇ ತೀರುವ ಹಾದಿಯಲ್ಲಿ ಚದುರಿಹೋದರು. ಆದರೆ ಅವರು ಹಚ್ಚಿದ ಬೆಳಕಲ್ಲೇ ಇರುವ ಜನಜಗತ್ತಿಗೆ, ಯಾರು ಯಾವತ್ತಿಗೂ ಆಡಬಹುದಾದ ನಿತ್ಯದ ಮಿಥ್ಯಾಪ್ರಚಾರವು ಸಾರ್ವಜನಿಕ ರಿಗೆ ಅರ್ಥವಾಗುತ್ತಲೇ ಇರುತ್ತದೆ. ಭ್ರಷ್ಟ ಸಂಗತಿಗಳು ಅರಿವಿಗೆ ಬರುತ್ತಲೇ ಇರುತ್ತವೆ.

‘... ಇನ್ನು ಸುಮ್ಮನಿರಲಾಗದು, ಸತ್ಯವನ್ನು ಬಿಚ್ಚಿಡಬೇಕಾಗಿದೆ, ಆಗ ಜನಕ್ಕೆ ಎಲ್ಲ ಗೊತ್ತಾಗಿಬಿಡುತ್ತದೆ...’ ‘... ನಾನು ಭ್ರಷ್ಟನೆಂಬುದು ಸತ್ಯಕ್ಕೆ ದೂರವಾದ ಮಾತು…’ ‘...ಸಮಗ್ರ ತನಿಖೆಯ ನಂತರ ಸತ್ಯ ಹೊರಬಂದ ಮೇಲೆ ಅದು ಯಾರೇ ಆಗಿದ್ದರೂ ಕ್ರಮ ನಿಶ್ಚಿತ. ಜನರ ಮುಂದೆ ಸತ್ಯವನ್ನು ಬಿಚ್ಚಿಡುವುದೇ ನಮ್ಮ ಉದ್ದೇಶ...’ ‘...ಸತ್ಯ ಹೇಳಬೇಕೆಂದರೆ ನನಗೆ ನೆನ್ನೆಯವರೆಗೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಅದು ಇಂದು ಅನೌನ್ಸ್ ಆಗಿದೆ. ದೇವರ ಆಶೀರ್ವಾದ ನನ್ನ ಮೇಲೆ ಇದೆ…’ ‘... ಸಾಹಿತ್ಯ ಸೇವೆಗಾಗಿ ಈ ರಾಷ್ಟ್ರೀಯ ಪ್ರಶಸ್ತಿ ಬಂದದ್ದು ಆಶ್ಚರ್ಯ. ಇದು ನನಗೆ ಸಂದಾಯವಾದದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲು ಎರಡು ದಿನ ಬೇಕಾಯಿತು…’ ‘...ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ…’ ಇವು ಇತ್ತೀಚಿನ ದಿನಮಾನಗಳ ನಿತ್ಯ ಸತ್ಯದ ಸಂಭಾಷಣೆಗಳು.

ಎಂಟುನೂರು ವರ್ಷಗಳ ಹಿಂದೆ ವಚನಕಾರರು, ಶ್ರೀಸಾಮಾನ್ಯರು ಮತ್ತು ರಾಜಕಾರಣದ ಹಿನ್ನೆಲೆಯಲ್ಲಿ ಸತ್ಯ ಪ್ರತಿಪಾದನೆಯ ಕಥೆಯನ್ನು ಸೃಷ್ಟಿಸಿದವನು ಮಹಾಕವಿ ರಾಘವಾಂಕ. ದೊಡ್ಡವರ ಸಭೆಯಲ್ಲಿ ಸತ್ಯದ ಚರ್ಚೆಯನ್ನು ಏರ್ಪಡಿಸಿ, ರಾಜನೊಬ್ಬನನ್ನು ನಿಮಿತ್ತ ಮಾಡಿ, ಅವನನ್ನು ಅರಮನೆಯ ಕೃತಕ ಸಿಂಹಾಸನದಿಂದ ಇಳಿಸಿ, ಕಾಶಿಗೆ ನಡೆಸಿ, ಹೆಂಡತಿ ಮಕ್ಕಳನ್ನು ಮಾರಿಸಿ, ಕಡೆಗೆ ಸ್ಮಶಾನದಲ್ಲಿ ಸತ್ಯ ಸ್ವರೂಪಿ ಶಿವನನ್ನು ಸಾಕ್ಷಾತ್ಕಾರಗೊಳಿಸಿಬಿಟ್ಟ ಅನನ್ಯ ಕಥೆಯನ್ನು ರಚಿಸಿದ ನಂತರ ಇದು ಎಲ್ಲ ಶತಮಾನಗಳ ಜನರ ಕೈದೀವಿಗೆಯಾಗಲಿ ಎಂದು ಬಿಟ್ಟುಹೋದ. ಹೋಗುವಲ್ಲಿ ‘ಇದರಿಂದ ನನಗೆ ಯಾವ ಅಪೇಕ್ಷೆಯೂ ಇಲ್ಲ, ಇದನ್ನು ಕೇಳಿ ಜನ ಬದುಕಬೇಕಷ್ಟೆ’ ಎಂದ.

ಕೃಷ್ಣಮೂರ್ತಿ ಹನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT