ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಾಹಿತ್ಯ ಪರಿಷತ್ತು ಎಷ್ಟು ಪ್ರಾತಿನಿಧಿಕ?

ಮುಖ್ಯಮಂತ್ರಿಗೆ ಸಭಿಕರ ಸಾಲಿನಲ್ಲಿ ಕುಳಿತು ಉನ್ನತ ಸಂಪ್ರದಾಯ ಆರಂಭಿಸುವ ಅವಕಾಶ!
Last Updated 3 ಜನವರಿ 2023, 19:45 IST
ಅಕ್ಷರ ಗಾತ್ರ

ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತನ್ನ ಪರಂಪರೆಗೆ ತಕ್ಕ ಹಾಗೆಯೇ ಕೆಲವು ಮೂಲಭೂತ ವರ್ತನೆಗಳನ್ನು ವಿವಾದಕ್ಕೆ ಒಡ್ಡುವ ಮೂಲಕ ಕನ್ನಡ ಸಾಂಸ್ಕೃತಿಕ ವಲಯವನ್ನು ಮತ್ತೊಮ್ಮೆ ಜಾಗೃತಗೊಳಿಸಿದೆ. ಈ ಹಿಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ದಲಿತರ ಪ್ರಾತಿನಿಧ್ಯದ ಪ್ರಶ್ನೆಯು ಬಂಡಾಯ ಸಾಹಿತ್ಯ ಸಂಘಟನೆಯ ಉಗಮಕ್ಕೆ ಕಾರಣವಾಗಿತ್ತು. ಆನಂತರ ಬಂಡಾಯದ ಬಹುತೇಕ ದನಿಗಳು ಪರಿಷತ್ತಿನಲ್ಲಿ ಲೀನವಾದ ವಿಪರ್ಯಾಸವನ್ನೂ ನಾಡು ಕಂಡಿದೆ. ಇದೀಗ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ ಲೇಖಕರ ಪ್ರಾತಿನಿಧ್ಯದ ಪ್ರಶ್ನೆ ಚರ್ಚೆಯ ಕೇಂದ್ರ ಪ್ರವೇಶಿಸಿದೆ.

ಪರಿಷತ್ತಿಗೆ ಪರ್ಯಾಯ ಕಟ್ಟುವ, ಪ್ರತಿರೋಧ ಒಡ್ಡುವ, ಪ್ರತಿಭಟನೆ ದಾಖಲಿಸುವ, ಪ್ರಾತಿನಿಧ್ಯ ಗಿಟ್ಟಿಸುವ, ಬಹಿಷ್ಕಾರ ಹಾಕುವ, ಭಾಗವಹಿಸಿ ಖಂಡಿಸುವ…ನಾನಾ ಮಾತುಗಳು ಕೇಳಿಬರುತ್ತಿವೆ. ತಕ್ಷಣದ ಪ್ರತಿಕ್ರಿಯೆಯಾಗಿ ಇಂತಹ ಹೇಳಿಕೆಗಳು ಹೊಮ್ಮುವುದು ಸಹಜ. ಪರಿಷತ್ತಿನ ನಿಲುವು ಸಮರ್ಥಿಸುವ ಮತ್ತು ವಿಮರ್ಶಿಸುವ ಇಬ್ಬರ ವಾದಸರಣಿಯಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎಂಬ ಅಂಶ ಕಾಣಿಸುತ್ತಿರುವುದು ವಿಶೇಷವಾಗಿದೆ. ಹಾಗಾದರೆ ಕನ್ನಡ ಸಾಹಿತ್ಯ ಪರಿಷತ್ತು ವಾಸ್ತವಿಕ ನೆಲೆಯಲ್ಲಿ, ನಿಜ ಅರ್ಥದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆಗಿದೆಯೇ ಅಥವಾ ಆಗಿತ್ತೇ? ಈ ಪ್ರಶ್ನೆಯ ಕೂಲಂಕಷ ಪರಿಶೀಲನೆಯಲ್ಲಿ ದೊರಕಬಹುದಾದ ಉತ್ತರ ಪ್ರಚಲಿತ ಚರ್ಚೆಯ ದಿಕ್ಕನ್ನೇ ಬದಲಿಸಲು ಸಾಧ್ಯ.

1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಚಾಲನೆಗೊಂಡ ‘ಕರ್ನಾಟಕ ಸಾಹಿತ್ಯ ಪರಿಷತ್ತು’ 1938ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿತು. ಸಂಸ್ಥೆಯ ಆರಂಭದ ಕಾಲಘಟ್ಟವು ಸಾಹಿತ್ಯದ ಪ್ರೀತಿ, ಸೇವಾಭಾವ, ದೂರದೃಷ್ಟಿ, ಆದರ್ಶ ಮತ್ತು ಭಾಷೆ ಬಗೆಗಿನ ಭಾವನಾತ್ಮಕ ಬೆಸುಗೆಯಿಂದ ತುಂಬಿದ್ದನ್ನು ಗುರುತಿಸಬಹುದು. ಅಲ್ಲಲ್ಲಿ ಜಾತೀಯತೆಯ ಸೋಂಕು ತಗುಲಿದ್ದರೂ ಒಟ್ಟಾರೆ ಸ್ವಾತಂತ್ರ್ಯೋತ್ತರ ಕಾಲದ ಆದರ್ಶಮಯ ವಾತಾವರಣ ಅದನ್ನೆಲ್ಲಾ ಒಡಲೊಳಗೆ ಹಾಕಿಕೊಂಡಿತ್ತು.

ಈವರೆಗಿನ ಪರಿಷತ್ ಅಧ್ಯಕ್ಷರ ಪಟ್ಟಿಯನ್ನೊಮ್ಮೆ ಅವಲೋಕಿಸಿದರೆ ಕೆಲವೇ ಜಾತಿಗಳ ಪ್ರಾಬಲ್ಯ ಎದ್ದು ಕಾಣುತ್ತದೆ. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಪರಿಷತ್ತಿನ ನೂರಾಏಳು ವರ್ಷಗಳ ಇತಿಹಾಸದಲ್ಲಿ ಈವರೆಗೆ ಒಬ್ಬ ಮಹಿಳೆಯೂ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ ಎಂಬುದು! ಸಮ್ಮೇಳನದ ಅಧ್ಯಕ್ಷರ ಆಯ್ಕೆಯಲ್ಲಿ ಸಹ ಸಾಮಾಜಿಕ ನ್ಯಾಯ ಪಾಲನೆಗೆ ತುಸು ಆಸ್ಪದ ಸಿಗುತ್ತಿರುವುದು ತೀರಾ ಇತ್ತೀಚೆಗೆ.

ಬಲಾಢ್ಯ ಜಾತಿಗಳ ಸೌಮ್ಯ ಹಿತಾಸಕ್ತಿಗಳ ಮುಂದುವರಿದ ಭಾಗವಾಗಿ ಉಗ್ರ ಗುಂಪುಗಾರಿಕೆ, ಪ್ರಾದೇಶಿಕತೆ, ವಶೀಲಿಬಾಜಿ, ಹಣಕಾಸಿನ ವಹಿವಾಟು ಸೇರಿಕೊಂಡಿದ್ದು ಅವನತಿಯ ಒಂದು ಹಂತ. ಇತ್ತೀಚೆಗೆ ಸಾಹಿತ್ಯಿಕವಾಗಿ ಗಂಭೀರ ಪರಿಗಣನೆಯ ಅರ್ಹತೆಯನ್ನೇ ಕಳೆದುಕೊಂಡಿರುವ ಈ ಐತಿಹಾಸಿಕ ಸಂಸ್ಥೆಗೆ ಸದಸ್ಯಬಲ ಮತ್ತು ಸರ್ಕಾರದ ಹಣವೇ ಬಂಡವಾಳ. ಇದೀಗ ಜಾತೀಯತೆ ಜೊತೆಗೆ ಪಕ್ಷರಾಜಕಾರಣ ಮತ್ತು ಕೋಮುವಾದದ ಕೊಂಬು ಕೂಡ ಮೂಡಿರುವುದು ಮತ್ತೊಂದು ಬೆಳವಣಿಗೆ.

ಕಳೆದ ವರ್ಷ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ವೈಖರಿಯಲ್ಲಿಯೇ ಈಗಿನ ಅಧ್ಯಕ್ಷರ ವರ್ತನೆ, ನೀತಿ, ನಿಲುವುಗಳ ಬೇರುಗಳಿವೆ. ಚುನಾವಣೆಯಲ್ಲಿ ಜಾತೀಯತೆ ಜೊತೆಗೆ ಕೋಮು ವಿಚಾರಗಳೂ ಪರಿಗಣನೆಗೆ ಬಂದು, ಸಾಹಿತ್ಯ ಸಂಸ್ಥೆಯ ರಾಜ್ಯ ಅಧ್ಯಕ್ಷರು, ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ ರಾಜಕೀಯ ಪಕ್ಷಗಳು ಪ್ರವೇಶ ಪಡೆಯುವಂತಾಯಿತು. ಕೊನೆಗೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಪಡೆದು ಈಗ ಕನ್ನಡ ರಥವನ್ನು ತಮಗೆ ಸರಿಕಂಡ ದಾರಿಯಲ್ಲಿ ಎಳೆಯುತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಸಮ್ಮೇಳನದ ಗೋಷ್ಠಿಗಳಲ್ಲಿನ ಪ್ರಾತಿನಿಧ್ಯ ಮತ್ತು ಸನ್ಮಾನಗಳಲ್ಲಿ ಅವಕಾಶಗಳಂತಹ ತಕ್ಷಣದ ಸೀಮಿತ ವಿಷಯಗಳನ್ನು ಎತ್ತಿಕೊಂಡು ರೂಪಿಸುವ ಪರ್ಯಾಯವಾಗಲೀ ಪ್ರತಿರೋಧವಾಗಲೀ ತಲಸ್ಪರ್ಶಿಯಾದ ದೀರ್ಘಕಾಲೀನ ಪರಿಹಾರಕ್ಕೆ ಕಾರಣವಾಗಲಿಕ್ಕಿಲ್ಲ.

ಕಸಾಪ ಸಮ್ಮೇಳನದಲ್ಲಿ ಮುಸ್ಲಿಮರಿಗೆ ತಮ್ಮ ನಿರೀಕ್ಷೆಯಷ್ಟು ಪ್ರಾತಿನಿಧ್ಯ ದೊರೆತಿದ್ದರೆ ಜನಸಾಹಿತ್ಯ ಸಮ್ಮೇಳನ ರೂವಾರಿಗಳ ನಿಲುವು ಏನಾಗಿರುತ್ತಿತ್ತು? ಪರಿಷತ್ತು ನಿರಂತರ ಪ್ರತಿನಿಧಿಸುವ ಯಜಮಾನ ಸಂಸ್ಕೃತಿಯ ಮೌಲ್ಯಗಳೆಲ್ಲಾ ಸ್ವೀಕಾರಾರ್ಹತೆ ಪಡೆಯುತ್ತಿದ್ದವೇ? ಇವೆಲ್ಲಾ ಕನ್ನಡದ ಅಸ್ಮಿತೆಯ ಪ್ರತೀಕಗಳಾಗಿ ಕಾಣುತ್ತಿದ್ದವೇ? ಹಾವೇರಿ ಸಮ್ಮೇಳನದಲ್ಲಿ ಮಹಿಳೆಯರ ಪೂರ್ಣಕುಂಭ ಸ್ವಾಗತ, ಸಮ್ಮೇಳನಾಧ್ಯಕ್ಷರ ರಥಯಾತ್ರೆ, ಒಒಡಿ ಪ್ರತಿನಿಧಿಗಳ ಜಾತ್ರೆ, ಅಧಿಕಾರಿಗಳ ಆರ್ಭಟ, ರಾಜಕಾರಣಿಗಳ ತೆವಲಿನ ಭಾಷಣ, ಶಿಫಾರಸು ಕವಿಗಳ ವಾಚನ ಅನುಭವಿಸುತ್ತಾ ಸಂಭ್ರಮಿಸುತ್ತಿದ್ದರೇ?

ಹಾಗಾದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎನ್ನಿಸಿಕೊಳ್ಳಲು ವಿಫಲವಾಗಿರುವ ಕಸಾಪ ವರ್ತನೆ ಮತ್ತು ಕಾರ್ಯಕ್ರಮಗಳನ್ನು ಒಟ್ಟಾರೆ ನಿರ್ಲಕ್ಷಿಸಬೇಕೇ? ಖಂಡಿತಾ ಇಲ್ಲ. ಸರ್ಕಾರದ ಅನುದಾನ ಅವಲಂಬಿಸಿದ ಕಸಾಪದಂತಹ ಸಂಸ್ಥೆಯನ್ನು ಪ್ರಶ್ನಿಸುವ, ಕಟಕಟೆಯಲ್ಲಿ ನಿಲ್ಲಿಸುವ ಎಲ್ಲಾ ಅವಕಾಶಗಳು, ಹಕ್ಕುಗಳು ಜವಾಬ್ದಾರಿಯುತ ಪ್ರಜೆಗಳಿಗಿವೆ. ಜೊತೆಗೆ ಹೊಸ ಮಾದರಿಯ ಸಂಘಟನೆ, ಪ್ರತಿಭಟನೆ, ನಾಯಕತ್ವ ಹುಟ್ಟುಹಾಕುವ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳಬೇಕಾಗುತ್ತದೆ. ಅದಾಗದೆ ವೇದಿಕೆ ಮೇಲೆ ಹೇಳುವವರು ಅವರೇ, ಕೆಳಗೆ ಕುಳಿತು ಕೇಳುವವರು ಇವರೇ, ಹೇಳುವ-ಕೇಳುವ ವಿಷಯವೂ ಅದೇ ಎಂದಾದರೆ ಪ್ರಯೋಜನವೇನು?

ಈಗ ಹಿಂದಿನಂತೆ ಪ್ರಗತಿಪರ ಆಲೋಚನೆ ಮತ್ತು ಸಾಹಿತ್ಯ ರಚನೆಯ ಕ್ರಿಯೆ ಕೆಲವೇ ಕೆಲವು ವೃತ್ತಿಗಳ, ವಯಸ್ಸಿನ, ಸಾಮಾಜಿಕ ಹಿನ್ನೆಲೆಯ ಜನರಿಗೆ ಸೀಮಿತವಾಗಿಲ್ಲ; ನಿಜವಾದ ಅರ್ಥದಲ್ಲಿ ಬಹುತ್ವ ಮೇಳೈಸುತ್ತಿದೆ. ಜಾಗತಿಕ ಆಗುಹೋಗುಗಳಿಗೆ ತೆರೆದುಕೊಂಡಿರುವ ಹೊಸ ಪೀಳಿಗೆಯ ಮನಸ್ಸುಗಳು ವೈಶಾಲ್ಯ, ವೈವಿಧ್ಯ ಪಡೆದು ನಾವೀನ್ಯದಿಂದ ಪುಟಿಯುತ್ತಿವೆ. ದೀರ್ಘಕಾಲೀನ ಬಳಕೆಯಲ್ಲಿ ಬಹಳಷ್ಟು ಸವೆದಿರುವ, ದಣಿದಿರುವ ಹಳೆಯ ಮುಖಗಳು, ಕಾರ್ಯಶೈಲಿಗಳು, ನುಡಿಗಟ್ಟುಗಳು ವಿರಮಿಸಿದರೆ... ಬದಲಾದ ಕಾಲಘಟ್ಟದ ಬೇಡಿಕೆಗೆ ತಕ್ಕಂತೆ ಹೊಸ ತಲೆಮಾರಿನ ತಾಜಾತನ ಹೆಚ್ಚಿನದ್ದನ್ನು ಸಾಧಿಸಲು ಸಾಧ್ಯ. ಎಲ್ಲರೂ ಒಪ್ಪುವ ಈ ತರ್ಕವನ್ನು ಎಲ್ಲಿಂದ, ಯಾರು ಆರಂಭಿಸುವುದು?

ಐವತ್ತು ವರ್ಷ ದಾಟಿದ ಎಲ್ಲ ಹಿರಿಯರೂ ಕನಿಷ್ಠ ಒಂದು ವರ್ಷ ಕಾಲ ಸಾಹಿತ್ಯಕ ಕಾರ್ಯಕ್ರಮಗಳ ವೇದಿಕೆಗಳನ್ನು ಸಂಪೂರ್ಣವಾಗಿ ಯುವ ಪೀಳಿಗೆಗೆ ಬಿಟ್ಟುಕೊಡುವ ತ್ಯಾಗಕ್ಕೆ ಸಿದ್ಧರಾದರೆ ಸಾಕು, ಹೊಸ ಹರಿವಿಗೆ ದಾರಿ ತೆರೆಯುತ್ತದೆ. ಹಾಗೆಯೇ ಈ ಹಿರಿಯರು ಒಂದು ವರ್ಷ ಯಾವುದೇ ಪ್ರಶಸ್ತಿ, ಪುರಸ್ಕಾರ, ಸನ್ಮಾನ ಸ್ವೀಕರಿಸದಿರುವ ನಿರ್ಧಾರ ಘೋಷಿಸಿದರಂತೂ ಇಡೀ ಸಾಹಿತ್ಯಕ ವಾತಾವರಣದಲ್ಲಿ ಬುಡಮೇಲು ಬದಲಾವಣೆ ಘಟಿಸೀತು!

ಇನ್ನು, ನೆರೆಯ ಮಹಾರಾಷ್ಟ್ರದಲ್ಲಿ ನಡೆಯುವ ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಅಳವಡಿಸಿಕೊಂಡಿರುವ ಆದರ್ಶವೊಂದನ್ನು ಕನ್ನಡಿಗರು ಅನುಸರಿಸಲು ಸಾಧ್ಯವಾದರೆ ಬಹುದೊಡ್ಡ ವ್ಯತ್ಯಾಸ ಸಾಧ್ಯ. ಅಲ್ಲಿನ ಸಮ್ಮೇಳನಗಳ ವೇದಿಕೆಯಲ್ಲಿ ರಾಜಕಾರಣಿಗಳಿಗೆ ಅವಕಾಶವಿಲ್ಲ. ಅವರು ಸಾಮಾನ್ಯ ಜನರಂತೆ ಸಭಿಕರ ಸಾಲಿನಲ್ಲಿ ಕುಳಿತು ಸಾಹಿತಿಗಳ ಮಾತನ್ನು ಆಲಿಸುತ್ತಾರೆ. ತಮ್ಮ ತವರಿನಲ್ಲಿ ನಡೆಯುತ್ತಿರುವ ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹ ರಾಜಕಾರಣಿಗಳೊಂದಿಗೆ ವೇದಿಕೆ ಏರದೆ ಸಭಿಕರಾಗಿ ಕುಳಿತುಕೊಳ್ಳುವ ಮೂಲಕ ಉನ್ನತ ಸಂಪ್ರದಾಯಕ್ಕೆ ನಾಂದಿ ಹಾಡುವ ಅವಕಾಶ ಪಡೆದಿದ್ದಾರೆ. ಅವರಿಂದ ಇಂಥ ಐತಿಹಾಸಿಕ ಹೆಜ್ಜೆಯನ್ನು ನಿರೀಕ್ಷಿಸಬಹುದೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT